ಪಿಎಂ ಕಿಸಾನ್ ಹಾಗೂ ಸಿಎಂ ಕಿಸಾನ್ ಹಣವೂ ಸಾಲದ ಬಡ್ಡಿಗೆ ಸೇರಿಕೆ| ಬರ, ನೆರೆಯಿಂದ ನಲುಗಿದ್ದ ರೈತರಿಗೆ ಬ್ಯಾಂಕ್ ಬರೆ| ಕೋವಿಡ್ ಸೋಂಕಿನಿಂದಾಗಿ ಕಂಗೆಟ್ಟಿದ್ದ ರೈತರ ಬದುಕಿಗೆ ಮತ್ತೊಂದು ಬರೆ| ಮುಖ್ಯಮಂತ್ರಿ ಕಿಸಾನ್ ನೆರವಿನ ಹಣವೂ ಸಾಲದ ಖಾತೆಗೆ ಜಮೆ|
ಆನಂದ್ ಎಂ. ಸೌದಿ
ಯಾದಗಿರಿ(ಸೆ.20): ವಿಧವೆಯರು ಅಥವಾ ಹಿರಿಯ ನಾಗರಿಕರಿಗೆ ನೆರವಾಗಲೆಂದು ಸರ್ಕಾರ ನೀಡುತ್ತಿರುವ ವಿಧವಾ ವೇತನ ಹಾಗೂ ವೃದ್ಧಾಪ್ಯ ವೇತನಗಳ ಹಣವನ್ನೂ ಸಾಲದ ಖಾತೆಗೆ ಜಮೆ ಮಾಡಿಕೊಳ್ಳುವ ಮೂಲಕ ರೈತರಿಗೆ ಬ್ಯಾಂಕುಗಳು ಹೇಗೆ ಜೀವ ಹಿಂಡುತ್ತಿವೆ ಅನ್ನೋದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.
undefined
ತಾಲೂಕಿನ ರಾಮಸಮುದ್ರ ಗ್ರಾಮದ ಎಸ್ಬಿಐ ಶಾಖೆಯು ರೈತರ ಪಿಂಚಣಿ ಅಷ್ಟೇ ಅಲ್ಲ, ಸರ್ಕಾರದಿಂದ ಮಂಜೂರಾಗಿದ್ದ ಸಹಾಯಧನ, ಪರಿಹಾರ ಧನದ ಮೊತ್ತವನ್ನೂ ಸಾಲದ ಖಾತೆಗೆ ಜಮೆ ಮಾಡಿಕೊಂಡಿದೆ. ಬರ, ನೆರೆ ಹಾಗೂ ಪ್ರಸ್ತುತ ಕೋವಿಡ್ ಸೋಂಕಿನಿಂದಾಗಿ ಕಂಗೆಟ್ಟಿದ್ದ ರೈತರ ಬದುಕಿಗೆ ಇದೀಗ ಮತ್ತೊಂದು ಬರೆಯಾಗಿದೆ.
ನೆರವಿನ ಹಣವೂ ಸಾಲಕ್ಕೆ ಜಮೆ:
ಸಾಲಬಾಧೆ ಹಾಗೂ ಬೆಳೆ ನಷ್ಟದಿಂದ ಸಂಕಷ್ಟದಲ್ಲಿರುವ ರೈತರ ಬಾಳು ಹಸನಾಗಲೆಂದು ಪ್ರಧಾನ ಮಂತ್ರಿ ಕಿಸಾನ್ (ಪಿಎಂ ಕಿಸಾನ್) ಹಾಗೂ ಮುಖ್ಯಮಂತ್ರಿ ಕಿಸಾನ್ ನೆರವಿನ ಹಣವೂ ಸಾಲದ ಖಾತೆಗೆ ಜಮೆ ಮಾಡಲಾಗಿದೆ. ಪ್ರಧಾನಿ ಮೋದಿ ಘೋಷಣೆಯಂತೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರು.ಗಳಂತೆ ಒಟ್ಟು 6 ಸಾವಿರ ರು. ಹಾಗೂ ಸಿಎಂ ಯಡಿಯೂರಪ್ಪ ಘೋಷಿಸಿದ ಪ್ರತಿ ಆರು ತಿಂಗಳಿಗೊಮ್ಮೆ 2 ಸಾವಿರ ರು.ಗಳಂತೆ ಒಟ್ಟು ನಾಲ್ಕು ಸಾವಿರ ರು. ಹಣವನ್ನು ಬ್ಯಾಂಕ್ ರೈತರ ಸಾಲದ ಖಾತೆಗಳಿಗೆ ಜಮೆ ಮಾಡಿಕೊಂಡಿದೆ.
'ಕಲ್ಯಾಣ ಕರ್ನಾಟಕಕ್ಕೆ 500 ಕೋಟಿಗೂ ಹೆಚ್ಚು ಬಿಡುಗಡೆ'
ಸಾಲಕ್ಕೆ ವಿಧವಾ ವೇತನ ಜಮೆ:
ಬೆಳಗೇರಾ ಗ್ರಾಮದ ಶೇಖಮ್ಮ ಹಾಗೂ ಚಂದಪ್ಪ ಅವರ ಖಾತೆಗಳಿಗೆ ಜಮೆಯಾಗಬೇಕಿದ್ದ 600 ರು. ವಿಧವಾ ವೇತನ, ಪಿಂಚಣಿ ಹಾಗೂ ಪರಿಹಾರ ಹಣವನ್ನು ಸಾಲದ ಖಾತೆಗೆ ಜಮೆ ಮಾಡಲಾಗಿದೆ. ಶುಕ್ರವಾರ ಬ್ಯಾಂಕಿಗೆ ತೆರಳಿದ ರೈತ ಸಂಘದ ಜಿಲ್ಲಾಧ್ಯಕ್ಷ ರಾಜೂಗೌಡ ಪೊಲೀಸ್ ಪಾಟೀಲ್, ರೈತರ ವಿವರಗಳನ್ನು ಪರಿಶೀಲಿಸಿದಾಗ ಇದು ಪತ್ತೆಯಾಗಿದೆ. ಇನ್ನೂ ಅನೇಕ ರೈತರ ಖಾತೆಗಳಿಗೂ ಇದೇ ತರಹ ಜಮೆ ಮಾಡಲಾಗಿದೆ ಎನ್ನಲಾಗಿದೆ.
ಮರುಪಾವತಿಗೆ ಆಗ್ರಹ:
ರೈತರ ಗಮನಕ್ಕೂ ತಾರದೆ ಬ್ಯಾಂಕಿನ ಇಂತಹ ಏಕಪಕ್ಷೀಯ ವರ್ತನೆಯಿಂದ ದಿಗ್ಭ್ರಮೆಗೊಂಡು ಆಕ್ರೋಶ ವ್ಯಕ್ತಪಡಿಸಿದ ರಾಜೂಗೌಡ, ಸರ್ಕಾರದಿಂದ ಬಂದ ನೆರವು ಮತ್ತು ಪರಿಹಾರದ ಮೊತ್ತವನ್ನು ಸಾಲದ ಖಾತೆಗೆ ಅದ್ಹೇಗೆ ಜಮೆ ಮಾಡಿದ್ದೀರಿ ಎಂದು ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಂತಹ ಎಲ್ಲ ಪ್ರಕರಣಗಳಲ್ಲಿನ ಖಾತೆಗಳನ್ನು ಪರಿಶೀಲಿಸಿ ಹಣ ಮರುಪಾವತಿಸಬೇಕೆಂದು ತಾಕೀತು ಮಾಡಿದ್ದಾರೆ.
ವೃದ್ಧಾಪ್ಯ, ವಿಧವಾ ವೇತನ ಹಾಗೂ ರೈತರ ಪರಿಹಾರ ಹಣವನ್ನು ಸಾಲದ ಖಾತೆಗೆ ಜಮೆ ಮಾಡಿಕೊಳ್ಳಬಾರದು ಎಂದು ನಾವು ಅನೇಕ ಸಭೆಗಳಲ್ಲಿ ಬ್ಯಾಂಕಿನ ವ್ಯವಸ್ಥಾಪಕರುಗಳಿಗೆ ಕಡ್ಡಾಯ ಸೂಚನೆ ನೀಡಿರುತ್ತೇವೆ. ಆದರೂ ಸಹ, ಕೆಲವೊಮ್ಮೆ ಕಣ್ತಪ್ಪಿನಿಂದಾಗಿ ಆಗಿದ್ದರೆ ಅಂತಹುಗಳನ್ನು ಮರಳಿಸುತ್ತೇವೆ. ರಾಮಸಮುದ್ರದ ಪ್ರಕರಣ ನನ್ನ ಗಮನಕ್ಕೆ ಬಂದಿಲ್ಲ. ನಾನೇ ಖುದ್ದಾಗಿ ಹೋಗಿ ಪರಿಶೀಲನೆ ನಡೆಸಿ, ತಪ್ಪಾಗಿದ್ದಲ್ಲಿ ಹಣ ವಾಪಸ್ ಅವರ ಖಾತೆಗೆ ಹಾಕುತ್ತೇವೆ ಎಂದು ಯಾದಗಿರಿ ಲೀಡ್ ಬ್ಯಾಂಕ್ ಮ್ಯಾನೇಜರ್ ಭೀಮರಾವ್ ಪಾಂಚಾಳ್ ಅವರು ತಿಳಿಸಿದ್ದಾರೆ.
ಕಷ್ಟ ಕಾಲದಲ್ಲಿ, ಅದೂ ವೃದ್ಧಾಪ್ಯದಲ್ಲಿ ಸರ್ಕಾರ ನೀಡುವ ಪಿಂಚಣಿ ಹಣವನ್ನೇ ಬ್ಯಾಂಕಿನವರು ಸಾಲದ ಖಾತೆಗೆ ಜಮೆ ಮಾಡಿದರೆ ರೈತರು ಬದುಕುವುದಾದರೂ ಹೇಗೆ? ಎಂದು ರೈತ ಸಂಘದ ಉಪಾಧ್ಯಕ್ಷ ಸಿದ್ಧಪ್ಪ ಪೂಜಾರಿ ಅವರು ತಿಳಿಸಿದ್ದಾರೆ.