ಬೆಂಗಳೂರಿನ ಸೌಂದರ್ಯವನ್ನು ಆಗಸದೆತ್ತರದ ವೀಕ್ಷಣಾ ಗೋಪುರದಿಂದ ಜನರು ವೀಕ್ಷಿಸಲು ಹಾಗೂ ನಗರಕ್ಕೆ ಒಂದು ಹೆಗ್ಗುರುತನ್ನು ನಿರ್ಮಿಸಲು ರಾಜ್ಯ ಸರ್ಕಾರ ಸುಮಾರು 250 ಮೀ. ಎತ್ತರದ ಸ್ಕೈಡೆಕ್ ನಿರ್ಮಾಣಕ್ಕೆ ನಿರ್ಧರಿಸಿದೆ.
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು (ಜು.07): ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ದೇಶದಲ್ಲೇ ಅತಿ ಎತ್ತರದ ಸ್ಕೈಡೆಕ್ ಅನ್ನು ಬೆಂಗಳೂರಿನ ಹೃದಯ ಭಾಗದಲ್ಲಿ ನಿರ್ಮಿಸಲು ರಕ್ಷಣಾ ಇಲಾಖೆಯಿಂದ ಅನುಮತಿ ಸಿಗದ ಕಾರಣಕ್ಕೆ ಯೋಜನೆಯು ನಗರದ ಹೊರ ವಲಯಕ್ಕೆ ಸರಿಯುತ್ತಿದೆ. ಬೆಂಗಳೂರಿನ ಸೌಂದರ್ಯವನ್ನು ಆಗಸದೆತ್ತರದ ವೀಕ್ಷಣಾ ಗೋಪುರದಿಂದ ಜನರು ವೀಕ್ಷಿಸಲು ಹಾಗೂ ನಗರಕ್ಕೆ ಒಂದು ಹೆಗ್ಗುರುತನ್ನು ನಿರ್ಮಿಸಲು ರಾಜ್ಯ ಸರ್ಕಾರ ಸುಮಾರು 250 ಮೀ. ಎತ್ತರದ ಸ್ಕೈಡೆಕ್ ನಿರ್ಮಾಣಕ್ಕೆ ನಿರ್ಧರಿಸಿದೆ. ಈ ಹಿಂದೆ ಬಿಬಿಎಂಪಿ ಅಧಿಕಾರಿಗಳು ಎಚ್‌ಎಎಲ್ ಸಮೀಪದ ಖಾಲಿ ಜಾಗದಲ್ಲಿ ಅತಿ ಎತ್ತರದ ಸ್ಕೈಡೆಕ್ ನಿರ್ಮಿಸಲು ನಿರ್ಧರಿಸಿತ್ತು.
ಆದರೆ ಈ ಯೋಜನೆಗೆ ಕೇಂದ್ರ ರಕ್ಷಣಾ ಇಲಾಖೆ ಮತ್ತು ವಾಯುಪಡೆ ಇಲಾಖೆ ಆಕ್ಷೇಪ ವ್ಯಕ್ತಪಡಿಸಿತ್ತು. ಹೀಗಾಗಿ ಬಿಬಿಎಂಪಿ ಅಧಿಕಾರಿಗಳು ಕೊಮ್ಮಘಟ್ಟ, ಜ್ಞಾನ ಭಾರತಿ ಹಾಗೂ ಸೋಮಪುರದ ಬಳಿ ಖಾಲಿ ಜಾಗ ಪರಿಶೀಲನೆ ನಡೆಸಿದ್ದರು. ಆದರೆ, ಅಲ್ಲಿಯೂ ಸ್ಕೈಡೆಕ್ ನಿರ್ಮಾಣ ಸಾಧ್ಯವಾಗುವುದಿಲ್ಲ ಎಂದು ರಕ್ಷಣಾ ಇಲಾಖೆ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ, ನಗರದ ಕೇಂದ್ರ ಭಾಗದಿಂದ ಮತ್ತಷ್ಟು ದೂರ ಸ್ಕೈಡೆಕ್ ನಿರ್ಮಿಸಲು ಚಿಂತನೆ ನಡೆಸಲಾಗಿದೆ.
ಸರ್ಕಾರದಿಂದ ಹಾಲು ಖರೀದಿ ದರ ಕಡಿತ: ಸಂಸದ ಸುಧಾಕರ್ ವಿರೋಧ
ಸಮುದ್ರ ಮಟ್ಟ ಆಧಾರಿಸಿ ಪರಿಶೀಲನೆ: ಬೆಂಗಳೂರು ನಗರ ಸಮುದ್ರ ಮಟ್ಟದಿಂದ 920 ಮೀಟರ್ ಎತ್ತರದಲ್ಲಿ ಇದೆ. ಇದೀಗ ಸ್ಕೈಡೆಕ್ ನಿರ್ಮಾಣಕ್ಕೆ ಸಮುದ್ರ ಮಟ್ಟ ಆಧಾರಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಅದಕ್ಕಾಗಿ ಅತ್ಯಾಧುನಿಕ ಉಪಕರಣ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಡಿಪಿಆರ್ ಸಿದ್ದಪಡಿಸಿರುವ ಸಂಸ್ಥೆಯೇ ಇದನ್ನು ಮಾಡುತ್ತಿದೆ.
ಮೆಟ್ರೋ, ಉತ್ತಮ ರಸ್ತೆ ಸಂಪರ್ಕದ ಕಡೆ ಹುಡಕಾಟ: ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಲು ಮೆಟ್ರೋ ಸಂಪರ್ಕ ಇರುವ ಕಡೆ ಹಾಗೂ ಮುಂದಿನ ದಿನಗಳ ಮೆಟ್ರೋ ಸಂಪರ್ಕ ಪಡೆಯುವ ಪ್ರದೇಶ, ವಿಶಾಲವಾದ ರಸ್ತೆ ಸಂಪರ್ಕ ಹೊಂದಿರುವ ಕಡೆ ಸ್ಕೈಡೆಕ್ ನಿರ್ಮಾಣಕ್ಕೆ ಜಾಗ ಹುಡುಕಾಟ ನಡೆಸಲಾಗುತ್ತಿದೆ
ರಕ್ಷಣಾ ಇಲಾಖೆ ಯಾಕೆ ಅನುಮತಿ ನೀಡುತ್ತಿಲ್ಲ: ಎಚ್‌ಎಎಲ್ ಮತ್ತು ಯಲಹಂಕ ವಾಯು ನೆಲೆಗಳು ನಗರಕ್ಕೆ ಹೊಂದಿಕೊಂಡಿವೆ. ಈ ವಾಯು ನೆಲೆಯಲ್ಲಿ ರಕ್ಷಣಾ ಪಡೆಯ ವಿಮಾನಗಳು ವೈಮಾನಿಕ ಕಸರತ್ತು ನಡೆಸುತ್ತವೆ. , ನಾಗರಿಕ ವಿಮಾನಗಳು ಎಚ್‌ಎಎಲ್‌ನಲ್ಲಿ ಇಳಿಯಲಿವೆ. ಹಾರಾಟಕ್ಕೆ ಮುಕ್ತ ಅವಕಾಶ ಇರುವುದಿಲ್ಲ ಎಂಬ ಕಾರಣಕ್ಕೆ ಸ್ಕೈಡೆಕ್ ನಿರ್ಮಾಣಕ್ಕೆ ಅನುಮತಿ ನೀಡಿಲ್ಲ.
ಮತ್ತೆ ಸ್ಪೋಟಗೊಂಡ ನಂದಿ ಸಕ್ಕರೆ ಕಾರ್ಖಾನೆ ಬಾಯ್ಲರ್: ಅದೃಷ್ಟವಶಾತ್ ಕಾರ್ಮಿಕರು ಅಪಾಯದಿಂದ ಪಾರು
ಸಿಎಂ-ಸಚಿವರಿಗೆ ಪ್ರಾತ್ಯಕ್ಷಿಕೆ: ಸ್ಕೈಡೆಕ್ ಹಾಗೂ ಸುರಂಗ ರಸ್ತೆಯ ಬಗ್ಗೆ ಮಾಧ್ಯಮಗಳ ಬಂದ ವರದಿ ಬಿಟ್ಟರೆ ಅಧಿಕೃತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಸಚಿವ ಸಂಪುಟದ ಸದಸ್ಯರು ಮತ್ತು ಶಾಸಕರಿಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಹೀಗಾಗಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಎರಡು ಯೋಜನೆಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ.ಅದಕ್ಕಾಗಿ ಮೂರ್ನಾಲ್ಕು ದೇಶಗಳಲ್ಲಿ ಸುರಂಗ ರಸ್ತೆಗಳು ಮತ್ತು ಸ್ಕೈಡೆಕ್‌ಗಳ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಶೀಘ್ರದಲ್ಲಿ ಈ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ಸಭೆಯ ನಡೆಯುವ ವೇಳೆಗೆ ಸ್ಕೈಡೆಕ್‌ಗೆ ಜಾಗ ಅಂತಿಮಗೊಳ್ಳುವ ಸಾಧ್ಯತೆ ಇದ್ದು, ಸಭೆಯಲ್ಲಿಯೇ ಸ್ಥಳ ಘೋಷಣೆ ಆಗಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.