ಬೆಂಗಳೂರು (ಸೆ.08): ಅತಂತ್ರವಾಗಿರುವ ಕಲಬುರಗಿ ಮಹಾನಗರ ಪಾಲಿಕೆಯ ಗದ್ದುಗೆ ಹಿಡಿಯಲು ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಜೆಡಿಎಸ್ ನಿರ್ಧಾರದ ಮೇಲೆ ಯಾರಿಗೆ ಮೇಯರ್ ಸ್ಥಾನ ಲಭಿಸಲಿದೆ ಎಂಬುದು ಅವಲಂಬಿತವಾಗಿದೆ. ಹೀಗಾಗಿ ಜೆಡಿಎಸ್‌ನ ಬೆಂಬಲ ಪಡೆಯಲು ಎರಡೂ ಪಕ್ಷಗಳು ಪ್ರಯತ್ನ ಆರಂಭಿಸಿವೆ.
ಈ ಹಿನ್ನೆಲೆಯಲ್ಲಿ ಯಾವ ಪಕ್ಷಕ್ಕೆ ಬೆಂಬಲ ನೀಡಿದರೆ ಅನುಕೂಲವಾದೀತು ಎಂಬ ನಿಟ್ಟಿನಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ತಡರಾತ್ರಿವರೆಗೆ ಸಮಾಲೋಚನೆ ನಡೆಸಿದ್ದಾರೆ. ಕಲಬುರಗಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಗೆಲುವು ಸಾಧಿಸಿದ ನಾಲ್ವರ ಅಭಿಪ್ರಾಯ ಪಡೆದು, ಸ್ಥಳೀಯ ಪರಿಸ್ಥಿತಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ. ಬುಧವಾರ ಯಾರಿಗೆ ಬೆಂಬಲ ನೀಡಬೇಕು ಎಂಬುದನ್ನು ಅಂತಿಮಗೊಳಿಸುವ ನಿರೀಕ್ಷೆ ಇದೆ.
undefined
ಕಲಬುರಗಿ ಪಾಲಿಕೆ: ಜೆಡಿಎಸ್ ದೋಸ್ತಿ ಯಾರ ಜತೆ? ದೇವೇಗೌಡ್ರು ಹೇಳಿದ್ದಿಷ್ಟು
ಈ ನಡುವೆ ಕಲಬುರಗಿಯಿಂದ ಗೆಲುವು ಸಾಧಿಸಿರುವ ನಾಲ್ವರು ಸದಸ್ಯರು ಬೆಂಗಳೂರಿಗೆ ಆಗಮಿಸಿದ್ದು, ಬುಧವಾರ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ಬಿಡದಿಯ ತೋಟದ ಮನೆಯಲ್ಲಿ ವಿಸ್ತೃತವಾಗಿ ಮಾತುಕತೆ ನಡೆಯಲಿದೆ. ಈ ವೇಳೆ ಸ್ಥಳೀಯವಾಗಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಸಂಬಂಧದ ವಿವರವನ್ನು ಗೆದ್ದ ಅಭ್ಯರ್ಥಿಗಳಿಂದ ಕುಮಾರಸ್ವಾಮಿ ಪಡೆದುಕೊಳ್ಳಲಿದ್ದಾರೆ. ನಂತರ ಯಾರಿಗೆ ಬೆಂಬಲ ನೀಡಬೇಕು ಎಂಬುದರ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಕುಮಾರಸ್ವಾಮಿ ಅವರು ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಮೈತ್ರಿಯ ಕುರಿತು ಪ್ರಾಥಮಿಕ ಹಂತದ ಮಾತುಕತೆ ನಡೆಸಿದ್ದಾರೆ. ಆದರೆ, ದೇವೇಗೌಡ ಅವರ ಜತೆ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಮಾಲೋಚನೆ ನಡೆಸಿದ್ದಾರೆ. ಎರರೂ ಪಕ್ಷಗಳಿಂದ ಬೇಡಿಕೆ ಬಂದಿರುವುದರಿಂದ ಜೆಡಿಎಸ್ ಯಾರಿಗೆ ಬೆಂಬಲ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ. ಜಾತ್ಯತೀತ ನಿಲುವು ಇರುವ ದೇವೇಗೌಡ ಅವರು ಕಾಂಗ್ರೆಸ್‌ನತ್ತ ಒಲವು ಹೊಂದಿದ್ದರೆ, ಕುಮಾರಸ್ವಾಮಿ ಒಲವು ಬಿಜೆಪಿಯತ್ತ ಹೆಚ್ಚಿದೆ. ಕಾಂಗ್ರೆಸ್‌ಗೆ ಬೆಂಬಲ ನೀಡಲು ಕುಮಾರಸ್ವಾಮಿಗೆ ಹೆಚ್ಚಿನ ಆಸಕ್ತಿ ಇಲ್ಲ ಎನ್ನಲಾಗಿದೆ.
ಆದರೆ, ಅಂತಿಮವಾಗಿ ಕುಮಾರಸ್ವಾಮಿ ಅವರ ಒಲವಿನಂತೆ ಜೆಡಿಎಸ್ ಸದಸ್ಯರು ಬಿಜೆಪಿ ಜತೆ ಹೆಜ್ಜೆ ಹಾಕುವ ಸಾಧ್ಯತೆ ಕಂಡುಬರುತ್ತಿದೆ.
ಜೆಡಿಎಸ್-ಬಿಜೆಪಿ ಮೈತ್ರಿ
ಯಾವುದೇ ಪಕ್ಷಕ್ಕೆ ಸ್ಪಷ್ಟಬಹುಮತವಿಲ್ಲದೆ ಅತಂತ್ರವಾಗಿರುವ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಬಹುಮತ ಸಾಬೀತುಪಡಿಸುತ್ತೇವೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ನಿಯೋಗ ನನ್ನನ್ನು ಭೇಟಿ ಮಾಡಿದ ವೇಳೆ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ವಿಷಯವೂ ಪ್ರಸ್ತಾಪವಾಗಿದೆ. ಈ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸದಿದ್ದರೂ ಒಟ್ಟಾಗಿ ಹೋಗೋಣ ಎಂದು ಹೇಳಿದ್ದೇನೆ.
- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ