Bellary : ಭತ್ತದ ಸಿರಿ ಸಿರಗುಪ್ಪದಲ್ಲಿ ಕಣಕ್ಕಿಳಿವ ಕಲಿಗಳ್ಯಾರು?

By Kannadaprabha News  |  First Published Dec 2, 2022, 5:59 AM IST

ಬಿಜೆಪಿ-ಕಾಂಗ್ರೆಸ್‌ ಸಮಬಲ ಸಂಘಟನೆ ಹೊಂದಿರುವ ಭತ್ತದ ಸಿರಿ ಖ್ಯಾತಿಯ ಸಿರುಗುಪ್ಪ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್‌ ಟಿಕೆಟ್‌ಗೆ ಜಿದ್ದಾಜಿದ್ದಿ ಶುರುವಾಗಿದೆ.


 ಕೆ.ಎಂ.ಮಂಜುನಾಥ್‌

 ಬಳ್ಳಾರಿ (ಡಿ.02):  ಬಿಜೆಪಿ-ಕಾಂಗ್ರೆಸ್‌ ಸಮಬಲ ಸಂಘಟನೆ ಹೊಂದಿರುವ ಭತ್ತದ ಸಿರಿ ಖ್ಯಾತಿಯ ಸಿರುಗುಪ್ಪ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್‌ ಟಿಕೆಟ್‌ಗೆ ಜಿದ್ದಾಜಿದ್ದಿ ಶುರುವಾಗಿದೆ.

Tap to resize

Latest Videos

undefined

ಬಿಜೆಪಿಯಿಂದ ಹಾಲಿ ಶಾಸಕ ಎಂ.ಎಸ್‌.ಸೋಮಲಿಂಗಪ್ಪ ಸ್ಪರ್ಧೆಗಿಳಿಯುವುದು ಖಚಿತವಾಗಿರುವುದರಿಂದ (BJP)  ಪಕ್ಷದಿಂದ ಯಾರೂ ಆಕಾಂಕ್ಷಿತರು ಹೊರಬಿದ್ದಿಲ್ಲ. ಆದರೆ, ಕಾಂಗ್ರೆಸ್‌ನಲ್ಲಿ (Congress)  9 ಜನರು ಸಿರುಗುಪ್ಪ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಅರ್ಜಿ ಸಲ್ಲಿಸಿದ್ದಾರೆ.

ಮಾಜಿ ಶಾಸಕ ಬಿ.ಎಂ.ನಾಗರಾಜ್‌, ಕಳೆದ ಬಾರಿ ಸ್ಪರ್ಧಿಸಿ ಸೋಲನುಭವಿಸಿದ ಮುರುಳಿಕೃಷ್ಣ, ತೆಕ್ಕಲಕೋಟೆಯಮುಖಂಡ ಎಸ್‌. ನರೇಂದ್ರಸಿಂಹ, ಮಾಜಿ ಜಿಪಂ ಸದಸ್ಯಡಿ.ಕಗ್ಗಲ್‌ ವೀರೇಶಪ್ಪ ಅರ್ಜಿ ಸಲ್ಲಿಸಿದವರ ಪೈಕಿ ಪ್ರಮುಖರು.

ಈಗಾಗಲೇ ಒಮ್ಮೆ ಗೆಲುವು ದಾಖಲಿಸಿದ್ದು ಈ ಬಾರಿ ಸ್ಪರ್ಧೆಗಿಳಿಯಲು ನನಗೆ ಅವಕಾಶ ಮಾಡಿಕೊಡಬೇಕು ಎಂದು ಮಾಜಿ ಶಾಸಕ ಬಿ.ಎಂ.ನಾಗರಾಜ್‌ ಅವರು ಪಕ್ಷದ ರಾಜ್ಯ ನಾಯಕರ ಮೊರೆ ಹೋಗಿದ್ದರೆ, ಕಳೆದ ಚುನಾವಣೆಯಲ್ಲಿ ಸೋಲುಂಡಿದ್ದು ಈ ಬಾರಿ ಗೆಲುವು ದಾಖಲಿಸಲು ನನಗೂ ಅವಕಾಶ ಕಲ್ಪಿಸಿ ಎಂದು ಮುರುಳಿಕೃಷ್ಣ ಪಕ್ಷದ ನಾಯಕರಿಗೆ ಕೇಳಿಕೊಳ್ಳುತ್ತಿದ್ದಾರೆ.

ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರ ಹತ್ತಿರದ ಸಂಬಂಧಿ ಮುರುಳಿಕೃಷ್ಣ ಟಿಕೆಟ್‌ಗಾಗಿ ಶತಾಯಗತಾಯ ಪ್ರಯತ್ನದಲ್ಲಿದ್ದಾರೆ. ಹೀಗಾಗಿ ಈ ಬಾರಿ ಸಿರುಗುಪ್ಪ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಸಿಗುವುದು ಯಾರಿಗೆ ? ಎಂಬ ಕುತೂಹಲ ಮೂಡಿದೆ.

ಕಾಂಗ್ರೆಸ್‌ ಕೋಟೆ:

ಕಾಂಗ್ರೆಸ್‌ ಹಾಗೂ ಜನತಾ ಪರಿವಾರದ ಸಂಘಟನೆ ಭದ್ರವಾಗಿ ನೆಲೆಯೂರಿದ್ದ ಸಿರುಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿ 2004ರಿಂದ ಕಮಲ ಅರಳಲು ಶುರುವಾಯಿತು. ಈ ಹಿಂದೆ ಕೈ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ದಾಖಲಿಸಿದರೆ, ಜನತಾ ಪಕ್ಷದ ಅಭ್ಯರ್ಥಿಗಳು ಸಮಬಲ ಹೋರಾಟ ನಡೆಸಿ, ಪಕ್ಷದ ಬಲವರ್ಧನೆ ಸಾಬೀತುಪಡಿಸಿದ್ದರು.

ಕ್ಷೇತ್ರದಲ್ಲಿನ ಗೆಲುವಿನ ದಾಖಲೆಗಳತ್ತ ಕಣ್ಣಾಯಿಸಿದರೆ ಕಾಂಗ್ರೆಸ್‌ ಅಭ್ಯರ್ಥಿಗಳು ಎದುರಾಳಿ ವಿರುದ್ಧ ಅನಾಯಾಸವಾಗಿ ಗೆಲುವು ದಾಖಲಿಸಿದ್ದಾರೆ. ಜನತಾಪಕ್ಷದ ಅಭ್ಯರ್ಥಿಗಳು ಕೈ ಪಕ್ಷಕ್ಕೆ ಆಗಾಗ್ಗೆ ಎದುರೇಟು ನೀಡಿರುವುದು ಕಂಡು ಬರುತ್ತದೆ. 1957ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬಿ.ಇ.ರಾಮಯ್ಯ ಅವರು ಸೋಷಲಿಷ್‌್ಟಪಕ್ಷದ ಸಿ.ಎಂ.ರೇವಣಿಸಿದ್ದಯ್ಯ ವಿರುದ್ಧ 7945 ಮತಗಳಿಂದ ಗೆಲುವು ದಾಖಲಿಸಿದರೆ, 1962ರಲ್ಲಿ ಸಿಎಂ ರೇವಣಸಿದ್ದಯ್ಯ ಅವರು ಸೋಷಲಿಸ್ಟ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್‌ನ ಎಚ್‌.ಲಿಂಗಾರೆಡ್ಡಿ ವಿರುದ್ಧ 9577 ಮತಗಳಿಂದ ಮಣಿಸುತ್ತಾರೆ. 1967ರಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ಎಂ. ದೊಡ್ಡನಗೌಡ ಗೆಲುವು ಕಂಡರೆ, 1972 ಹಾಗೂ 1978ರಲ್ಲಿ ಬಿ.ಇ.ರಾಮಯ್ಯ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಜಯ ಸಾಧಿಸುತ್ತಾರೆ. 1983ರಲ್ಲಿ ಶಂಕರರೆಡ್ಡಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ 24,559 ಮತಗಳ ಭಾರೀ ಅಂತರದ ಗೆಲುವು ಕಂಡರೆ, 1985ರಲ್ಲಿ ಜನತಾ ಪಕ್ಷದ ಅಭ್ಯರ್ಥಿ ಸಿ.ಎಂ.ರೇವಣಸಿದ್ದಯ್ಯ ಅವರು ಕಾಂಗ್ರೆಸ್‌ನ ಶಂಕರರೆಡ್ಡಿ ವಿರುದ್ಧ 2612 ಮತಗಳಿಂದ ಜಯ ದಾಖಲಿಸುತ್ತಾರೆ.

1989ರಲ್ಲಿ ಮತ್ತೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದ ಶಂಕರರೆಡ್ಡಿ ಅವರು ಜನತಾದಳದ ಅಭ್ಯರ್ಥಿ ಟಿ.ಎಂ.ಚಂದ್ರಶೇಖರಯ್ಯ ಅವರನ್ನು 14,357 ಮತಗಳಿಂದ ಸೋಲಿಸುತ್ತಾರೆ. 1994ರ ಚುನಾವಣೆಯ ಫಲಿತಾಂಶ ಜನತಾ ಪಕ್ಷದ ಅಭ್ಯರ್ಥಿ ಟಿ.ಎಂ.ಚಂದ್ರಶೇಖರಯ್ಯನವರ ಪಾಲಾಗುತ್ತದೆ. ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣದಲ್ಲಿದ್ದ ಶಂಕರರೆಡ್ಡಿ ಈ ಬಾರಿ ಸೋಲಿಗೆ ಶರಣಾಗುತ್ತಾರೆ. 1999ರ ಚುನಾವಣೆಯಲ್ಲಿ ಮತ್ತೆ ಅಖಾಡಕ್ಕಿಳಿದ ಶಂಕರರೆಡ್ಡಿ ಅವರು ಜೆಡಿಯು ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದ ಟಿ.ಎಂ.ಚಂದ್ರಶೇಖರಯ್ಯರನ್ನು 22,899 ಮತಗಳಿಂದ ಪರಾಭವಗೊಳಿಸುತ್ತಾರೆ.

2004ರಲ್ಲಿ ಅರಳಿದ ಕಮಲ:

ಕೈ ಪಕ್ಷದ ಅಭ್ಯರ್ಥಿಗಳನ್ನೇ ಹೆಚ್ಚು ಬಾರಿ ಗೆಲ್ಲಿಸಿಕೊಂಡಿದ್ದ ಬಂದಿದ್ದ ಈ ಕ್ಷೇತ್ರದ ಮತದಾರರು 2004ರಿಂದ ಬಿಜೆಪಿ ಅರಳಲು ಅವಕಾಶ ಕಲ್ಪಿಸಿಕೊಡುತ್ತಾರೆ. 1999ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 19,930 ಮತಗಳನ್ನು ಪಡೆದಿದ್ದ ಎಂ.ಎಸ್‌.ಸೋಮಲಿಂಗಪ್ಪರಿಗೆ 2004ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಸುಲಭವಾಗಿ ದಕ್ಕುತ್ತದೆ. ಪರಿಣಾಮ ಮೊದಲ ಬಾರಿಗೆ ಪಕ್ಷ ಬದಲಾವಣೆ ಬಯಸಿದ ಕ್ಷೇತ್ರದ ಮತದಾರರು ಎಂ.ಎಸ್‌.ಸೋಮಲಿಂಗಪ್ಪರನ್ನು ಚುನಾಯಿಸಿಕೊಳ್ಳುತ್ತಾರೆ. ಜೆಡಿಎಸ್‌ನಿಂದ ಸ್ಪರ್ಧೆಗಿಳಿದಿದ್ದ ಟಿಎಂ ಚಂದ್ರಶೇಖರಯ್ಯರನ್ನು 6316 ಮತಗಳಿಂದ ಸೋಮಲಿಂಗಪ್ಪ ಸೋಲುಣಿಸಿ, ರಾಜಕೀಯ ಭವಿಷ್ಯ ಭದ್ರಪಡಿಸಿಕೊಳ್ಳುತ್ತಾರೆ. 2008ರ ಚುನಾವಣೆಯಲ್ಲೂ ಎಂ.ಎಸ್‌.ಸೋಮಲಿಂಗಪ್ಪ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್‌ನ ಬಿ.ಎಂ.ನಾಗರಾಜ್‌ ವಿರುದ್ಧ 4824 ಮತಗಳ ಅಂತರದಲ್ಲಿ ಗೆಲುವು ಪಡೆಯುತ್ತಾರೆ.

2013ರಲ್ಲಿ ಮತ್ತೆ ಈ ಕ್ಷೇತ್ರದ ಮತದಾರ ಕೈ ಪಕ್ಷದ ಅಭ್ಯರ್ಥಿ ಬಿ.ಎಂ.ನಾಗರಾಜ್‌ರನ್ನು ಚುನಾಯಿಸಿಕೊಳ್ಳುತ್ತಾರೆ. ಬಿಜೆಪಿ ಅಭ್ಯರ್ಥಿ ಸೋಮಲಿಂಗಪ್ಪ 21814 ಮತಗಳ ಭಾರೀ ಅಂತರದ ಸೋಲುಣ್ಣುತ್ತಾರೆ. 2018ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಸ್ಪರ್ಧಿಸುವ ಅವಕಾಶ ಪಡೆದ ಎಂ.ಎಸ್‌.ಸೋಮಲಿಂಗಪ್ಪ ಅವರು ಕಾಂಗ್ರೆಸ್‌ನ ಮುರುಳಿಕೃಷ್ಣ ವಿರುದ್ಧ ಗೆಲುವು ದಾಖಲಿಸುತ್ತಾರೆ.

ಸೋಮಲಿಂಗಪ್ಪಗೆ ಟಿಕೆಟ್‌:

ಸಿರುಗುಪ್ಪ ಪಟ್ಟಣದಲ್ಲಿ ಕಳೆದ ಅಕ್ಟೋಬರ್‌ 13 ರಂದು ಜರುಗಿದ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಎಂ.ಎಸ್‌.ಸೋಮಲಿಂಗಪ್ಪರನ್ನು 50 ಸಾವಿರ ಮತಗಳಿಂದ ಗೆಲ್ಲಿಸಿ ಕಳಿಸಿಕೊಡಿ ಎಂದು ಕ್ಷೇತ್ರದ ಮತದಾರರಿಗೆ ಕರೆ ನೀಡಿದ್ದರು. ಸೋಮಲಿಂಗಪ್ಪರ ಕಾರ್ಯವೈಖರಿಯನ್ನು ಕೊಂಡಾಡಿದ ಸಿಎಂ, ಈ ಬಾರಿ ಸೋಮಲಿಂಗಪ್ಪರಿಗೆ ಟಿಕೆಟ್‌ ನೀಡಿಕೆ ಪಕ್ಕಾ ಎಂಬುದನ್ನು ಪರೋಕ್ಷವಾಗಿ ಖಚಿತಪಡಿಸಿದರು.

click me!