ತೆರೆಮರೆಯ ಕಸರತ್ತು ನಡೆಸುತ್ತಿರುವ ಸಮಾಜ ಕಲ್ಯಾಣ ಸಚಿವರು| ನೂತನ ವಿಜಯನಗರ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡುವ ಆಸಕ್ತಿ ತೋರುತ್ತಿರುವ ಆನಂದ ಸಿಂಗ್| ಆಪ್ತರಾಗಿರುವ ಆನಂದ ಸಿಂಗ್- ಶ್ರೀರಾಮುಲು|
ಕೆ.ಎಂ. ಮಂಜುನಾಥ್
ಬಳ್ಳಾರಿ(ಫೆ.18): ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಗೆ ಬೆಂಬಲ ವ್ಯಕ್ತಪಡಿಸಿದ್ದ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಲು ತೆರೆಮರೆಯ ಪ್ರಯತ್ನ ನಡೆಸಿದ್ದಾರೆಯೇ?.
ಇಂಥಹದೊಂದು ಚರ್ಚೆಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಮೂಲಗಳು ಪ್ರಕಾರ ಸಚಿವ ಶ್ರೀರಾಮುಲು ಜಿಲ್ಲಾ ಉಸ್ತುವಾರಿ ಸಚಿವರಾಗಲು ಪ್ರಯತ್ನದಲ್ಲಿದ್ದಾರೆ. ಹಾಲಿ ಸಚಿವ ಆನಂದಸಿಂಗ್ ಅವರ ಸಹಮತವೂ ಇದೆ. ಹೀಗಾಗಿ ಆದಷ್ಟು ಬೇಗ ಸಚಿವ ಶ್ರೀರಾಮುಲು ಜಿಲ್ಲಾ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂಬುದು ಕಮಲ ಪಕ್ಷದಲ್ಲಿ ಕೇಳಿ ಬರುವ ಮಾತು. ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಸಹ ಶ್ರೀರಾಮುಲು ಅವರನ್ನು ಜಿಲ್ಲಾ ಉಸ್ತುವಾರಿ ಮಂತ್ರಿಯನ್ನಾಗಿಸಬೇಕು ಎಂದು ಈಗಾಗಲೇ ಅನೇಕ ಬಾರಿ ಒತ್ತಾಯ ಮಾಡಿದ್ದು ಸಮಾಜ ಕಲ್ಯಾಣ ಸಚಿವರು ಗಣಿ ಜಿಲ್ಲೆಯ ಸಚಿವರಾಗುವ ಕಾಲ ಸನ್ನಿಹಿತವಾಗಿದೆ ಎಂಬ ಚರ್ಚೆಗಳು ಹೆಚ್ಚು ಚಾಲ್ತಿಗೆ ಬಂದಿವೆ.
ಬಳ್ಳಾರಿ ಜಿಲ್ಲೆ ವಿಭಜನೆಗೊಂಡು ವಿಜಯನಗರ ನೂತನ ಜಿಲ್ಲೆ ಅಸ್ವಿತ್ವ ಪಡೆದ ಬಳಿಕ ಹೊಸ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಸಚಿವ ಆನಂದಸಿಂಗ್ ಹೆಚ್ಚು ಕಾರ್ಯೋನ್ಮುಖರಾಗಿದ್ದಾರೆ. ಹೀಗಾಗಿ ಅವರಿಗೆ ಬಳ್ಳಾರಿ ಜಿಲ್ಲೆಯ ಉಸ್ತುವಾರಿಯಾಗಿ ಮುಂದುವರಿಯುವ ಯಾವುದೇ ಆಸಕ್ತಿಯಿಲ್ಲ. ಬದಲಿಗೆ ವಿಜಯನಗರ ಜಿಲ್ಲೆಯ ಉಸ್ತುವಾರಿ ಮಂತ್ರಿಯಾಗಿ ಹೊಸ ಜಿಲ್ಲೆಯ ಪ್ರಗತಿಗೆ ಪೂರಕವಾಗಿ ಕೈಗೊಳ್ಳಬೇಕಾಗಿರುವ ಕೆಲಸಗಳತ್ತ ಹೆಚ್ಚು ಗಮನ ನೀಡಲು ಸಚಿವ ಆನಂದಸಿಂಗ್ ನಿರ್ಧರಿಸಿದ್ದಾರೆ. ನೂತನ ವಿಜಯನಗರ ಜಿಲ್ಲೆಯ ಮಂತ್ರಿಯಾಗಲು ಸಚಿವ ಸಿಂಗ್ ಹೆಚ್ಚು ಉತ್ಸುಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಹಂಪಿ ವಾಣಿಜ್ಯ ಚಟುವಟಿಕೆ ಸಂಪೂರ್ಣ ಬಂದ್: ಊಟ, ತಿಂಡಿ ಸಿಗದೇ ಪ್ರವಾಸಿಗರ ಪರದಾಟ
ಸಿಂಗ್- ರಾಮುಲು ಆಪ್ತರು:
ಸಚಿವ ಆನಂದಸಿಂಗ್ ಹಾಗೂ ಬಿ. ಶ್ರೀರಾಮುಲು ಇಬ್ಬರ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಹೆಚ್ಚು ಆಪ್ತರೂ ಆಗಿದ್ದಾರೆ. ಈ ಕಾರಣಕ್ಕಾಗಿಯೇ ಸ್ಥಳೀಯ ಶಾಸಕ ಜಿ. ಸೋಮಶೇಖರ ರೆಡ್ಡಿ ಅವರು ವಿಜಯನಗರ ಜಿಲ್ಲೆಗೆ ವಿರೋಧ ವ್ಯಕ್ತಪಡಿಸಿದರೂ ಸಚಿವ ಶ್ರೀರಾಮುಲು ಬೆಂಬಲ ವ್ಯಕ್ತಪಡಿಸಿದರು. ಹೊಸ ಜಿಲ್ಲೆಯಿಂದ ಅಧಿಕಾರ ವಿಕೇಂದ್ರಕರಣವಾಗುತ್ತದೆ. ಜನರಿಗೆ ಒಳಿತಾಗುತ್ತದೆ ಎಂದೇ ಹೇಳಿಕೆ ನೀಡಿದರು.
ಶ್ರೀರಾಮುಲು ಅವರು ಹೊಸ ಜಿಲ್ಲೆ ಬೆಂಬಲ ನೀಡಲು ಕಾರಣವೂ ಇದೆ. ಹೊಸ ಜಿಲ್ಲೆ ಅಸ್ವಿತ್ವ ಪಡೆದುಕೊಂಡರೆ ಆನಂದಸಿಂಗ್ ವಿಜಯನಗರ ಜಿಲ್ಲೆಯ ಮಂತ್ರಿಯಾಗಿ ಮುಂದುವರಿಯುತ್ತಾರೆ. ಇದರಿಂದ ಬಳ್ಳಾರಿ ಜಿಲ್ಲೆಗೆ ತೆರವಾಗುವ ಮಂತ್ರಿ ಸ್ಥಾನದಲ್ಲಿ ಉಸ್ತುವಾರಿಯಾಗಿ ಮುಂದುವರಿಯಬಹುದು ಎಂಬ ಲೆಕ್ಕಾಚಾರವಿದೆ. ಇನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೊಳಕಾಲ್ಮುರು ಕ್ಷೇತ್ರದಿಂದ ದೂರ ಉಳಿದು ವಿಜಯನಗರ ಜಿಲ್ಲೆಯ ಕೂಡ್ಲಿಗಿಯಿಂದ ಸ್ಪರ್ಧಿಸಲು ಸಚಿವ ಶ್ರೀರಾಮುಲು ಚಿಂತನೆ ನಡೆಸಿದ್ದಾರೆ. ಒಂದು ವೇಳೆ ಕೂಡ್ಲಿಗಿಯಿಂದ ಸ್ಪರ್ಧಿಸಿದಲ್ಲಿ ಆನಂದಸಿಂಗ್ ಬೆಂಬಲವೂ ಸಿಗಲಿದೆ.
ವಾಲ್ಮೀಕಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಕೂಡ್ಲಿಗಿ ಕ್ಷೇತ್ರದಿಂದ ವಿಜಯಗಳಿಸುವುದು ಸುಲಭವೂ ಆಗಿದೆ ಎಂಬ ಮುಂದಾಲೋಚನೆಯ ಲೆಕ್ಕಾಚಾರಗಳು ಇವೆ ಎಂದು ಹೇಳಲಾಗುತ್ತಿದೆ. ಕೂಡ್ಲಿಗಿ ತಾಲೂಕಿನಲ್ಲಿ ಕಾಂಗ್ರೆಸ್ ಪ್ರಬಲವಾಗಿದ್ದರೂ ವ್ಯಕ್ತಿಗತ ವರ್ಚಸ್ಸಿನ ಮೇಲೆಯೇ ಗೆದ್ದು ಬಂದವರು ಹೆಚ್ಚು. ಹೀಗಾಗಿ ಶ್ರೀರಾಮುಲು ಕೂಡ್ಲಿಗಿಯಿಂದ ಸ್ಪರ್ಧಿಸಿದಲ್ಲಿ ಸುಲಭವಾಗಿ ಗೆಲ್ಲುವ ಸಾಧ್ಯತೆಗಳಿವೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ, ಈ ಬಗ್ಗೆ ನನಗೆ ಖಚಿತ ಮಾಹಿತಿ ಇಲ್ಲ. ಪಕ್ಷದ ಹಿರಿಯರು ಹಾಗೂ ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಬಳ್ಳಾರಿ ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಪಾಟೀಲ್ ತಿಳಿಸಿದ್ದಾರೆ.