ಅಮ್ಮ ಪಕ್ಕದ ಮನೆಯವರೊಂದಿಗೆ ಜಗಳ ಮಾಡಿದ್ದಕ್ಕೆ, 6 ವರ್ಷದ ಮಗು ಕೊಲೆಗೈದು ಚರಂಡಿಗೆ ಎಸೆದ ದುರುಳ!

Published : Jan 07, 2026, 12:17 PM ISTUpdated : Jan 07, 2026, 12:43 PM IST
Whitefield mother Clash

ಸಾರಾಂಶ

ಬೆಂಗಳೂರಿನ ವೈಟ್‌ಫೀಲ್ಡ್ ಬಳಿ, ನೆರೆಮನೆಯವರ ನಡುವಿನ ಜಗಳವು 6 ವರ್ಷದ ಬಾಲಕಿಯ ಬರ್ಬರ ಕೊಲೆಯಲ್ಲಿ ಅಂತ್ಯಗೊಂಡಿದೆ. ತಾಯಿಯ ಮೇಲಿನ ಸೇಡಿಗಾಗಿ ಆರೋಪಿಯು ಮಗುವನ್ನು ಕೊಂದು, ಶವವನ್ನು ಬ್ಯಾಗ್‌ನಲ್ಲಿ ತುಂಬಿ ಚರಂಡಿಗೆ ಎಸೆದಿದ್ದು, ಪೊಲೀಸರು ಆರೋಪಿಗಾಗಿ ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು (ಜ.07): ಅಕ್ಕ-ಪಕ್ಕದ ಮನೆಯವರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ನಡೆದಿದ್ದು, ಪಕ್ಕದ ಮನೆಯ ದುರುಳನೊಬ್ಬ 6 ವರ್ಷದ ಹಸುಳೆಯ ಪ್ರಾಣವನ್ನೇ ಬಲಿಪಡೆದಿರುವ ಮನಕಲಕುವ ಘಟನೆ ಸಿಲಿಕಾನ್ ಸಿಟಿಯ ವೈಟ್‌ಫೀಲ್ಡ್ ಸಮೀಪದ ನಲ್ಲೂರಳ್ಳಿಯಲ್ಲಿ ಸಂಭವಿಸಿದೆ. ನೆರೆಹೊರೆಯವರ ನಡುವಿನ ದ್ವೇಷಕ್ಕೆ ಬಲಿಯಾದ ಬಾಲಕಿಯನ್ನು ಪಶ್ಚಿಮ ಬಂಗಾಳ ಮೂಲದ ಶಹಜಾನ್ ಕತೂನ್ (6) ಎಂದು ಗುರುತಿಸಲಾಗಿದೆ.

ಸೇಡಿನ ಕಿಚ್ಚಿಗೆ ಬಲಿಯಾದ ಮಗು

ಪಶ್ಚಿಮ ಬಂಗಾಳದ ಕೊಲ್ಕತ್ತಾ ಮೂಲದ ಕುಟುಂಬವೊಂದು ನಲ್ಲೂರಳ್ಳಿಯಲ್ಲಿ ವಾಸವಾಗಿತ್ತು. ಈ ಕುಟುಂಬಕ್ಕೂ ಹಾಗೂ ಅಕ್ಕಪಕ್ಕದ ಮನೆಯವರಿಗೂ ಸಣ್ಣಪುಟ್ಟ ವಿಚಾರಕ್ಕೆ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಇತ್ತೀಚೆಗೆ ನಡೆದ ಕಿತ್ತಾಟದ ನಂತರ, ಮಗುವಿನ ತಾಯಿಗೆ 'ಬುದ್ಧಿ ಕಲಿಸಬೇಕು' ಎಂದು ಪಣತೊಟ್ಟ ಆರೋಪಿ, ಈ ಅಮಾಯಕ ಮಗುವನ್ನೇ ತನ್ನ ಸೇಡಿಗೆ ದಾಳವನ್ನಾಗಿ ಬಳಸಿಕೊಂಡಿದ್ದಾನೆ.

ಬ್ಯಾಗ್‌ನಲ್ಲಿ ಶವವಿಟ್ಟು ಚರಂಡಿಗೆ ಎಸೆದ ಆರೋಪಿ

ಕೃತ್ಯ ಎಸಗಲು ಯೋಜಿಸಿದ ಆರೋಪಿ, ಬಾಲಕಿ ಶಹಜಾನ್ ಕತೂನ್ ಒಬ್ಬಳೇ ಇದ್ದ ಸಮಯ ನೋಡಿ ಹೊಂಚು ಹಾಕಿದ್ದನು. ಆಕೆಯನ್ನು ಅಪಹರಿಸಿ ಕುತ್ತಿಗೆ ಹಿಸುಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಅಷ್ಟಕ್ಕೇ ನಿಲ್ಲದ ಈತನ ಕ್ರೌರ್ಯ, ಮಗುವಿನ ಶವವನ್ನು ಬ್ಯಾಗ್ ಒಂದರಲ್ಲಿ ಹತ್ತಿಕ್ಕಿ ತುಂಬಿ, ಯಾರಿಗೂ ಅನುಮಾನ ಬರದಂತೆ ಸಮೀಪದ ಚರಂಡಿಗೆ ಎಸೆದು ಪರಾರಿಯಾಗಿದ್ದಾನೆ.

ಪೊಲೀಸ್ ತನಿಖೆ

ಇತ್ತ ಮಗು ಕಾಣೆಯಾದ ಬಗ್ಗೆ ಪೋಷಕರು ಗಾಬರಿಗೊಂಡು ಹುಡುಕಾಡಿದಾಗ ಮಗುವಿನ ಶವ ಚರಂಡಿಯಲ್ಲಿ ಪತ್ತೆಯಾಗಿದೆ. ಕೂಡಲೇ ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಾಗಿದ್ದು, ಮಗುವಿನ ತಾಯಿಯ ಜೊತೆ ಜಗಳವಾಡಿದ್ದ ವ್ಯಕ್ತಿಯೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ತನ್ನ ತಾಯಿ ಯಾರ ಜೊತೆ ಜಗಳವಾಡಿದ್ದಾಳೆ ಎಂಬ ಅರಿವಿಲ್ಲದ ಹಸುಳೆಯನ್ನು ಇಷ್ಟು ಕ್ರೂರವಾಗಿ ಕೊಂದ ಆರೋಪಿಗಾಗಿ ವೈಟ್‌ಫೀಲ್ಡ್ ಪೊಲೀಸರು ಬಲೆ ಬೀಸಿದ್ದಾರೆ. ಸೇಡಿಗಾಗಿ ಹಸುಳೆಯ ಕೊಲೆ ಮಾಡಿರುವುದು ಇಡೀ ಬಡಾವಣೆಯನ್ನು ಬೆಚ್ಚಿಬೀಳಿಸಿದೆ.

ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ನಲ್ಲೂರಳ್ಳಿಯಲ್ಲಿ ನಾಪತ್ತೆಯಾಗಿದ್ದ 6 ವರ್ಷದ ಬಾಲಕಿ ಶವವಾಗಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ವೈಟ್‌ಫೀಲ್ಡ್ ಡಿಸಿಪಿ ಅವರು ತನಿಖೆಯ ಮಹತ್ವದ ವಿವರಗಳನ್ನು ಬಿಡುಗಡೆ ಮಾಡಿದ್ದಾರೆ. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಬಾಲಕಿಯನ್ನು ಪ್ಲಾಸ್ಟಿಕ್ ವೈರ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಘಟನೆಯ ವಿವರ ಹಾಗೂ ಪೊಲೀಸ್ ಕಾರ್ಯಾಚರಣೆ

ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ತಮ್ಮ ಮಗು ಕಾಣೆಯಾಗಿರುವ ಬಗ್ಗೆ ಮಂಗಳವಾರ ಮಧ್ಯಾಹ್ನ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನಲ್ಲಿ ಪರಿಚಿತ ವ್ಯಕ್ತಿಯೊಬ್ಬರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು ಎಫ್‌ಐಆರ್ (FIR) ದಾಖಲಿಸಿ, ತಾಂತ್ರಿಕ ತಂಡ ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಹುಡುಕಾಟ ಆರಂಭಿಸಿದರು. ಸಿಸಿಟಿವಿ ಪರಿಶೀಲಿಸಿದಾಗ ಮಗು ತನ್ನ ಕುಟುಂಬಕ್ಕೆ ಪರಿಚಯವಿದ್ದ ವ್ಯಕ್ತಿಯೊಬ್ಬನ ಜೊತೆ ಹೋಗುತ್ತಿರುವುದು ಪತ್ತೆಯಾಗಿತ್ತು. ಇದನ್ನು ಆಧರಿಸಿ ಪೊಲೀಸರು ನಲ್ಲೂರಳ್ಳಿ ಭಾಗದಲ್ಲಿ ತಡರಾತ್ರಿಯವರೆಗೆ ಬೃಹತ್ ಮಟ್ಟದ 'ಕೂಂಬಿಂಗ್' ಕಾರ್ಯಾಚರಣೆ ನಡೆಸಿದರು.

ಮೋರಿಯಲ್ಲಿ ಮೃತದೇಹ ಪತ್ತೆ: 

ತಡರಾತ್ರಿ ಶೋಧ ಕಾರ್ಯದ ವೇಳೆ ನಲ್ಲೂರಳ್ಳಿಯ ದೇವಸ್ಥಾನ ರಸ್ತೆಯ ಬಳಿಯ ಮೋರಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಪ್ರಕರಣದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಿಸಿಪಿ, ಮಗುವಿನ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ಅಥವಾ ದೈಹಿಕ ಹಲ್ಲೆಯ ಗುರುತುಗಳಿಲ್ಲ. ಪ್ಲಾಸ್ಟಿಕ್ ವೈರ್‌ನಿಂದ ಕುತ್ತಿಗೆ ಬಿಗಿದು ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಆರೋಪಿ ಕುಟುಂಬ ಮತ್ತು ಬಾಲಕಿಯ ಕುಟುಂಬದ ನಡುವೆ ಹಳೆಯ ವೈಷಮ್ಯವಿತ್ತು. ಇದೇ ದ್ವೇಷದ ಹಿನ್ನೆಲೆಯಲ್ಲಿ ಮಗುವನ್ನು ಕೊಲೆ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಸಂಶಯಾಸ್ಪದ ವ್ಯಕ್ತಿಯ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿದ್ದು, ಆತನನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಲಾಗಿದೆ. ಪರಿಚಿತನೇ ಮಗುವನ್ನು ಕರೆದೊಯ್ದು ಈ ರೀತಿ ಬರ್ಬರವಾಗಿ ಕೊಲೆ ಮಾಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಆರೋಪಿಯ ಬಂಧನಕ್ಕಾಗಿ ಪೊಲೀಸರು ಜಾಲ ಬೀಸಿದ್ದಾರೆ.

PREV
Read more Articles on
click me!

Recommended Stories

ಹುಣಸೂರು: 6 ನಿಮಿಷದಲ್ಲಿ 8 ಕೆಜಿ ಚಿನ್ನ ಕದ್ದ ಪ್ರಕರಣ, 10 ದಿನ ನಾಲ್ಕು ರಾಜ್ಯ ಸುತ್ತಿದ್ರೂ ಕಳ್ಳರ ಸುಳಿವಿಲ್ಲ
ಸರ್ಕಾರಕ್ಕೆ ಶಾಕ್ ಕೊಟ್ಟ ಕೋಗಿಲು ಅಕ್ರಮ ನಿವಾಸಿಗಳು: 28 ವರ್ಷದಿಂದ ವಾಸವಿರುವ ನಮಗೆ ಮನೆ ಬೇಕು-ಹೈಕೋರ್ಟ್‌ ಮೊರೆ!