ಹುಬ್ಬಳ್ಳಿ ಪೊಲೀಸರಿಂದ ನಾಗರೀಕ ಸಮಾಜ ತಲೆತಗ್ಗಿಸೋ ಕೃತ್ಯ, ಬಂಧನಕ್ಕೆ ಪ್ರತಿರೋಧಿಸಿದ ಬಿಜೆಪಿ ಕಾರ್ಯಕರ್ತೆಯ ಬಟ್ಟೆ ಬಿಚ್ಚಿ ಹಲ್ಲೆ!

Published : Jan 07, 2026, 11:35 AM IST
hubballi Sujata Handi

ಸಾರಾಂಶ

ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಬಂಧನದ ವೇಳೆ ಪೊಲೀಸರು ಬಟ್ಟೆ ಬಿಚ್ಚಿ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆದರೆ, ಮಹಿಳೆಯೇ ತಮ್ಮ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ತಾವೇ ಬಟ್ಟೆ ಬಿಚ್ಚಿದ್ದಾರೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. 

ಹುಬ್ಬಳ್ಳಿ: ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರನ್ನು ಬಂಧಿಸುವ ವೇಳೆ ಪೊಲೀಸರೇ ಬಟ್ಟೆ ಬಿಚ್ಚಿ ಹಲ್ಲೆ ನಡೆಸಿರುವ ಗಂಭೀರ ಆರೋಪಗಳು ಕೇಳಿಬಂದಿದ್ದು, ಈ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವ ಕೃತ್ಯವೆಂದು ಭಾರೀ ಆಕ್ರೋಶ ವ್ಯಕ್ತವಾಗಿದೆ. ಜನವರಿ 5ರಂದು ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪ್ರಕರಣ ರಾಜ್ಯಮಟ್ಟದ ಗಮನ ಸೆಳೆದಿದೆ.

ಬಂಧನಕ್ಕೊಳಗಾದ ಮಹಿಳೆ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದ್ದರು. ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಗಲಾಟೆ ನಡೆದ ಹಿನ್ನೆಲೆ, ಕಾಂಗ್ರೆಸ್ ಕಾರ್ಪೊರೇಟರ್ ಸುವರ್ಣ ಕಲ್ಲಕುಂಟ್ಲಾ ನೀಡಿದ ದೂರಿನ ಮೇರೆಗೆ ಕೇಶ್ವಾಪುರ ಪೊಲೀಸರು ಸುಜಾತಾ ಹಂಡಿಯನ್ನು ಬಂಧಿಸಲು ಮುಂದಾಗಿದ್ದರು. ಕಾಂಗ್ರೆಸ್ ಮತದಾರರ ಹೆಸರನ್ನು ಪಟ್ಟಿಯಿಂದ ಡಿಲೀಟ್ ಮಾಡಿಸಿದ್ದ ಆರೋಪ ಹಂಡಿ ಮೇಲೆ ಇತ್ತು.

ಬಂಧನಕ್ಕೆ ಪ್ರತಿರೋಧ ಬಲವಂತವಾಗಿ ವ್ಯಾನ್ ಹತ್ತಿಸಿದ ಪೊಲೀಸ್

ಈ ಹಿನ್ನೆಲೆಯಲ್ಲಿ ಬಂಧನಕ್ಕೆ ಪ್ರತಿರೋಧ ತೋರಿದ ಸಂದರ್ಭದಲ್ಲಿ ಸುಜಾತಾ ಹಂಡಿಯನ್ನು ಬಲವಂತವಾಗಿ ಎಳೆದು ಪೊಲೀಸ್ ವ್ಯಾನ್‌ಗೆ ಕೂರಿಸಲಾಗಿದೆ. ಈ ವೇಳೆ ಪೊಲೀಸರೇ ಮಹಿಳೆಯ ಬಟ್ಟೆ ಬಿಚ್ಚಿ ಅಮಾನುಷವಾಗಿ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪೊಲೀಸ್ ವ್ಯಾನ್‌ನೊಳಗೆ ನಡೆದ ಈ ಕೃತ್ಯ ಮಹಿಳೆಯ ಮಾನ, ಗೌರವಕ್ಕೆ ಧಕ್ಕೆ ತಂದಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ

ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಕೇಶ್ವಾಪುರ ಪೊಲೀಸ್ ಠಾಣೆಗೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಇನ್ಸ್‌ಪೆಕ್ಟರ್ ಕರೇಪ್ಪ ಹಟ್ಟಿ ಸೇರಿದಂತೆ ಹಿರಿಯ ಅಧಿಕಾರಿಗಳು ಠಾಣೆಗೆ ಹಾಜರಾಗಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಮುಖ್ಯಮಂತ್ರಿ ಹುಬ್ಬಳ್ಳಿಗೆ ಆಗಮಿಸುವ ಹಿನ್ನೆಲೆ ಪೊಲೀಸರು ಅಲರ್ಟ್ ಆಗಿರುವುದೂ ಕಂಡುಬಂದಿತು.

ಈ ಪ್ರಕರಣದಲ್ಲಿ ಪೊಲೀಸರ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದ್ದು, “ಪೊಲೀಸರಿಂದಲೇ ಮಹಿಳೆಯೊಬ್ಬಳನ್ನು ವಿವಸ್ತ್ರಗೊಳಿಸಿ ಥಳಿಸುವಂತಹ ಕೃತ್ಯ ನಡೆದಿದ್ದರೆ ಅದು ಅತ್ಯಂತ ಖಂಡನೀಯ. ಇದು ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ” ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಮಹಿಳಾ ಪೊಲೀಸ್‌ ಸಿಬ್ಬಂದಿಗೆ ಕಚ್ಚಿದ ಸುಜಾತ

ಆದರೆ ಪೊಲೀಸರು ತಮ್ಮ ಸಿಬ್ಬಂದಿ ಮೇಲೆ ಸುಜಾತ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ ಎಂದು ಆರೋಪಿಸಿದ್ದಾರೆ. ಈ ಕುರಿತು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದು, “ಬಂಧನ ಸಂದರ್ಭದಲ್ಲಿ ಸುಜಾತಾ ಹಂಡಿ ನಮ್ಮ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸ್ ವಾಹನದಲ್ಲಿ ಕೂರಿಸಿದ ನಂತರ ಅವರು ತಾವೇ ಬಟ್ಟೆ ತೆಗೆದಿದ್ದಾರೆ. ಮಹಿಳಾ ಪೊಲೀಸ್ ಸಿಬ್ಬಂದಿಯ ಹೊಟ್ಟೆಗೆ ಕಚ್ಚಿ ಗಾಯಗೊಳಿಸಿದ್ದು, ಐದು ಮಂದಿ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ವಿರುದ್ಧ ಈ ಹಿಂದೆ ಕೂಡ ಹಲವು ಪ್ರಕರಣಗಳು ದಾಖಲಾಗಿವೆ” ಎಂದು ಹೇಳಿಕೆ ನೀಡಿದ್ದಾರೆ.

ಘಟನೆಯ ಬಳಿಕ ಕೇಶ್ವಾಪುರ ಠಾಣೆ ಪೊಲೀಸರು ಸುಜಾತಾ ಹಂಡಿ ವಿರುದ್ಧ ಹಲ್ಲೆ, ಅನುಚಿತ ವರ್ತನೆ ಸೇರಿದಂತೆ ಹಲವು ಆರೋಪಗಳಡಿ ಪ್ರಕರಣ ದಾಖಲಿಸಿದ್ದಾರೆ. ಬಂಧನದ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಸದ್ಯ ಅವರು ಹುಬ್ಬಳ್ಳಿಯ ಜೈಲಿನಲ್ಲಿ ಇರಿಸಲಾಗಿದ್ದಾರೆ.

ಒಟ್ಟಾರೆ, ಮಹಿಳೆಯ ಮೇಲೆ ನಡೆದ ಪೊಲೀಸ್ ಕ್ರಮ ಮಾನವ ಹಕ್ಕು ಉಲ್ಲಂಘನೆಯೇ? ಅಥವಾ ಕಾನೂನು ಜಾರಿಗೆ ತರಲು ತೆಗೆದುಕೊಂಡ ಕ್ರಮವೇ? ಎಂಬ ಪ್ರಶ್ನೆಗಳು ಇದೀಗ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿವೆ. ಈ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಯಬೇಕೆಂದು ವಿವಿಧ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಒತ್ತಾಯಿಸುತ್ತಿವೆ.

PREV
Read more Articles on
click me!

Recommended Stories

250 ಕೋಟಿ ಮೌಲ್ಯದ 53.5 ಎಕರೆ ಭೂಮಿ ಅಕ್ರಮ ಮಾರಾಟ; ಇನ್ಪೋಸಿಸ್‌ನಿಂದ ಮೊದಲ ಪ್ರತಿಕ್ರಿಯೆ
ಹಣಕ್ಕಾಗಿ ಅಪ್ರಾಪ್ತ ಮಗಳನ್ನೇ ವೇಶ್ಯಾವಾಟಿಕೆಗೆ ಮಾರಿದ ಅಪ್ಪ-ಅಜ್ಜಿ! ಪಾಪಿಗಳ ಫೋಟೋ ರಿವೀಲ್ ಮಾಡಿದ ಪೊಲೀಸರು!