Koppal: ಅಂಜನಾದ್ರಿಗೆ ಹೋಗುವ ದಾರಿ ಯಾವುದಯ್ಯ?

By Kannadaprabha News  |  First Published Feb 18, 2022, 4:09 AM IST

*   ಪ್ರವಾಸೋದ್ಯಮ ಇಲಾಖೆಯಿಂದ ಇಲ್ಲ ಮಾರ್ಗಸೂಚಿ
*   ಹೆದ್ದಾರಿಗಳಲ್ಲಿ, ಬಸ್‌ ನಿಲ್ದಾಣಗಳಲ್ಲಿ ಮಾಹಿತಿ ಫಲಕ ಕಾಣಲ್ಲ
*   ಅಂಜನಾದ್ರಿಗೆ ತಲುಪಲು ಮಾರ್ಗಸೂಚಿ ಇಲ್ಲ
 


ಸೋಮರಡ್ಡಿ ಅಳವಂಡಿ

ಕೊಪ್ಪಳ(ಫೆ.18): ದೇಶ- ವಿದೇಶಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಮತ್ತು ಕೊಪ್ಪಳದ(Koppal) ಐಕಾನ್‌ ಆಗುತ್ತಿರುವ ‘ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಬೆಟ್ಟ’(Anjanadri Hill) ಎಲ್ಲಿದೆ ಎಂದು ಅಂಜನಾದ್ರಿಗೆ ಬರುವ ಅಪರಿಚಿತ ಭಕ್ತರು(Devotees) ಕೇಳುವ ಪ್ರಶ್ನೆ.

Tap to resize

Latest Videos

undefined

ದೀಪ ಹಚ್ಚಿ ಹುಡುಕಿದರೂ ಅಂಜನಾದ್ರಿಗೆ ತೆರಳುವ ಮಾರ್ಗದಲ್ಲಿ ಅಂಜನಾದ್ರಿಯ ಮಾಹಿತಿ ಇಲ್ಲ. ಪ್ರವಾಸೋದ್ಯಮ ಇಲಾಖೆಯಿಂದ(Department of Tourism) ಕನಿಷ್ಠ ಮಾಹಿತಿ ಇಲ್ಲ. ಮಾರ್ಗಸೂಚಿಯಂತೂ(Roadmap) ಇಲ್ಲವೇ ಇಲ್ಲ. ಹೀಗಾಗಿ ಅಂತಾರಾಷ್ಟ್ರೀಯ ಖ್ಯಾತಿಯನ್ನು ಹೊಂದುತ್ತಿರುವ ಅಂಜನಾದ್ರಿಯನ್ನು ಹುಡುಕುವುದೇ ದೊಡ್ಡ ಸಾಹಸವಾಗಿದೆ.

Anjaneya Birth Place Dispute: ಹನುಮಂತ ಎರಡೆರಡು ಬಾರಿ ಜನಿಸಿದನೇ?: ಸಂಸದ ಕರಡಿ

ನಾನಾ ರಾಜ್ಯ, ದೇಶದಿಂದ ಅಂಜನಾದ್ರಿಗೆ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು(Tourists), ಭಕ್ತರು ಆಗಮಿಸುತ್ತಾರೆ. ವೀಕೆಂಡ್‌ ದಿನಗಳಲ್ಲಿ ಹತ್ತಾರು ಸಾವಿರ ಸಂಖ್ಯೆಯಲ್ಲಿ ಜನರು ಬರುತ್ತಾರೆ.

ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರೇ ಅಂಜನಾದ್ರಿಯನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ಮಾಡುವ ಭರವಸೆ ನೀಡಿದ್ದಾರೆ. ಶೀಘ್ರದಲ್ಲಿಯೇ ಅಂಜನಾದ್ರಿಯ ಮಾಸ್ಟರ್‌ ಪ್ಲಾನ್‌ಗೆ ಚಾಲನೆ ನೀಡಲು ಸ್ವತಃ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಸಹ ಆಗಮಿಸುವ ಸಾಧ್ಯತೆ ಇದೆ. ಬಜೆಟ್‌ ಪೂರ್ವವೇ ಅಂಜನಾದ್ರಿ ಬೆಟ್ಟಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಆಗಮಿಸಲಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ(Sanganna Karadi) ಅವರು ಹೇಳಿದ್ದಾರೆ. ಆದರೆ, ಇಷ್ಟೊಂದು ಪ್ರಸಿದ್ಧಿಯನ್ನು ಪಡೆಯುತ್ತಿರುವ ಅಂಜನಾದ್ರಿಗೆ ತಲುಪಲು ಮಾರ್ಗಸೂಚಿ ಇಲ್ಲ.

ಫಲಕ ಇಲ್ಲ:

ಗದಗ ಮಾರ್ಗವಾಗಿ ಕೊಪ್ಪಳ ಜಿಲ್ಲೆಗೆ ಪ್ರವೇಶ ಮಾಡುವವರು, ಹೊಸಪೇಟೆ ಮಾರ್ಗವಾಗಿ ಕೊಪ್ಪಳ ಜಿಲ್ಲೆ ಪ್ರವೇಶ ಮಾಡುವ ಹೆದ್ದಾರಿಯಲ್ಲಿ, ಕುಷ್ಟಗಿ ರಸ್ತೆಯಲ್ಲಿ, ಯಲಬುರ್ಗಾ ರಸ್ತೆಯಲ್ಲಿ ಸೇರಿದಂತೆ ಯಾವುದೇ ರಸ್ತೆ ಮಾರ್ಗದಲ್ಲಿಯೂ ಅಂಜನಾದ್ರಿ ದೇವಸ್ಥಾನಕ್ಕೆ ಇರುವ ಅಂತರ, ಮಾರ್ಗದ ಫಲಕಗಳು ಇಲ್ಲವೇ ಇಲ್ಲ.

ಜಿಲ್ಲಾಧಿಕಾರಿ ಕಚೇರಿ ಜಿಲ್ಲಾಡಳಿತ ಭವನದಲ್ಲಿಯೂ ಅಂಜನಾದ್ರಿ ಬೆಟ್ಟದ ಮಾಹಿತಿಯನ್ನು ಹಾಕಿಲ್ಲ. ಜಿಲ್ಲಾ ಕೇಂದ್ರ ಕೊಪ್ಪಳದ ಕೇಂದ್ರಿಯ ಬಸ್‌ ನಿಲ್ದಾಣದಲ್ಲಿಯೂ ಅಂಜನಾದ್ರಿ ಮಾಹಿತಿ ಇಲ್ಲವೇ ಇಲ್ಲ. ಸುಪ್ರಸಿದ್ಧ ಅಂಜನಾದ್ರಿಯನ್ನು ಹುಡುಕಿಕೊಂಡು ಬರುವವರು ಅವರಿವರನ್ನು ಕೇಳಿಯೇ ಮುಂದೆ ಸಾಗಬೇಕು. ಈ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ. ಮಾಸ್ಟರ್‌ ಪ್ಲಾನ್‌(Master Plan) ರೂಪಿಸುತ್ತಿರುವ ಪ್ರವಾಸೋದ್ಯಮ ಇಲಾಖೆಯೂ ಗಮನ ಹರಿಸಿಲ್ಲ.

ಏನೇನು ಬೇಕು?:

ಜಿಲ್ಲೆಯ ವ್ಯಾಪ್ತಿಯ ನಗರ ಪ್ರದೇಶದ ಬಸ್‌ ನಿಲ್ದಾಣದಲ್ಲಿ, ರೈಲು ನಿಲ್ದಾಣದಲ್ಲಿ ಅಂಜನಾದ್ರಿಯ ಕುರಿತು ಮಾಹಿತಿ ಫಲಕವನ್ನು ಹಾಕಬೇಕು. ಅಲ್ಲಿಂದ ಇರುವ ದೂರ ಮತ್ತು ಮಾರ್ಗದ ಮಾಹಿತಿಯನ್ನು ದಾಖಲಿಸಬೇಕು. ಜಿಲ್ಲೆಗೆ ಪ್ರವೇಶ ಮಾಡುವ ಎಲ್ಲ ರಸ್ತೆಗಳಲ್ಲಿಯೂ ಪ್ರತಿ ಹತ್ತು ಕಿಮೀಗೆ ಒಂದರಂತೆ ಸೂಚನಾ ಫಲಕ ಇದ್ದರೆ ಉತ್ತಮ. ಅಂಜನಾದ್ರಿ ಮಾರ್ಗ, ದೂರವನ್ನು ನಮೂದಿಸಿದರೆ ಬರುವ ಪ್ರವಾಸಿಗರಿಗೆ ಅನುಕೂಲವಾಗುತ್ತದೆ.

ಟಿಟಿಡಿಯಿಂದ ತಿರುಪತಿ ‘ಹನುಮ ಜನ್ಮಸ್ಥಳ’ ಅಭಿವೃದ್ಧಿಗೆ ಶಂಕು: ಕರ್ನಾಟಕದ ಅಂಜನಾದ್ರಿ ಬೆಟ್ಟಕ್ಕೆ ಸಡ್ಡು ಯತ್ನ!

ಅಂಜನಾದ್ರಿ ಅಭಿವೃದ್ಧಿಗೆ ಮಾಸ್ಟರ್‌ ಪ್ಲಾನ್‌ ಸಿದ್ಧವಾಗುತ್ತಿದೆ. ಜತೆಗೆ ಪಿಪಿಪಿ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಮಾಡುವ ಪ್ರಯತ್ನ ನಡೆದಿದೆ. ಪ್ರವಾಸೋದ್ಯಮಕ್ಕೆ ಕೊಪ್ಪಳ ಜಿಲ್ಲೆಯಲ್ಲಿ ವಿಫುಲ ಅವಕಾಶಗಳು ಇವೆ ಅಂತ ಕೊಪ್ಪಳ ಡಿಸಿ ವಿಕಾಸ್‌ಕಿಶೋರ ಸುರಳ್ಕರ್‌ ತಿಳಿಸಿದ್ದಾರೆ.  

ಅಂಜನಾದ್ರಿ ಬೆಟ್ಟವನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದು, ಅದನ್ನು ಶೀಘ್ರದಲ್ಲಿಯೇ ಜಾರಿ ಮಾಡಬೇಕು ಮತ್ತು ಬಜೆಟ್‌ನಲ್ಲಿ ವಿಶೇಷ ಅನುದಾನ ನೀಡುವಂತೆ ಕೋರಿದ್ದೇವೆ ಅಂತ ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ. 
 

click me!