ನನ್ನ ಆಡಳಿತ ಅವಧಿಯಲ್ಲಿ ತಾಲೂಕಿನ ಪರಿಶಿಷ್ಟ ಜಾತಿ ಎಡಗೈ ಸಮುದಾಯಕ್ಕೆ ವಿಶೇಷ ಅದ್ಯತೆ ನೀಡಿದ್ದೇನೆ.
ಪಾವಗಡ : ನನ್ನ ಆಡಳಿತ ಅವಧಿಯಲ್ಲಿ ತಾಲೂಕಿನ ಪರಿಶಿಷ್ಟ ಜಾತಿ ಎಡಗೈ ಸಮುದಾಯಕ್ಕೆ ವಿಶೇಷ ಅದ್ಯತೆ ನೀಡಿದ್ದೇನೆ. ಗೌರವದಿಂದ ಕಂಡಿದ್ದೇನೆ. ಚುನಾವಣೆ ವೇಳೆ ಒಟ್ ಬ್ಯಾಂಕ್ ಒಡೆಯಲು ಕೆಲವರು ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಾರೆ. ನಂಬಬೇಡಿ, ನಿಮ್ಮ ಜತೆ ನಾನಿರುತ್ತೇನೆ. ಕಾಂಗ್ರೆಸ್ ಪರ ಅತಿ ಹೆಚ್ಚು ಮತ ನೀಡಿ ಪುತ್ರ ಎಚ್.ವಿ.ವೆಂಕಟೇಶ್ ಗೆಲುವಿಗೆ ಸಹಕರಿಸುವಂತೆ ಮಾಜಿ ಸಚಿವ ಹಾಗೂ ಶಾಸಕ ವೆಂಕಟರಮಣಪ್ಪ ದಲಿತ ಮುಖಂಡರಲ್ಲಿ ಮನವಿ ಮಾಡಿದರು.
ಶನಿವಾರ ನಗರದ ಶ್ರೀಸಾಯಿರಾಮ ಮಂದಿರದಲ್ಲಿ ಕಾಂಗ್ರೆಸ್‌ನ ತಾಲೂಕಿನ ಪರಿಶಿಷ್ಟಜಾತಿ ಎಡಗೈ ಸಮುದಾಯದ ಮುಖಂಡರು ಹಮ್ಮಿಕೊಂಡಿದ್ದ ಸಭೆಯಲ್ಲಿ ದಲಿತರನ್ನುದ್ದೇಶಿಸಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ಸಮುದಾಯಗಳನ್ನು ಸಮಾನತೆಯಿಂದ ಕಾಣಬೇಕು. ಯಾವುದೇ ಪಕ್ಷ ಕೇವಲ ಒಂದು ಸಮುದಾಯದಿಂದ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಎಲ್ಲಾ ಸಮಾಜಗಳ ಪರಿಶ್ರಮ ಹಾಗೂ ಸಹಕಾರದಿಂದ ನಾಲ್ಕು ಬಾರಿ ಶಾಸಕ ಹಾಗೂ ಎರಡು ಬಾರಿ ಮಂತ್ರಿಯಾಗಲು ಸಾಧ್ಯವಾಗಿದೆ. ಇದನ್ನ ಎಂದು ಮರೆಯಲಾರೆ. ಪರಿಶಿಷ್ಟಜಾತಿ ದಲಿತರ ಬಗ್ಗೆ ವಿಶೇಷ ಗೌರವವಿದೆ. ಆ ಸಮುದಾಯವನ್ನು ಅತ್ಯಂತ ಗೌರವವಿಂದ ಕಂಡಿದ್ದೇನೆ ಎಂದರು.
ಮತ ಹಾಕಲಿ, ಬಿಡಲಿ ಯಾರನ್ನು ಎಂದು ಕಡೆಗಾಣಿಸಿಲ್ಲ. ಚುನಾವಣೆಯವರೆಗೆ ಆ ಪಕ್ಷ ಈ ಪಕ್ಷ. ಗೆದ್ದ ಬಳಿಕ ಎಲ್ಲರನ್ನು ಸಮಾನವಾಗಿ ಕಂಡಿದ್ದೇನೆ. ನನ್ನ ಅಧಿಕಾರ ಅವಧಿಯಲ್ಲಿ ಎಡಗೈ ಸಮಾಜಕ್ಕೆ ಮೀಸಲಿದ್ದ ಸೌಲಭ್ಯ ಎಂದೂ ಬೇರೆ ಸಮಾಜಕ್ಕೆ ವಿನಿಯೋಗಿಸಿಲ್ಲ. ಅವರ ಮೀಸಲು ಅವರಿಗೆ ನೀಡಿದ್ದೇನೆ. ತಾ.ಎಡಗೈ ಸಮುದಾಯವನ್ನು ಗಂಭೀರವಾಗಿ ಪರಿಗಣಿಸಿ, ನನ್ನ ಶಾಸಕರ ಅವಧಿಯಲ್ಲಿ ತಾಲೂಕು ಕಾಂಗ್ರೆಸ್ ಅಧ್ಯಕ್ಷರ ಸ್ಥಾನ ಸೇರಿ, ಒಮ್ಮೆ ಎರಡು ಬಾರಿಗೆ ಗ್ರಾಪಂ, ತಾಪಂ ಪುರಸಭೆ ಅಧ್ಯಕ್ಷ ಸ್ಥಾನಗಳಿಗೆ ಸಹಕರಿಸಿದ್ದೇನೆ. ಈಗಲೂ ಪುರಸಭೆಯಲ್ಲಿ ಎಡಗೈ ಸಮಾಜದ ದಲಿತ ಮಹಿಳೆ ಸಹೋದರಿ ಧನಲಕ್ಷ್ಮೇ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವುದಾಗಿ ತಿಳಿಸಿ, ತಾಲೂಕಿನಲ್ಲಿ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ದಲಿತರಿಗೆ ನೀಡಿದ ಕೊಡುಗೆ ಎನು ಎಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರದಲ್ಲಿ, ಛಲವಾದಿ, ಅದಿಜಾಂಬವ, ಲಂಬಾಣಿ ಭೋವಿ ಹೀಗೆ ಜಿಲ್ಲಾವಾರು ಪ್ರತ್ಯೇಕ ನಿಗಮ ಸ್ಥಾಪನೆ ಮಾಡಿದ್ದು, ಜನಸಂಖ್ಯೆಗೆ ಅನುಗುಣವಾಗಿ ಗುರಿ ನಿಗದಿಪಡಿಸಿಲ್ಲ. ಕಡಿಮೆ ಗುರಿ ಇರುವ ಕಾರಣ ಅರ್ಜಿ ಹಾಕಿದವರಿಗೆಲ್ಲಾ ಸಾಲ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸರ್ಕಾರದ ಗಮನ ಸೆಳೆದರೂ, ಹೆಚ್ಚಿಗೆ ಸೌಲಭ್ಯ ಕಲ್ಪಿಸುವುದಾಗಿ ಹೇಳಿದರು. ನನ್ನ ಮೇಲೆ ವಿಶ್ವಾಸವಿಡಿ,ನಿಮ್ಮ ಕುಟುಂಬದ ಸದಸ್ಯನಂತೆ ಪರಿಗಣಿಸಿ,ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಹೆಚ್ಚಿಗೆ ಶ್ರಮವಹಿಸುವಂತೆ ವಿನಂತಿಸಿಕೊಂಡರು.
ತಾ,ಕಾಂಗ್ರೆಸ್ ಹಿರಿಯ ಮುಖಂಡರಾದ ವೆಟನರಿ ಉಗ್ರಪ್ಪ,ವಕೀಲ ಶೇಷನಂದನ್,ನೇಳೇಕುಂಟೆ ಜಯರಾಮಪ್ಪ,ಕೆ.ಟಿ.ಹಳ್ಳಿ ರಾಮಾಂಜಿನಪ್ಪ, ಸಿದ್ದಾಪುರ ಅಂಜಯ್ಯ, ವೆಂಕಟರಮಣಪ್ಪ, ದವಟಬೆಟ್ಟಮದ್ಲೇಟಪ್ಪ, ಮಾರಪ್ಪ,ಅಂಜಿಬಾಬು, ತಾ.ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಶ್ರೀನಿವಾಸ್ ಪ್ರಸಾದ್, ಯುವ ಮುಖಂಡರಾದ ಎನ್.ಚಂದ್ರಶೇಖರ್ ತಿಮ್ಮರಾಜ್,ಪವನ್ ನಂದೀಶ್ ಹಾಗೂ ಇತರೆ ಆನೇಕ ಮಂದಿ ದಲಿತ ಮುಖಂಡರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಮಾಜಿ ಶಾಸಕ ತಿಮ್ಮರಾಯಪ್ಪ
ಕೊಡುಗೆ ಏನು?
ತಾಲೂಕು ಕಾಂಗ್ರೆಸ್ ಅಧ್ಯಕ್ಷ ರಾಮಾಂಜಿನಪ್ಪ ಮಾತನಾಡಿ, ಜೆಡಿಎಸ್‌ನ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಕಣದಲ್ಲಿದ್ದು ಜೆಡಿಎಸ್‌ನಿಂದ ದಲಿತರಿಗೆ ನ್ಯಾಯ ಸಿಗುವುದಿಲ್ಲ. ಕಾಂಗ್ರೆಸ್ ಬೆಂಬಲಿಸುವಂತೆ ಕರೆ ನೀಡಿದರು. ಮುಖಂಡ ಕಡಮಲಕುಂಟೆ ಸುಬ್ಬರಾಯಪ್ಪ ಮಾತನಾಡಿದರು. ಶಾಸಕರ ಸಮ್ಮುಖದಲ್ಲಿ ದವಡಬೆಟ್ಟಮದ್ಲೇಟಪ್ಪ ಹಾಗೂ ವೈ.ಎನ್.ಹೊಸಕೋಟೆ ಅಂಜಿಬಾಬು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.