ಶೀಘ್ರ ದುರಸ್ತಿ ಕಾರ್ಯ ಕೈಗೊಳ್ಳಲು ಚಿಕ್ಕ ಹಂಪಿಹೋಳಿ ಗ್ರಾಮಸ್ಥರ ಆಗ್ರಹ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ.
ರಾಮದುರ್ಗ(ಏ.08): ತಾಲೂಕಿನಚಿಕ್ಕ ಹಂಪಿಹೋಳಿ ಗ್ರಾಮದಲ್ಲಿ ಕುಡಿಯುವ ನೀರಿನ ಬದಲಿಗೆ ಚರಂಡಿ ನೀರು ಸರಬರಾಜು ಆಗುತ್ತಿದ್ದು, ಅವಘಡ ಸಂಭವಿಸುವ ಮುನ್ನ ಶೀಘ್ರ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಚಿಕ್ಕಹಂಪಿಹೋಳಿ ಗ್ರಾಮ ಹಾಗೂ ಹಂಪಿಹೋಳಿ ಗ್ರಾಮದ ಕೆಲವು ಭಾಗದಲ್ಲಿ ಕಳೆದ 20 ದಿನಗಳಿಂದ ಕುಡಿಯುವ ನೀರನ ಪೈಪ್‌ಲೈನ್ ಮೂಲಕ ಚರಂಡಿ ನೀರು ಸರಬರಾಜು ಆಗುತ್ತಿದೆ. ಈ ಕುರಿತು ಅವರಾದಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೂ ಕ್ಯಾರೆ ಎನ್ನುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮದಲ್ಲಿ ಕೈಗೊಂಡ ಜೆಜೆಎಂ ಪೈಪ್‌ಲೈನ್ ಮೂಲಕವು ಚರಂಡಿ ನೀರು ಬರುತ್ತಿರುವುದಕ್ಕೆ ಗ್ರಾಮಸ್ಥರ ನಿದ್ದೆಗೆಡಿಸಿದೆ. ಗ್ರಾಮದ ಶರಣಪ್ಪ ಮೇಟಿ ಎಂಬುವರು ಕಳೆದ ಬುಧವಾರತಾಲೂಕು ಪಂಚಾಯಿತಿಕಾರ್ಯನಿರ್ವಾಹಕ ಅಧಿಕಾರಿಗಳನ್ನು ಭೇಟಿ ಮಾಡಿ, ದುರಸ್ತಿ ಕೈಗೊಳ್ಳಬೇಕು ಹಾಗೂ ಪಿಡಿಒ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಅವರು ಮನವಿ ಸಲ್ಲಿಸಿದರು. ಇತ್ತೀಚೆಗೆ ಮುದೇನೂರ ಗ್ರಾಮದಲ್ಲಿ ಇದೇ ಕುಡಿಯುವ ನೀರಿನ ಪೈಪ್‌ಲೈನ್‌ನಲ್ಲಿ ಚರಂಡಿ ನೀರು ಸರಬರಾಜು ಆಗಿ ನೀರು ಸೇವಿಸಿದ ಪರಿಣಾಮಸಾವು ನೋವುಗಳ ನಡೆದು ನೂರಾರು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿತ್ತು. ಹೇಳಿ ಕೇಳಿ ಬೇಸಿಗೆ ಕಾಲ ಇರುವುದರಿಂದ ಘಟನೆ ಮರುಕಳಿಸುವ ಮೊದಲೇ ಗ್ರಾಮಸ್ಥರ ಸಮಸ್ಯೆಯನ್ನು ಶೀಘ್ರ ಬಗೆಹರಿಸಿ ಮುಂದಾಗುವ ಅನಾಹುತವನ್ನು ಅಧಿಕಾರಿಗಳು ತಡೆಯಬೇಕಿದೆ.
KARNATAKA ASSEMBLY ELECTIONS 2023: ಟಿಕೆಟ್ ಆಕಾಂಕ್ಷಿಗಳಲ್ಲಿ ಶುರುವಾಯ್ತು ತಳಮಳ..!
ಕಳೆದ 20 ದಿನದಿಂದ ಕುಡಿಯುವ ನೀರಿನಲ್ಲಿ ಚರಂಡಿ ನೀರು ಸರಬರಾಜು ಆಗುತ್ತಿದೆ. ನೀರುಕಪ್ಪು ಬಣ್ಣದ ರೀತಿಯಲ್ಲಿ ಬರುತ್ತಿವೆ. ಇದೇ ನೀರನ್ನು ಕುಡಿದು ಕೆಲವರು ವಾಂತಿ ಬೇಧಿಯಿಂದ ಬಳಲಿದ್ದಾರೆ. ಹೆಚ್ಚಿನ ಅನಾಹುತ ಸಂಭವಿಸುವ ಮೊದಲು ಪೈಪ್‌ಲೈನ್ ಸರಿ ಪಡಿಸಿ ಅಂತ ಗ್ರಾಮಸ್ಥ ಶರಣಪ್ಪ ಮೇಟಿ ಹೇಳಿದ್ದಾರೆ.
ಚಿಕ್ಕಹಂಪಿಹೋಳಿ ಗ್ರಾಮದಲ್ಲಿ ಕುಡಿಯುವ ನೀರಿನಲ್ಲಿ ಚರಂಡಿ ನೀರು ಮಿಶ್ರವಾಗುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು, ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಲು ಸೂಚಿಸಿದ್ದೇನೆ. ನಾಳೆ ಬೆಳಗ್ಗೆ ಗ್ರಾಮಕ್ಕೆ ಖುದ್ದು ಭೇಟಿ ನೀಡಿ ಮಾಹಿತಿ ಪಡೆಯುತ್ತೇನೆ. ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ಗ್ರಾಮಕ್ಕೆ ನೀರು ಪೂರೈಸಲಾಗುತ್ತಿದೆ ಅಂತ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣಕುಮಾರ ಸಾಲಿ ತಿಳಿಸಿದ್ದಾರೆ.