South Western Railway: ಗದಗ- ವಾಡಿ ರೈಲು ಮಾರ್ಗ ಪೂರ್ಣವಾಗುವುದ್ಯಾವಾಗ?

By Kannadaprabha News  |  First Published Feb 24, 2022, 4:21 AM IST

*   ಒಟ್ಟು 252 ಕಿಮೀ ರೈಲು ಮಾರ್ಗದ ಯೋಜನೆಯಿದು
*   ಕಾಮಗಾರಿ ಪ್ರಾರಂಭವಾಗಿ 8 ವರ್ಷವಾದರೂ ಆಗಿರುವುದು ಬರೀ 22 ಕಿಮೀ
*   ಭೂಸ್ವಾಧೀನದಿಂದ ವಿಳಂಬ


ಶಿವಾನಂದ ಗೊಂಬಿ

ಹುಬ್ಬಳ್ಳಿ(ಫೆ.24): ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಸಂಪರ್ಕಿಸುವ ಗದಗ- ವಾಡಿ ರೈಲು(Gadag-Wadi) ಮಾರ್ಗ ನಿರ್ಮಾಣ ಆಮೆಗತಿಯಲ್ಲಿ ಸಾಗುತ್ತಿದೆ. ಕಾಮಗಾರಿ ಪ್ರಾರಂಭವಾಗಿ ಏಳೆಂಟು ವರ್ಷವಾದರೂ ಆಗಿರುವುದು ಬರೀ ಶೇ. 10ರಷ್ಟು ಮಾತ್ರ. ಭೂಸ್ವಾಧೀನದ(Land Acquisition) ವಿಳಂಬತೆಯೇ ಇದಕ್ಕೆ ಮುಳುವಾಗಿದೆ.

Tap to resize

Latest Videos

ಗದಗ- ವಾಡಿ ರೈಲು ಮಾರ್ಗದ ಬೇಡಿಕೆ ಈಗಿನದ್ದಲ್ಲ. ಹಲವು ದಶಕಗಳ ಬೇಡಿಕೆ. ಈ ರೈಲು ಮಾರ್ಗವಾದರೆ ಕಲ್ಯಾಣ ಕರ್ನಾಟಕ(Kalyana Karnataka) ಸೇರಿದಂತೆ ನೆರೆ ರಾಜ್ಯವೆನಿಸಿರುವ ಹೈದ್ರಾಬಾದ್‌ಗೆ(Hyuderabad) ನೇರ ಸಂಪರ್ಕ ಸಾಧಿಸುವ ಮಾರ್ಗ ಇದಾಗಿದೆ. ಈ ಮಾರ್ಗದ ಮೊಟ್ಟ ಮೊದಲು ಸಮೀಕ್ಷೆ ನಡೆದಿರುವುದು ಬ್ರಿಟಿಷ್‌ ಸರ್ಕಾರದ ಅವಧಿಯಲ್ಲಿ. 1904ರಲ್ಲಿ ಬ್ರಿಟಿಷ್‌ ಸರ್ಕಾರ ಇದರ ಸಮೀಕ್ಷೆ ನಡೆಸಿತ್ತು. ನಂತರ ಸ್ವಾತಂತ್ರ್ಯ ಹೋರಾಟ ತೀವ್ರಗೊಂಡ ನಂತರ ಈ ಯೋಜನೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲವಂತೆ. ನಂತರ ಭಾರತ ಸ್ವಾತಂತ್ರ್ಯವಾದ ಬಳಿಕ ಆಗಿನ ರೈಲ್ವೆ ಸಚಿವ ಲಾಲ್‌ಬಹದ್ದೂರು ಶಾಸ್ತ್ರೀ ಕೂಡ ಈ ಯೋಜನೆಗೆ ಅಡಿಗಲ್ಲು ಇಟ್ಟಿದ್ದರು ಎಂಬ ಮಾತಿದೆ. ಬಳಿಕ ಇದ್ಯಾಕೆ ಪ್ರಾರಂಭವಾಗಲಿಲ್ಲವೋ ಆ ಬಗ್ಗೆ ಸಮರ್ಪಕ ಉತ್ತರ ಮಾತ್ರ ಯಾರ ಬಳಿಯೂ ಇಲ್ಲ. ಆದರೆ, ಯೋಜನೆಗೆ ಮಂಜೂರಾತಿ ಸಿಕ್ಕಿದ್ದು ಮಾತ್ರ 2013-14ರಲ್ಲಿ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ರೈಲ್ವೆ ಸಚಿವರಾಗಿದ್ದ ವೇಳೆ.

Uttara Kannada: ದಾಂಡೇಲಿ-ಅಳ್ನಾವರ ನಡುವೆ ವಿದ್ಯುತ್‌ ಚಾಲಿತ ರೈಲು ಮಾರ್ಗ

2014ರಲ್ಲಿ ಪ್ರಾರಂಭವಾಗಿರುವ ಈ ಯೋಜನೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಜಂಟಿಯಾಗಿ ಶೇ. 50ರ ಅನುಪಾತದಲ್ಲಿ ಕೈಗೆತ್ತಿಕೊಂಡಿವೆ. .2841 ಕೋಟಿ ವೆಚ್ಚದ ಯೋಜನೆಯಾಗಿರುವ ಇದು ಬರೋಬ್ಬರಿ 252 ಕಿಮೀ ವ್ಯಾಪ್ತಿಯ ಯೋಜನೆ. ಈವರೆಗೆ ಬರೀ 22 ಕಿಮೀ ಮಾತ್ರ ರೈಲು ಮಾರ್ಗ ನಿರ್ಮಾಣವಾಗಿದೆ. ಇನ್ನೂ 230 ಕಿಮೀಗೂ ಅಧಿಕ ಕಾಮಗಾರಿ ಆಗಬೇಕಿದೆ.

ಭೂಸ್ವಾಧೀನದಿಂದ ವಿಳಂಬ:

ಈ ಯೋಜನೆಗೆ 3900 ಎಕರೆ ಭೂಮಿ ಬೇಕು. ಈವರೆಗೂ 2480 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಂಡು ರೈಲ್ವೆ ಇಲಾಖೆಗೆ ರಾಜ್ಯ ಸರ್ಕಾರ ಹಸ್ತಾಂತರಿಸಿದೆ. ಇನ್ನೂ 1420 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಬೇಕಿದೆ. ಆ ಕಾರ್ಯವನ್ನು ರಾಜ್ಯ ಸರ್ಕಾರ(Government of Karnataka) ಮಾಡುತ್ತಿದೆ. ಶೀಘ್ರದಲ್ಲೇ ಮುಕ್ತಾಯವಾಗಲಿದೆ ಎಂಬ ಮಾತು ರಾಜ್ಯ ಸರ್ಕಾರದ್ದು. ಆದರೆ, 8 ವರ್ಷವಾದರೂ ಈವರೆಗೂ ಬರೀ 22 ಕಿಮೀ ರೈಲು ಮಾರ್ಗ ನಿರ್ಮಾಣವಾಗಿದ್ದಕ್ಕೆ ಹೋರಾಟಗಾರರು ಬೇಸರಿಸಿಕೊಳ್ಳುತ್ತಾರೆ. ತ್ವರಿತಗತಿಯಲ್ಲಿ ಕಾಮಗಾರಿ ಕೈಗೊಳ್ಳಬೇಕು. ಇದಕ್ಕಾಗಿ ಬೇಕಾದರೆ ತುಂಡು ಗುತ್ತಿಗೆ ನೀಡಬೇಕು ಎಂಬ ಒಕ್ಕೊರಲಿನ ಆಗ್ರಹ ಹೋರಾಟಗಾರರದ್ದು. ಈ ಬಜೆಟ್‌ನಲ್ಲಿ .187 ಕೋಟಿಯನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ. ಕಾಮಗಾರಿಗೆ ಚುರುಕು ನೀಡಬೇಕು. ಆಮೆಗತಿಯಲ್ಲಿ ಸಾಗುವಂತಾಗಬಾರದು ಎಂಬ ಒತ್ತಾಯ ಜನರದ್ದು.

ಟಿಪ್ಪು ಎಕ್ಸ್​ಪ್ರೆಸ್ ರೈಲಿಗೆ ಒಡೆಯರ್ ಹೆರಿಡುವಂತೆ ಪ್ರತಾಪ್ ಸಿಂಹ ಆಗ್ರಹ

ಕೈಬಿಟ್ಟ ನರೇಗಲ್‌:

ಇನ್ನೂ ಗದಗ- ವಾಡಿ ರೈಲು ಮಾರ್ಗ ಯೋಜನೆಯು ಗದಗ- ಕೋಟುಮಚಗಿ- ನರೇಗಲ್‌- ಗಜೇಂದ್ರಗಡ- ಇಳಕಲ್‌ ಮಾರ್ಗವಾಗಿ ವಾಡಿಗೆ ಸಂಪರ್ಕ ಕಲ್ಪಿಸಬೇಕೆಂಬ ಬೇಡಿಕೆ ಇತ್ತು. ಇದಕ್ಕಾಗಿ ಹತ್ತಾರು ಬಾರಿ ಹೋರಾಟ ಮಾಡಿದ್ದುಂಟು. ಆದರೆ, ಇದೀಗ ಈ ಮಾರ್ಗ ಕೈಬಿಟ್ಟು ಬಾಣಾಪುರ- ವಾಡಿ ರೈಲು ಮಾರ್ಗ ಮಾಡಲಾಗುತ್ತಿದ್ದು, ನರೇಗಲ್‌, ಗಜೇಂದ್ರಗಡ ಭಾಗದಲ್ಲಿ ತೀವ್ರ ಅಸಮಾಧಾನವನ್ನುಂಟು ಮಾಡಿದೆ. ಇದು ಈಗ ಗದಗ- ವಾಡಿ ಅಲ್ಲ. ಬದಲಿಗೆ ಬಾಣಾಪುರ- ವಾಡಿ ರೈಲು ಮಾರ್ಗವಾದಂತಾಗಿದೆ ಎಂಬುದು ಹೋರಾಟಗಾರರ ಆರೋಪ. ಈಗಲೂ ಕಾಲ ಮಿಂಚಿಲ್ಲ. ಗದಗ- ವಾಡಿ ಮಾರ್ಗವನ್ನು ನರೇಗಲ್‌- ಗಜೇಂದ್ರಗಡ ಮಾರ್ಗವಾಗಿ ಮಾಡಲು ಕೇಂದ್ರ ಸರ್ಕಾರ(Central Government) ಮನಸ್ಸು ಮಾಡಬೇಕೆಂದು ಒತ್ತಾಯ ಹೋರಾಟಗಾರ ಅಶೋಕ ಬೇವಿನಕಟ್ಟಿ ಅವರದ್ದು.

ಗದಗ- ವಾಡಿ ರೈಲು ಮಾರ್ಗ 252 ಕಿಮೀ ವ್ಯಾಪ್ತಿಯ ಯೋಜನೆ. ಈವರೆಗೆ 22 ಕಿಮೀ ಕಾಮಗಾರಿ ಪೂರ್ಣಗೊಂಡಿದೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವೂ .187 ಕೋಟಿ ಮೀಸಲಿಟ್ಟಿದೆ. ಇದೀಗ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದೆ. ರಾಜ್ಯ ಸರ್ಕಾರದಿಂದ ಯೋಜನೆಗೆ ಉತ್ತಮ ಸಹಕಾರ ವ್ಯಕ್ತವಾಗುತ್ತಿದೆ ಅಂತ ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ. 
 

click me!