ಪಂಚಮಸಾಲಿ ಮೀಸಲಾತಿ: ನನ್ನದು ತಂತಿ ಮೇಲಿನ ನಡಿಗೆ ಸ್ಥಿತಿಯಾಗಿದೆ, ಸಚಿವ ಸಿ.ಸಿ.ಪಾಟೀಲ

By Kannadaprabha NewsFirst Published Jul 15, 2022, 1:09 PM IST
Highlights

ಸರ್ಕಾರ ಒಂದೇ ಜಾತಿ ನೋಡಲು ಆಗುವುದಿಲ್ಲ. ಉಳಿದ ಸಮಾಜದ ಹಿತವನ್ನೂ ಕಾಪಾಡುವ ಹೊಣೆ ಸರ್ಕಾರದ ಮೇಲಿದೆ ಅಂತ ಸಚಿವ ಸಿ.ಸಿ.ಪಾಟೀಲ
 

ಬಾಗಲಕೋಟೆ(ಜು.15):  ಪಂಚಮಸಾಲಿ ಮೀಸಲಾತಿ ವಿಷಯದಲ್ಲಿ ನನ್ನ ನಡೆ ತಂತಿಯ ಮೇಲೆ ನಡೆದಂತಾಗಿದೆ. ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತು ಮುಖ್ಯಮಂತ್ರಿ ದಾರಿ ಹುಡುಕುತ್ತಿದ್ದಾರೆ ಎಂದು ಸಮುದಾಯದ ಪ್ರತಿನಿಧಿಯೂ ಆಗಿರುವ ಸಚಿವ ಸಿ.ಸಿ.ಪಾಟೀಲ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಒಂದೇ ಜಾತಿ ನೋಡಲು ಆಗುವುದಿಲ್ಲ. ಉಳಿದ ಸಮಾಜದ ಹಿತವನ್ನೂ ಕಾಪಾಡುವ ಹೊಣೆ ಸರ್ಕಾರದ ಮೇಲಿದೆ. ಮುಖ್ಯಮಂತ್ರಿ ಈ ವಿಷಯದಲ್ಲಿ ದಾರಿ ಹುಡುಕುವ ಕಾರ್ಯ ಮಾಡುತ್ತಿದ್ದಾರೆ ಎಂಬ ವಿಶ್ವಾಸ ನಮ್ಮ ಸಮುದಾಯದ ಶ್ರೀಗಳಲ್ಲಿಯೂ ಇದೆ ಎಂದು ತಿಳಿಸಿದರು.

ಮೀಸಲಾತಿಯಂತಹ ಕ್ಲಿಷ್ಟಕರ ಸಮಸ್ಯೆ ಬಗೆಹರಿಸಬೇಕಾದರೆ ಹಲವು ಸಮಸ್ಯೆಗಳಿರುತ್ತವೆ. ಈ ವಿಷಯದಲ್ಲಿ ಸ್ವಾಮೀಜಿಗಳು ಪದೇ ಪದೇ ಗಡುವು ನೀಡುವುದು ಬೇಡ. ಮುಖ್ಯಮಂತ್ರಿ ಎಲ್ಲವನ್ನೂ ಸರಿಪಡಿಸಲಿದ್ದಾರೆ ಎಂದು ಸಿ.ಸಿ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

2A ಮೀಸಲಾತಿ ಪಂಚಮಸಾಲಿ ಮಹಿಳಾ ಘಟಕದಿಂದ ಮತದಾನ ಬಹಿಷ್ಕಾರ!

ರಾಜ್ಯದಲ್ಲಿ ಬಿಜೆಪಿ ಅಧಿಕಾರ ಬಂದಾಗಲೆಲ್ಲಾ ಪ್ರವಾಹ ಬರುತ್ತಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಸದಾಕಾಲ ಬರಗಾಲ ಇರುತ್ತಿತ್ತು. ಬರ ಹೋಗಲಾಡಿಸಿ ಒಣಗಿದ್ದನ್ನು ಹಸಿ ಮಾಡಬೇಕಾದರೆ ಪ್ರವಾಹ ಬರಬೇಕಾಗುತ್ತದೆ. ಅಂದು ಅಂತರ್ಜಲಮಟ್ಟಸಹ ಕುಸಿದು ಹೋಗಿತ್ತು ಎಂದು ನೆನಪಿಸಿದರು.

2013ರಿಂದ 18ರೊಳಗೆ ನಡೆದ ಪಿಎಸ್‌ಐ ನೇಮಕಾತಿ ಸಂದರ್ಭದಲ್ಲಿ ನಿವೃತ್ತ ಪೊಲೀಸ್‌ ಅಧಿಕಾರಿ ಕೆಂಪಯ್ಯ ಅವರ ಹೆಸರು ಕೇಳಿ ಬರುತ್ತಿರುವ ಕುರಿತು ನನಗೆ ಮಾಹಿತಿ ಇಲ್ಲ. ಮಾಹಿತಿ ಪಡೆದ ನಂತರ ಉತ್ತರಿಸುವೆ ಎಂದರು.

ಜನರು ಬದುಕು ನಡೆಸಲು ಸಂಕಷ್ಟದಲ್ಲಿರುವಾಗ ಉತ್ಸವದ ಅಗತ್ಯತೆ ಇತ್ತೇ ಎಂದು ಪ್ರಶ್ನಿಸಿದ ಸಚಿವರು, ಈಗ ಸಿದ್ದರಾಮೋತ್ಸವ ನಂತರ ಶಿವಕುಮಾರೋತ್ಸವ ಆ ಮೇಲೆ ಪರಮೇಶ್ವರ ಉತ್ಸವಗಳು ನಡೆಯುತ್ತವೆ. ಜನ ಬಂದು ಊಟ ಮಾಡಿ ಹೋಗುತ್ತಾರೆ ಎಂದು ವ್ಯಂಗ್ಯವಾಡಿದರು. ಅಲ್ಲದೆ, ನಮ್ಮಲ್ಲಿ ಏನಿದ್ದರೂ ಬಿಜೆಪಿ ಉತ್ಸವ. ಕಮಲದ ಉತ್ಸವ ಇರುತ್ತದೆ. ನಮಗೆ ಪಕ್ಷ ಮುಖ್ಯ. ಪಕ್ಷಕ್ಕಿಂತ ದೇಶ ಮುಖ್ಯವಾಗಿದೆ ಎಂದರು.

ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರ ನಡುವಿನ ಪ್ರತಿಷ್ಠೆಯಿಂದ ಇಂತಹ ಉತ್ಸವಗಳು ನಡೆಯುತ್ತಿವೆಯೇ ವಿನಃ ಮತ್ತಾವ ಪುರುಷಾರ್ಥಕ್ಕೂ ಇದನ್ನೂ ಮಾಡುತ್ತಿಲ್ಲ. ಹಿರಿಯರಾದ ಸಿದ್ದರಾಮಯ್ಯನವರೇ ಹೀಗೆ ಮಾಡಿದರೆ ಏನು ಹೇಳಬೇಕು ಎಂದು ಹೇಳಿದರು.
 

click me!