ಮತ್ತೆ 3 ದಿನ ರಾಜ್ಯದಲ್ಲಿ ಮಳೆ : ಯಾರ ಜಿಲ್ಲೆಗೆ ಸೂಚನೆ

By Kannadaprabha NewsFirst Published Oct 30, 2020, 8:26 AM IST
Highlights

ರಾಜ್ಯದಲ್ಲಿ ಮತ್ತೆ ಮಳೆ ಎಚ್ಚರಿಕೆ ನೀಡಲಾಗಿದೆ. ಹವಾಮಾನ ಇಲಾಖೆಯಿಂದ ಸೂಚನೆ ಹೊರಬಿದ್ದಿದೆ. 

ಬೆಂಗಳೂರು (ಅ.30) : ತಮಿಳುನಾಡಿನ ಉತ್ತರ ಭಾಗ ಮತ್ತು ಆಂಧ್ರಪ್ರದೇಶದ ದಕ್ಷಿಣದಲ್ಲಿ ಮೇಲ್ಮೈ ಸುಳಿಗಾಳಿ ತೀವ್ರತೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನ.2 ರವರೆಗೆ ಹಲವಡೆ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ಟೋಬರ್‌ 30 ಹಾಗೂ 31ರಂದು ಅಲ್ಲಲ್ಲಿ ಸಾಮಾನ್ಯ ಮಳೆಯಾಗುವ ನಿರೀಕ್ಷೆ ಇದೆ.

 ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಕ್ಟೋಬರ್‌ 30ರಂದು ಅಲ್ಲಲ್ಲಿ ಸಾಮಾನ್ಯ ಮಳೆಯಾಗಲಿದೆ. ಅ 31ರಿಂದ ನ. 2ರವರೆಗೆ ಬೆಂಗಳೂರು ನಗರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ಸೇರಿದಂತೆ ಬಹುತೇಕ ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಇನ್ನೆರಡು ದಿನ ಭಾರೀ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ ..

ಪುನಃ ಕರಾವಳಿ ಜಿಲ್ಲೆಗಳಲ್ಲಿ ನ.1ರಂದು ಹಲವು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಉತ್ತರ ಒಳನಾಡಿನಲ್ಲಿ ಅಕ್ಟೋಬರ್‌ 30 ಮತ್ತು 31ರವರೆಗೂ ಒಣಹವೆ ಮುಂದುವರಿಯಲಿದೆ. ನಂತರ ನ. 1 ಮತ್ತು 2ರಂದು ಬೆಳಗಾವಿ ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಂಭವವಿದೆ.

ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಮಳೆ ಬಿದ್ದ ಬಗ್ಗೆ ವರದಿಯಾಗಿಲ್ಲ. ರಾಜ್ಯದ ಗರಿಷ್ಠ ತಾಪಮಾನ ಕಾರವಾರದಲ್ಲಿ 33.6 ಹಾಗೂ ಕನಿಷ್ಠ ಬೀದರ್‌ನಲ್ಲಿ 13.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

click me!