ರಾಜ್ಯದಲ್ಲಿ 5 ದಿನ ಮಳೆ ಸಂಭವ : 14, 15ರಂದು ‘ಯಲ್ಲೋ ಅಲರ್ಟ್‌’ ಎಲ್ಲೆಲ್ಲಿ?

By Kannadaprabha NewsFirst Published Apr 11, 2021, 7:27 AM IST
Highlights

ರಾಜ್ಯದ ಹಲವು ಜಿಲ್ಲೆಗಳಲ್ಲಿ  ಮುಂದಿನ ಐದು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅಲ್ಲದೆ ಎರಡು ದಿನಗಳ ಕಾಲ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. 

 ಬೆಂಗಳೂರು (ಏ.11):  ರಾಜ್ಯದ ಬಹುತೇಕ ಕಡೆ ಮುಂದಿನ ಐದು ದಿನ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆ ಸುರಿಯುವ ಸಾಧ್ಯತೆ ಇದೆ.

 ಏ.14 ಮತ್ತು 15ರಂದು ಕರಾವಳಿ ಮತ್ತು ದಕ್ಷಿಣ ಒಳನಾಡಿನ ಐದು ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆ ಹಿನ್ನೆಲೆಯಲ್ಲಿ ‘ಯಲ್ಲೊ ಅಲರ್ಟ್‌’ ಎಚ್ಚರಿಕೆ ಕೊಡಲಾಗಿದೆ. 

ಕರಾವಳಿಯ ಮೂರು ಜಿಲ್ಲೆಗಳು ಮತ್ತು ಉತ್ತರ ಒಳನಾಡಿನ ಗದಗ, ಕೊಪ್ಪಳ, ರಾಯಚೂರು ಹೊರತುಪಡಿಸಿ ಉಳಿದೆಲ್ಲ ಕಡೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಶಿವಮೊಗ್ಗ, ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು, ಚಾಮರಾಜನಗರದಲ್ಲಿ ಏ.11 ಮತ್ತು ಏ.12ರಂದು ತುಂತುರು ಮಳೆ ಬೀಳಲಿದೆ. ಮರುದಿನ ಮಳೆ ತುಸು ತೀವ್ರಗೊಳ್ಳುವ ಸಂಭವವಿದೆ. ಏ.13ರಂದು ಕೋಲಾರ, ಚಿತ್ರದುರ್ಗ, ಬಳ್ಳಾರಿ ಹೊರತುಪಡಿಸಿ ದಕ್ಷಿಣ ಒಳನಾಡಿನ ಎಲ್ಲ ಪ್ರದೇಶಗಳಲ್ಲಿ ಹಾಗೂ ಕರಾವಳಿಯಲ್ಲಿ ಗುಡುಗು, ಜೋರಾದ ಗಾಳಿ ಸಹಿತ ಧಾರಾಕಾರ ಮಳೆ ಸುರಿಯಲಿದೆ. ನಂತರ ಎರಡು ದಿನ ವರುಣನ ಅಬ್ಬರ ಮತ್ತಷ್ಟುಹೆಚ್ಚಾಗಿ ರಾಜ್ಯಾದ್ಯಂತ ಎಲ್ಲ ಕಡೆಗಳಲ್ಲೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎಂಟಾಣೆ ಮಳೆ, ಮಹಾನ್ ವ್ಯಕ್ತಿಯ ತಲೆದಂಡ; ಚಿಕ್ಕಯ್ಯಪ್ಪ ಕಾಲಜ್ಞಾನ ಸುಳ್ಳಾಗಿದ್ದೇ ಇಲ್ಲ!

ಏ.14ರಂದು ಮತ್ತು 15ರಂದು ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗದಲ್ಲಿ ಗುಡುಗು ಸಹಿತ ಭಾರಿ ಮಳೆ ಬರಲಿರುವುದರಿಂದ ಈ ಐದು ಜಿಲ್ಲೆಗಳಿಗೆ ಹವಾಮಾನ ಇಲಾಖೆ ‘ಯಲ್ಲೊ ಅಲರ್ಟ್‌’ ಘೋಷಿಸಿದೆ.

ಎಲ್ಲೆಲ್ಲೆ ಎಷ್ಟುಮಳೆ?:  ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಯಲ್ಲಿ ಉತ್ತರ ಒಳನಾಡಿನ ಧಾರವಾಡ, ಬಾಗಲಕೋಟೆ, ಬಾದಾಮಿ, ಹುಬ್ಬಳ್ಳಿ, ಹಾವೇರಿ ವ್ಯಾಪ್ತಿಯಲ್ಲಿ ಕೆಲ ಕಾಲ ಜೋರು ಮಳೆ ಸುರಿದಿದೆ. ಉತ್ತರ ಕನ್ನಡದ ಕಿರವತ್ತಿ, ಬಾಗಲಕೋಟೆಯ ಜಮಖಂಡಿಯಲ್ಲಿ ತಲಾ 2 ಸೆಂ.ಮಿ., ಧಾರವಾಡ, ಬಾದಾಮಿಯಲ್ಲಿ ತಲಾ ಒಂದು 1 ಸೆಂ.ಮೀ ಹಾಗೂ ಉಳಿದ ಕೆಲವೆಡೆ ತುಂತುರು ಮಳೆ ಸುರಿದಿದೆ.

ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 39.2 ಹಾಗೂ ಚಿಂತಾಮಣಿಯಲ್ಲಿ ಕನಿಷ್ಠ ತಾಪಮಾನ 17.3 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

click me!