ಸಾಗರ (ಆ.26): ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸುವಂತಹ ವಾತಾವರಣ ಸೃಷ್ಟಿ ಮಾಡಲು ಸಂಘಟಿತರಾಗಿ ಪ್ರಯತ್ನ ನಡೆಸಬೇಕಾಗಿದೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರು.
ಪಟ್ಟಣದ ರಾಘವೇಶ್ವರ ಸಭಾಭವನದಲ್ಲಿ ಮಂಗಳವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.
ಹುಬ್ಬಳ್ಳಿ: ಅಧಿಕೃತವಾಗಿ ಕಾಂಗ್ರೆಸ್ ಸೇರಿದ ಮಧು ಬಂಗಾರಪ್ಪ
ಹಿರಿಯರಾದ ಕಾಗೋಡು ತಿಮ್ಮಪ್ಪನವರು ನಮ್ಮ ತಂದೆ ಸ್ಥಾನದಲ್ಲಿದ್ದಾರೆ. ನಮ್ಮ ತಂದೆ ಮಾತನ್ನು ಹೇಗೆ ಪಾಲಿಸುತ್ತಿದ್ದೇನೊ ಅದೇ ರೀತಿ ಕಾಗೋಡು ತಿಮ್ಮಪ್ಪ ಅವರ ಮಾತನ್ನು ಪಾಲಿಸುತ್ತೇನೆ. ಎಲ್ಲ ಬೇಧ ಭಾವಗಳನ್ನು ಮರೆತು ಕಾಂಗ್ರೆಸ್ ಜಿಲ್ಲೆ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ತರುವ ಯತ್ನ ಮಾಡುತ್ತೇನೆ ಎಂದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ ಜನರ ಪರವಾಗಿ ಕೆಲಸ ಮಾಡಿದ ನನ್ನನ್ನು ಕ್ಷೇತ್ರದ ಜನ ಸೋಲಿಸಿದರು. ನಾನೇನು ಮೋಸ ಮಾಡಿದ್ದೆನಾ ಭ್ರಷ್ಟಾಚಾರ ಮಾಡಿದ್ದೆನಾ ಆಸ್ತಿ ಮಾಡಿದ್ದೆನಾ ಇದರ ಬಗ್ಗೆ ನಾನು ಮಾತಾಡುವುದಿಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬೆಳೆಯಬೇಕು. ಎಲ್ಲರೂ ಸೈನಿಕರ ರೀತಿ ಕೆಲಸ ಮಾಡಿದರೆ ಕಾಂಗ್ರೆಸ್ ಮತ್ತೆ ಸದೃಢವಾಗುತ್ತದೆ ಎಂದರು.