ಮೈಸೂರು : ಕೊಡುಗೆ ಬಗ್ಗೆ ತಿಳಿದು ಕೆಲಸ ಮಾಡಿ ಎಂದ ಶಾಸಕ ಸಾ.ರಾ. ಮಹೇಶ್‌

By Kannadaprabha NewsFirst Published Nov 2, 2020, 11:24 AM IST
Highlights

ಸಮಾಜಕ್ಕೆ ಕೊಟ್ಟ ಕೊಡುಗೆಗಳ ಬಗ್ಗೆ ತಿಳಿದುಕೊಂಡು ಕೆಲಸ ಮಾಡಿ ಎಂದು ಶಾಸಕ ಸಾ ರಾ ಮಹೇಶ್ ಹೇಳಿದ್ದಾರೆ. 

ಕೆ.ಆರ್‌. ನಗರ (ನ.02):  ತನ್ನ ಸುತ್ತಲಿನ ಸಮಾಜಕ್ಕೆ ನಾವು ಏನು ಕೊಡುಗೆ ನೀಡಿದ್ದೇವೆ ಎಂಬುದನ್ನು ಅರಿತು ಮನುಷ್ಯ ಕೆಲಸ ಮಾಡಿದರೆ ದೇಶದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ಪಟ್ಟಣದ ಎಚ್‌.ಡಿ. ದೇವೇಗೌಡ ಸಮುದಾಯ ಭವನದಲ್ಲಿ  ತಾಲೂಕು ಪ.ಜಾತಿ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ನಿರ್ದಿಷ್ಟಸಮುದಾಯದಲ್ಲಿ ಹುಟ್ಟಿದ ವ್ಯಕ್ತಿ ತಾನು ಸಾಧನೆ ಮಾಡುವುದರ ಜತೆಗೆ ತನ್ನವರನ್ನು ಆ ಮಾರ್ಗದಲ್ಲಿ ಕೊಂಡೊಯ್ದಾಗ ಮಾತ್ರ ಆತ ಅವರ ಸಹಾಯಕ್ಕೆ ಬರಲು ಸಾಧ್ಯ. ಪ್ರತಿಯೊಂದು ಅಭಿವೃದ್ಧಿ ಕೆಲಸಗಳನ್ನು ಸರ್ಕಾರ ಮತ್ತು ಚುನಾಯಿತ ಜನಪ್ರತಿನಿಧಿಗಳು ಮಾಡಲು ಸಾಧ್ಯವಿಲ್ಲ. ಹಾಗಾಗಿ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ನಮ್ಮೊಂದಿಗೆ ಕೈಜೋಡಿಸಿದರೆ ಸರ್ವಾಂಗೀಣ ಅಭಿವೃದ್ಧಿ ಮಾಡಲು ಸಾಧ್ಯವಾಗಲಿದ್ದು, ಇಂತಹ ಉತ್ತಮ ಯೋಚನೆಗಳು ಎಲ್ಲರಲ್ಲಿಯೂ ಬರಬೇಕು ಎಂದು ಅವರು ತಿಳಿಸಿದರು.

ಶಿರಾದಲ್ಲಿ ಕುಮಾರಸ್ವಾಮಿ ಅಬ್ಬರ, ಈ ಕಾರಣಕ್ಕೆ ಮತ ಕೊಡಿ ಎಂದ ಮಾಜಿ ಸಿಎಂ

ನಾನು ಶಾಸಕನಾದ ನಂತರ ಎಂಟು ವರ್ಷಗಳ ಅವಧಿಯಲ್ಲಿ ತಾಲೂಕಿನ 650 ವಿಕಲಚೇತನ ಮಕ್ಕಳಿಗೆ ಸಾ.ರಾ. ಸ್ನೇಹ ಬಳಗದ ವತಿಯಿಂದ ಪ್ರತಿ ವರ್ಷ ತಲಾ ಎರಡು ಸಾವಿರದಂತೆ . 16.80 ಲಕ್ಷ ವಿಮೆ ಹಣ ಪಾವತಿ ಮಾಡಿದ್ದು, ಇದರೊಂದಿಗೆ ಸರ್ಕಾರಿ ಪ್ರಾಥಮಿಕ ಶಾಲೆಗಳ ಕೊಠಡಿ ನಿರ್ಮಾಣಕ್ಕೆ  22 ಕೋಟಿ ಅನುದಾನ ಮಂಜೂರು ಮಾಡಿಸಿದ್ದೇನೆ ಎಂದು ಮಾಹಿತಿ ನೀಡಿದರು.

ಪಟ್ಟಣ ವ್ಯಾಪ್ತಿಯ ಉತ್ತಮವಾದ ಸ್ಥಳದಲ್ಲಿ ನಿವೇಶನ ಗುರುತು ಮಾಡಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ನೂತನ ಸಮುದಾಯ ಭವನ ನಿರ್ಮಿಸಲು ಕ್ರಮ ಕೈಗೊಳ್ಳಲಿದ್ದು, ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಶಾಸಕರು ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಮತ್ತು ಉನ್ನತ ಶಿಕ್ಷಣ ಕೊಡಿಸುವತ್ತ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.

ಜಿಪಂ ಸದಸ್ಯ ಅಚ್ಚುತಾನಂದ ಮಾತನಾಡಿ, ಪ.ಜಾತಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇಂತಹ ಉತ್ತಮ ಕೆಲಸ ಮಾಡುತ್ತಿರುವುದು ಸಂತಸದ ವಿಚಾರ. ಮುಂದಿನ ದಿನಗಳಲ್ಲಿ ನಾನು ಸಹಾಯ ಮತ್ತು ಸಹಕಾರ ನೀಡುವುದಾಗಿ ಘೋಷಿಸಿದರು. ಮೈಸೂರು ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಕಂಡ ಕನಸಾಗಿದ್ದು ಆ ಕನಸನ್ನು ನನಸು ಮಾಡುವ ಪ್ರತಿಯೊಬ್ಬರೂ ಶ್ರೇಷ್ಟರಾಗುತ್ತಾರೆ ಎಂದರು.

ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ತಾಲೂಕಿಗೆ ಅತಿ ಹೆಚ್ಚು ಅಂಕಗಳಿಸಿದ ವಿವಿಧ ಸಮುದಾಯದ ವಿದ್ಯಾರ್ಥಿಗಳು ಮತ್ತು ಪ.ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.

ಪುರಸಭಾ ಸದಸ್ಯ ಶಂಕರ್‌, ವೈದ್ಯ ಡಾ.ಡಿ. ಜಗನ್ನಾಥ್‌, ವಾಣಿಜ್ಯ ಇಲಾಖೆ ಅಧಿಕಾರಿ ಸುಶಾಂತ್‌ಕುಮಾರ್‌, ಸಿಪಿಐ ಪಿ.ಕೆ. ರಾಜು, ಎಸ್‌ಐಗಳಾದ ವಿ. ಚೇತನ್‌, ಶಿವಪ್ರಕಾಶ್‌, ಸಂಘದ ಅಧ್ಯಕ್ಷ ಸಿದ್ದರಾಜು, ಉಪಾಧ್ಯಕ್ಷ ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಬಿ.ಟಿ. ಗೋವಿಂದರಾಜು, ಖಜಾಂಚಿ ಲೋಹಿತಾಶ್ವ, ಸಹ ಕಾರ್ಯದರ್ಶಿಗಳಾದ ಜೆ. ಮಹದೇವ, ಮಂಜುನಾಥ್‌, ಸಂಘಟನಾ ಕಾರ್ಯದರ್ಶಿ ನೀಲಮ್ಮ, ಪದಾಧಿಕಾರಿಗಳಾದ ರಾಜೇಶ್‌, ಎಂ.ಎ. ಜಯಕುಮಾರ್‌, ಎಚ್‌.ಎಂ. ಮಹೇಶ್‌, ಎನ್‌. ಗೋಪಾಲ್‌, ರಾಮಕೃಷ್ಣ, ಶಿವಣ್ಣ, ನರಸಿಂಹ, ನರೇಂದ್ರಕುಮಾರ್‌, ಸೋಮಣ್ಣ, ರಾಜು ಇದ್ದರು.

click me!