ಕಟ್ಟುಪದ್ಧತಿಯಡಿ ನಾಲೆಗಳಿಗೆ ನೀರು ಹರಿಸುವ ಅವಧಿ ಕೊನೆಗೊಂಡಿದೆ. ಆದರೂ ವಿಶ್ವೇಶ್ವರಯ್ಯ ನಾಲೆ ಸೇರಿದಂತೆ ಇತರೆ ನಾಲೆಗಳಲ್ಲಿ ನೀರು ಹರಿಯುತ್ತಿದೆ. ಈ ನೀರನ್ನು ಯಾವ ಬೆಳೆಗೆ ಹರಿಸಲಾಗುತ್ತಿದೆ ಎಂಬ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ನಾಲೆಗಳ ಮುಖಾಂತರ ತಮಿಳುನಾಡಿಗೆ ನೀರು ಹರಿಸುವುದು ಸರ್ಕಾರದ ಒಳಸಂಚಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಆರೋಪಿಸಿದ ರೈತ ನಾಯಕಿ ಸುನಂದಾ ಜಯರಾಂ
ಮಂಡ್ಯ(ಡಿ.13): ನಾಲೆಗಳ ಮೂಲಕ ತಮಿಳುನಾಡಿಗೆ ನೀರು ಹರಿಸುವ ಮೂಲಕ ರಾಜ್ಯಸರ್ಕಾರ ವಂಚಕ ನಡೆಯನ್ನು ಅನುಸರಿಸುತ್ತಿದೆ. ಜೊತೆಗೆ ರೈತರ ಕಣ್ಣಿಗೆ ಮಣ್ಣೆರಚುತ್ತಿರುವುದಾಗಿ ರೈತ ನಾಯಕಿ ಸುನಂದಾ ಜಯರಾಂ ಆಕ್ರೋಶ ವ್ಯಕ್ತಪಡಿಸಿದರು. ಕಟ್ಟುಪದ್ಧತಿಯಡಿ ನಾಲೆಗಳಿಗೆ ನೀರು ಹರಿಸುವ ಅವಧಿ ಕೊನೆಗೊಂಡಿದೆ. ಆದರೂ ವಿಶ್ವೇಶ್ವರಯ್ಯ ನಾಲೆ ಸೇರಿದಂತೆ ಇತರೆ ನಾಲೆಗಳಲ್ಲಿ ನೀರು ಹರಿಯುತ್ತಿದೆ. ಈ ನೀರನ್ನು ಯಾವ ಬೆಳೆಗೆ ಹರಿಸಲಾಗುತ್ತಿದೆ ಎಂಬ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ನಾಲೆಗಳ ಮುಖಾಂತರ ತಮಿಳುನಾಡಿಗೆ ನೀರು ಹರಿಸುವುದು ಸರ್ಕಾರದ ಒಳಸಂಚಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಆರೋಪಿಸಿದರು.
ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ ಒಟ್ಟು ನಾಲ್ಕು ಕಟ್ಟು ನೀರು ಹರಿಸಲಾಗುವುದು ಎಂದು ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ನಾಲ್ಕು ಕಟ್ಟಿನಲ್ಲಿ ಕೊನೇ ಕಟ್ಟು ನೀರನ್ನು ನ.೮ ರಿಂದ ನ. ೨೩ರ ವರೆಗೆ ನೀರು ಹರಿಸಿ ನ.೨೪ ರಿಂದ ಕಾಲುವೆಗಳಲ್ಲಿ ನೀರು ನಿಲ್ಲಿಸಬೇಕಾಗಿತ್ತು. ಆದರೆ, ನ.೨೪ರಿಂದ ಕಾಲುವೆಗಳಲ್ಲಿ ನೀರು ಹರಿಯುತ್ತಲೇ ಇದೆ. ಆ ಮೂಲಕ ೧೮ ದಿನಗಳ ಕಾಲ ನಿರಂತರವಾಗಿ ನೀರನ್ನು ಹರಿಸಲಾಗುತ್ತಿದೆ. ಸಮಿತಿಯು ಈ ವಿಷಯವನ್ನು ಸಂಗ್ರಹಿಸಿ ಖಚಿತಪಡಿಸಿಕೊಂಡಿದೆ. ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಇರುವ ನೀರಿನ ಸಂಗ್ರಹದಲ್ಲಿ ಇನ್ನೂ ಎರಡು ಕಟ್ಟು ನೀರನ್ನು ಬಿಡಲು ಸಾಧ್ಯವಿತ್ತು. ಕಾಂಗ್ರೆಸ್ ಸರ್ಕಾರ ವಾಮಮಾರ್ಗದಲ್ಲಿ ತಮಿಳುನಾಡಿಗೆ ನೀರು ಹರಿಸಿ ಇಲ್ಲಿನ ರೈತರ ಹಿತ ಬಲಿಕೊಟ್ಟಿದೆ. ಮುಂದಿನ ವರ್ಷಗಳಲ್ಲಿ ತಮಿಳುನಾಡು ಇದನ್ನೇ ದಾಖಲೆ ಮಾಡಿಕೊಂಡು ಭವಿಷ್ಯದಲ್ಲಿ ನಿರಂತರವಾಗಿ ನಮ್ಮಿಂದ ನೀರನ್ನು ದೋಚಲು ಅವಕಾಶ ಮಾಡಿಕೊಟ್ಟಂತಾಗಿದೆ. ಸರ್ಕಾರದ ಈ ನಡೆ ಕರ್ನಾಟಕ ರಾಜ್ಯಕ್ಕೆ ಮಾಡಿದ ದ್ರೋಹವಾಗಿದೆ ಎಂದು ಖಂಡಿಸಿದರು.
undefined
ಸರ್ಕಾರ ಪತನ ಆಗಲಿದೆಯೆಂದು ಎಚ್‌ಡಿಕೆ ಕನಸು ಕಾಣುತ್ತಲೇ ಇರಲಿ: ಸಚಿವ ಚಲುವರಾಯಸ್ವಾಮಿ
ಜಿಲ್ಲಾ ರೈತ ಹಿತ ರಕ್ಷಣ ಸಮಿತಿಯು ಕಾವೇರಿ ನದಿ ರಕ್ಷಣೆಯ ವಿಷಯದಲ್ಲಿ ಅನೇಕ ಬಾರಿ ಒತ್ತಾಯ ಮಾಡುತ್ತಿದ್ದರೂ ಸಹ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕಾವೇರಿ ನದಿ ನೀರಿನ ವಿಷಯದಲ್ಲಿ ಚರ್ಚಿಸಲು ಎರಡೂ ಸದನಗಳ ಜಂಟಿ ವಿಶೇಷ ಅಧಿವೇಶನ ಕರೆಯಲು ಮುಖ್ಯಮಂತ್ರಿಗಳಿಗೆ ಹಾಗೂ ಎರಡೂ ಸದನಗಳ ಅಧ್ಯಕ್ಷರಿಗೆ, ಬಿಜೆಪಿ-ಜಾ.ದಳ ಪಕ್ಷಗಳ ಶಾಸನಸಭಾ ಮುಖ್ಯಸ್ಥರಿಗೆ ಪತ್ರ ಬರೆದು ಒತ್ತಾಯಿಸಲಾಗಿತ್ತು. ಆದರೂ ಈ ವಿಷಯದಲ್ಲಿ ಯಾವುದೇ ನಿಲುವು ಪ್ರಕಟಿಸದೆ ನಿರ್ಲಕ್ಷ್ಯ ಮಾಡಲಾಗಿದೆ. ಕಾವೇರಿ ಕೊಳ್ಳದ ನೀರಾವರಿ ಅಭಿವೃದ್ಧಿ, ಅಂತರ್ಜಲ ಅಭಿವೃದ್ಧಿ, ವಿದ್ಯುತ್ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿ ಕ್ರಮ ತೆಗೆದುಕೊಳ್ಳಲು ಒತ್ತಾಯಿಸಲಾಗಿತ್ತು. ಇವುಗಳ ಬಗ್ಗೆಯೂ ಸರ್ಕಾರ ಮೌನವಹಿಸಿರುವುದು ಸರಿಯಲ್ಲ. ಒಟ್ಟಾರೆ ಸರ್ಕಾರ ಹಾಗೂ ವಿರೋಧ ಪಕ್ಷಗಳು ಕಾವೇರಿ ನದಿ ನೀರಿನ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳದೆ ಅಸಡ್ಡೆ ತೋರುತ್ತಿವೆ. ಆದ್ದರಿಂದ ಕಾವೇರಿ ಕೊಳ್ಳದ ರೈತರು, ಸಾರ್ವಜನಿಕರು, ನಾಗರಿಕರು ಒಟ್ಟಾಗಿ ಕಾವೇರಿ ನದಿ ನೀರನ್ನು ಉಳಿಸಿ ರಕ್ಷಿಸಿಕೊಳ್ಳಲು ಹೋರಾಟ ಮಾಡಬೇಕಾಗಿದೆ. ಇಲ್ಲದಿದ್ದರೆ ಸರ್ಕಾರ ರೈತರ ಮರಣ ಶಾಸನ ಬರೆಯಲಿದೆ ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ರೈತ ಮುಖಂಡರಾದ ಕೆ.ಬೋರಯ್ಯ, ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಜೈ ಕರ್ನಾಟಕ ಪರಿಷತ್‌ನ ರಾಜ್ಯಾಧ್ಯಕ್ಷ ಎಸ್.ನಾರಾಯಣ್, ಕೆ.ಶಂಕರ್, ದಸಂಸದ ಎಂ.ವಿ.ಕೃಷ್ಣ, ಮಹಾಂತಪ್ಪ ಉಪಸ್ಥಿತರಿದ್ದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ರೈತನಾಯಕಿ ಸುನಂದಾ ಜಯರಾಂ ಮಾತನಾಡಿದರು.ರೈತ ಮುಖಂಡರಾದ ಕೆ.ಬೋರಯ್ಯ, ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಜೈ ಕರ್ನಾಟಕ ಪರಿಷತ್‌ನ ರಾಜ್ಯಾಧ್ಯಕ್ಷ ಎಸ್.ನಾರಾಯಣ್, ಕೆ.ಶಂಕರ್, ದಸಂಸದ ಎಂ.ವಿ.ಕೃಷ್ಣ, ಮಹಾಂತಪ್ಪ ಉಪಸ್ಥಿತರಿದ್ದರು.