ನಿತ್ಯ ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ರೋಗಿಗಳು, ನಿರ್ಗತಿಕರು, ಹಸಿವಿನಿಂದ ಬಂದವರಿಗೆ ಊಟ ನೀಡುವ ಯುವಕ ನವೀನ್, ಯಾರಲ್ಲೂ ಹಣ ಕೇಳದೇ ನಾಲ್ವರು ಸ್ನೇಹಿತರೊಂದಿಗೆ ಸೇರಿ ಟ್ರಸ್ಟ್ ಮೂಲಕ ಮದ್ಯಾಹ್ನ ಒಂದು ಹೊತ್ತು ನಡೆಯೋ ಅನ್ನದಾಸೋಹ. ತುಮಕೂರು ಸಿದ್ದಗಂಗಾ ಶ್ರೀಗಳು, ಬಸವಣ್ಣ & ವಿಜಯಪುರದ ಸಿದ್ದೇಶ್ವರ ಶ್ರೀಗಳ ಭಾವಚಿತ್ರದ ಮೂಲಕ ಟ್ರಸ್ಟ್ ರೂಪಿಸಿ ದಾಸೋಹ ಕಾರ್ಯ, ನವೀನ್ ಅನ್ನದಾಸೋಹಕ್ಕೆ ಬೆನ್ನಿಗೆ ನಿಂತ ದಾನಿಗಳು.
ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣ ನ್ಯೂಸ್, ಬಾಗಲಕೋಟೆ
ಬಾಗಲಕೋಟೆ(ಡಿ.12): ದಾಸೋಹ ಅಂದ್ರೆ ಸಾಕು ನಮಗೆಲ್ಲಾ ಥಟ್ಟನೆ ನೆನಪಾಗೋದು ತುಮಕೂರಿನ ಸಿದ್ದಗಂಗಾ ಶ್ರೀಗಳು, ಆದ್ರೆ ಇಲ್ಲೊಬ್ಬ ಯುವಕ ಸಿದ್ದಗಂಗಾ ಶ್ರೀಗಳ ಪ್ರೇರಣೆಯಿಂದಲೇ ಟ್ರಸ್ಟ್ ವೊಂದನ್ನ ರೂಪಿಸಿ, ತನ್ನ ಕೈಲಾದಷ್ಟು ಅನ್ನದಾಸೋಹ ಸೇವೆ ಮಾಡೋಕೆ ಮುಂದಾಗಿದ್ದಾನೆ. ಈತನ ಕಾರ್ಯಕ್ಕೆ ಜನ್ರು ಕೂಡ ಸಾಥ್ ನೀಡಿದ್ದು, ಸಿದ್ದಗಂಗಾ ಶ್ರೀಗಳ ಪ್ರೇರಣೆಯಿಂದ ನಡೆಯುತ್ತಿರೋ ಯುವಕನ ಅನ್ನದಾಸೋಹ ಕಾಯಕ್ಕೆ ಈಗ ಬರೋಬ್ಬರಿ 111ನೇ ದಿನ. ಹಾಗಾದ್ರೆ ಆತ ಯಾರು? ಅನ್ನದಾಸೋಹ ನಡೆಸ್ತಿರೋದು ಎಲ್ಲಿ? ಅಂತೀರಾ. ಈ ಕುರಿತ ವರದಿ ಇಲ್ಲಿದೆ...
undefined
ಹೀಗೆ ಯುವಕನೊಬ್ಬನ ಸಾರಥ್ಯದಲ್ಲಿ ನಿತ್ಯ ನಡೆಯುತ್ತಿರೋ ಅನ್ನದಾಸೋಹ, ಅನ್ನ ದಾಸೋಹದಲ್ಲಿ ಪಾಲ್ಗೊಂಡು ಆಹಾರ ಸೇವಿಸುತ್ತಿರೋ ಜನರು, ಒಂದಲ್ಲ ಎರಡಲ್ಲ ಬರೋಬ್ಬರಿ 111ನೇ ದಿನಕ್ಕೆ ಕಾಲಿಟ್ಟ ಅನ್ನದಾಸೋಹ. ಅಂದಹಾಗೆ ಇಂತಹವೊಂದು ದೃಶ್ಯ ಕಂಡು ಬಂದಿದ್ದು ಮುಳುಗಡೆ ನಗರಿ ಬಾಗಲಕೋಟೆಯಲ್ಲಿ. ಹೌದು, ಪಟ್ಟಣದ ವಿದ್ಯಾಗಿರಿ ಬಡಾವಣೆಯ ಯುವಕ ನವೀನ್ ಸಿದ್ದಗಂಗಾ ಶ್ರೀಗಳ ಪ್ರೇರಣೆಯಿಂದಾಗಿ ಅವರ ಹೆಸರಿನಲ್ಲಿಯೇ ಅಂದ್ರೆ ಶ್ರೀ ಸಿದ್ದಗಂಗಾ ಅನ್ನಸಂತರ್ಪಣೆ ಟ್ರಸ್ಟ್ ಆರಂಭಿಸುವ ಮೂಲಕ ನಿತ್ಯ ಮದ್ಯಾಹ್ನ ಒಂದು ಹೊತ್ತಿನ ಊಟವನ್ನ ನೀಡಲು ಮುಂದಾಗಿದ್ದಾನೆ. ಈ ಮೂಲಕ ಹಸಿದವ್ರಿಗಾಗಿ ಬಾಗಲಕೋಟೆಯಲ್ಲೊಂದು ಟ್ರಸ್ಟ್ ಪ್ರತಿದಿನ ಫ್ರೀಯಾಗಿ ಊಟ ನೀಡುತ್ತಾ ತಮ್ಮ ಸಮಾಜಮುಖಿ ಕಾಯಕವನ್ನು ಮಾಡುತ್ತಾ ಸಾಗಿದೆ.
ಸರ್ಕಾರದಿಂದ ಅನುದಾನ ತಂದು ಕೊಟ್ಟ ಮಾತಿನಂತೆ ನಡೆದಿದ್ದೇನೆ: ಶಾಸಕ ಎಚ್.ವೈ.ಮೇಟಿ
ಕಳೆದ ಶ್ರಾವಣ ಮಾಸದಲ್ಲಿ ಪ್ರಾರಂಭವಾದ ಶ್ರೀ ಸಿದ್ದಗಂಗಾ ಅನ್ನ ಸಂತರ್ಪಣೆ ಟ್ರಸ್ಟ್ ನವನಗರದಲ್ಲಿ ಪ್ರತಿದಿನ ಐನೂರಕ್ಕೂ ಹೆಚ್ಚು ಬಡ ಜನರಿಗೆ ಅನ್ನ ಸಂತರ್ಪನೆ ಮಾಡುತ್ತ ಬರ್ತಿದೆ. ಬಡ ಜನರು ಹೆಚ್ಚಾಗಿ ಓಡಾಡುವ ನವನಗರದ ಎಪಿಎಂಸಿ, ಸರ್ಕಾರಿ ಆಸ್ಪತ್ರೆಗಳ ಮುಂಭಾಗದಲ್ಲಿ ಪ್ರತಿದಿನ 12 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಬಡ ಜನರು, ನಿರ್ಗತಿಕರು, ಹಸಿದು ಬಂದವ್ರಿಗೆ ತುತ್ತು ಅನ್ನ ನೀಡುವ ಮೂಲಕ ಸಾರ್ಥಕತೆ ಮೆರೆಯುತ್ತಿದೆ.
ಟ್ರಸ್ಟ್ ನ ನವೀನ್ ಹಂಡ್ರಗಲ್ ಹೇಳುವಂತೆ ಹಸಿವಿನಿಂದ ಯಾರೂ ಇರಬಾರದು ಎನ್ನುವ ಉದ್ದೇಶದಿಂದ ಈ ಟ್ರಸ್ಟ್ ಮಾಡಿದ್ದಾರಂತೆ. ಅದ್ರಂತೆ ಕಳೆದ 111 ದಿನಗಳಿಂದ ಯಾವುದೇ ಫಲಾಪೇಕ್ಷೆ ಇಲ್ಲದೇ ಉಚಿತವಾಗಿ ಬಡವರಿಗೆ ಊಟ ನೀಡುತ್ತ ಬಂದಿದ್ದಾರೆ. ಒಂದು ವೇಳೆ ದಾನ ನೀಡಬೇಕೆಂದವ್ರು ದವಸ, ಧಾನ್ಯಗಳನ್ನು ನೀಡಬಹುದು ಅಂತಾರೆ ಬಾಗಲಕೋಟೆಯ ಶ್ರೀ ಸಿದ್ದಗಂಗಾ ಅನ್ನ ಸಂತರ್ಪನಾ ಟ್ರಸ್ಟ್ ಸದಸ್ಯ ನವೀನ್ ಹಂಡರಗಲ್.
ಲಿಂಗಾಯತ ಮೀಸಲಾತಿ ಹೋರಾಟ ಬೆನ್ನಲ್ಲೇ ಇದೀಗ ಮುಸ್ಲಿಂ ಸಮುದಾಯದ 2ಎ ಮೀಸಲಾತಿ ಜಾರಿಗೆ ಎದ್ದಿದೆ ಕೂಗು!
ಹಸಿದು ಬಂದವರ ನೆರವಿಗೆ ನಿಂತ ನವೀನ್ ನೇತೃತ್ವದ ಯುವಕರ ತಂಡ
ಇನ್ನು ಮುಖ್ಯವಾಗಿ ನವನಗರದ ಜಿಲ್ಲಾಸ್ಪತ್ರೆ ಎದುರು ನಿತ್ಯ ಅನ್ನಸಂತರ್ಪಣೆ ಕಾರ್ಯ ನಡೆಸಲಾಗುತ್ತದೆ. ಯಾಕಂದ್ರೆ ಪ್ರತಿನಿತ್ಯ ನೂರಾರು ಜನ ಇಲ್ಲಿ ರೋಗಿಗಳು ಸೇರಿದಂತೆ ನಿರ್ಗತಿಕರು, ಹಸಿವಿನಿಂದ ಬಳಲಿದವರು ಇಲ್ಲಿ ಹೆಚ್ಚಿದ್ದು ಅವರ ಜೊತೆ ಬರುವ ಜನರಿಗೂ ಸಹ ಅನ್ನಸಂತರ್ಪಣೆ ಕಾರ್ಯವನ್ನ ನಡೆಸಿಕೊಂಡು ಬರಲಾಗುತ್ತಿದೆ. ಮುಖ್ಯವಾಗಿ ಶಂಕರಗೌಡ ಬಿರಾದಾರ, ವಿಠ್ಠಲ ಜಮಖಂಡಿ, ಕಿರಣ್ ಕುಲಕರ್ಣಿ ಎಂಬುವವರು ಸೇರಿದಂತೆ ತಮ್ಮ ಸ್ನೇಹಿತರೊಂದಿಗೆ ಕೂಡಿ ಈ ರೀತಿಯ ಅನ್ನದಾಸೋಹಕ್ಕೆ ಮುಂದಾಗಿದ್ದಾರೆ. ತಮ್ಮ ಕೈಲಾದಷ್ಟು ಸೇವೆ ಆರಂಭಿಸಿದ ಈ ಹುಡುಗರಿಗೆ ನಿತ್ಯದ ದಾಸೋಹಕ್ಕೆ ತೆರೆಮರೆಯಲ್ಲಿ ದಾನಿಗಳು ಸಹ ಕೈ ಜೋಡಿಸುತ್ತಿದ್ದಾರೆ. ಟ್ರಸ್ಟ್ಗೆ ಸಿದ್ದಗಂಗಾ ಶ್ರೀಗಳು, ಬಸವಣ್ಣನವರು ಮತ್ತು ವಿಜಯಪುರದ ಸಿದ್ದೇಶ್ವರ ಶ್ರೀಗಳ ಭಾವಚಿತ್ರ ಇರುವ ಚಿತ್ರವನ್ನ ರೂಪಿಸಿ ಅದರ ಅಡಿಯಲ್ಲಿ ಈ ಅನ್ನದಾಸೋಹವನ್ನ ನವೀನ್ ನಡೆಸುತ್ತಿದ್ದಾರೆ. ಇನ್ನು ಮೊದ ಮೊದಲು ನವೀನ್ ಅನ್ನದಾಸೋಹ ಕಾರ್ಯ ಆರಂಭಿಸಿದಾಗ ಎಷ್ಟು ದಿನ ನಡೆಸಬಹುದು ಅನ್ನೋ ಜನರು ಮಾತು ಕೇಳಿ ಬಂದಾಗಲೂ ಎದೆ ಗುಂದದೆ ಮುನ್ನಡೆದ ನವೀನ್ ಜೊತೆ ನೂರಾರು ಜನ ನಿಂತಿದ್ದು, ಇದೀಗ 111ನೇ ದಿನ ಅನ್ನದಾಸೋಹ ಪೂರೈಸಿದ್ದು, ನವೀನ್ ಕಾರ್ಯ ನಿಜಕ್ಕೂ ಅಭಿನಂದನೀಯ ಅಂತಾರೆ ಸ್ಥಳೀಯರಾದ ರಾಜು ನಾಯ್ಕರ್.
ಒಟ್ಟಿನಲ್ಲಿ ಸಿದ್ದಗಂಗಾ ಶ್ರೀಗಳ ಪ್ರೇರಣೆಯೊಂದಿಗೆ 111ನೇ ದಿನ ಅನ್ನದಾಸೋಹ ಕಾರ್ಯ ಪೂರೈಸಿರೋ ನವೀನ್ ಕಾರ್ಯ ಅಭಿನಂದಿಸುವಂತಹದಾಗಿದ್ದು, ಅವರ ಅನ್ನದಾಸೋಹ ಕಾರ್ಯ ನಿರಂತರವಾಗಲಿ, ಇನ್ನಷ್ಟು ಜನ ಹಸಿದು ಬಂದವರಿಗೆ ಅನ್ನ ನೀಡುವಂತಾಗಲಿ ಅನ್ನೋದೆ ಎಲ್ಲರ ಆಶಯ.