ಇನ್ಮುಂದೆ ಧಾರವಾಡ ಜಿಲ್ಲೆಯ ಪ್ರತಿ ಹಳ್ಳಿಯ ದಾಹ ನೀಗಿಸಲಿದೆ ಮಲಪ್ರಭಾ..!

By Kannadaprabha NewsFirst Published Feb 22, 2021, 3:12 PM IST
Highlights

ಯೋಜನೆ ಸಿದ್ಧವಾಗಿ, ಟೆಂಡರ್‌ ಪ್ರಕ್ರಿಯೆ ಪ್ರಾರಂಭ| ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಲ್ಲಿ 14 ಗ್ರಾಮಗಳ ಕಾಮಗಾರಿಗೆ ಟೆಂಡರ್‌ ಪೂರ್ಣ| ಇನ್ನೊಂದು ವಾರದಲ್ಲಿ ಕಾಮಗಾರಿಗೆ ಚಾಲನೆ| ಯೋಜನೆಯಡಿ ನವಲಗುಂದ ಕ್ಷೇತ್ರಕ್ಕೆ 115 ಕೋಟಿ ಬಿಡುಗಡೆ| 

ಶಿವಾನಂದ ಗೊಂಬಿ

ಹುಬ್ಬಳ್ಳಿ(ಫೆ.22): ಧಾರವಾಡ ಜಿಲ್ಲೆಯ ಪ್ರತಿ ಹಳ್ಳಿಗೂ ಮಲಪ್ರಭಾ ನದಿ ನೀರು ಸರಬರಾಜು ಮಾಡುವ ಯೋಜನೆಗೆ ಶೀಘ್ರದಲ್ಲೇ ಚಾಲನೆ ದೊರೆಯಲಿದೆ. ಜಲ್‌ಜೀವನ್‌ ಮಿಷನ್‌ ಯೋಜನೆ ಮೂಲಕ ಇದನ್ನು ಸಾಕಾರಗೊಳಿಸಲು ಸರ್ಕಾರ ಮುಂದಾಗಿದೆ. ಈಗಾಗಲೇ ಟೆಂಡರ್‌ ಪ್ರಕ್ರಿಯೆ ಪ್ರಾರಂಭವಾಗಿದ್ದರೆ, ಕೆಲವೆಡೆ ಟೆಂಡರ್‌ ಪೂರ್ಣಗೊಂಡು ಕಾಮಗಾರಿಗೆ ಚಾಲನೆ ದೊರೆಯುವುದೊಂದೆ ಬಾಕಿಯಿದೆ.

ಹಳ್ಳಿಗಳ ನೀರಿನ ಸಮಸ್ಯೆ ಸಾಕಷ್ಟು. ಕೆಲವೆಡೆ ಕೆರೆಗಳ ಮೂಲಕ ಗ್ರಾಪಂ ನೀರು ಸರಬರಾಜು ಮಾಡಲಾಗುತ್ತಿದ್ದರೆ, ಕೆಲವೆಡೆ ಕೆರೆಗೆ ಜನರೇ ಹೋಗಿ ನೀರು ತರಬೇಕು. ಬೇಸಿಗೆಯಲ್ಲಂತೂ ಕುಡಿಯುವ ನೀರಿನ ಸಮಸ್ಯೆ ಹೇಳುವಂತಿಲ್ಲ. ಕಿಲೋ ಮೀಟರ್‌ಗಟ್ಟಲೇ ದೂರ ಕ್ರಮಿಸಿ ನೀರು ತರಬೇಕಾದ ಅನಿವಾರ್ಯತೆ ಇರುತ್ತದೆ. ಕುಡಿಯುವ ಹನಿ ನೀರಿಗೂ ಪರದಾಡುತ್ತಾರೆ. ಇದನ್ನು ನಿವಾರಿಸಬೇಕು. 2024ರೊಳಗೆ ಎಲ್ಲ ಮನೆ ಮನೆಗಳಿಗೆ ನೀರು ಸರಬರಾಜು ಮಾಡುವಂತಾಗಬೇಕೆಂಬ ಉದ್ದೇಶದಿಂದ ಜಲ್‌ಜೀವನ್‌ ಮಿಷನ್‌ ಹಾಗೂ ಜಲಧಾರೆ ಎಂಬ ಯೋಜನೆಗಳನ್ನು ಸಿದ್ಧಪಡಿಸಿದೆ. ಇವರೆಡಕ್ಕೂ ಇದೀಗ ಜಿಲ್ಲೆಯಲ್ಲಿ ಚಾಲನೆ ದೊರೆಯುತ್ತಿದೆ.

ಜಲಜೀವನ್‌ ಮಿಷನ್‌ ಎಂದರೆ ಪ್ರತಿ ಹಳ್ಳಿಯ ಪ್ರತಿ ಮನೆಗೂ ಪೈಪ್‌ಲೈನ್‌ ಮೂಲಕ ನಲ್ಲಿ ಅಳವಡಿಸುವುದು. ಒವರ್‌ ಹೆಡ್‌ ಟ್ಯಾಂಕ್‌ ನಿರ್ಮಿಸುವುದು. ಜಲಧಾರೆ ಮೂಲಕ ಜಲಮೂಲಗಳಿಂದ ಆ ಒವರ್‌ ಹೆಡ್‌ ಟ್ಯಾಂಕ್‌ಗೆ ನೀರು ರವಾನೆಯಾಗುವಂತೆ ಮಾಡಿ ಅದರ ಮೂಲಕ ಮನೆ ಮನೆಗೆ ಪ್ರತಿ ವ್ಯಕ್ತಿಗೆ ಪ್ರತಿದಿನಕ್ಕೆ 75 ಲೀಟರ್‌ ಸರಬರಾಜು ಮಾಡುವಂತೆ ವ್ಯವಸ್ಥೆ ಕಲ್ಪಿಸುವುದಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ ಶೇ. 37.5, ಸ್ಥಳೀಯ ಸಂಸ್ಥೆಯ 15ನೇ ಹಣಕಾಸು ಯೋಜನೆಯಡಿ ಶೇ. 15ರಷ್ಟು ಹಾಗೂ ಶೇ. 10ರಷ್ಟು ಸಮುದಾಯ ವಂತಿಕೆಯಡಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

'ಸಿದ್ದು, ಹೆಚ್‌ಡಿಕೆಯಿಂದ ಮುಸ್ಲಿಮರ ಓಲೈಕೆಗಾಗಿ ತುಷ್ಟೀಕರಣ ರಾಜಕಾರಣ'

ನವಲಗುಂದ ಮುಂದೆ:

ಜಿಲ್ಲೆಯ 332 ಹಳ್ಳಿಗಳಿಗೆ ಈ ಮೂಲಕ ಮಲಪ್ರಭಾ ನದಿ ನೀರನ್ನು ಸರಬರಾಜು ಮಾಡುವ ಯೋಜನೆ ಆಡಳಿತದ್ದು. ಪ್ರತಿ ತಾಲೂಕಲ್ಲಿ ಟೆಂಡರ್‌ ಪ್ರಕ್ರಿಯೆ ಪ್ರಾರಂಭವಾಗಿದೆ. ನವಲಗುಂದ ಕ್ಷೇತ್ರದ 72 ಹಳ್ಳಿಗಳ ಪೈಕಿ 14 ಹಳ್ಳಿಗಳ ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆ ಪೂರ್ಣವಾಗಿದ್ದು, ಉಳಿದವು ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ. ಪೂರ್ಣವಾಗಿರುವ 14 ಹಳ್ಳಿಗಳ ಕಾಮಗಾರಿಗೆ ಇನ್ನೊಂದು ವಾರ ಅಥವಾ ಹತ್ತು ದಿನಗಳಲ್ಲಿ ಕಾಮಗಾರಿಗೆ ಚಾಲನೆ ದೊರೆಯಲಿದೆ. ಹೀಗಾಗಿ ಜಲಜೀವನ್‌ ಮಿಷನ್‌ ಯೋಜನೆಯಲ್ಲಿ ನವಲಗುಂದ ಕೊಂಚ ಮುಂದಿದೆ. ಈ ಯೋಜನೆಯಡಿ ನವಲಗುಂದ ಕ್ಷೇತ್ರಕ್ಕೆ 115 ಕೋಟಿ ಬಿಡುಗಡೆಯಾಗಿದೆ ಎಂದು ಮೂಲಗಳು ತಿಳಿಸುತ್ತವೆ.

ಒಟ್ಟಿನಲ್ಲಿ ಜಲ್‌ಜೀವನ್‌ ಮಿಷನ್‌ ಹಾಗೂ ಜಲಧಾರೆ ಯೋಜನೆಯಡಿ ಪ್ರತಿಮನೆಗೆ ನೀರು ಸರಬರಾಜು ಮಾಡುವ ಪ್ರಕ್ರಿಯೆ ಪ್ರಾರಂಭವಾದಂತಾಗಿದೆ. ಆದಷ್ಟುಶೀಘ್ರದಲ್ಲೇ ಈ ಕಾಮಗಾರಿ ಪೂರ್ಣಗೊಳಿಸಿ ನಿಗದಿತ ಸಮಯದಲ್ಲಿ ಎಲ್ಲ ಹಳ್ಳಿಗಳಿಗೂ ನೀರು ಸರಬರಾಜು ಆಗುವಂತಾಗಬೇಕು ಎಂಬುದು ನಾಗರಿಕರ ಆಶಯ.

ಜಲ್‌ಜೀವನ್‌ ಮಿಷನ್‌ನಡಿ ನವಲಗುಂದ ಕ್ಷೇತ್ರಕ್ಕೆ 115 ಕೋಟಿ ಬಿಡುಗಡೆಯಾಗಿದೆ. 14 ಹಳ್ಳಿಗಳ ಕಾಮಗಾರಿಗೆ ಟೆಂಡರ್‌ ಮುಗಿದಿದೆ. ಆದಷ್ಟುಬೇಗನೆ ಕಾಮಗಾರಿಗೆ ಚಾಲನೆ ನೀಡಲಾಗುವುದು. ಪ್ರತಿಮನೆಗೂ ಮಲಪ್ರಭಾ ನದಿ ನೀರು ಸರಬರಾಜು ಮಾಡಬೇಕೆನ್ನುವ ಕನಸು ನನ್ನದು. ಅದನ್ನು ಈ ಅವಧಿಯಲ್ಲೇ ಮುಗಿಸಬೇಕೆಂಬ ಯೋಚನೆಯಿದೆ ಎಂದು ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದ್ದಾರೆ. 

ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುತ್ತೆ. ಬೇಸಿಗೆಯಲ್ಲಂತೂ ನೀರಿನ ಸಮಸ್ಯೆ ಹೇಳುವಂತಿಲ್ಲ, ಅಷ್ಟೊಂದು ಸಮಸ್ಯೆಯಾಗುತ್ತಿತ್ತು. ಇದೀಗ ಮನೆ ಮನೆಗೂ ನೀರು ಸರಬರಾಜು ಮಾಡುವ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದಷ್ಟುಬೇಗನೆ ಈ ಕೆಲಸ ಶುರುವಾಗಿ, ನೀರಿನ ಸಮಸ್ಯೆ ಬಗೆಹರಿಯುವಂತಾಗಲಿ ಎಂದು ಸುಳ್ಳ ಗ್ರಾಮದ ಯುವಕ ಕಲ್ಲಪ್ಪ ಹುಲ್ಜತ್ತಿ ಹೇಳಿದ್ದಾರೆ. 
 

click me!