ಹಳೇ ಮನೆ ಕಂಡು ಮರುಗಿದ ಗೌಡರು!

By Kannadaprabha NewsFirst Published Feb 22, 2021, 2:31 PM IST
Highlights

ಹಾಸನದ ಹಳ್ಳಿಗಳಿಗೆ ಭೇಟಿ ನೀಡಿದ ಎಚ್ ಡಿ ದೇವೇಗೌಡರು ಅಲ್ಲಿನ ಹಳೆಯ ಮನೆಗಳನ್ನು ಕಂಡು ಮರುಗಿದರು. ವಸತಿ ಯೋಜನೆಗಳು ಸೂಕ್ತ ಪ್ರಮಾಣದಲ್ಲಿ ತಲುಪುತ್ತಿಲ್ಲವೆಂದು ಅಸಮಾಧಾನ ಹೊರಹಾಕಿದರು. 

 ಹಾಸನ (ಫೆ.22):  ಹಾಸನ ತಾಲೂಕಿನ ಉಪ್ಪಳ್ಳಿ ಗ್ರಾಮದಲ್ಲಿ ಹಳೆಯ ಮನೆಗಳನ್ನು ಕಂಡು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಕಸಿವಿಸಿಗೊಂಡರು. ಸರ್ಕಾರ ವಸತಿ ಯೋಜನೆಯನ್ನು ಜಾರಿ ಮಾಡಿದರೂ ಜನರಿಗೆ ಸೂಕ್ತ ರೀತಿಯಲ್ಲಿ ಬಳಕೆಗೆ ಸಿಗದ್ದನ್ನು ಕಂಡು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದ ನಿಮಿತ್ತ ಉಪ್ಪಳ್ಳಿಯ ಆಂಜನೇಯ ದೇವಾಲಯಕ್ಕೆ  ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಸರ್ಕಾರ ವಸತಿ ಯೋಜನೆಗಳು ಬಡವರಿಗೆ ನಿರೀಕ್ಷಿತ ಮಟ್ಟದಲ್ಲಿ ಸಹಕಾರಿಯಾಗಿಲ್ಲ. ನನ್ನ ಅಧಿಕಾರಾವಧಿಯಲ್ಲಿ ರೈತರ ಟ್ರ್ಯಾಕ್ಟರ್‌, ಟ್ರಿಲ್ಲರ್‌ಗೆ ಶೇ.50 ರಿಯಾಯಿತಿ ನೀಡಿದ್ದೆ. ರೈತ ಮಹಿಳೆಯರಿಗೆ ಉತ್ತೇಜಿಸಲು ಶೇ.90ರಷ್ಟುಸಬ್ಸಿಡಿ ನೀಡಿದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ನಾನು ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ವಸತಿ ಯೋಜನೆಗೆ ಒತ್ತು ನೀಡಿ ವರ್ಷಕ್ಕೆ 1 ಲಕ್ಷ ಮನೆ ಕಟ್ಟುವ ಯೋಜನೆ ರೂಪಿಸಲಾಗಿತ್ತು. ಬಜೆಟ್‌ನಲ್ಲೂ ಕೂಡ ಹಣವನ್ನು ಮೀಸಲಿಡಲಾಗಿತ್ತು. ಒಳ್ಳೆಯದಕ್ಕೋ ಕೆಟ್ಟದ್ದಕ್ಕೋ ನಾನು ದೆಹಲಿಗೆ ಹೋಗಬೇಕಾಯಿತು. ಅಲ್ಲಿಂದ ಇಲ್ಲಿಯವರೆಗೂ ನಿರೀಕ್ಷಿತ ಮಟ್ಟದಲ್ಲಿ ವಸತಿ ಯೋಜನೆ ಸಹಕಾರಿಯಾಗಿಲ್ಲ. ಉಪ್ಪಳ್ಳಿ ಗ್ರಾಮವನ್ನು ನೋಡಿದರೆ ನೋವಾಗುತ್ತದೆ. ಇಲ್ಲಿ ಯಾರು ಆರ್‌ಸಿಸಿ ಮನೆಯನ್ನೆ ಕಟ್ಟಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

'ಮೋದಿಯವರಿಗೆ ನನ್ನ ಬಗ್ಗೆ ಒಳ್ಳೆ ಭಾವನೆ ಇದೆ : ನನ್ನ ಮಾತು ಅಲ್ಲಗಳೆಯಲ್ಲ' ...

ದೇವರ ಆಶೀರ್ವಾದ ಕಾರಣ:  ಒಬ್ಬ ರೈತನಾಗಿ, ನಾವು ಈ ಮಟ್ಟಕ್ಕೆ ಬೆಳೆಯಬೇಕೆಂದರೆ ದೇವರ ಆಶೀರ್ವಾದವೇ ಕಾರಣ. ಪ್ರತಿ ಕೆಲಸವನ್ನು ದೇವರಲ್ಲಿ ನಂಬಿಕೆ ಇಟ್ಟು ಮಾಡುತ್ತೇವೆ. ನಾನು ಜಿಲ್ಲೆಯಲ್ಲಿ ರೈತನ ಮಗನಾಗಿ ಹುಟ್ಟಿದ್ದೇನೆ. ಕೊನೆಯವರೆಗೂ ರೈತರ ಪರವಾಗಿ ಹೋರಾಟ ಮಾಡುತ್ತೇನೆ. ಈಗಾಗಲೇ ಈ ದೇಶದಲ್ಲಿ ರೈತರ ದೊಡ್ಡ ಹೋರಾಟ ನಡೆಯುತ್ತಿದೆ. ಈ ಬಗ್ಗೆ ಸದನದಲ್ಲಿ ನಾನು ಚರ್ಚೆ ಮಾಡಿದ್ದೇನೆ ಎಂದರು.

ವಾತಾವರಣ ಸರಿಯಿಲ್ಲದ ಕಾರಣ ಅವರನ್ನ ಗಮನಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಿಮ ಬೀಳುತ್ತಿರುವ ವಾತಾವರಣದಲ್ಲಿ ಅತ್ತ ದೆಹಲಿಯಲ್ಲಿ ಹೆಂಡತಿ ಮಕ್ಕಳ ಜೊತೆ ಪ್ರತಿಭಟನೆ ನಡೆಯುತ್ತಿದೆ. ಸಂಸತ್ತಿನಲ್ಲಿ ಪ್ರಧಾನಿ ಅವರು ನನ್ನ ಬಗ್ಗೆ ಅಭಿಮಾನ ಇಟ್ಟು ಮಾತನಾಡಿದ್ದಾರೆ. ಸರ್ಕಾರಗಳು ಕಾನೂನು ರಚನೆ ಮಾಡುವಾಗ ಉದ್ದೇಶ ಒಳ್ಳೆಯದಿದ್ದರೂ ಕೆಲವೊಮ್ಮೆ ತಪ್ಪುಗಳಾಗುತ್ತವೆ. ಆದ್ದರಿಂದ, ಈ ರೈತರ ಬಗ್ಗೆ ಕಾಳಜಿವಹಿಸಿ ಮಾತುಕತೆ ನಡೆಸಬೇಕು ಎಂದು ಕೋರಿದರು.

ಇದೆ ವೇಳೆ ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷ ಬಿ.ಆರ್‌. ಸತ್ಯನಾರಾಯಣ್‌, ಹಾಲಿ ಉಪಾಧ್ಯಕ್ಷ ಎಚ್‌.ಪಿ. ಸ್ವರೂಪ್‌ ಇತರರು ಭಾಗವಹಿಸಿದ್ದರು.

click me!