ಗೌರಿ ತೋಡಿದ ಬಾವಿಯಲ್ಲಿ ಬತ್ತದ ಗಂಗೆ!| ಎರಡು ವರ್ಷದ ಹಿಂದೆ 60 ಅಡಿ ಬಾವಿ ತೋಡಿದ್ದ ಅಸಾಮಾನ್ಯ ಕನ್ನಡತಿ| ಬರದ ಮಧ್ಯೆಯೂ ಗಂಗೆಗೆ ಬರ ಬಂದಿಲ್ಲ
ಶಿರಸಿ[ಮೇ.20]: ಭಗೀರಥ ಶ್ರಮದಿಂದ ಮಹಿಳೆಯೊಬ್ಬಳು ಒಬ್ಬಂಟಿಯಾಗಿ ತೋಡಿದ್ದ 60 ಅಡಿ ಆಳದ ಬಾವಿಯಲ್ಲಿ ಈ ಬಾರಿಯ ಬೇಸಿಗೆಯ ಬರದ ಮಧ್ಯೆಯೂ ಗಂಗೆಗೆ ಬರ ಬಂದಿಲ್ಲ..!
ಶಿರಸಿ ತಾಲೂಕಿನ ಹುತ್ಗಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಗಣೇಶನಗರದ ನಿವಾಸಿ ಗೌರಿ ನಾಯ್ಕ ಅಡಕೆ, ತೆಂಗಿನ ಗಿಡಗಳಿಗೆ ನೀರುಣಿಸುವ ಸಲುವಾಗಿ ಕಳೆದೆರಡು ವರ್ಷಗಳ ಹಿಂದೆ ಸ್ವತಃ ಒಬ್ಬಂಟಿಯಾಗಿ ಬಾವಿ ತೋಡಿ ರಾಜ್ಯದ ಗಮನ ಸೆಳೆದಿದ್ದಳು. ಇವರ ಈ ಸಾಧನೆಯನ್ನು ಗಮನಿಸಿ ‘ಕನ್ನಡಪ್ರಭ’ ಹಾಗೂ ಸುವರ್ಣ ನ್ಯೂಸ್ ವತಿಯಿಂದ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇಡೀ ಊರಲ್ಲಿ ನೀರಿನ ಸಮಸ್ಯೆಯಿದ್ದರೂ ಈ ಬಾವಿಯಲ್ಲಿ ನೀರು ನಳನಳಿಸುತ್ತಿದೆ.
ದೂರದ ಹೊಳೆಯಿಂದ ಗಣೇಶನಗರಕ್ಕೆ ನಿತ್ಯ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತದೆ. ಆದರೆ ಈ ವರ್ಷ ಹೊಳೆಯಲ್ಲಿಯೂ ನೀರಿನ ಕೊರತೆ ಉಂಟಾಗಿದೆ. ತಾಂತ್ರಿಕ ಕಾರಣಗಳಿಂದಲೂ ನಾಲ್ಕೈದು ದಿನಕ್ಕೊಮ್ಮೆ ನೀರು ಸರಬರಾಜಾಗುತ್ತಿದೆ. ಆದರೆ ಇದು ಸ್ಥಳೀಯರ ಜೀವಜಲದ ಅಗತ್ಯದಷ್ಟುಕೊರತೆಯನ್ನು ನೀಗಿಸುತ್ತಿಲ್ಲ. ಟ್ಯಾಂಕರ್ ಮೂಲಕವೂ ಇಲ್ಲಿ ನೀರು ತರಿಸಿಕೊಳ್ಳಲಾಗುತ್ತದೆ. ಇಂತಹ ಪ್ರದೇಶದಲ್ಲೂ ಎತ್ತರದ ಸ್ಥಳದಲ್ಲಿ ಮಹಿಳೆ ತೋಡಿದ್ದ ಬಾವಿ ನೀರಿನ ಸೆಲೆ ಉಳಿಸಿಕೊಂಡಿರುವುದು ಗಮನಾರ್ಹ ಸಂಗತಿಯಾಗಿದೆ.
ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.