ಉಡುಪಿ ನಗರದಿಂದ 4 ಕಿ.ಮೀ. ದೂರದಲ್ಲಿರುವ ಕಿದಿಯೂರು ಗ್ರಾಮದ ಗರೋಡಿ ನಿವಾಸಿಗಳಿಗೆ ಟ್ಯಾಂಕರ್ ನೀರೇ ಗತಿ
ಉಡುಪಿ(ಮೇ.24): ಇದು ಉಡುಪಿ ನಗರದಿಂದ 4 ಕಿ.ಮೀ. ದೂರದಲ್ಲಿರುವ ಕಿದಿಯೂರು ಗ್ರಾಮ. ಇಲ್ಲಿ ಪಂಚಾಯಿತಿ ನಳ್ಳಿಗಳಲ್ಲಿ ಹನಿ ನೀರು ಬಾರದೆ 2 ತಿಂಗಳಾದವು, ಆದ್ದರಿಂದ ಜನರು ಬೇರೆ ದಾರಿ ಇಲ್ಲದೇ 600 ರು. ಹಣ ಕೊಟ್ಟು 3,000 ಲೀಟರ್ ನೀರು ಖರೀದಿಸುತ್ತಿದ್ದಾರೆ. ಉಡುಪಿ ನಗರಸಭೆಯು ಅಂಬಲಪಾಡಿಯೂ ಸೇರಿದಂತೆ ತನ್ನ ಅಕ್ಕಪಕ್ಕದ 6 ಅಧಿಸೂಚಿತ ಪಂಚಾಯಿತಿಗಳಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿದೆ. ಆದರೆ ಈ ಬಾರಿ ನಗರಸಭೆಯೇ ತನ್ನ ನಾಗರಿಕರಿಗೆ ನೀರು ಪೂರೈಕೆಗೆ ಹರಸಾಹಸ ಪಡುತ್ತಿರುವುದರಿಂದ, ಈ ಪಂಚಾಯಿತಿಗಳಿಗೆ 2 ತಿಂಗಳಿಂದ ನೀರು ಪೂರೈಕೆ ನಿಲ್ಲಿಸಿದೆ. ಪರಿಣಾಮ ನಗರಸಭೆಯನ್ನು ಅವಲಂಬಿಸಿ, ಸ್ವಂತ ನೀರಿನ ಮೂಲಗಳನ್ನು ಕಂಡುಕೊಳ್ಳದ ಈ ಪಂಚಾಯತ್ ಗಳು ಈಗ ಪರದಾಡುವಂತಾಗಿದೆ.
ಅಂಬಲಪಾಡಿ ಗ್ರಾಪಂನ ಕಿದಿಯೂರು ಗ್ರಾಮದ ಗರೋಡಿ ರಸ್ತೆಯಲ್ಲಿ 100ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿನ ಪಂಚಾಯಿತಿ ನಳ್ಳಿಯಲ್ಲಿ 2 ತಿಂಗಳಿಂದ ನೀರು ಬಂದಿಲ್ಲ. ವಾರಕ್ಕೊಮ್ಮೆ ಪಂಚಾಯತ್‌ನವರು ಟ್ಯಾಂಕರ್ ಮೂಲಕ ಪ್ರತಿ ಮನೆಗೆ ಕೇವಲ 300 ಲೀ. ನೀರನ್ನು ಕೊಟ್ಟು ಹೋಗುತ್ತಿದ್ದಾರೆ. ಇದನ್ನು ಕುಡಿಯಲು ಬಳಸಿದರೆ ಬಟ್ಟೆಒಗೆಯುವುದಕ್ಕಿಲ್ಲ, ಸ್ನಾನ ಮಾಡುವುದಕ್ಕಿಲ್ಲ, ಪಾತ್ರೆ ತೊಳೆಯುವುದಿಕ್ಕಿಲ್ಲ, ಕಕ್ಕಸು ಸ್ವಚ್ಛ ಮಾಡುವುದಿಕ್ಕಿಲ್ಲ ಎನ್ನುವ ಪರಿಸ್ಥಿತಿ.
undefined
KAMBALA: ಕಂಬಳಕ್ಕಿದ್ದ ಕಾನೂನು ತೊಡಕು ನಿವಾರಣೆ; ಕರಾವಳಿಗಳಲ್ಲಿ ಹರ್ಷ
ಪಂಚಾಯಿತಿ ಟ್ಯಾಂಕರ್‌ನವರು ಮನೆಯ ಸಿಂಟೆಕ್ಸ್, ಸಂಪ್‌ಗಳಿಗೆ ನೀರು ತುಂಬಿಸುವುದಿಲ್ಲ, ಟ್ಯಾಂಕರ್ ಬರುವಾಗ ಮನೆಯ ಸದಸ್ಯರೆಲ್ಲರೂ ಕೊಡ, ಬಾಲ್ದಿ, ಪಾತ್ರೆಗಳನ್ನು ಹಿಡಿದು ರಸ್ತೆಗೆ ಓಡಿ ಬರಬೇಕು. ಎಲ್ಲರ ಮನೆಯಲ್ಲಿ 300 ಲೀ. ನೀರು ಹಿಡಿಯುವಷ್ಟುಪಾತ್ರೆಗಳಿಲ್ಲ, ಇರುವ ಪಾತ್ರೆಗಳನ್ನೆಲ್ಲಾ ತಂದು ರಸ್ತೆ ಪಕ್ಕ ಇಟ್ಟರೂ 50 - 100 ಲೀ. ನಷ್ಟೇ ನೀರು ಹಿಡಿಯುವುದಕ್ಕೆ ಸಾಧ್ಯವಾಗುತ್ತದೆ ಎಂದು ಇಲ್ಲಿನ ಮಹಿಳೆಯರು ಅಳಲು ತೊಡಿಕೊಳ್ಳುತ್ತಾರೆ. ಇದಕ್ಕೆ ಇಲ್ಲಿನ ಪಂಚಾಯಿತಿ ಸದಸ್ಯ ಸುಂದರ ಪೂಜಾರಿ ಅವರು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಜನರು ಬೇರೆ ದಾರಿ ಇಲ್ಲದೇ ದುಬಾರಿಯಾದರೂ, ಖಾಸಗಿಯವರಿಗೆ 3000 ಲೀ.ಗೆ 600 ರು. ಕೊಟ್ಟು ವಾರಕ್ಕೊಮ್ಮೆ ನೀರು ತರಿಸುತ್ತಿದ್ದಾರೆ. ಇದು ಖಾಸಗಿಯವರಿಗೆ ಒಳ್ಳೆಯ ಲಾಭದಾಯಕ ಉದ್ಯಮವೂ ಆಗುತ್ತಿದೆ.
3 ಕೊಡ ನೀರಿಗೆ 300 ಮೀ. ನಡಿಬೇಕು ಈ ವೃದ್ಧೆ
ಈ ಗರೋಡಿ ನಗರದಲ್ಲಿ ವಾರಿಜಾ ಎಂಬ 65 - 70 ಒಂಟಿ ಮಹಿಳೆಯೊಬ್ಬರಿದ್ದಾರೆ. ಅವರ ಮನೆಯವರೆಗೆ ರಸ್ತೆಯಿಲ್ಲ. ಆದ್ದರಿಂದ ಟ್ಯಾಂಕರ್ ಅವರ ಮನೆ ತನಕ ಹೋಗುವುದಿಲ್ಲ. ಈ ಹಿರಿ ಜೀವ ಸೊಂಟದಲ್ಲೊಂದು ಕೊಡ ಇಟ್ಟುಕೊಂಡು ರಸ್ತೆಯಿಂದ ಸುಮಾರು 300 ಮೀಟರ್ ಕಾಲುದಾರಿಯಲ್ಲಿ ನಡೆದುಕೊಂಡು ಮನೆಗೆ ನೀರು ಹೊತ್ತೊಯ್ಯಬೇಕು. ಈ ಬಗ್ಗೆ ಕೇಳಿದರೆ ಅಸಹಾಯಕತೆಯೇ ಅವರ ಉತ್ತರವಾಗಿದೆ.
ನಗರಸಭೆಯನ್ನು ಅವಲಂಬಿಸಿದ್ದೇ ಸಮಸ್ಯೆ...
ಅಂಬಲಪಾಡಿ ಗ್ರಾಪಂನಲ್ಲಿ ನಗರಸಭೆಯವರು ನೀರಿನ ಪೂರೈಕೆ ನಿಲ್ಲಿಸಿರುವುದರಿಂದ ನೀರಿನ ಸಮಸ್ಯೆ ತೀವ್ರವಾಗಿದೆ, ಅದಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಕೆಲವು ಮನೆಗಳಿಗೆ ರಸ್ತೆಯಿಲ್ಲ, ಅಂತಹ ಮನೆಯವರು ರಸ್ತೆ ಪಕ್ಕ ಸಿಂಟೆಕ್ಸ್ ಟ್ಯಾಂಕ್ ತಂದಿಟ್ಟರೆ ಅದಕ್ಕೆ ನೀರು ಪೂರೈಕೆ ಮಾಡುತ್ತೇವೆ. ಅದರಿಂದ ಜನರು ಬಂದು ನೀರು ತುಂಬಿಸಿಕೊಳ್ಳಬೇಕಾಗುತ್ತದೆ ಎಂದು ಉಡುಪಿ ತಾಪಂ ಕಾರ್ಯನಿರ್ವಹಣಾಧಿಕಾರಿ ವಿಜಯ ಅವರು ಹೇಳಿದ್ದಾರೆ.