ಮಳೆ ಕೊರತೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಜನರಿಗೆ ಕುಡಿಯುವ ನೀರಿನ ಕೊರತೆ ಶುರುವಾಗಿದೆ. ಅಷ್ಟೇ ಅಲ್ಲ ಕಾಡಿನ ಪ್ರಾಣಿಗಳಿಗೂ ಕುಡಿಯುವ ನೀರಿನ ಕೊರತೆ ಶುರುವಾಗ ತೊಡಗಿದೆ. ಹೀಗಾಗಿ ಕುಡಿಯುವ ನೀರಿಗಾಗಿ ಕಾಡು ಪ್ರಾಣಿಗಳು ಕಾಡುಬಿಟ್ಟು ನಾಡಿನತ್ತ ಲಗ್ಗೆ ಇಡಲು ಆರಂಭಿಸಿವೆ.
ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಫೆ.19): ಮಳೆ ಕೊರತೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಜನರಿಗೆ ಕುಡಿಯುವ ನೀರಿನ ಕೊರತೆ ಶುರುವಾಗಿದೆ. ಅಷ್ಟೇ ಅಲ್ಲ ಕಾಡಿನ ಪ್ರಾಣಿಗಳಿಗೂ ಕುಡಿಯುವ ನೀರಿನ ಕೊರತೆ ಶುರುವಾಗ ತೊಡಗಿದೆ. ಹೀಗಾಗಿ ಕುಡಿಯುವ ನೀರಿಗಾಗಿ ಕಾಡು ಪ್ರಾಣಿಗಳು ಕಾಡುಬಿಟ್ಟು ನಾಡಿನತ್ತ ಲಗ್ಗೆ ಇಡಲು ಆರಂಭಿಸಿವೆ. ಮನುಷ್ಯರಿಗೆ ಕುಡಿಯುವ ನೀರಿನ ಸಮಸ್ಯೆ ಶುರುವಾದರೆ ಸಂಬಂಧಿಸಿದ ಪಂಚಾಯಿತಿ ಮತ್ತು ವಿವಿಧ ಅಧಿಕಾರಿಗಳು ಬೀದಿ, ಬೀದಿಗಳಿಗೆ ನೀರು ಪೂರೈಕೆ ಮಾಡುತ್ತಾರೆ. ಆದರೆ ಕಾಡಿನಲ್ಲಿ ವಾಸಿಸುವ ಪ್ರಾಣಿಗಳಿಗೆ ಕುಡಿಯುವ ನೀರನ್ನು ಪೂರೈಸುವುದೇ ಸವಾಲಿನ ಕೆಲಸವಾಗಿದೆ. ಕೊಡಗು ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಾಗಿದ್ದು ಗೊತ್ತೇ ಇದೆ.
undefined
ಅದರಲ್ಲೂ ಅರೆಮಲೆನಾಡಿನಂತಿರುವ ಕುಶಾಲನಗರ ತಾಲ್ಲೂಕಿನಲ್ಲಿ ವಿಪರೀತ ಮಳೆ ಕೊರತೆಯಾಗಿತ್ತು. ಹೀಗಾಗಿ ಕುಶಾಲನಗರ ತಾಲ್ಲೂಕಿನ ಕುಶಾಲನಗರ ವಲಯ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳಿಗೆ ಕುಡಿಯುವ ನೀರಿನ ಕೊರತೆಯ ಆತಂಕ ಶುರುವಾಗಿದೆ. ಕುಶಾಲನಗರ ವಲಯ ವ್ಯಾಪ್ತಿಯಲ್ಲಿ ದುಬಾರೆ ರಕ್ಷಿತಾರಣ್ಯ, ಆನೆಕಾಡು ರಕ್ಷಿತಾರಣ್ಯ, ಮೀನುಕೊಲ್ಲಿ ಅರಣ್ಯ, ಅತ್ತೂರು ಅರಣ್ಯ ಪ್ರದೇಶ ಸೇರಿದಂತೆ ಒಟ್ಟು 24,278.88 ಹೆಕ್ಟೇರ್ ಪ್ರದೇಶ ಅರಣ್ಯವಿದೆ. ಇಷ್ಟು ವ್ಯಾಪ್ತಿಯಲ್ಲಿ ಹುಲಿ, ಚಿರತೆ, ಆನೆ, ಜಿಂಕೆ, ಸಾಂಬಾರ್ ಸೇರಿದಂತೆ ಹತ್ತಾರು ವಿಧದ ಪ್ರಾಣಿ, ಪಕ್ಷಿಗಳು ಇವೆ.
ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಭಯಪಡುವ ಅಗತ್ಯವಿಲ್ಲ, ಗಂಭೀರವಾಗಿ ಪರಿಗಣಿಸಿ: ಮಧು ಬಂಗಾರಪ್ಪ
ಇವುಗಳೆಲ್ಲಾ ಈ ವ್ಯಾಪ್ತಿಯಲ್ಲಿ ಹರಿಯುವ ಕಾವೇರಿ ನದಿ, ಚಿಕ್ಲಿಹೊಳೆ ಜಲಾಶಯ ಹಾಗೂ ಹಾರಂಗಿ ಜಲಾಶಯವನ್ನು ಅವಲಂಬಿಸಿದ್ದವು. ಇದರಲ್ಲಿ ಈಗಾಗಲೇ ಕಾವೇರಿ ನದಿಯಲ್ಲಿ ಬಹುತೇಕ ನೀರು ಬತ್ತಿದ್ದರೆ, ಚಿಕ್ಲಿಹೊಳೆ ಜಲಾಶಯವಂತು ಪೂರ್ಣ ಪ್ರಮಾಣದಲ್ಲಿ ಬತ್ತಿಹೋಗಿದೆ. ಚಿಕ್ಲಿಹೊಳೆ ಜಲಾಶಯದಲ್ಲಿ ನೀರು ಇದ್ದಿದ್ದರೆ ಅರಣ್ಯದೊಳಗೆ ಹಾದು ಹೋಗಿರುವ ಕಾಲುವೆಯಲ್ಲಿ ಹರಿಯುತ್ತಿತ್ತು. ಈ ನೀರನ್ನು ಆನೆಕಾಡು ಅರಣ್ಯ ಪ್ರದೇಶದಲ್ಲಿ ಇರುವ ಸಾವಿರಾರು ಪ್ರಾಣಿಗಳು ಕುಡಿದು ತಮ್ಮ ದಾಹ ತಣಿಸಿಕೊಳ್ಳುತ್ತಿದ್ದವು. ಆದರೀಗ ಜಲಾಶಯವೇ ಬತ್ತಿ ಹೋಗಿರುವುದರಿಂದ ಕಾಲುವೆಯಲ್ಲಿ ನೀರಿಲ್ಲದೆ ಬಣಗುಡುತ್ತಿದೆ.
ಈ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಒಂದೆರಡು ಕೆರಗಳಿವೆ. ಅವುಗಳಲ್ಲಿ ಕಡಿಮೆ ನೀರಿದೆ. ಸದ್ಯ ಜಿಲ್ಲೆಯಲ್ಲಿ ಬರೋಬ್ಬರಿ 29 ರಿಂದ 30 ಡಿಗ್ರಿ ಸೆಲ್ಸಿಯಸ್ ಪ್ರಮಾಣದಲ್ಲಿ ಬಿಸಿಲು ಇದೆ. ಇದೇ ಬಿಸಿಲು ಇಲ್ಲವೇ ಇದಕ್ಕಿಂತ ಹೆಚ್ಚಿನ ಬಿಸಿಲು ಮುಂದುವರಿದಲ್ಲಿ ಈಗ ಕೆರೆಗಳಲ್ಲಿ ಇರುವ ನೀರು ಸಂಪೂರ್ಣ ಒಣಗಿ ಹೋಗುವ ಆಂತಕವಿದೆ. ಒಂದು ವೇಳೆ ಒಣಗಿ ಹೋದಲ್ಲಿ ಕಾಡು ಪ್ರಾಣಿಗಳು ಈಗಾಗಲೇ ಗ್ರಾಮಗಳತ್ತ ಮುಖ ಮಾಡಿರುವುದು ಸಾಮಾನ್ಯವಾಗಿದ್ದು, ಅದು ಇನ್ನಷ್ಟು ಜಾಸ್ತಿಯಾಗುವ ಆತಂಕವಿದೆ. ಹಾರಂಗಿ ಜಲಾಶಯದಲ್ಲೂ ನೀರು ವೇಗವಾಗಿ ಬತ್ತಿಹೋಗುತ್ತಿದ್ದು, ಈಗಾಗಲೇ ಜಲಾಶಯದ ನೀರು ತಳ ಸೇರಿದೆ.
ಅತ್ತೂರು ಅರಣ್ಯ ವ್ಯಾಪ್ತಿಯ ಸಾವಿರಾರು ಕಾಡು ಪ್ರಾಣಿ, ಪಕ್ಷಿಗಳು ಹಾರಂಗಿ ಜಲಾಶಯದ ನೀರನ್ನೇ ನಂಬಿಕೊಂಡು ತಮ್ಮ ಬದುಕು ದೂಡುತ್ತಿವೆ. ಒಂದು ವೇಳೆ ಹಾರಂಗಿ ಜಲಾಶಯದಲ್ಲಿ ನೀರು ಪೂರ್ಣ ಬತ್ತಿ ಹೋಯಿತ್ತೆಂದರೆ ಇಲ್ಲಿಯೂ ಕಾಡು ಪ್ರಾಣಿಗಳು ಸಂಕಷ್ಟಕ್ಕೆ ಸಿಲುಕಲಿವೆ. ಈ ಕುರಿತು ಕುಶಾಲನಗರ ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್ ಅವರನ್ನು ಕೇಳಿದರೆ ಸದ್ಯ ತಮ್ಮ ವಲಯ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ನೀರಿನ ಕೊರತೆಯಾಗಿಲ್ಲ. ಒಂದು ಕೆರೆಯಲ್ಲಿ ನೀರಿಲ್ಲದಿದ್ದರೂ ಮತ್ತೊಂದು ಕೆರೆಯಲ್ಲಿ ಇರುವ ನೀರನ್ನು ಕುಡಿದು ಬದುಕಿಕೊಳ್ಳುತ್ತವೆ.
ಭವಿಷ್ಯದಲ್ಲಿ ಬಡವರಿಗಾಗಿ ಮತ್ತಷ್ಟು ಗ್ಯಾರಂಟಿ ಯೋಜನೆ: ಸಚಿವ ಡಿ.ಸುಧಾಕರ್
ಒಂದು ವೇಳೆ ತೀವ್ರ ನೀರಿನ ಕೊರತೆಯಾದರೆ ಕುಡಿಯುವ ನೀರಿಗೆ ಏನು ಮಾಡಬೇಕು ಎಂದು ಯೋಚಿಸಿದ್ದೇವೆ ಎಂದಿದ್ದಾರೆ. ಆದರೆ ಕಾಡು ಪ್ರಾಣಿಗಳಿಗೆ ಕಾಡಿನಲ್ಲಿ ಕುಡಿಯುವ ನೀರಿನ ಕೊರತೆಯಾಗಿ ಕಾಫಿ ತೋಟ, ಗ್ರಾಮಗಳತ್ತ ಲಗ್ಗೆ ಹಿಡುತ್ತಿವೆ. ಇದರಿಂದ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕಾರ್ಮಿಕರು ಕಾಫಿ ತೋಟಗಳಿಗೆ ಕೆಲಸಗಳಿಗೆ ಬರುತ್ತಿಲ್ಲ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಈ ಬಾರಿ ತೀವ್ರ ಮಳೆ ಕೊರತೆಯಿಂದ ಬರಗಾಲ ಎದುರಾದ ಪರಿಣಾಮ ಜನರಿಗಷ್ಟೇ ಅಲ್ಲ ಕಾಡು ಪ್ರಾಣಿಗಳಿಗೂ ಕುಡಿಯುವ ನೀರಿನ ಕೊರತೆ ಶುರುವಾಗುವ ಸ್ಥಿತಿ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.