Online Gambling:ಆನ್‌ಲೈನ್‌ ಜೂಜು ಬಂದ್‌ ಮಾಡದಂತೆ  ಸಿಎಂಗೆ ಆಮಿಷ ಒಡ್ಡಿದ್ದರಂತೆ!

By Kannadaprabha NewsFirst Published Mar 15, 2022, 4:01 AM IST
Highlights

* ಆನ್‌ಲೈನ್‌ ಜೂಜು ನಿಷೇಧಿಸಲಾಗದ ಬಗ್ಗೆ ಸಿಎಂ ಅಸಹಾಯಕತೆ

* ತಿದ್ದುಪಡಿ ವಿಧೇಯಕ ತಂದರೂ ನ್ಯಾಯಾಲಯ ಮತ್ತೆ ಅವಕಾಶ ಕಲ್ಪಿಸಿದೆ

* ಜೂಜು ಉದ್ಯಮಿಗಳು ಕೋರ್ಟ್‌ನಿಂದ ತಡೆ ತರುವಷ್ಟುಪ್ರಭಾವಿಗಳು

* ಜೂಜು ನಿಷೇಧಿಸದಂತೆ ಸಿಎಂಗೆ ಲಂಚದ ಆಫರ್‌

ಬೆಂಗಳೂರು(ಮಾ. 15)  ಆನ್‌ಲೈನ್‌ ಜೂಜು (Online Gambling) ನಿಷೇಧದ ಕುರಿತು ವಿಧೇಯಕ ಮಂಡನೆ ಮಾಡುವ ವೇಳೆ ತಮ್ಮ ಮೇಲೆ ಒತ್ತಡ ಹಾಗೂ ಆಮಿಷಗಳೂ ಬಂದಿದ್ದವು. ನನ್ನ ಕ್ಷೇತ್ರಕ್ಕೆ 1 ಲಕ್ಷ ಕೊರೋನಾ (Coronavirus) ಲಸಿಕೆಯನ್ನು ಉಚಿತವಾಗಿ ಪೂರೈಸುವುದಾಗಿ ಒಬ್ಬರು ಪ್ರಭಾವ ಬೀರಿದ್ದರು ಎಂಬ ಕುತೂಹಲಕಾರಿ ವಿಚಾರವನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai)  ಬಹಿರಂಗಪಡಿಸಿದ್ದಾರೆ.

ಹಲವು ಆಮಿಷ ಹಾಗೂ ಒತ್ತಡಗಳು ಬಂದರೂ ಯಾವುದಕ್ಕೂ ಮಣಿಯದೆ ಆನ್‌ಲೈನ್‌ ಜೂಜು ನಿಷೇಧ ಮಾಡುವ ಕಾನೂನು ತಿದ್ದುಪಡಿ ವಿಧೇಯಕ ಜಾರಿಗೆ ತಂದರೂ ನ್ಯಾಯಾಲಯ ಮತ್ತೆ ಆನ್‌ಲೈನ್‌ ಜೂಜಿಗೆ ಅವಕಾಶ ಕಲ್ಪಿಸಿದೆ. ಹೀಗಾಗಿ ಆನ್‌ಲೈನ್‌ ಜೂಜು ನಿಷೇಧಿಸಲು ನಮ್ಮ ಕೈಯಲ್ಲಿ ಸಾಧ್ಯವಾಗಲಿಲ್ಲ.

ಹೀಗೆಂದು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸಹಾಯಕತೆ ವ್ಯಕ್ತಪಡಿಸಿದ ಘಟನೆ ಸೋಮವಾರ ವಿಧಾನಸಭೆಯಲ್ಲಿ ನಡೆದಿದೆ. ವಿಧಾನಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆ ವೇಳೆ ಮಾತನಾಡಿದ ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌, ಐಪಿಎಲ್‌ ಹೆಸರಿನಲ್ಲಿ ನಾನಾ ರೀತಿಯಲ್ಲಿ ಜೂಜು ನಡೆಯುತ್ತಿದೆ. ಐಪಿಎಲ್‌ ಮುಗಿಯುವ ವೇಳೆಗೆ ಹಲವು ಕುಟುಂಬಗಳು ಸರ್ವನಾಶವಾಗಲಿವೆ. ಗ್ರಾಮೀಣ ಭಾಗದಲ್ಲಿ ಇಸ್ಪೀಟ್‌ ದಂಧೆಯೂ ಜೋರಾಗಿದ್ದು, ಶಾಲಾ-ಕಾಲೇಜುಗಳ ಆವರಣದಲ್ಲೇ ರಾಜಾರೋಷವಾಗಿ ನಡೆಯುತ್ತಿದೆ. ಪೊಲೀಸ್‌ ಠಾಣೆಯವರು ಇದರ ಮೇಲೆ ನಿಗಾ ವಹಿಸಬೇಕು ಎಂದು ಸರ್ಕಾರದ ಗಮನ ಸೆಳೆದರು

ಮೆದುಳನ್ನು ಮಂಕಾಗಿಸಿ ಬದುಕನ್ನು ಬೀದಿಗೆ ತರುವ Online Gambling

ಇದಕ್ಕೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ಜೂಜು ನಿಯಂತ್ರಣಕ್ಕಾಗಿ ಇದ್ದ ಕಾನೂನಿನಲ್ಲಿನ ಲೋಪಗಳನ್ನು ಬಳಸಿಕೊಂಡು ಜೂಜು, ಇಸ್ಪೀಟ್‌ ದಂಧೆ ಎಗ್ಗಿಲ್ಲದೆ ನಡೆಯುತ್ತಿತ್ತು. ಸಾಮಾಜಿಕ ಕ್ಲಬ್‌ ಹೆಸರಿನಲ್ಲಿ ರಾಜಾರೋಷವಾಗಿ ದಂಧೆ ನಡೆಸಲಾಗುತ್ತಿತ್ತು. ಏಕೆಂದರೆ, ಪ್ರತ್ಯಕ್ಷವಾಗಿ ಸಿಕ್ಕಿ ಹಾಕಿಕೊಂಡರೂ 500 ರು. ದಂಡ ಪಾವತಿಸಿದರೆ ಠಾಣೆಯಲ್ಲೇ ಜಾಮೀನು ದೊರೆಯುತ್ತಿತ್ತು. ಇದಕ್ಕೆ ತಿದ್ದುಪಡಿ ತಂದು ಜೂಜನ್ನು ಪ್ರಜ್ಞಾಪೂರ್ವಕ ಅಪರಾಧ ಕೃತ್ಯವನ್ನಾಗಿ ಮಾಡಿದ್ದೇವೆ. 3-5 ವರ್ಷ ಜೈಲು ಶಿಕ್ಷೆಗೆ ಅವಕಾಶ ಕಲ್ಪಿಸಿದ್ದೇವೆ.

ಇನ್ನು ಆನ್‌ಲೈನ್‌ ಜೂಜು ನಿಷೇಧಿಸಲು ಹಲವು ಅಡೆ-ತಡೆಗಳ ನಡುವೆಯೂ ಉಭಯ ಸದನಗಳಲ್ಲಿ ವಿಧೇಯಕ ಮಂಡಿಸಿ ಅಂಗೀಕಾರ ಪಡೆಯಲಾಯಿತು. ಆದರೆ,ನ್ಯಾಯಾಲಯದಲ್ಲಿ ಮತ್ತೆ ಜೂಜು ಆಧಾರಿತ ಆನ್‌ಲೈನ್‌ ಗೇಮ್‌ಗಳಿಗೆ ಅವಕಾಶ ಮಾಡಿಕೊಟ್ಟಿದೆ. ಅವರು ಅಷ್ಟರ ಮಟ್ಟಿಗೆ ಪ್ರಭಾವ ಶಾಲಿಗಳು ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು.

ವಿಧೇಯಕ ಮಂಡಿಸುವ ವೇಳೆ ನನ್ನ ಮೇಲೆಯೇ ತೀವ್ರ ಪ್ರಭಾವ ಬೀರಿದ್ದರು. ಒಬ್ಬ ವ್ಯಕ್ತಿಯಂತೂ ನನ್ನ ಕ್ಷೇತ್ರಕ್ಕೆ 1 ಲಕ್ಷ ಕೊರೋನಾ ಲಸಿಕೆ ಉಚಿತವಾಗಿ ಕೊಡುತ್ತೇನೆ ಎಂದಿದ್ದರು.

 

click me!