
ಮಂಡ್ಯ(ಮಾ. 15) ತಿರುಪತಿ (Tirupati) ಮಾದರಿಯಲ್ಲಿ ಮೇಲುಕೋಟೆ (Melukote) ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಬದ್ಧವಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಘೋಷಿಸಿದ್ದಾರೆ.
ಮೇಲುಕೋಟೆಯ ದಳವಾಯಿ ಕೆರೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದರೊಂದಿಗೆ ತಿರುಪತಿ ಮಾದರಿಯಲ್ಲಿ ಮೇಲುಕೋಟೆಯನ್ನು ಅಭಿವೃದ್ಧಿಪಡಿಸಲಾಗುವುದು. ಆ ಮೂಲಕ ದೇಗುಲಗಳು ಕಲ್ಯಾಣಿಗಳು ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಭಗವಂತನ ಮುಂದೆ ನಿಂತಾಗ ನನ್ನ ಯೋಚನಾ ಲಹರಿ ಸ್ವಲ್ಪಕಾಲ ನಿಂತುಹೋಗಿತ್ತು. ಕ್ಷೇತ್ರದಲ್ಲಿ ಅಂತಹ ಶಕ್ತಿ ಇದೆ. ಹಾಗಾಗಿ ಈ ಕ್ಷೇತ್ರ ಅಭಿವೃದ್ಧಿ ಆಗಬೇಕು ಎನ್ನುವುದು ನನ್ನ ಆಶಯವಾಗಿದೆ ಎಂದರು.
ವೈಭವದ ವೈರಮುಡಿ ಉತ್ಸವ: ಕೊರೋನಾ ಸೋಂಕು ತೀವ್ರವಾಗಿದ್ದ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಸೊರಗಿದ್ದ ಐತಿಹಾಸಿಕ ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿ ವೈರಮುಡಿ ಉತ್ಸವ ಮೇಲುಕೋಟೆಯ ರಾಜಬೀದಿಯಲ್ಲಿ ಲಕ್ಷಾಂತರ ಭಕ್ತರ ಹರ್ಷೋದ್ಘಾರದ ನಡುವೆ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಭಗವಂತನ ಕಿರೀಟ ಎಂದೇ ನಂಬಿರುವ ವೈರಮುಡಿ ಕಿರೀಟವನ್ನು ಗರುಡಾರೂಢನಾದ ಶ್ರೀಚಲುವನಾರಾಯಣನ ಮುಡಿಗೆ ಅಲಂಕರಿಸಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವಾಮಿಗೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು. ಇದೇ ಮೊದಲ ಬಾರಿಗೆ ನಾಡಿನ ಮುಖ್ಯಮಂತ್ರಿ ಉತ್ಸವದಲ್ಲಿ ಪಾಲ್ಗೊಂಡದ್ದು ವಿಶೇಷವಾಗಿತ್ತು.
Naked Man In Temple: ಗಾಂಜಾ ಅಮಲು, ಮೇಲುಕೋಟೆ ದೇಗುಲಕ್ಕೆ AAP ಮುಖಂಡ ಬೆತ್ತಲೆ ಎಂಟ್ರಿ!
ರಾತ್ರಿ ಯಾಗಶಾಲೆ ಮತ್ತು ಗರುಡದೇವನ ಮೆರವಣಿಗೆಯ ನಂತರ ಮಹಾಮಂಗಳಾರತಿಯ ಪ್ರಾರ್ಥನೆ ಸಲ್ಲಿಸಿದ ಬಳಿಕ ರಾತ್ರಿ 8.30ಕ್ಕೆ ಆರಂಭವಾದ ವೈರಮುಡಿ ಉತ್ಸವ ಮುಂಜಾನೆ 3.30 ಗಂಟೆವರೆಗೂ ಸಾಂಗೋಂಪಾಂಗವಾಗಿ ನಡೆಯಿತು. ದೇವಾಲಯದ ಎಡಭಾಗದಲ್ಲಿ ನಿರ್ಮಿಸಲಾಗಿರುವ ಮಂಟಪದಲ್ಲಿ ಸ್ವಾಮಿಗೆ ಮತ್ತೊಮ್ಮೆ ಮಂಗಳಾರತಿ ಮಾಡಲಾಯಿತು. ನಂತರ ಚತುವೀರ್‍ದಿಗಳಲ್ಲಿ ವೈರಮುಡಿ ಉತ್ಸವ ಸಂಭ್ರಮದಿಂದ ನೆರವೇರಿತು.
ವೈರಮುಡಿ ಮೆರವಣಿಗೆ: ಮಂಡ್ಯ ಜಿಲ್ಲಾ ಖಜಾನೆಯಿಂದ ಬಿಗಿ ಪೊಲೀಸ್ ಭದ್ರತೆಯಲ್ಲಿ ತರಲಾದ ವೈರಮುಡಿ ಮತ್ತು ರಾಜಮುಡಿ ಕಿರೀಟ ಹಾಗೂ ವಜ್ರಾಭರಣಗಳನ್ನು ಪಾರ್ವತಿ ಮಂಟಪದ ಬಳಿಯಿಂದ ಬಂಗಾರದ ಪಲ್ಲಕ್ಕಿಯಲ್ಲಿಟ್ಟು ಭವ್ಯ ಮೆರವಣಿಗೆಯಲ್ಲಿ ಸಂಜೆ 7 ಗಂಟೆ ಸಮಯಕ್ಕೆ ಶ್ರೀಚಲುವನಾರಾಯಣಸ್ವಾಮಿ ದೇವಸ್ಥಾನಕ್ಕೆ ತರಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕರ ಸಮ್ಮುಖದಲ್ಲಿ ವೈರಮುಡಿಯನ್ನು ಪಡೆದು ಶ್ರೀರಾಮಾನುಜಾಚಾರ್ಯರ ಸನ್ನಿಧಿಯಲ್ಲಿ ಶ್ರೀಚಲುವನಾರಾಯಣಸ್ವಾಮಿ ಉತ್ಸವ ಮೂರ್ತಿಗೆ ಎಲ್ಲ ಆಭರಣಗಳೊಂದಿಗೆ ವೈರಮುಡಿ ಕಿರೀಟ ಧಾರಣೆ ಮಾಡಿ ಉತ್ಸವಕ್ಕೆ ಸಜ್ಜುಗೊಳಿಸಲಾಯಿತು. ರಾತ್ರಿ 8.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುಷ್ಪಾರ್ಚನೆ ಮಾಡಿದರು. ಬಳಿಕ ಶ್ರೀಚಲುವನಾರಾಯಣಸ್ವಾಮಿಯ ವೈರಮುಡಿ ಉತ್ಸವ ರಾಜಬೀದಿಗೆ ಬರುತ್ತಿದ್ದಂತೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತು.
ದೀಪಾಲಂಕಾರ: ವೈರಮುಡಿ ಉತ್ಸವದ ಅಂಗವಾಗಿ ಶ್ರೀಯೋಗಾನರಸಿಂಹಸ್ವಾಮಿ ದೇವಾಲಯ, ಶ್ರೀ ಚಲುವನಾರಾಯಣಸ್ವಾಮಿ ದೇವಾಲಯ, ಕಲ್ಯಾಣಿ, ಮಂಟಪಗಳಿಗೆ, ಸರ್ಕಾರಿ ಕಚೇರಿ ಕಟ್ಟಡಗಳಿಗೆ ಹಾಗೂ ಮೇಲುಕೋಟೆ ಶ್ರೀಯೋಗಾನರಸಿಂಹಸ್ವಾಮಿ ದೇವಸ್ಥಾನದ ಬೆಟ್ಟಸೇರಿದಂತೆ ವಿವಿಧೆಡೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿತ್ತು.
ಬಿಗಿ ಭದ್ರತೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಗಮನದ ಹಿನ್ನೆಲೆಯಲ್ಲಿ ಮೇಲುಕೋಟೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮದ ಹೊರ ವಲಯದಲ್ಲೇ ಖಾಸಗಿ ವಾಹನಗಳನ್ನು ತಡೆದು ನಿಲ್ಲಿಸಲಾಗಿತ್ತು. ಮುಖ್ಯಮಂತ್ರಿಗಳು ಪೂಜೆ ಸಲ್ಲಿಸಿ ತೆರಳಿದ ನಂತರವಷ್ಟೇ ಎರಡೂ ಕಡೆಗೆ ವಾಹನ ವ್ಯವಸ್ಥೆ ಮಾಡಲಾಯಿತು. ಮೇಲುಕೋಟೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್‌್ತ ಮಾಡಲಾಗಿತ್ತು.
ಮಂಡ್ಯ ಜೊತೆ ಹಳೇ ನಂಟು: ನನಗೆ ಮಂಡ್ಯದ ಜೊತೆ ಹಳೆಯ ನಂಟಿದೆ. 1990ರಿಂದ ಈ ಭಾಗದ ಜನರೊಂದಿಗೆ ಉತ್ತಮ ಸಂಪರ್ಕವಿದೆ. ಇಲ್ಲಿನ ಹೋರಾಟಗಾರರೊಂದಿಗೆ ನಾನೂ ಜೊತೆ ಸೇರಿ ಹೋರಾಟ ಮಾಡಿದ್ದೇನೆ. ಹಿಂದೆ ಕೆಆರ್‌ಎಸ್ ಗೇಟಿನಲ್ಲಿ ನೀರು ಸೋರಿಕೆ ಆಗುತ್ತಿದ್ದಾಗ ಗೋಣಿಚೀಲ ಹಾಕುವ ಮೂಲಕ ನೀರು ಹರಿಯುವುದನ್ನು ನಿಲ್ಲಿಸುತ್ತಿದ್ದರು. ಅದು ನನಗೆ ತುಂಬಾ ಬೇಸರ ಉಂಟು ಮಾಡಿತ್ತು. ಈ ಬಗ್ಗೆ ಎಂಜಿನಿಯರ್ ಒಬ್ಬರನ್ನು ಕೇಳಿದಾಗ ಮಹಾರಾಜರ ಶಾಪವಿದೆ ಎಂದಿದ್ದರು. ಆದರೆ ನಾನು ರಾತ್ರಿ ಹೋಗಿ ಯೋಚನೆ ಮಾಡಿದೆ. ಕೆಆರ್‌ಎಸ್ ಅಣೆಕಟ್ಟೆಯ ಗೇಟ್‌ಗಳನ್ನು ದುರಸ್ತಿ ಮಾಡಿಸಲೇಬೇಕು ಎಂದು ಪಣತೊಟ್ಟೆ. ಕೇವಲ ಒಂದೂವರೆ ವರ್ಷದಲ್ಲಿ 16 ಗೇಟುಗಳನ್ನು ಸರಿಪಡಿಸುವ ಮೂಲಕ ನೀರಿನ ಸೋರಿಕೆಯನ್ನು ತಡೆಗಟ್ಟಿದ ತೃಪ್ತಿ ನನಗಿದೆ ಎಂದರು.