
ಹುಳಿಯಾರು: ಕಾವೇರಿ ಕರ್ನಾಟಕದ ಸ್ವತ್ತು ಕರ್ನಾಟಕದವರಿಗೆ ಕುಡಿಯಲು ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರು ಹರಿಸುತ್ತಿರುವುದು ರಾಜಕೀಯ ಇಚ್ಚಾಶಕ್ತಿಯ ಕೊರತೆಯಾಗಿದ್ದು, ಇಂತ ರಾಜಕೀಯ ನಾಯಕರಿಗೆ ಮುಂದಿನ ದಿನಗಳಲ್ಲಿ ಪಾಠ ಕಲಿಸಬೇಕಾಗುವುದೆಂದು ಪ್ರತಿಭಟನಾನಿರತ ಕರವೇ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.
ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದನ್ನು ವಿರೋಧಿಸಿ ಎಲ್ಲಾ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು ಹುಳಿಯಾರಿನಲ್ಲಿ ಕರವೇ ಯಿಂದ ಪ್ರಮುಖ ಬೀದಿಗಳಲ್ಲಿ ಬೈಕ್ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ನಾಡ ಕಛೇರಿಗೆ ತೆರಳಿ ಕರ್ನಾಟಕ ಜನತೆಗೆ ಕುಡಿಯಲು ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಖಂಡನೀಯ. ನಮ್ಮ ನಾಯಕರ ಇಚ್ಚಾಶಕ್ತಿಯ ಕೊರತೆಯಿಂದ ಕವೇರಿ ತಮಿಳು ನಾಡಿಗೆ ಹರಿಯುತ್ತಿದೆ. ಇದು ಮುಂದುವರೆದರೆ ಉಗ್ರ ಹೋರಾಟದ ಹಾದಿ ತುಳಿಯುವ ಎಚ್ಚರಿಕೆ ಸಂದೇಶವನ್ನು ನಾಡ ಕಚೇರಿಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ನೀಡಿದರು. ಕರವೇ ಅಧ್ಯಕ್ಷ ಬೇಕ್ರಿ ಪ್ರಕಾಶ್, ಚನ್ನಬಸವಯ್ಯ, ಗವಿರಂಗನಾಥ್ ಗೌಡಿ, ದಿವಾಕರ, ರಘು, ಮಂಜು ಮುಂತಾದವರು ಇದ್ದರು.
ಕಾವೇರಿ ವಿಚಾರ ರಾಜಕೀಯ ಸಲ್ಲ
ರಾಮನಗರ(ಸೆ.28): ವಿರೋಧ ಮಾಡುವುದೇ ವಿರೋಧ ಪಕ್ಷದ ಕೆಲಸ. ಕಾವೇರಿ ಹೆಸರಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ರಾಜಕೀಯ ಲಾಭಕ್ಕಾಗಿ ಈ ಕೆಲಸ ಮಾಡುತ್ತಿರಬಹುದು. ಆದರೆ, ಇದರಲ್ಲಿ ಅವರಿಗೆ ರಾಜಕೀಯ ಪ್ರತಿಫಲ ದೊರೆಯುವುದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ಹೆಸರಿನಲ್ಲಿ ಬಿಜೆಪಿ - ಜೆಡಿಎಸ್ ಪಕ್ಷಗಳು ರಾಜಕೀಯ ಮಾಡಲು ಹೊರಟಿವೆ. ಜನರು ಬುದ್ದಿವಂತರಿದ್ದು, ಅವರಿಗೆ ಎಲ್ಲವೂ ತಿಳಿದಿದೆ. ಕಾವೇರಿ ವಿವಾದ ಒಂದು ಸರ್ಕಾರಕ್ಕೆ ಸೀಮಿತವಾಗಿಲ್ಲ. ಅದು ಈ ಹಿಂದಿನ ಸಿಎಂ ಆಗಿದ್ದವರಿಗೂ ತಿಳಿದಿದೆ. ಕಾವೇರಿ ಪ್ರಾಧಿಕಾರದ ರಚನೆ ಬಳಿಕ ಸುಪ್ರೀಂಕೋರ್ಟ್, ಉಭಯ ರಾಜ್ಯಗಳ ಸರ್ಕಾರ, ಕೇಂದ್ರ ಸರ್ಕಾರಗಳ ಪಾಲು ಅದರಲ್ಲಿದೆ. ಇದಕ್ಕಾಗಿ ಕಾನೂನು ಹೋರಾಟ ನಡೆಸುತ್ತಿದ್ದೇವೆ. ಅಕ್ಟೊಂಬರ್ ವರೆಗೂ ಅಷ್ಟೆ ನಮ್ಮಲ್ಲಿ ಮಳೆಯಾಗಬಹುದು. ಹೀಗಾಗಿ ಕನಿಷ್ಠ ಮಟ್ಟದಲ್ಲಿ ನೀರು ಬಿಡುವ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಹೇಳಿದರು.
ಕಾವೇರಿ ವಿಚಾರದಲ್ಲಿ ಒಗ್ಗಟ್ಟಿಂದ ಮಾತನಾಡಿ: ಸಚಿವ ದಿನೇಶ್ ಗುಂಡೂರಾವ್
ಹೋರಾಟಗಾರರ ಪರವಾಗಿ ನಮ್ಮ ಸರ್ಕಾರವೂ ಇದೆ. ಜನಪರ ಹೋರಾಟ ನಡೆಯುವುದೇ ಇದರ ಮೂಲ ಉದ್ದೇಶವಾಗಿರಲಿ. ಯಾವ ಬಂದ್ ಅನ್ನು ಕಾನೂನಿನ ಪ್ರಕಾರ ಮಾಡುವಂತಿಲ್ಲ. ಜನಪರ ಹೋರಾಟವಾಗಿದ್ದರಿಂದ ಶಾಂತಿಯುತ ಹೋರಾಟ ನಡೆಯಬೇಕು. ತಮಿಳುನಾಡಿನ ಬೇಡಿಕೆಯನ್ನೂ ಸಹ ನಿರ್ವಹಣಾ ಪ್ರಾಧಿಕಾರ ಈಡೇರಿಸಿಲ್ಲ. ಪ್ರಾಧಿಕಾರ ಬೇಡಿಕೆಗಿಂತ ಕಡಿಮೆ ನೀರು ಬಿಡಲು ಹೇಳಿರುವುದು ನಮಗೂ ಒಳ್ಳೆಯದೇ ಆಗಿದೆ. ಹೀಗಾಗಿ ಈ ಸಂದರ್ಭದಲ್ಲಿ ಸೂಕ್ಷ್ಮವಾಗಿ ನಡೆಯಬೇಕಿದೆ ಎಂದು ಹೇಳಿದರು.
ನಮ್ಮ ಸಲಹೆ ಸ್ವೀಕರಿಸಿದ್ರೆ ನೀರು ಉಳಿಯುತ್ತಿತ್ತು ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಇದರಲ್ಲಿ ಯಾವುದೇ ಗಾಂಭೀರ್ಯತೆ ಇಲ್ಲ. ಜನರ ಒಳಿತಿಗೆ ಅವರೇ ಸಲಹೆ ನೀಡಬಹುದಿತ್ತು. ಅದನ್ನು ನಾವೇ ಕೇಳಬೇಕಿತ್ತಾ? ಅವರು ಮಾಧ್ಯಮಕ್ಕೆ ಸುಮ್ಮನೆ ಹೇಳಿಕೆ ನೀಡುತ್ತಿದ್ದಾರೆ.