ಮೈಸೂರು ದಸರಾ: ಮಾವುತರು, ಕಾವಾಡಿಗಳಿಗೆ ಊಟ ಬಡಿಸಿದ ಸಚಿವ ಮಹದೇವಪ್ಪ

By Kannadaprabha NewsFirst Published Sep 30, 2023, 10:22 AM IST
Highlights

ಮೈಸೂರು ಅರಮನೆಯ ಮಂಡಳಿಯಿಂದ ಅರಮನೆ ಆವರಣದಲ್ಲಿ ಏರ್ಪಡಿಸಿದ್ದ ಉಪಾಹಾರ ಕೂಟದಲ್ಲಿ ಬೇಳೆ ಹೋಳಿಗೆ, ತುಪ್ಪ, ತಟ್ಟೆ ಇಡ್ಲಿ, ಸಾಂಬಾರು, ಚಟ್ನಿ, ಮಸಾಲೆ ದೋಸೆ, ಸಾಗು, ಉದ್ದಿನ ವಡೆ, ಟೊಮೆಟೋ ಬಾತ್, ಕೇಸರಿ ಬಾತ್ ಬಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು, ನಂತರ ಮಾವುತರ ಮತ್ತು ಕಾವಾಡಿಗಳೊಂದಿಗೆ ಕುಳಿತು ತಾವು ಸಹ ಉಪಾಹಾರ ಸೇವಿಸಿದರು. 

ಮೈಸೂರು(ಸೆ.30): ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿರುವ ಗಜಪಡೆಯ ಮಾವುತರು, ಕಾವಾಡಿಗರು ಮತ್ತು ಅವರ ಕುಟುಂಬದ ಸದಸ್ಯರಿಗೆ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಶುಕ್ರವಾರ ಬೆಳಗ್ಗೆ ಉಪಾಹಾರ ಬಡಿಸಿದರು.

ಮೈಸೂರು ಅರಮನೆಯ ಮಂಡಳಿಯಿಂದ ಅರಮನೆ ಆವರಣದಲ್ಲಿ ಏರ್ಪಡಿಸಿದ್ದ ಉಪಾಹಾರ ಕೂಟದಲ್ಲಿ ಬೇಳೆ ಹೋಳಿಗೆ, ತುಪ್ಪ, ತಟ್ಟೆ ಇಡ್ಲಿ, ಸಾಂಬಾರು, ಚಟ್ನಿ, ಮಸಾಲೆ ದೋಸೆ, ಸಾಗು, ಉದ್ದಿನ ವಡೆ, ಟೊಮೆಟೋ ಬಾತ್, ಕೇಸರಿ ಬಾತ್ ಬಡಿಸಿದ ಸಚಿವರು, ನಂತರ ಮಾವುತರ ಮತ್ತು ಕಾವಾಡಿಗಳೊಂದಿಗೆ ಕುಳಿತು ತಾವು ಸಹ ಉಪಾಹಾರ ಸೇವಿಸಿದರು. ಜೊತೆಗೆ ಟೀ, ಕಾಫಿ ಸಹ ವ್ಯವಸ್ಥೆ ಮಾಡಲಾಗಿತ್ತು.

ಸಂಕಷ್ಟ ಸೂತ್ರ ಇಲ್ಲದಿರುವುದೇ ಕಾವೇರಿ ಸಮಸ್ಯೆಗೆ ಕಾರಣವಾಗಿದೆ: ಸಚಿವ ಮಹದೇವಪ್ಪ

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಎಚ್.ಸಿ.ಮಹದೇವಪ್ಪ, ದಸರಾ ಮಹೋತ್ಸವಕ್ಕೆ ಭಾಗವಹಿಸುವ ಮಾವುತ ಮತ್ತು ಕಾವಾಡಿಗರಿಗೆ ಪ್ರತೀ ವರ್ಷದಂತೆ ಸಾಂಪ್ರದಾಯಿಕವಾಗಿ ಉಪಾಹಾರದ ಕೂಟ ಏರ್ಪಡಿಸಲಾಗಿದೆ. ಅದರಂತೆ ಈ ಬಾರಿಯೂ ಮಾವುತ, ಕಾವಾಡಿಗರ ಕುಟುಂಬ ಸದಸ್ಯರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ ಎಂದರು.

ದಸರಾ ಮಹೋತ್ಸವದ ಸಂದರ್ಭದಲ್ಲಿ ಕಾಡನ್ನು ಬಿಟ್ಟು ನಗರಕ್ಕೆ ಬಂದಿರುವ ಮಾವುತ ಮತ್ತು ಕಾವಾಡಿಗರ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯ ನೀಡಲಾಗಿದೆ‌. ಮಕ್ಕಳಿಗೆ ವಿದ್ಯಾಭ್ಯಾಸದ ಸಮಸ್ಯೆ ಉಂಟಾಗಬಾರದೆಂದು ಅರಮನೆ ಆವರಣದಲ್ಲಿ ತಾತ್ಕಾಲಿಕವಾಗಿ ಟೆಂಟ್ ಶಾಲೆಯನ್ನು ತೆರೆದು, ಶಿಕ್ಷಕರನ್ನು ನೇಮಿಸಿ ಓದು, ಬರಹ ಕಲಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಅದರಂತೆ ಅವರ ಆರೋಗ್ಯದ ಹಿತದೃಷ್ಟಿಯಿಂದಲೂ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿ ಎಲ್ಲರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದರು.

ಯೋಗಕ್ಷೇಮ ವಿಚಾರಿಸಿದ ಸಚಿವರು:

ಉಪಾಹಾರ ಸೇವಿಸಿದ ಬಳಿಕ ದಸರಾ ಗಜಪಡೆಯನ್ನು ಪೋಷಣೆ ಮಾಡುತ್ತಿರುವ ಮಾವುತರು ಹಾಗೂ ಕಾವಾಡಿಗರ ಯೋಗಕ್ಷೇಮ ವಿಚಾರಿಸಿ ಸಚಿವರು, ಕಾಡಿನ ಸಂಪತ್ತೇ ನಾಡಿನ ಸಂಪತ್ತು. ಕಾಡಿನ ಸಂರಕ್ಷಕರಾದ ನೀವು, ಅರಣ್ಯ ಸಂಪತ್ತಿನ ಭಾಗವೇ ಆಗಿದ್ದೀರಿ. ನಿಮಗೆ ಅಗತ್ಯವಿರುವ ಮೂಲಭೂತ ಸೌಕರ್ಯವನ್ನು ಸರ್ಕಾರದಿಂದ ಒದಗಿಸಿಕೊಡಲಾವುದು ಎಂದು ಭರವಸೆ ನೀಡಿದರು.

ಉಪಾಹಾರ ಸೇವನೆಗೂ ಮುನ್ನ ಹಸಿರು ಕ್ರಾಂತಿಯ ಪಿತಾಮಹಾ, ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಅವರ ನಿಧನದ ಹಿನ್ನೆಲೆ ಒಂದು ನಿಮಿಷ ಮೌನಾಚರಣೆ ಮೂಲಕ ಗೌವರ ಸಲ್ಲಿಸಲಾಯಿತು.

ಶಾಸಕರಾದ ತನ್ವೀರ್ ಸೇಠ್, ಕೆ. ಹರೀಶ್ ಗೌಡ, ವಿಧಾನಪರಿಷತ್ತು ಸದಸ್ಯರಾದ ಡಾ.ಡಿ. ತಿಮ್ಮಯ್ಯ, ಸಿ.ಎನ್. ಮಂಜೇಗೌಡ, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಜಿಪಂ ಸಿಸಿಇಒ ಕೆ.ಎಂ. ಗಾಯತ್ರಿ, ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಸಿಸಿಎಫ್ ಡಾ. ಮಾಲತಿಪ್ರಿಯಾ, ಡಿಸಿಎಫ್ ಸೌರಭಕುಮಾರ್, ಅಮರನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ, ಎಸಿಪಿ ಚಂದ್ರಶೇಖರ್ ಮೊದಲಾದವರು ಇದ್ದರು.

ಟಿಪ್ಪು ಸಮಾಧಿ ಬಳಿ ಅಶ್ಲೀಲ ನೃತ್ಯದ ಶೂಟಿಂಗ್‌: ಶಾಸಕ ತನ್ವೀರ್‌ ಸೇಠ್‌ ವಿರುದ್ಧ ಹರಿಹಾಯ್ದ ಎಸ್‌ಡಿಪಿಐ

47 ನಿಮಿಷ ತಡವಾಗಿ ಬಂದ ಸಚಿವರು!

ದಸರಾ ಆನೆ ಮಾವುತರು ಮತ್ತು ಕಾವಾಡಿಗಳಿಗೆ ಮೈಸೂರು ಅರಮನೆ ಆವರಣದಲ್ಲಿ ಶುಕ್ರವಾರ ಬೆಳಗ್ಗೆ 9ಕ್ಕೆ ಉಪಾಹಾರ ಕೂಟ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು 47 ನಿಮಿಷ ತಡವಾಗಿ ಆಗಮಿಸಿದರು.

9 ಗಂಟೆ ಬದಲಾಗಿ 9.47ಕ್ಕೆ ಆಗಮಿಸಿದ ಸಚಿವರು ಉಪಾಹಾರ ಬಡಿಸುವಷ್ಟರಲ್ಲಿ 10 ಗಂಟೆ ಆಗಿತ್ತು. ಇದರಿಂದ ಮಾವುತರು, ಕಾವಾಡಿಗಳು 1 ಗಂಟೆ ತಡವಾಗಿ ಉಪಾಹಾರ ಸೇವಿಸಿದರು. ಇನ್ನೂ ಸಚಿವರೊಂದಿಗೆ ಆಗಮಿಸಿದ್ದ ಮುಖಂಡರು, ಬೆಂಬಲಿಗರೇ ಮಾವುತರು, ಕಾವಾಡಿಗಳಿಗೆ ವ್ಯವಸ್ಥೆ ಮಾಡಲಾಗಿದ್ದ ಸಾಲಿನಲ್ಲಿ ಉಪಾಹಾರಕ್ಕೆ ಕುಳಿತುಕೊಂಡರು. ಇದರಿಂದಾಗಿ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ಜಿಪಂ ಸಿಇಒ, ಸಿಸಿಎಫ್ ಸೇರಿದಂತೆ ಪ್ರಮುಖ ಅಧಿಕಾರಿಗಳಿಗೆ ಜಾಗವಿಲ್ಲದೇ ಹೆಚ್ಚುವರಿ ಟೇಬಲ್ ಹಾಕಬೇಕಾಯಿತು. ಹಾಗೆಯೇ, ಹಲವು ಮಾವುತರು, ಕಾವಾಡಿಗರ ಕುಟುಂಬದವರು ಎರಡನೇ ಪಂಕ್ತಿಯಲ್ಲಿ ಉಪಾಹಾರ ಸೇವಿಸಬೇಕಾಯಿತು.

click me!