BBMP Election 2022: 2 ದಿನದಲ್ಲಿ ಬಿಬಿಎಂಪಿ ವಾರ್ಡ್‌ ಪುನರ್‌ ವಿಂಗಡಣೆ ವರದಿ

Published : May 26, 2022, 04:45 AM IST
BBMP Election 2022: 2 ದಿನದಲ್ಲಿ ಬಿಬಿಎಂಪಿ ವಾರ್ಡ್‌ ಪುನರ್‌ ವಿಂಗಡಣೆ ವರದಿ

ಸಾರಾಂಶ

*   ಪ್ರತಿ ವಾರ್ಡ್‌ಗೆ 35 ರಿಂದ 37 ಸಾವಿರ ಜನಸಂಖ್ಯೆ ನಿಗದಿ *  ಒಂದೆರಡು ದಿನದಲ್ಲಿ ಸರ್ಕಾರಕ್ಕೆ ವರದಿ *  ಒಬಿಸಿ ಮೀಸಲಾತಿಗೆ ಮಾಹಿತಿ ಸಲ್ಲಿಕೆ  

ಬೆಂಗಳೂರು(ಮೇ.26): ಬಿಬಿಎಂಪಿ ವಾರ್ಡ್‌ ಪುನರ್‌ ವಿಂಗಡಣೆ ಕಾರ್ಯ ಪೂರ್ಣಗೊಳಿಸಿದ್ದು, ಒಂದೆರಡು ದಿನದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 2010ರಲ್ಲಿ ಬಿಬಿಎಂಪಿ ರಚನೆ ವೇಳೆ ಕೈಬಿಡಲಾಗಿದ್ದ ಹಳ್ಳಿಗಳನ್ನು ಈಗ ಸೇರ್ಪಡೆ ಮಾಡಲಾಗುತ್ತದೆ. ಹೆಮ್ಮಿಗೆಪುರ, ಅಂಬೇಡ್ಕರ್‌ ನಗರ ಗ್ರಾಮಗಳು ಬಿಬಿಎಂಪಿಗೆ ಸೇರ್ಪಡೆಯಾಗಲಿವೆ ಇದರಿಂದ 6 ಸಾವಿರ ಜನಸಂಖ್ಯೆ ಹೆಚ್ಚಲಿದೆ. ಉಳಿದಂತೆ ಹಳೆಯ ಗಡಿಯೊಳಗೆ ಬಿಬಿಎಂಪಿ ವಾರ್ಡ್‌ ಮರುವಿಂಗಡಿಸಿ 243ಕ್ಕೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.

BBMP Election: ಬಿಬಿಎಂಪಿ ಚುನಾವಣೆ ಮಾಡೇ ಮಾಡ್ತೇವೆ: ಸಚಿವ ಅಶೋಕ್‌

35-37 ಸಾವಿರ ಜನಸಂಖ್ಯೆಯ ವಾರ್ಡ್‌:

2011ರ ಜನಗಣತಿ ಪ್ರಕಾರ ನಗರದಲ್ಲಿ 84 ಲಕ್ಷ ಜನಸಂಖ್ಯೆ ಇದೆ, ಇದನ್ನು ಆಧರಿಸಿ ವಾರ್ಡ್‌ ಮರು ವಿಂಗಡಣೆ ಮಾಡಲಾಗಿದ್ದು, ಪ್ರತಿ ವಾರ್ಡ್‌ನಲ್ಲಿ 35 ಸಾವಿರದಿಂದ 37 ಸಾವಿರ ಜನಸಂಖ್ಯೆ ಇರಲಿದೆ. ಯಾವುದೇ ವಾರ್ಡ್‌ ಎರಡು ವಿಧಾನಸಭಾ ವ್ಯಾಪ್ತಿಗೆ ಬರದಂತೆ ವಿಂಗಡಿಸಲಾಗುತ್ತಿದೆ ಎಂದು ವಿವರಿಸಿದರು.

ವಾರ್ಡ್‌ಗಳಿಗೆ ಹೊಸ ಹೆಸರು

ವಾರ್ಡ್‌ಗಳ ಸಂಖ್ಯೆ ಹೆಚ್ಚಳ ಹಾಗೂ ಜನಸಂಖ್ಯೆ ಆಧಾರದಲ್ಲಿ ವಾರ್ಡ್‌ ಮರುವಿಂಗಡಣೆ ಮಾಡುತ್ತಿರುವುದರಿಂದ ಹಲವು ವಾರ್ಡ್‌ಗಳ ಹೆಸರು ಬದಲಾಗಲಿದೆ. ಕೆಲ ವಾರ್ಡ್‌ಗಳಲ್ಲಿ ಜನಸಂಖ್ಯೆ ಕಡಿಮೆಯಿದ್ದರೆ ಅವುಗಳನ್ನು ಬೇರೆ ವಾರ್ಡ್‌ಗೆ ವಿಲೀನಗೊಳಿಸಲಾಗುತ್ತಿದೆ. ಹೊಸ ವಾರ್ಡ್‌ಗಳಿಗೆ ಪ್ರತ್ಯೇಕ ಹೆಸರನ್ನಿಡಲಾಗುವುದು. ಸದ್ಯ ಇರುವ 8 ವಲಯಗಳ ಹೆಚ್ಚಳದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಬಿಬಿಎಂಪಿ ಕಾಯ್ದೆಯಂತೆ ರಚಿಸಲಾಗಿರುವ ವಲಯ ಸಮಿತಿ ಆ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು. ಈಗಿರುನ ಕಾರ್ಯದೊತ್ತಡಕ್ಕೆ ಸಂಬಂಧಿಸಿದಂತೆ ವಲಯ ಹೆಚ್ಚಳದ ಅಗತ್ಯವಿದೆ. ಪೂರ್ವ, ಪಶ್ಚಿಮ, ದಕ್ಷಿಣ ವಲಯಗಳಲ್ಲಿ ಹೆಚ್ಚಿನ ಕೆಲಸವಿದ್ದರೆ ದಾಸರಹಳ್ಳಿ, ಯಲಹಂಕದಂತಹ ವಲಯಗಳಲ್ಲಿನ ಕಾರ್ಯಭಾರ ಕಡಿಮೆಯಿದೆ. ಹೀಗಾಗಿ ವಲಯ ಹೆಚ್ಚಳದ ಅವಶ್ಯಕತೆಯಿದೆ ಎಂದು ಹೇಳಿದರು.

ಬಿಬಿಎಂಪಿ ಎಲೆಕ್ಷನ್‌ ವಿಳಂಬಕ್ಕೆ ಮತ್ತೆ ಮನವಿ?

ಬಿಬಿಎಂಪಿ ವಾರ್ಡ್‌ ಮರುವಿಂಗಡಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಚ್‌ 8 ವಾರಗಳ ಗಡುವು ನೀಡಿದೆ. ಅದರಲ್ಲಿ ಈಗಾಗಲೆ ಒಂದು ವಾರ ಕಳೆದು ಹೋಗಿದ್ದು, 7 ವಾರಗಳಷ್ಟೇ ಉಳಿದಿವೆ. ಈ ಅವಧಿಯಲ್ಲಿ ವಾರ್ಡ್‌ ಮರು ವಿಂಗಡಣೆ ಹಾಗೂ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದೆ ಎಂದರು.

ಒಬಿಸಿ ಮೀಸಲಾತಿಗೆ ಮಾಹಿತಿ ಸಲ್ಲಿಕೆ

ವಾರ್ಡ್‌ ಮರುವಿಂಗಡಣೆ ಜತೆಗೆ ಒಬಿಸಿ ಮೀಸಲಾತಿ ನಿಗದಿ ಮಾಡಬೇಕಿದೆ. ಅದಕ್ಕಾಗಿ 1992ರಿಂದ 2015ರವರೆಗಿನ ಚುನಾವಣೆಯಲ್ಲಿ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳ ವಿವರ, ಅವರು ಯಾವ ವರ್ಗಕ್ಕೆ ಸೇರಿದವರು ಎಂಬುದು ಸೇರಿ ಇನ್ನಿತರ ಮಾಹಿತಿಯನ್ನು ಸರ್ಕಾರ ನೇಮಿಸಿರುವ ಭಕ್ತವತ್ಸಲ ಸಮಿತಿಗೆ ಸಲ್ಲಿಸಲಾಗಿದೆ ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ ಮಾಹಿತಿ ನೀಡಿದರು.
 

PREV
Read more Articles on
click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್: ಪೊಲೀಸರ ಬಲೆಗೆ ಬಿದ್ದ ಮೂವರು!