
ಚಿತ್ರದುರ್ಗ(ನ.03): ವಕ್ಫ್ ಆಸ್ತಿ ಗದ್ದಲದಿಂದ ರೈತರು, ಸಾರ್ವಜನಿಕರಿಗೆ ಆತಂಕ ಎದುರಾಗಿದೆ. ರಾಜ್ಯ ಸರ್ಕಾರ ಸೂಕ್ತ ಕಾನೂನು ಜಾರಿಗೆ ತರಬೇಕು. ಸಾರ್ವಜನಿಕ ಆಸ್ತಿ ಮೇಲೆ ವಕ್ಫ್ ಹಿಡಿತ ತಡೆಯಬೇಕು ಎಂದು ಶಿವಶರಣ ಮಾದಾರ ಚನ್ನಯ್ಯ ಮಠದ ಬಸವಮೂರ್ತಿ ಮಾದಾರ ಚನ್ನಯ್ಯಶ್ರೀ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿ ವಕ್ಫ್ ಬೋರ್ಡ್ ವಿಚಾರದಲ್ಲಿ ವಿವಾದ ಹಿನ್ನೆಲೆಯಲ್ಲಿ ಇಂದು(ಭಾನುವಾರ) ನಗರದಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಮಾದಾರ ಚನ್ನಯ್ಯಶ್ರೀಗಳು, ವಿಜಯಪುರ, ಹಾವೇರಿ, ಬಾಗಲಕೋಟೆ, ಯಾದಗಿರಿ ಸೇರಿ ಹಲವೆಡೆ ವಕ್ಫ್ ವಿವಾದ ಭುಗಿಲೆದ್ದಿದೆ. ಹಲವು ಜಿಲ್ಲೆಗಳಲ್ಲಿ ರೈತರಿಗೆ ಭೂಮಿ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಸಚಿವರು ರೈತರಿಗೆ ನೋಟಿಸ್ ಜಾರಿಗೆ ಆದೇಶಿಸಿದ್ದು ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರ ಸಮಗ್ರ ತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
'ವಕ್ಫ್ ಬೋರ್ಡ್ ರಿಯಲ್ ಎಸ್ಟೇಟ್ ಕಂಪನಿ..' ಓವೈಸಿಗೆ ತಿರುಗೇಟು ನೀಡಿದ ಟಿಟಿಡಿ ಚೇರ್ಮನ್!
ಸಚಿವ ಸಂಪುಟದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ವಕ್ಫ್ ಆಕ್ರಮಣ ನೀತಿಗೆ ಸರ್ಕಾರ ಬ್ರೇಕ್ ಹಾಕಬೇಕು. ಅಗತ್ಯವಾದಲ್ಲಿ 1975ರ ಗೆಜೆಟ್ ನೋಟಿಫಿಕೇಷನ್ ಹಿಂಪಡೆಯಬೇಕು. ಸಿಎಂ ಸಿದ್ದರಾಮಯ್ಯ ರೈತರಿಗೆ ನೀಡಿದ ನೋಟಿಸ್ ವಾಪಸ್ ಪಡೆದಿರಬಹುದು. ಸಿಎಂ ಕ್ರಮ ತಾತ್ಕಾಲಿಕ ಆಗುತ್ತದೆ. ಮುಂದಿನ ಸರ್ಕಾರ ಇದೇ ನೀತಿ ಅನುಸರಿಸುವ ಗ್ಯಾರಂಟಿ ಇಲ್ಲ. ಸರ್ಕಾರ ಶಾಶ್ವತ ಪರಿಹಾರ ಈಗಲೇ ಕಂಡು ಹಿಡಿಯಬೇಕು. ಜನರ ಆತಂಕ ದೂರಾಗಿಸಲು ಕಟ್ಟುನಿಟ್ಟಿನ, ಸ್ಪಷ್ಟ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಶ್ರೀಗಳು ಆಗ್ರಹಿಸಿದ್ದಾರೆ.