ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ್ದ ವಿಜಯಪುರದ ಮಠಾಧೀಶರು..!

By Girish Goudar  |  First Published Nov 2, 2024, 11:46 PM IST

ಇಂಚಗೇರಿ ಮಠದ ಗುರುಗಳಾಗಿದ್ದ ಮಾಧವಾನಂದ ಶ್ರೀಗಳು ಕರ್ನಾಟಕ ಏಕೀಕರಣದಲ್ಲಿ ಮಹತ್ವದ ಪಾತ್ರವಹಿಸಿದ್ದರು‌. ಅಂದು ಸಂಸ್ಥಾನ ರೂಪದಲ್ಲಿ ತುಂಡಾಗಿದ್ದ ನಾಡು ಅಖಂಡ ಕರ್ನಾಟಕವಾಗಬೇಕು ಅಂತಾ ಮಾಧವಾನಂದ ಪ್ರಭುಜಿಗಳು 21 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ್ದರು.


ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ(ನ.02):  ಸ್ವಾತಂತ್ರ್ಯ ಹೋರಾಟದ ಬಳಿಕ ಹಲವು ಸಂಸ್ಥಾನಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನ ಒಂದುಗೂಡಿಸಲು ಹಲವು ಸಂಘ-ಸಂಸ್ಥೆಗಳು ಶ್ರಮಿಸಿವೆ. ವಿಶೇಷ ಅಂದ್ರೆ ವಿಜಯಪುರ ಜಿಲ್ಲೆಯ ಮಠದ ಮಠಾಧೀಶರೊಬ್ಬರು ಕರ್ನಾಟಕ ಏಕೀಕರಣಕ್ಕಾಗಿ ಉಪವಾಸ ಸತ್ಯಾಗ್ರಹದ ಮೂಲಕ ಹೋರಾಡಿದ್ದರು. ಕನ್ನಡ ರಾಜ್ಯೋತ್ಸವದ ಮರುದಿನವೇ ಶ್ರೀಗಳ ಜನ್ಮದಿನೋತ್ಸವ ನಡೆಯೋದು ವಿಶೇಷ. ಈ ಸಂದರ್ಭದಲ್ಲಿ ಕರ್ನಾಟಕ ಏಕೀಕರಣ ಸೇರಿದಂತೆ ಸ್ವಾತಂತ್ರ್ಯ ಚಳುವಳಿ, ಗೋವಾ ವಿಮೋಚನೆ, ರಜಾಕರ ಹಾವಳಿ ವಿರುದ್ಧ ಹೋರಾಡಿದ್ದ ಶ್ರೀಗಳ ಜೀವನ ಚರಿತ್ರೆ ಪಠ್ಯದಲ್ಲಿ ಸೇರ್ಪಡೆಯಾಗಬೇಕು ಎಂದು ಮಠದ ಭಕ್ತರು ಸರ್ಕಾರದ ಎದುರು ಬೇಡಿಕೆ ಇಟ್ಟಿದ್ದಾರೆ..

Latest Videos

undefined

ಏಕೀಕರಣಕ್ಕಾಗಿ ಹೋರಾಡಿದ್ದ ದೇವರು..!

ಸ್ವಾತಂತ್ರ್ಯ ಹೋರಾಟದ ಬಳಿಕ ದೇಶಕ್ಕೆ‌ ಸ್ವಾಂತ್ರ್ಯವೇನೋ ಸಿಕ್ಕಿತ್ತು. ಆದ್ರೆ ನಮ್ಮ ಕನ್ನಡ ನಾಡು ಸಂಸ್ಥಾನಗಳಾಗಿ ಹರಿದು ಹಂಚಿಹೋಗಿತ್ತು. ಇಂತಹ ಚಲುವ ಕನ್ನಡ ನಾಡನ್ನ ಕಟ್ಟುವಲ್ಲಿ ಅನೇಕ ಹೋರಾಟಗಾರರ ಶ್ರಮವಿದೆ. ಅದ್ರಲ್ಲು ಜಾತ್ಯಾತೀತ ಮಠ ಅಂತಲೆ ಹೆಸರುವಾಸಿಯಾಗಿರುವ ವಿಜಯಪುರ ಜಿಲ್ಲೆಯ ಇಂಚಗೇರಿ ಮಠ ಮುಂಚೂಣಿಯಲ್ಲಿದೆ. ಕಾರಣ ಶ್ರೀಮಠದ ಗುರುಗಳಾಗಿದ್ದ ಮಾಧವಾನಂದ ಶ್ರೀಗಳು ಕರ್ನಾಟಕ ಏಕೀಕರಣದಲ್ಲಿ ಮಹತ್ವದ ಪಾತ್ರವಹಿಸಿದ್ದರು‌. ಅಂದು ಸಂಸ್ಥಾನ ರೂಪದಲ್ಲಿ ತುಂಡಾಗಿದ್ದ ನಾಡು ಅಖಂಡ ಕರ್ನಾಟಕವಾಗಬೇಕು ಅಂತಾ ಮಾಧವಾನಂದ ಪ್ರಭುಜಿಗಳು ೨೧ ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ್ದರು.

ಸರ್ಕಾರದ್ದು ಒಂದಿಂಚೂ ಜಾಗ ಇಲ್ಲ, ವಕ್ಫ್ ಆಸ್ತಿಯೇ ಒತ್ತುವರಿ ಆಗಿದೆ: ಸಚಿವ ಜಮೀರ್ ಅಹ್ಮದ್

ನ.1 ರಾಜ್ಯೋತ್ಸವ, ನ.2 ಶ್ರೀಗಳ ಜನ್ಮೋತ್ಸವ..!

ಶ್ರೀಗಳು ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ್ದರು‌. ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ಆಚರಣೆ ನಡೆದರೆ, ಮರುದಿನವೇ ನವೆಂಬರ್ 2 ರಂದು ಮಾಧವಾನಂದ ಶ್ರೀಗಳ  ಜನ್ಮದಿನೋತ್ಸವ ಅದ್ದೂರಿಯಾಗಿ ನಡೆಯುತ್ತೆ. ಹುಬ್ಬಳ್ಳಿ, ವಿಜಯಪುರ, ಕಲಬುರ್ಗಿ, ಬೆಳಗಾವಿ, ಗೋಕಾಕ್, ಧಾರವಾಡ, ದಾವಣಗೆರೆ, ಬೆಂಗಳೂರು ಸೇರಿದಂತೆ ನೆರೆಯ ಮಹಾರಾಷ್ಟ್ರದಲ್ಲು ಶ್ರೀಗಳ ಭಕ್ತರು ಜನ್ಮದಿನವನ್ನ ಅದ್ದೂರಿಯಾಗಿ ಆಚರಿಸುತ್ತಾರೆ.

ಮೈಸೂರು ಕರ್ನಾಟಕ ಹೋರಾದಲ್ಲೂ ಭಾಗಿ..!

ಆರಂಭದಲ್ಲಿ ನಮ್ಮ ರಾಜ್ಯ ಮೈಸೂರು ಸ್ಟೇಟ್ ಆಗಿತ್ತು. ಆಗ ಅಂದರೆ ೧೯೭೩ರಲ್ಲಿ ಮೈಸೂರು ಕರ್ನಾಟಕವಾಗಬೇಕೆಂದು ಹೋರಾಟ ನಡೆಯುತ್ತಿತ್ತು. ಈ ಹೋರಾಟದಲ್ಲಿ ಇಂಚಗೇರಿ ಮಠದ ಮಾಧವಾನಂದ ಶ್ರೀಗಳು ಮುಂಚೂಣಿಯಲ್ಲಿದ್ದರು. ಮೈಸೂರು ಕರ್ನಾಟಕ ಘೋಷಣೆ ಆಗುವವರೆಗೂ ಉಪವಾಸ ಸತ್ಯಾಗ್ರಹ ಸೇರಿದಂತೆ ಅನೇಕ ಹೋರಾಟಗಳಲ್ಲಿ ಶ್ರೀಗಳು ಪಾಲ್ಗೊಂಡಿದ್ದರು. 

ಮರಣೋತ್ತರ ಏಕೀಕರಣ ಪ್ರಶಸ್ತಿ..!

ಕರ್ನಾಟಕ ಏಕೀಕರಣದಲ್ಲಿ ಮಾಧವಾನಂದ ಶ್ರೀಗಳ  ಹೋರಾಟವನ್ನ ಗುರುತಿಸಿದ ಕರ್ನಾಟಕ ಸರ್ಕಾರ ಸುವರ್ಣ ಕರ್ನಾಟಕ ರಾಜ್ಯೋತ್ಸವದಲ್ಲಿ ಮಾಧವಾನಂದ ಶ್ರೀಗಳಿಗೆ ಮರಣೋತ್ತರವಾಗಿ ಕರ್ನಾಟಕ ಏಕೀಕರಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಶ್ರೀಮಠದ ಶಿಷ್ಯರಾದ ಪಂಪಕವಿ ಬೆಳಗಲಿ ಬೆಂಗಳೂರಿನಲ್ಲಿ ನಡೆದ ಸುವರ್ಣ ಕರ್ನಾಟಕ ಮಹೋತ್ಸವದಲ್ಲಿ ಆಗ ಸಿಎಂ ಆಗಿದ್ದ ಹೆಚ್ ಡಿ ಕುಮಾರಸ್ವಾಮಿ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದರು.

ವಿರಕ್ತಮಠದ ಆಸ್ತಿ ದಾಖಲೆಯಲ್ಲೂ ‘ವಕ್ಫ್‌’ ಹೆಸರು: ಸಂಸದ ಗೋವಿಂದ ಕಾರಜೋಳ ಹೇಳಿದ್ದೇನು?

ಸ್ವಾತಂತ್ರ್ಯ ಹೋರಾಟದಲ್ಲೂ ಶ್ರೀಗಳ ಪಾತ್ರ..!

ಮಾಧವಾನಂದ ಶ್ರೀಗಳು ಕೇವಲ ಕರ್ನಾಟಕ ಏಕೀಕರಣವಷ್ಟೆ ಅಲ್ಲ, ಭಾರತ ಸ್ವಾತಂತ್ರ್ಯಕ್ಕಾಗಿ ಸ್ವತಃ ಬಂದೂಕು ಕಾರ್ಖಾನೆಗಳನ್ನ ತೆರೆದು ಭಕ್ತರ ಜೊತೆಗೂಡಿ ಬ್ರೀಟಿಷರ ವಿರುದ್ಧ ಸಶಸ್ತ್ರವಾಗಿ ಹೋರಾಡಿದ್ದರು. ಗೋವಾ ವಿಮೋಚನೆಗಾಗಿ ಪಣಜಿಯ ಪೋರ್ಚುಗೀಜ್‌ ಕಚೇರಿ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಸಾಹಸ ಮೆರೆದಿದ್ದರು. ಸ್ವಾತಂತ್ರ್ಯ ಹೋರಾಟದ ಬಳಿಕ ರಜಾಕರ ಹಾವಳಿ, ಭೂ ಹಿಡುವಳಿದಾರರ ವಿರುದ್ಧವು ಹೋರಾಟ ನಡೆಸಿದ್ದರು. ೨೫ ಸಾವಿರಕ್ಕು ಅಧಿಕ ಅಂತರ್‌ ಧರ್ಮಿಯ, ಅಂತರ್‌ ಜಾತಿಯ ವಿವಾಹ ನಡೆಸಿ ಆಧುನಿಕ ಬಸವಣ್ಣ ಎನ್ನುವ ಕೀರ್ತಿಗು ಪಾತ್ರರಾಗಿದ್ದರು. 

ಶ್ರೀಗಳ ಜೀವನ ಚರಿತೆ ಪಠ್ಯವಾಗಲಿ..!

ದೇಶ-ನಾಡು-ಸಮಾಜಕ್ಕೆ ಇಷ್ಟೊಂದು ಕೊಡುಗೆ ನೀಡಿದ ಮಾಧವಾನಂದರ ಶ್ರೀಗಳ ಜೀವನ-ಸಾಧನೆಯನ್ನ ಶಾಲಾ ಮಕ್ಕಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಪಾಠ್ಯವಾಗಿ ಭೋದಿಸಬೇಕು ಎನ್ನುವ ಆಗ್ರಹವನ್ನ ಮಠದ ಭಕ್ತರು ಸರ್ಕಾರದ ಮುಂದಿಡುತ್ತಿದ್ದಾರೆ. ಈ ಹಿಂದೆ ಮಾಧವಾನಂದ ಶ್ರೀಗಳ ಸ್ವಾತಂತ್ರ್ಯ ಹೋರಾಟದ ಕುರಿತು ಓಂ ಸಾಯಿ ಪ್ರಕಾಶ ನಿರ್ದೇಶನದಲ್ಲಿ ಕ್ರಾಂತಿಯೋಗಿ ಮಹಾದೇವರು ಸಿನಿಮಾ ಕೂಡ ತೆರೆಕಂಡಿತ್ತು. ಈಗ ಶಾಲಾ ಮಕ್ಕಳಿಗು ಶ್ರೀಗಳ ಆದರ್ಶ ಪಾಠವಾಗಬೇಕು ಅನ್ನೋದು ಕೋಟ್ಯಾಂತರ ಭಕ್ತರ ಆಶಯವಾಗಿದೆ.

click me!