ಮಂಡ್ಯ (ಜು.20): ಕೆಆರ್‌ಎಸ್ ಅಣೆಕಟ್ಟು ಬಿರುಕುಬಿಟ್ಟಿದೆ ಎಂದು ಹೇಳಿಕೆ ನೀಡಿದ್ದ ಸಂಸದೆ ಸುಮಲತಾ ಅಂಬರೀಷ್ ಅಣೆಕಟ್ಟೆಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ ನಾಲ್ಕೇ ದಿನಗಳಲ್ಲಿ ಕೆಆರ್‌ಎಸ್ ಪ್ರವೇಶದ್ವಾರದ ಪಕ್ಕದಲ್ಲಿರುವ ಪಾದಚಾರಿ ರಸ್ತೆಯ 30ಕ್ಕೂ ಹೆಚ್ಚು ಕಲ್ಲುಗಳು ಕುಸಿದು ಬಿದ್ದಿರುವುದು ಜನರ ಆತಂಕವನ್ನು ಹೆಚ್ಚುವಂತೆ ಮಾಡಿದೆ.
ಕೆಆರ್‌ಎಸ್ ಪ್ರವೇಶ ದ್ವಾರದ ಸನಿಹ ಅಣೆಕಟ್ಟೆಕೆಳಗಿಳಿಯಲು ಪಾದಚಾರಿ ಮಾರ್ಗಕ್ಕೆ ಬಳಸುತ್ತಿದ್ದ ರಸ್ತೆಯ ಕೆಳಭಾಗದ ಕಲ್ಲುಗಳು ಕುಸಿದಿವೆ. ಗೇಟ್‌ಗಳ ಬದಲಾವಣೆ ಕಾಮಗಾರಿ ನಡೆಯುತ್ತಿರುವ ವೇಳೆ ಈ ಘಟನೆ ಸಂಭವಿಸಿದೆ. ರಸ್ತೆಯ ಕೆಳಭಾಗದಲ್ಲಿ 30ಕ್ಕೂ ಹೆಚ್ಚು ಕಲ್ಲುಗಳು ಕುಸಿದುಬಿದ್ದಿವೆ. ಆದರೆ, ಪಾದಚಾರಿ ರಸ್ತೆಯ ಕಲ್ಲುಗಳು ಕುಸಿದಿರುವ ಜಾಗಕ್ಕೂ ಅಣೆಕಟ್ಟೆಗೂ 6 ಮೀಟರ್ ಅಂತರವಿರುವುದರಿಂದ ಆತಂಕಪಡುವ ಅಗತ್ಯವಿಲ್ಲ ಎಂದು ಕೆಆರ್‌ಎಸ್ ಎಂಜಿನಿಯರ್‌ಗಳು ತಿಳಿಸಿದ್ದಾರೆ.
undefined
'KRS ಅಣೆಕಟ್ಟೆಯಲ್ಲಿ ನೀರಿನ ಸೋರಿಕೆ ಆರಂಭ'
ಅಣೆಕಟ್ಟು ಬಳಿ ಗೋಡೆ ಕುಸಿದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದೆ ಸುಮಲತಾ ಅಂಬರೀಷ್, ಇದು ರೆಡ್ ಅಲರ್ಟ್ ಸಂದೇಶ. ತನ್ನನ್ನು ಕಾಪಾಡುವಂತೆ ಅಣೆಕಟ್ಟು ಕೂಗಿ ಹೇಳುತ್ತಿದೆ. ಅದನ್ನು ಉಳಿಸಿಕೊಳ್ಳದಿದ್ದರೆ ಮತ್ತೆ ಈ ರೀತಿಯ ಅಣೆಕಟ್ಟನ್ನು ಮುಂದೆ ನಿರ್ಮಿಸಲು ಸಾಧ್ಯವಿಲ್ಲ. ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದ್ದಾರೆ. ಸ್ಥಳಕ್ಕೆ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ, ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಭೇಟಿ ನೀಡಿ ಪರಿಶೀಲಿಸಿದರು.