'ಕಾಂಗ್ರೆಸ್ಸಿಗರು ನಿಜವಾದ ರಾಮ ಭಕ್ತರು'

By Kannadaprabha News  |  First Published Apr 8, 2021, 3:42 PM IST

ಎಲ್ಲಾ ಕ್ಷೇತ್ರದಲ್ಲೂ ಬಿಜೆಪಿ ಸರ್ಕಾರ ವಿಫಲ| ಉಪಚುನಾವಣೆಯಲ್ಲಿ ಜನರು ಬಿಜೆಪಿ ತಿರಸ್ಕರಿಸಿ ಕಾಂಗ್ರೆಸ್‌ ಬೆಂಬಲ| ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ತಮ್ಮನ್ನೇ ಮಾರಾಟ ಮಾಡಿಕೊಂಡಿದ್ದಾರೆ. ಅವರಿಗೆ ಜನರ ಎದುರು ಚುನಾವಣೆಗೆ ನಿಲ್ಲಲು ನೈತಿಕತೆ ಇಲ್ಲ| ಮೂರು ಬಾರಿ ಶಾಸಕರಾಗಿದ್ದರೂ ಇಲ್ಲಿ ಯಾವುದೇ ಕೆಲಸಗಳನ್ನು ಮಾಡಿಲ್ಲ:  ಉಗ್ರಪ್ಪ| 


ಮಸ್ಕಿ(ಏ.08):  ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿಯೂ ವಿಫಲವಾಗಿದ್ದು, ಜನರು ರೋಸಿ ಹೋಗಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿಯನ್ನು ಜನರು ತಿರಸ್ಕರಿಸಿ ಕಾಂಗ್ರೆಸ್‌ ಬೆಂಬಲಿಸಲಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಹೇಳಿದ್ದಾರೆ.

ಮಸ್ಕಿ ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗರಿಗೆ ಸಂಸ್ಕಾರ, ಸಂಸ್ಕೃತಿ ಇಲ್ಲ. ಯೋಗ್ಯರಲ್ಲದವರೇ ಬಿಜೆಪಿಯಲ್ಲಿ ತುಂಬಿಕೊಂಡಿದ್ದಾರೆ. ಅಂತವರಿಗೆ ಮಂತ್ರಿ ಸ್ಥಾನ, ಮಗದೊಂದು ಸ್ಥಾನ ಕೊಟ್ಟಿದ್ದು, ಅಭಿವೃದ್ಧಿ ಅಸಾಧ್ಯ. ನೈತಿಕ ಮೌಲ್ಯಗಳು, ಪ್ರಬುದ್ಧರ ಕೈಗೆ ಅಧಿಕಾರ ಕೊಟ್ಟರೇ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ. ಬಿಜೆಪಿಯಲ್ಲಿ ಕೊಳ್ಳೆ ಹೊಡೆಯುವವರೇ ಹುಟ್ಟಿದ್ದಾರೆ ಎಂದು ಆರೋಪಿಸಿದರು.

Latest Videos

undefined

ಕಾಂಗ್ರೆಸ್ಸಿಗರು ರಾಮ ಭಕ್ತರು:

ರಾಮಾಯಣ, ಮಹಾಭಾರತ ಗೊತ್ತಿಲ್ಲದ ಬಿಜೆಪಿಯವರು ರಾಮ ಭಕ್ತರಲ್ಲ. ನಿತ್ಯವೂ ಮಹಾ ಗ್ರಂಥಗಳನ್ನು ಪಠಣ, ಆಚರಣೆ ಮಾಡುವ ಕಾಂಗ್ರೆಸ್ಸಿಗರು ನಿಜವಾದ ರಾಮ ಭಕ್ತರು. ದೇಶದಲ್ಲಿ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದರೆ ಚಮತ್ಕಾರವನ್ನೇ ಸೃಷ್ಟಿಸುವುದಾಗಿ ಹೇಳಿದ್ದರು. ವಿದೇಶದಲ್ಲಿದ್ದ ಕಪ್ಪು ಹಣ ತಂದು ಬಡವರ ಅಕೌಂಟ್‌ಗೆ ಹಾಕುತ್ತೇವೆ. ಲಕ್ಷ-ಲಕ್ಷ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದರು. ಆದರೆ ಇದೆಲ್ಲವೂ ಮೋದಿ ಪುಂಗಿ ಊದಿದಂತಾಗಿದೆ. ಇದ್ದ ಉದ್ಯೋಗಗಳು ಕಸಿದುಕೊಳ್ಳುತ್ತಿದ್ದಾರೆ. ದೇಶವನ್ನು ಖಾಸಗಿ ಕಂಪನಿಗಳಿಗೆ ಮಾರಾಟಕ್ಕೆ ಇಟ್ಟಿದ್ದಾರೆ. ಕೊರೋನಾ ಹೆಸರಲ್ಲೂ ಲೂಟಿ ನಡೆದಿದೆ. ಈ ಎಲ್ಲ ಸಂಗತಿಗಳಿಂದ ಜನರು ಜಾಗೃತರಾಗಿದ್ದು, ದೇಶದಲ್ಲಿ ಬಿಜೆಪಿ ತಿರಸ್ಕರಿಸುತ್ತಿದ್ದಾರೆ ಎಂದು ದೂರಿದರು.

ಬಿಜೆಪಿ ಸುನಾಮಿಗೆ ಕಾಂಗ್ರೆಸ್‌ ಕೊಚ್ಚಿ ಹೋಗಲಿದೆ: ವಿಜಯೇಂದ್ರ

ಮೀಸಲಾತಿ ಎಲ್ಲಿದೆ?:

ಸಿಎಂ ಯಡಿಯೂರಪ್ಪ, ಸಚಿವ ಶ್ರೀರಾಮುಲು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಎಸ್ಸಿ, ಎಸ್ಟಿಮೀಸಲಾತಿ ಹೆಚ್ಚಳ ಮಾಡುವ ಭರವಸೆ ನೀಡಿದ್ದರು. ಆದರೆ ಸರ್ಕಾರ ರಚನೆಯಾಗಿ ಒಂದೂವರೆ ವರ್ಷ ಕಳೆಯುತ್ತಿದೆ. ಇನ್ನೇಕೆ? ಮೀಸಲಾತಿ ಜಾರಿ ಮಾಡುತ್ತಿಲ್ಲ. ಎಸ್ಸಿ, ಎಸ್ಟಿಯನ್ನು ಏಕೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಚುನಾವಣೆ ಬಂದಾಗ ಮಾತ್ರ ಈ ಮೀಸಲಾತಿಗಳು ನೆನಪಾಗುತ್ತವೆ. ಇಂತಹ ಸಂಗತಿಗಳೆಲ್ಲವೂ ಜನರಿಗೆ ಗೊತ್ತಾಗಿದೆ. ಬಿಜೆಪಿ ನಾಟಕ ಮಾಡುತ್ತಿದೆ ಎನ್ನುವ ಸತ್ಯ ಗೊತ್ತಾಗಿದ್ದು ಈ ಬಾರಿ ತಿರಸ್ಕಾರ ಮಾಡುತ್ತಾರೆ ಎಂದರು.

ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ತಮ್ಮನ್ನೇ ಮಾರಾಟ ಮಾಡಿಕೊಂಡಿದ್ದಾರೆ. ಅವರಿಗೆ ಜನರ ಎದುರು ಚುನಾವಣೆಗೆ ನಿಲ್ಲಲು ನೈತಿಕತೆ ಇಲ್ಲ. ಮೂರು ಬಾರಿ ಶಾಸಕರಾಗಿದ್ದರೂ ಇಲ್ಲಿ ಯಾವುದೇ ಕೆಲಸಗಳನ್ನು ಮಾಡಿಲ್ಲ. ಜನರು ಅವರನ್ನು ಸೋಲಿಸುವ ಶಪಥ ಮಾಡಿದ್ದಾರೆ. 5ಎ ಕಾಲುವೆ ಅನುಷ್ಠಾನಕ್ಕೆ ಕಳೆದ 12 ವರ್ಷಗಳಲ್ಲಿ ಒಂದು ಮಾತು ಕೂಡ ಎತ್ತಿಲ್ಲ. ಹೀಗಾಗಿ ಇವರು ರೈತರ ಬಳಿ ಮತ ಕೇಳಲು ಅವರಿಗೆ ಮುಖವಿಲ್ಲ ಎಂದು ಹೇಳಿದರು.

ಪರಿಹರಿಸಬೇಕು:

ಸಾರಿಗೆ ನೌಕರರು ಮುಷ್ಕರ ಹೂಡಿದ್ದಕ್ಕೆ ಎಸ್ಮಾ ಜಾರಿ ಮಾಡುವುದಾಗಿ ಹೇಳಿದ ಸರ್ಕಾರ ನೀತಿ ಸರಿಯಲ್ಲ. ಈ ಹಿಂದೆ ಸಾರಿಗೆ ನೌಕರರ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಬಿಜೆಪಿ ನಾಯಕರು ಭರವಸೆ ನೀಡಿದ್ದರು. ಆದರೆ ಈಗ ಯಾಕೆ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಕೂಡಲೇ ಸಾರಿಗೆ ನೌಕರರ ಬೇಡಿಕೆಯನ್ನು ಈಡೇರಿಸಿ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.
 

click me!