ನವಪಕ್ಷಗಳತ್ತ ಮತದಾರರ ಒಲವು ಹೆಚ್ಚು

By Kannadaprabha News  |  First Published Feb 15, 2023, 5:58 AM IST

ಈವರೆಗೂ ಆಳ್ವಿಕೆ ನಡೆಸಿದ ಪಕ್ಷಗಳನ್ನು ಹೊರತುಪಡಿಸಿ ನವಪಕ್ಷಗಳತ್ತ ಮತದಾರರು ಹೆಚ್ಚು ಒಲವು ತೋರುತ್ತಿದ್ದಾರೆ ಎಂದು ಸಾಹಿತಿ ದೇವನೂರ ಮಹಾದೇವ ತಿಳಿಸಿದರು.


  ಮೈಸೂರು :  ಈವರೆಗೂ ಆಳ್ವಿಕೆ ನಡೆಸಿದ ಪಕ್ಷಗಳನ್ನು ಹೊರತುಪಡಿಸಿ ನವಪಕ್ಷಗಳತ್ತ ಮತದಾರರು ಹೆಚ್ಚು ಒಲವು ತೋರುತ್ತಿದ್ದಾರೆ ಎಂದು ಸಾಹಿತಿ ದೇವನೂರ ಮಹಾದೇವ ತಿಳಿಸಿದರು.

ನಗರದ ಬನ್ನಿಮಂಟಪದ ಕುಮಾ​ರ್‍ಸ್ ದಿ ವೈಟ್‌ಹೌಸ್‌ ಹೊಟೇಲ್‌ ಸಭಾಂಗಣದಲ್ಲಿ ಸಮಾಜವಾದಿ ವೇದಿಕೆಯು ಪ್ರೊ. ಮಧು ದಂಡವತೆ ಜನ್ಮ ಶತಮಾನೋತ್ಸವ ಹಿನ್ನಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಮುಕ್ತ ಮತದಾನ​- ಸಮರ್ಥ ಸರ್ಕಾರ’- ಜನತಂತ್ರದ ನೈಜ ಹಕ್ಕುದಾರರ ಧ್ವನಿ ಹಿಡಿದಿಡುವ ಡಯಾಗ್ನೋಸ್ಟಿಕ್‌ ವರದಿಯನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.

Tap to resize

Latest Videos

ಟಿ.ಎನ್‌. ಪ್ರಕಾಶ್‌ ಕಮ್ಮರಡಿ ಮುಂದಾಳತ್ವದಲ್ಲಿ ನಡೆದ ಸಮೀಕ್ಷೆಗೆ ಒಳಪಟ್ಟಮತದಾರರು ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಅಂತಹ ಆಳ್ವಿಕೆಯ ಸಂಸಾರ ಮಾಡಿದ ಪಕ್ಷಗಳನ್ನು ಹೊರತುಪಡಿಸಿ, ಇದುವರೆಗೂ ಆಳ್ವಿಕೆಯ ಸಂಸಾರ ಮಾಡದಿರುವ ನವಪಕ್ಷ ಅಥವಾ ಒಕ್ಕೂಟದ ಕಡೆಗೆ ಹೆಚ್ಚು ಒಲವು ತೋರಿರುವುದು ನನ್ನ ಆಶಯಕ್ಕೆ ಪರವಾಗಿದೆ. ನವಪಕ್ಷಗಳತ್ತ ಮತದಾರರ ಅಭಿಪ್ರಾಯ ಶೇ.46 ಇದೆ. ಇಷ್ಟನ್ನು ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಯಾವ ಪಕ್ಷವೂ ಗಳಿಸಿಲ್ಲ. ಇದು ಮೇಲ್ನೋಟಕ್ಕೆ ಶುಭ ಸೂಚನೆ ಎಂಬಂತೆ ಕಾಣುತ್ತಿದೆ ಎಂದು ಅವರು ಹೇಳಿದರು.

ಈಗ ಚುನಾವಣೆ ನಮ್ಮ ಮುಂದಿದೆ. ರಾಜ್ಯ ಎಂತಹ ಪರಿಸ್ಥಿತಿ ಅನುಭವಿಸುತ್ತಿದೆ ಎಂದರೆ ಕರ್ನಾಟಕದ ಮುಖ್ಯ ಮಂತ್ರಿ ಯಾರು ಎಂದು ಪ್ರಶ್ನಿಸಿದರೆ ನರೇಂದ್ರ ಮೋದಿ, ಗೃಹಮಂತ್ರಿ ಅಮಿತ್‌ ಶಾ! ಇದು ಜನಪ್ರಿಯವಾಗುತ್ತಿದೆ. ಕರ್ನಾಟಕದ ರಾಜ್ಯ ಚುನಾವಣೆಗೆ ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರು ಅಷ್ಟೊಂದು ಓಡಾಡುತ್ತಿದ್ದಾರೆ ಎಂದು ಅವರು ಕುಟುಕಿದರು.

ಈ ಸಮೀಕ್ಷೆಯಲ್ಲಿ ಮಾಧ್ಯಮಗಳು ಜನರನ್ನು ಜಾಗೃತಗೊಳಿಸುವ ಬದಲಿಗೆ ದಿಕ್ಕು ತಪ್ಪಿಸುತ್ತಿವೆ ಎಂದು ಮುಕ್ಕಾಲು ಪಾಲು ಮತದಾರರು ಅಭಿಪ್ರಾಯಪಟ್ಟಿದ್ದಾರೆ. ಇದು ಮತದಾರರು ಜಾಗೃತಗೊಂಡಿದ್ದಾರೆ ಎಂದು ಸೂಚಿಸುತ್ತದೆ. ಪ್ರಸ್ತುತ ಸರ್ಕಾರವು ನಿರುದ್ಯೋಗ, ಬೆಲೆ ಏರಿಕೆ, ಭ್ರಷ್ಟಾಚಾರ ನಿಯಂತ್ರಣ ಮಾಡದಿರುವ ಬಗ್ಗೆ ಹಾಗೂ ಕೋವಿಡ್‌ ಸಂದರ್ಭವನ್ನು ಸಮರ್ಪಕವಾಗಿ ನಿರ್ವಹಿಸದೆ ಇರುವ ಬಗ್ಗೆ ಜನರಲ್ಲಿ ಬೇಸರ ಅಧಿಕವಾಗಿದೆ. ಬಲತ್ಕಾರದ ಭೂ ಸ್ವಾಧೀನವು ರೈತರ ಆತಂಕ ಹೆಚ್ಚಿಸಿದೆ ಎಂದರು.

ಮುಖ್ಯವಾಗಿ ರಾಜ್ಯದಲ್ಲಿ ಇತ್ತೀಚೆಗೆ ಜರುಗಿದ ಕೋಮುಗಲಭೆ ಮತೀಯ ವಿವಾದಗಳು ಸಹಜವಾಗಿ ಹುಟ್ಟಿರುವುದಿಲ್ಲ ಎಂಬ ಎಚ್ಚರ ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಬಹುತೇಕ ಮತದಾರರಲ್ಲಿ ಕಂಡು ಬರುತ್ತದೆ. ಆಡಳಿತ ಪಕ್ಷದ ಮೇಲೆ ನಕಾರಾತ್ಮಕ ಭಾವನೆ ಹೆಚ್ಚುತ್ತಿರುವುದನ್ನು ಸಮೀಕ್ಷೆ ತಿಳಿಸುತ್ತದೆ. ಹೀಗಿದ್ದೂ ಮುಂದಿನ ಚುನಾವಣೆಯಲ್ಲಿ ಹಣ ಮುಂತಾದ ಆಮಿಷಗಳು ಹಾಗೂ ಮಾಧ್ಯಮಗಳ ಸುಳ್ಳು ನಿರೂಪಣೆಗಳು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತವೆ ಎಂಬ ಆತಂಕವೂ ಮತದಾರರಲ್ಲಿದೆ. ಈ ಆತಂಕ ನನ್ನದೂ ಆಗಿದೆ ಎಂದು ಅವರು ತಿಳಿಸಿದರು.

ನಿಗೂಢ ಮತದಾರರು ಶೇ.23 ರಿಂದ 35 ರಷ್ಟುಇದೆ. ನಮ್ಮ ಮತದಾರರ ನಿಗೂಢತೆ ತುಂಬಾ ಹೆಚ್ಚೆನಿಸಿತು. ನಿಗೂಢತೆ ಹೆಚ್ಚಿದ್ದರೆ ನಮ್ಮ ಸುತ್ತಮುತ್ತ ವಾತಾವರಣ ದುಷ್ಟವಾಗಿದೆ ಅಂತಲೇ ಅರ್ಥ. ಉದಾಹರಣೆಗೆ ಅಲ್ಪಸಂಖ್ಯಾತರಲ್ಲಿ ನಿಗೂಢತೆಗೆ ಭೀತಿ ಕಾರಣವಾಗಿರಬಹುದು. ಹಾಗೇ ಮಹಿಳೆ ಮತ್ತು ಹಿರಿಯ ನಾಗರಿಕರಲ್ಲಿ ಹೆಚ್ಚು ನಿಗೂಢತೆ ಇದೆ ಎಂದಾದರೆ ಯಾಕೆ ಯಾರಾರ‍ಯರದೊ ಕೆಂಗಣ್ಣಿಗೆ ಬೀಳಬೇಕು ಅಂತ ಇವರು ಹೆಚ್ಚು ಹುಷಾರು ವಹಿಸಿರಬಹುದು. ಹಾಗೇ ಹೈದರಾಬಾದ್‌ ಕರ್ನಾಟಕದ ಕಡೆಗೂ ಸಾಕಷ್ಟುನಿಗೂಢ ಮತದಾರರು ಇದ್ದಾರೆ ಎಂದರು.

ವೈಚಾರಿಕ ಚಿಂತನೆ ಶುರುವಾಗಬೇಕು

ರಾಜಕೀಯ ವಿಮರ್ಶಕ ಸುಧೀಂದ್ರ ಕುಲಕರ್ಣಿ ಮಾತನಾಡಿ, ಸಮಾನತೆಯ ಆಧಾರದ ಮೇಲೆ ಹೊಸ ಭಾರತ ಕಟ್ಟಬೇಕಾದರೆ ಭಾರತೀಯ ಚಿಂತನೆಯ ಸಮಾಜವಾದದ ಬಗ್ಗೆ ರಾಷ್ಟಾ್ರದ್ಯಂತ ಬೌದ್ಧಿಕ, ವೈಚಾರಿಕ ಚಿಂತನೆ ಶುರುವಾಗಬೇಕು. ಭಾರತದ ಸಮಾಜವಾದದ ಪ್ರತಿಪಾದನೆಯಲ್ಲಿ ಏನು ದೋಷಗಳು, ತಪ್ಪಗಳಾದವು ಅಧ್ಯಯನ ಮಾಡಬೇಕು ಎಂದರು.

ಕಾಂಗ್ರೆಸ್‌ ಬಿಟ್ಟು ಅಥವಾ ಕಾಂಗ್ರೆಸ್‌ ಒಂದರಿಂದಲೇ ಬದಲಾವಣೆ ಸಾಧ್ಯವಿಲ್ಲ. ಆದ್ದರಿಂದ ಕರ್ನಾಟಕದಲ್ಲಿ ಸಿದ್ಧಾಂತಗಳ ಆಧಾರದ ಮೇಲೆ ಒಕ್ಕೂಟದ ಅವಶ್ಯಕತೆ ಇದೆ. ಬಿಜೆಪಿ ನಾವೇ ಶ್ರೇಷ್ಠ ಎಂಬ ದುರಂಹಾಕರದಲ್ಲಿದೆ. ಅದೇ ಮುಳುವಾಗಲಿದೆ. ಮತ್ತೆ ಬಿಜೆಪಿ ಆಡಳಿತ ಪಡೆದರೆ ಏನಾದೀತು? ಮುನ್ಸೂಚನೆಗಳು ಕಾಣುತ್ತಿವೆ. ಸಂವಿಧಾನದ ಮೂಲ ಆಶಯವನ್ನು ಬುಡಮೇಲು ಮಾಡಲಿವೆ. ಸಂವಿಧಾನದ ಪ್ರಸ್ತಾವನೆ, ಸಮಾಜವಾದ ಮತ್ತು ಜಾತ್ಯಾತೀತವಾದ ಕಿತ್ತು ಹಾಕಲಿದ್ದಾರೆ ಎಂದರು.

ಭಾರತ್‌ ಜೋಡೋ ಯಾತ್ರೆ ನಂತರ ಕಾಂಗ್ರೆಸ್‌ ಪಕ್ಷದಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ಆದರೆ, ಸಂಘಟನಾತ್ಮಕವಾಗಿ ಆ ಪಕ್ಷ ದುರ್ಬಲವಾಗಿದೆ. ಆದ್ದರಿಂದ 2023 ಕರ್ನಾಟಕ ಚುನಾವಣೆ, 2024ರ ಸಂಸದೀಯ ಚುನಾವಣೆಯನ್ನು ಗಂಭೀರವಾಗಿ ಸ್ವೀಕರಿಸಬೇಕು. ಬೃಹತ್‌ ಸಮನ್ವಯದೊಂದಿಗೆ ನಡೆಯಬೇಕು ಎಂದು ಅವರು ತಿಳಿಸಿದರು.

ನವದೆಹಲಿಯ ಜಾಮಿಯಾ ಮಿಲಿಯಾ ವಿವಿ ಪ್ರೊ.ಡಿ.ಕೆ. ಗಿರಿ, ಸಮಾಜವಾದಿ ಬಿ.ಆರ್‌. ಪಾಟೀಲ್‌, ವಿಶ್ರಾಂತ ಕುಲಪತಿ ಪ್ರೊ. ಸಬಿಹಾ ಭೂಮಿಗೌಡ, ಸಾಹಿತಿ ಪ್ರೊ. ಕಾಳೇಗೌಡ ನಾಗವಾರ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಸಾಮಾಜಿಕ ಕಾರ್ಯಕರ್ತ ಅನೀಸ್‌ ಪಾಷ, ಟಿ.ಎನ್‌. ಪ್ರಕಾಶ್‌ ಕಮ್ಮರಡಿ, ಶ್ರೀಕಂಠಮೂರ್ತಿ ಮೊದಲಾದವರು ಇದ್ದರು.

ಒಂದು ಕಸಿ ಪದ ತುಂಬಾ ಛಾಲೂ ಆಗುತ್ತಿದೆ. ಅದೇ ಮೊದಾನಿ. ಈ ಮೊದಾನಿ ಪದ ಒಳಹೊಕ್ಕರೆ ನಾನಾ ಅರ್ಥ ಹೇಳುತ್ತಿರುತ್ತದೆ. ಮೋದಿ ಮತ್ತು ಅದಾನಿ ಸೇರಿ ಒಂದೇ ಪದ, ಒಂದೇ ಹೆಸರು. ಅಧಿಕಾರ ಮತ್ತು ಕುರುಡು ಕಾಂಚಾಣ ಎರಡೂ ಕೂಡಿ ಒಂದೇ ಆಗಿದೆ. ಉಳಿಗಾಲವಿಲ್ಲ. ಇಂತಹ ಕೇಡು ಕಾಲದಲ್ಲಿ ಚುನಾವಣೆ ಬಂದಿದೆ.

- ದೇವನೂರ ಮಹಾದೇವ, ಸಾಹಿತಿ

ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಇವತ್ತು ತುರ್ತು ಪರಿಸ್ಥಿತಿ ಘೋಷಿಸಿದೆಯೇ ನ್ಯಾಯಾಂಗ, ಮಾಧ್ಯಮ, ಆಡಳಿತ, ಚುನಾವಣಾ ಆಯೋಗವನ್ನು ಕಂಟ್ರೋಲ್‌ ಮಾಡಲಾಗುತ್ತಿದೆ. ದೇಶದ ಪ್ರಜಾಪ್ರಭುತ್ವಕ್ಕೆ ದೊಡ್ಡ ಕುತ್ತು ಬಂದಿದೆ.

- ಸುಧೀಂದ್ರ ಕುಲಕರ್ಣಿ, ರಾಜಕೀಯ ವಿಮರ್ಶಕ

click me!