Voter ID Scam; ಬಾಗಲಕೋಟೆ ಜಿಲ್ಲೆಯ ಮತದಾರ ಪಟ್ಟಿಯಲ್ಲಿ ಗೋಲಮಾಲ್, ತನಿಖೆಗೆ ಕಾಂಗ್ರೆಸ್ ಮುಖಂಡರ ಆಗ್ರಹ

By Gowthami KFirst Published Dec 1, 2022, 7:49 PM IST
Highlights

ರಾಜ್ಯದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಚಿಲುಮೆ ಸಂಸ್ಥೆಯಿಂದ ಮತದಾರರ ಪಟ್ಟಿಯಲ್ಲಿ ಗೋಲಮಾಲ್ ಕುರಿತಾಗಿ ಆರೋಪ ಮತ್ತು ಪ್ರತ್ಯಾರೋಪಗಳ ಮಧ್ಯೆ ಬಾಗಲಕೋಟೆ ಜಿಲ್ಲೆಯಲ್ಲಿಯೂ ಕೂಡ ಏಕಾಏಕಿ ಸುಮಾರು 64 ಸಾವಿರ ಮತದಾರರನ್ನು ಕಡಿಮೆ ಮಾಡಿರುವ ಆರೋಪ ಕೇಳಿಬಂದಿದೆ.

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್ 

ಬಾಗಲಕೋಟೆ (ಡಿ.1): ರಾಜ್ಯದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಚಿಲುಮೆ ಸಂಸ್ಥೆಯಿಂದ ಮತದಾರರ ಪಟ್ಟಿಯಲ್ಲಿ ಗೋಲಮಾಲ್ ಕುರಿತಾಗಿ ಆರೋಪ ಮತ್ತು ಪ್ರತ್ಯಾರೋಪಗಳ ಮಧ್ಯೆ ಬಾಗಲಕೋಟೆ ಜಿಲ್ಲೆಯಲ್ಲಿಯೂ ಕೂಡ ಏಕಾಏಕಿ ಸುಮಾರು 64 ಸಾವಿರ ಮತದಾರರನ್ನು ಕಡಿಮೆ ಮಾಡಲಾಗಿದೆ, ಈ ಸಂಭಂದ ಮತದಾರ ಪಟ್ಟಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಬಾಗಲಕೋಟೆ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು. ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಧೋಳದಲ್ಲಿ ಹತ್ತು ಸಾವಿರ, ಜಮಖಂಡಿಯಲ್ಲಿ 5000, ತೇರದಾಳ 10,000, ಜಮಖಂಡಿ 5300, ಬಾದಾಮಿ 14,000, ಹುನಗುಂದ 7500, ಬಾಗಲಕೋಟೆ 8800 ಮತದಾರರ ಸಂಖ್ಯೆ ಕಡಿಮೆಯಾಗಿದೆ. ಇದನ್ನು ನೋಡಿದರೆ ವಾಮ ಮಾರ್ಗದಿಂದ ರಾಜಕಾರಣ ಮಾಡಲು ಆಡಳಿತ ಪಕ್ಷದವರು ಕುತಂತ್ರವನ್ನು ಮಾಡುತ್ತಿದ್ದಾರೆ ಎಂದರು.

ಚಿಲುಮೆ ಸಂಸ್ಥೆಯವರು ಬೆಂಗಳೂರಿನಲ್ಲಿ ಲಕ್ಷಾಂತರ ಮತದಾರರನ್ನು ಬೇರ್ಪಡಿಸುವ ಕೆಲಸ ಮಾಡಿದ್ದು ಪ್ರಜಾಪ್ರಭುತ್ವ ಕಗ್ಗೊಲೆಯಾಗಿದೆ. ಮತದಾರ ಪ್ರಭು ಬಗ್ಗೆ ಸರಕಾರದ ಹೃದಯದಲ್ಲಿ ಏನು ಇದೆ. ಬೆಂಗಳೂರಿನಲ್ಲಿ ಚಿಲುಮೆ ಸಂಸ್ಥೆ ಮಾಡಿದ ಕರ್ಮಕಾಂಡವನ್ನು ಮಾಜಿ ಸಿಎಂ ಸಿದ್ಧರಾಮಯ್ಯ, ಡಿ.ಕೆ.ಶಿವುಕುಮಾರ, ಹರಿಪ್ರಸಾದ ಅವರು  ಹೊರತೆಗೆದಿದ್ದರಿಂದ ಚುನಾವಣಾ ಆಯೋಗ ಎಚ್ಚೆತ್ತುಕೊಂಡು ರಾಜ್ಯದ ಪ್ರತಿ ವಿಧಾನಸಭಾ ಮತಕ್ಷೇತ್ರಕ್ಕೆ 220 ಜನ ಅಧಿಕಾರಿಗಳನ್ನು ನೇಮಕ ಮಾಡಿದ್ದು ಸ್ವಾಗತಾರ್ಹ. ಆದರೆ ನೇಮಕವಾದ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದರು.

ತಮ್ಮ ಪಕ್ಷಕ್ಕೆ ಬೇಡವಾದವರನ್ನು ತೆಗೆದು ಹಾಕುವುದು ಚಿಲುಮೆ ಸಂಸ್ಥೆಯವರ ಉದ್ಧಟತನ, ಅಸಂವಿಧಾನ ಕ್ರಮ. ಮನೆಯ ಮತದಾರರನ್ನು ಕೂಡ ಚೆಲ್ಲಾಪಿಲ್ಲಿ ಮಾಡುವ ಕೆಲಸ ಬಾಗಲಕೋಟೆ ಜಿಲ್ಲೆಯಲ್ಲಿಯೂ ನಡೆದಿದೆ. ಒಂದೇ ಮನೆಯಲ್ಲಿ ಹತ್ತಾರು ಮತಗಳು ಇದ್ದರೆ ಅವರ ಮತಗಟ್ಟೆ ಬದಲಾವಣೆ ಮಾಡುವ ತಂತ್ರವನ್ನು ಜಿಲ್ಲೆಯಲ್ಲಿ ಮಾಡಲಾಗುತ್ತಿದೆ. ಮತದಾರರ ಸಂಖ್ಯೆಯನ್ನು ಕಡಿಮೆ ಮಾಡಿರುವ ಕುರಿತು ಚುನಾವಣಾ ಆಯೋಗಕ್ಕೆ ದೂರ ಸಲ್ಲಿಸಲಾಗುವುದು ಎಂದು ಹೇಳಿದರು.

ಬಿಜೆಪಿಯಿಂದ ವಾಮಮಾರ್ಗ ರಾಜಕಾರಣ ಮತದಾರ ಪಟ್ಟಿಯಲ್ಲಿ ಏಕಾಏಕಿ ಅಲ್ಪಸಂಖ್ಯಾತರು, ದಲಿತ ಮತದಾರರ ಕಡಿತ...
ಇದೇ ವೇಳೆ ಬೀಳಗಿ ಮತಕ್ಷೇತ್ರದ ಮಾಜಿ ಶಾಸಕ ಜೆ.ಟಿ.ಪಾಟೀಲ ಮಾತನಾಡಿ, ಬೀಳಗಿ ಮತಕ್ಷೇತ್ರದ ಕಂದಗಲ್ ಗ್ರಾಮದಲ್ಲಿ 32 ಮತದಾರರು, ಸೊನ್ನ ಗ್ರಾಮದ 30 ಜನ ಮತದಾರರನ್ನು ಮತದಾರ ಪಟ್ಟಿಯಿಂದ ಕೈಬಿಡಲಾಗಿದೆ. ಇವರೆಲ್ಲಾ  ದಲಿತ ಮತ್ತು ಅಲ್ಪಸಂಖ್ಯಾತರ ಮತದಾರರು ಇದ್ದು ಅವರ ಹೆಸರನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ವಾಮ ಮಾರ್ಗದಿಂದ ರಾಜಕಾರಣ ಮಾಡಲು ಹೊರಟಂತಾಗಿದೆ. ಇದು ಸರಿಯಾದ ಕ್ರಮವಲ್ಲ. ಇದೇ ರೀತಿ ಮುಂದುವರೆದರೆ ಈ ಬಗ್ಗೆ ಕೋರ್ಟ್ ಮೆಟ್ಟಿಲು ಏರಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. 

 

 Mysuru : ಅರ್ಹ ಮತದಾರರನ್ನು ಪಟ್ಟಿಯಿಂದ ತೆಗೆದಿಲ್ಲ

ಇದೇ ವೇಳೆ ಇದು ಕೊನೆಯ ಚುನಾವಣೆ ಎಂದು ಹೇಳಿದ್ದೀರಿ ಈ ಭಾರಿ ಮತ್ತೆ ಅರ್ಜಿ ಸಲ್ಲಿಸಿದ್ದೀರಾ ಎಂದು ಸುದ್ದಿಗಾರರು ಕೇಳಿದಾಗ,  ನಾನು ಕೊನೆಯ ಚುನಾವಣೆ ಎಂದು ಎಲ್ಲಿಯಾದರೂ ಹೇಳಿದ ಬಗ್ಗೆ ದಾಖಲೆ ಕೊಡಿ ಎಂದು ಕೇಳಿದರು. ಇನ್ನೂ ಬೀಳಗಿ ಮತಕ್ಷೇತ್ರದಲ್ಲಿ ಹತ್ತು ಜನ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದು, ಇವರಲ್ಲಿ ಯಾರಿಗಾದರೂ ಟಿಕೆಟ್ ಕೊಟ್ಟರೂ ಅವರ ಪರವಾಗಿ ಮಾಡುತ್ತೇವೆ ಎಂದು ಹೇಳಿದರು.

ಧಾರವಾಡದಲ್ಲಿ ಯುವ ಮತದಾರರ ಸೇರ್ಪಡೆ ಅಭಿಯಾನ, 18 ವರ್ಷ ತುಂಬಿದವರು ಮತದಾರರ ಪಟ್ಟಿಗೆ ಸೇರ್ಪಡೆ

ಮತದಾರ ಪಟ್ಟಿ ತಯಾರಿಕೆಯಲ್ಲಿ ಅಧಿಕಾರಿಗಳ ತಾರತಮ್ಯ 
ಮಾಜಿ ಸಚಿವ ಎಚ್.ವೈ.ಮೇಟಿ ಮಾತನಾಡಿ, ಮತದಾರ ಯಾದಿ ತಯಾರಿಸುವಲ್ಲಿಯೂ ಕೂಡ ಅಧಿಕಾರಿಗಳಿಂದ ತಾರತಮ್ಯ ಮಾಡಲಾಗುತ್ತಿದೆ. ಬೇಡವಾದ ಮತದಾರರನ್ನು ಮತದಾರ ಯಾದಿಯಿಂದ ತೆಗೆದು ಹಾಕುವ ವ್ಯವಸ್ಥೆ ನಡೆದಿದೆ. ಇನ್ನು ನಗರದಲ್ಲಿ ಕೆಲವೊಂದು ಬೂತಗಳಲ್ಲಿ ಮತದಾರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆ ಮಾಡಲಾಗುತ್ತಿದೆ. ಇದು ಕೂಡ ನಮ್ಮಲ್ಲಿ ದಾಖಲೆ ಇದ್ದು ಈ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ ಎಂದು ಹೇಳಿದರು. ಈ ಸಂದರ್ಬದಲ್ಲಿ ಪಕ್ಷದ ಮುಖಂಡರಾದ ನಾಗರಾಜ ಹದ್ಲಿ, ಆನಂದ ಶಿಲ್ಪಿ ಉಪಸ್ಥಿತರಿದ್ದರು.

click me!