12ನೇ ವರ್ಷಕ್ಕೆ ಒಂದು ದಿನದ ಮಟ್ಟಿಗೆ ಬಿಡಿಎ ಅಧ್ಯಕ್ಷನಾದ ಬಾಲಕ; ಶಾಸಕ ಎನ್.ಎ.ಹ್ಯಾರಿಸ್ ಹೃದಯಸ್ಪರ್ಶಿ ನಡೆ

Sathish Kumar KH   | Kannada Prabha
Published : Oct 08, 2026, 09:46 AM IST
12 year old boy BDA Chairman

ಸಾರಾಂಶ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಚೇರಿಯಲ್ಲಿ ದೃಷ್ಟಿಹೀನ ಬಾಲಕನೊಬ್ಬನನ್ನು ಒಂದು ದಿನದ ಅಧ್ಯಕ್ಷನನ್ನಾಗಿ ಮಾಡಿ ಗೌರವಿಸಲಾಯಿತು. ವಿಶೇಷ ಚೇತನ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಲು ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಮತ್ತು ಆಯುಕ್ತ ಮಣಿವಣ್ಣನ್ ಈ ಹೃದಯಸ್ಪರ್ಶಿ ಕಾರ್ಯಕ್ರಮ ಆಯೋಜಿಸಿದ್ದರು.

ಬೆಂಗಳೂರು (ಅ.08): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ - BDA) ಕೇಂದ್ರ ಕಚೇರಿ ಬುಧವಾರ ಅತ್ಯಂತ ಅಪರೂಪದ ಹಾಗೂ ಕಣ್ಣಂಚು ತೇವಗೊಳಿಸುವ ಹೃದಯಸ್ಪರ್ಶಿ ಕ್ಷಣವೊಂದಕ್ಕೆ ಸಾಕ್ಷಿಯಾಯಿತು. ಸದಾ ಅಧಿಕಾರಿಗಳು, ಕಡತಗಳು ಹಾಗೂ ಸಾರ್ವಜನಿಕರ ಸಭೆಗಳಿಂದ ಗಿಜಿಗುಡುತ್ತಿದ್ದ ಅಧ್ಯಕ್ಷರ ಕಚೇರಿಯಲ್ಲಿ, ದೃಷ್ಟಿಹೀನ ಬಾಲಕನೊಬ್ಬ ಬಿಡಿಎ ಅಧ್ಯಕ್ಷರ ಅಧಿಕೃತ ಕುರ್ಚಿಯ ಮೇಲೆ ಕುಳಿತು ‘ಒಂದು ದಿನದ ಅಧ್ಯಕ್ಷ’ನಾಗಿ ಮಿಂಚಿದ್ದಾನೆ!

ಮುಖ್ಯವಾಹಿನಿಗೆ ತರುವ ಪ್ರಯತ್ನ:

ವಿಶೇಷ ಚೇತನ ಮಕ್ಕಳು ಯಾವುದೇ ಕಾರಣಕ್ಕೂ ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿಯಬಾರದು, ಅವರಲ್ಲೂ ನಾಯಕತ್ವದ ಗುಣ ಮತ್ತು ಆತ್ಮವಿಶ್ವಾಸ ಬೆಳೆಯಬೇಕು ಎಂಬ ಮಹತ್ತರ ಉದ್ದೇಶದಿಂದ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರದ ‘ಜ್ಯೋತಿ ಸೇವಾ ಸ್ಕೂಲ್ ಫಾರ್ ಬ್ಲೈಂಡ್’ ಶಾಲೆಯ ಸುಮಾರು 65 ದೃಷ್ಟಿಹೀನ ಮಕ್ಕಳನ್ನು ಬಿಡಿಎ ಕಚೇರಿಗೆ ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು.

ಅಧ್ಯಕ್ಷರ ಕುರ್ಚಿಯಲ್ಲಿ ರಾಹುಲ್:

ಕಚೇರಿಗೆ ಆಗಮಿಸಿದ ಮಕ್ಕಳ ಮುಗ್ಧತೆ ಹಾಗೂ ಅವರ ಉತ್ಸಾಹವನ್ನು ಕಂಡು ಭಾವುಕರಾದ ಬಿಡಿಎ ಅಧ್ಯಕ್ಷ ಎನ್‌.ಎ. ಹ್ಯಾರಿಸ್‌, ಮಕ್ಕಳಲ್ಲಿ ಒಬ್ಬನಾದ 12 ವರ್ಷದ ರಾಹುಲ್ ಎಂಬ ಬಾಲಕನನ್ನು ಕೈಹಿಡಿದು ಕರೆತಂದು ತಮ್ಮ ಅಧಿಕೃತ ಅಧ್ಯಕ್ಷರ ಕುರ್ಚಿಯ ಮೇಲೆ ಕೂರಿಸಿದರು. ಸಾಂಕೇತಿಕವಾಗಿ ಆತನನ್ನು ‘ಒಂದು ದಿನದ ಬಿಡಿಎ ಅಧ್ಯಕ್ಷ’ನನ್ನಾಗಿ ಘೋಷಿಸಿ, ಅಧಿಕಾರಿಗಳ ಸಮ್ಮುಖದಲ್ಲೇ ಗೌರವಿಸಿದರು. ಈ ಅಪರೂಪದ ಕ್ಷಣವನ್ನು ಕಂಡ ಇತರ ಮಕ್ಕಳು ಹಾಗೂ ಅಧಿಕಾರಿಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ನೀವು ಯಾರಿಗೂ ಕಮ್ಮಿಯಿಲ್ಲ, ದೃತಿಗೆಡಬೇಡಿ: ಎನ್.ಎ. ಹ್ಯಾರಿಸ್

ಈ ಸಂದರ್ಭದಲ್ಲಿ ಮಾತನಾಡಿದ ಬಿಡಿಎ ಅಧ್ಯಕ್ಷ ಎನ್‌.ಎ. ಹ್ಯಾರೀಸ್‌ ಅವರು, ‘ಮಕ್ಕಳು ಯಾವುದೇ ಕಾರಣಕ್ಕೂ ಕೀಳರಿಮೆ ಬೆಳೆಸಿಕೊಳ್ಳಬಾರದು, ದೃತಿಗೆಡಬಾರದು. ನೀವೂ ಸಮಾಜದ ಇತರರಂತೆ ಸಮಾನರು. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ, ಸರ್ಕಾರವಿದೆ. ದೃಢಸಂಕಲ್ಪದಿಂದ ವಿದ್ಯಾಭ್ಯಾಸ ಮಾಡಿ, ಭವಿಷ್ಯದಲ್ಲಿ ಉನ್ನತ ಆಡಳಿತಾತ್ಮಕ ಹುದ್ದೆಗಳನ್ನು ಅಲಂಕರಿಸಿ ಸಮಾಜಕ್ಕೆ ಮಾದರಿಯಾಗಬೇಕು’ ಎಂದು ಮಕ್ಕಳಿಗೆ ಸ್ಫೂರ್ತಿಯ ಮಾತುಗಳನ್ನಾಡಿದರು.

ಶಿಕ್ಷಣಕ್ಕೆ ಬಿಡಿಎ ಸಂಪೂರ್ಣ ಬೆಂಬಲ: ಆಯುಕ್ತ ಮಣಿವಣ್ಣನ್

ಇದೇ ವೇಳೆ ಮಾತನಾಡಿದ ಬಿಡಿಎ ಆಯುಕ್ತ ಮೇಜರ್ ಪಿ. ಮಣಿವಣ್ಣನ್‌, ‘ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವುದು ಮತ್ತು ಅವರ ದೊಡ್ಡ ಕನಸುಗಳಿಗೆ ನೀರೆರೆದು ಪೋಷಿಸುವುದೇ ಈ ಭೇಟಿಯ ಮೂಲ ಉದ್ದೇಶ. ಇದು ಕೇವಲ ಒಂದು ದಿನದ ಭೇಟಿಗೆ ಸೀಮಿತವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಈ ಮಕ್ಕಳ ಉತ್ತಮ ಶಿಕ್ಷಣ ಹಾಗೂ ಉಜ್ವಲ ಭವಿಷ್ಯಕ್ಕೆ ಬಿಡಿಎ ವತಿಯಿಂದ ಸಂಪೂರ್ಣ ಬೆಂಬಲ ಮತ್ತು ಸಹಕಾರ ನೀಡಲಾಗುವುದು’ ಎಂದು ಭರವಸೆ ನೀಡಿದರು. ಬಿಡಿಎ ಅಧ್ಯಕ್ಷರು ಮತ್ತು ಆಯುಕ್ತರ ಈ ಮಾನವೀಯ ನಡೆ ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

PREV
Read more Articles on
click me!

Recommended Stories

‘ತರಕಾರಿ ಕೊಳ್ಳೋದೇ ಕಷ್ಟ’! ಬೆಂಗಳೂರಿನಲ್ಲಿ ಟೊಮೆಟೊ, ಬೀನ್ಸ್ ಬೆಲೆ ಗಗನಕ್ಕೆ; ಮನೆಯ ಬಜೆಟ್‌ಗೆ ಬಿತ್ತು ಬರೆ
ಶಿವಮೊಗ್ಗ: ಆನಂದಪುರ ಬಳಿ ಬೆಳ್ಳಂಬೆಳಗ್ಗೆ ಹೊತ್ತಿ ಉರಿದ ಖಾಸಗಿ ಬಸ್..! ಬೆಂಗಳೂರಿಂದ ಸಾಗರಕ್ಕೆ ಬರುತ್ತಿದ್ದ ಸ್ಲೀಪರ್ ಬಸ್ ಭಸ್ಮ