
ವಿಜಯಪುರ: ಅಪಘಾತದಲ್ಲಿ ಗಾಯಗೊಂಡವರಿಗೆ ಸರಿಯಾದ ಚಿಕಿತ್ಸೆ ನೀಡಲು ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದೆ ಮೊಬೈಲ್ ಟಾರ್ಚ್ ಹಾಕಿ ಚಿಕಿತ್ಸೆ ನೀಡಿದ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯ ನೂತನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ನಡೆದಿದೆ.
ಮಂಗಳವಾರ ದೇವರಹಿಪ್ಪರಗಿ ಪಟ್ಟಣದ ಇಂಡಿ ರಸ್ತೆಯಲ್ಲಿ ಬೊಲೆರೋ, ಟಂಟಂ ಹಾಗೂ ಮೋಟಾರ್ ಸೈಕಲ್ ಅಪಘಾತದಲ್ಲಿ ಸುಮಾರು 10 ಜನರಿಗೆ ಗಾಯಗಳಾಗಿದ್ದವು. ಅದರಲ್ಲಿ 5 ಜನರಿಗೆ ಗಂಭೀರ ಗಾಯಗಳಾಗಿತ್ತು. ಹೀಗಾಗಿ ತುರ್ತು ಚಿಕಿತ್ಸೆಗೆ ರೋಗಿಗಳನ್ನು ದೇವರಹಿಪ್ಪರಗಿಯ ನೂತನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಾಗ ಆಸ್ಪತ್ರೆಯಲ್ಲಿ ಕರೆಂಟ್ ಇಲ್ಲದೇ ಕತ್ತಲು ಆವರಿಸಿತ್ತು. ಇದರಿಂದಾಗಿ ಗ್ರಾಮಸ್ಥರು, ಗಾಯಾಳುಗಳು ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದರು.
ಈ ವೇಳೆ ಗೊಂದಲದ ವಾತಾವರಣ ಉಂಟಾಗಿತ್ತು. ನಂತರ ಮೊಬೈಲ್ ಟಾರ್ಚ್ ಮೂಲಕ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಎದುರಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ವಿಜಯಪುರದ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಯಿತು.
ನೂತನ ಕಟ್ಟಡದಲ್ಲೇ ಪರಿಸ್ಥಿತಿ ಹೀಗಿದ
ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿ ಸುಮಾರು ₹8.30 ಕೋಟಿ ವೆಚ್ಚದ ಸುಸಜ್ಜಿತ 30 ಹಾಸಿಗೆಯ ಉತ್ತಮ ಕಟ್ಟಡ ನಿರ್ಮಾಣವಾಗಿದೆ. ಇದನ್ನು ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹಾಗೂ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಅವರು ಲೋಕಾರ್ಪಣೆಗೊಳಿಸಿದ್ದಾರೆ.
ವಿದ್ಯುತ್ ವ್ಯತ್ಯಯ ಉಂಟಾದಾಗ ತುರ್ತು ವಿಭಾಗದಲ್ಲಿ ಬೆಳಕು, ಇನ್ವರ್ಟರ್ ವ್ಯವಸ್ಥೆ ಇಲ್ಲದೇ ಜನರೇಟರ್ ಇದ್ದರೂ ಡೀಸೆಲ್ ವ್ಯವಸ್ಥೆ ಕಲ್ಪಿಸದೆ ಇರುವುದು ಕತ್ತಲಲ್ಲಿಯೇ ಚಿಕಿತ್ಸೆ ನೀಡುವ ಅನಿವಾರ್ಯತೆ ಒದಗಿಬಂದಿದೆ. ಹೀಗಾಗಿ ಮೊಬೈಲ್ ಟಾರ್ಚ್ ಮೂಲಕ ಅಪಘಾತಕ್ಕೆ ಈಡಾದ ರೋಗಿಗಳ ಪರೀಕ್ಷೆ ಮಾಡಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ತುರ್ತು ವಿಭಾಗ ಇದ್ದರೂ ಕರೆಂಟ್ ಇಲ್ಲವಾಗಿದೆ.
ಇದನ್ನೂ ಓದಿ: ಮುದ್ದೇಬಿಹಾಳದ ಭವಿಷ್ಯ ಬದಲಿಸುವ ಮಹತ್ವದ ನಿರ್ಧಾರ; ಟೌನ್ ಪ್ಲಾನ್‌ಗೆ ಗವರ್ನರ್ ಅಸ್ತು