ಬೆಂಗಳೂರಲ್ಲಿ ಕರಾವಳಿ ಸಂಭ್ರಮ: ನಾಳೆ ವಿಜಯನಗರದಲ್ಲಿ ಯಕ್ಷಗಾನ, ಖಾದ್ಯ ಮೇಳದೊಂದಿಗೆ 'ವಿಶ್ವ ಕುಂದಾಪ್ರ ಕನ್ನಡ ದಿನ'!

Published : Aug 14, 2026, 02:32 PM IST
Bengaluru vishwa kundapra kannada dina

ಸಾರಾಂಶ

ಬೆಂಗಳೂರಿನಲ್ಲಿರುವ ಕುಂದಾಪುರ ಜನರಿಗಾಗಿ 'ಕುಂದಾಪ್ರ ಕನ್ನಡ ಪ್ರತಿಷ್ಠಾನ'ವು ಆಗಸ್ಟ್ 15 ರಂದು 'ವಿಶ್ವ ಕುಂದಾಪ್ರ ಕನ್ನಡ ದಿನ'ವನ್ನು ಆಯೋಜಿಸಿದೆ. ವಿಜಯನಗರದ ಬಂಟರ ಸಂಘದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ವೈಭವ, ಗ್ರಾಮೀಣ ಆಟಗಳು, ಖಾದ್ಯ ಮೇಳದ ಜೊತೆಗೆ ಮಹತ್ವದ ಘೋಷಣೆಯೊಂದು ನಿರೀಕ್ಷಿಸಲಾಗಿದೆ.

ಬೆಂಗಳೂರು (ಆ.14): ಬೆಂಗಳೂರಿನಲ್ಲಿರುವ ಕುಂದಾಪುರ ಮೂಲದ ಜನರನ್ನು ಹಾಗೂ ಕುಂದಾಪ್ರ ಭಾಷಾ ಪ್ರೇಮಿಗಳನ್ನು ಒಂದೇ ಸೂರಿನಡಿ ತರುವ 'ಕುಂದಾಪ್ರ ಕನ್ನಡ ಪ್ರತಿಷ್ಠಾನ (ರಿ.)' ಈ ವರ್ಷದ 'ವಿಶ್ವ ಕುಂದಾಪ್ರ ಕನ್ನಡ ದಿನ'ವನ್ನು ಆಗಸ್ಟ್ 15ರ ಶನಿವಾರದಂದು ಅತ್ಯಂತ ಅದ್ಧೂರಿಯಾಗಿ ಆಚರಿಸಲು ಸಜ್ಜಾಗಿದೆ. ವಿಜಯನಗರದ 'ಬಂಟರ ಸಂಘದ ಸಭಾಂಗಣ'ದಲ್ಲಿ ಶನಿವಾರ ಮಧ್ಯಾಹ್ನ 2 ಗಂಟೆಯಿಂದ ರಾತ್ರಿಯವರೆಗೂ ವಿವಿಧ ಸಾಂಸ್ಕೃತಿಕ, ಗ್ರಾಮೀಣ ಆಟೋಟ ಹಾಗೂ ಖಾದ್ಯ ಮೇಳಗಳ ಕಾರ್ಯಕ್ರಮಗಳು ನೆರವೇರಲಿವೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ದೀಪಕ್ ಶೆಟ್ಟಿ ಬಾರ್ಕೂರು ತಿಳಿಸಿದ್ದಾರೆ.

ಕರಾವಳಿಯ ವಿಶಿಷ್ಟ ಹಬ್ಬ 'ವಿಶ್ವ ಕುಂದಾಪ್ರ ಕನ್ನಡ ದಿನ'

ಕರಾವಳಿ ಭಾಗದಲ್ಲಿ ಆಷಾಢ ಅಮಾವಾಸ್ಯೆ (ಆಸಾಡಿ ಅಮಾಸಿ/ಆಟಿ ಅಮಾವಾಸ್ಯೆ) ದಿನಕ್ಕೆ ಅತ್ಯಂತ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವಿದೆ. ಕಳೆದ ಏಳು ವರ್ಷಗಳಿಂದ ಈ ಕರ್ಕಾಟಕ ಅಮಾವಾಸ್ಯೆಯ ದಿನವನ್ನು 'ವಿಶ್ವ ಕುಂದಾಪ್ರ ಕನ್ನಡ ದಿನ'ವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ ಆಗಸ್ಟ್ 12ರಂದು ಆಷಾಢ ಅಮಾವಾಸ್ಯೆಯ ಅಂಗವಾಗಿ ಕುಂದಾಪುರ ಸೇರಿದಂತೆ ಕರಾವಳಿಯಾದ್ಯಂತ ಸಂಭ್ರಮದ ಆಚರಣೆ ನಡೆದಿತ್ತು. ಇದೀಗ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವ ಕುಂದಾಪ್ರ ಭಾಷಿಕರಿಗಾಗಿ ಆಗಸ್ಟ್ 15ರಂದು ಶನಿವಾರ ಬಂಟರ ಸಂಘದಲ್ಲಿ ಈ ವೈಭವದ ದಿನವನ್ನು ಆಚರಿಸಲಾಗುತ್ತಿದೆ.

'ಆಗಸ್ಟ್ 15 ಬರೀ ಟ್ರೇಲರ್, ಪಿಚ್ಚರ್ ಅಭಿ ಬಾಕಿ ಹೈ!': ಬೃಹತ್ ಘೋಷಣೆ ನಿರೀಕ್ಷೆ

ಶನಿವಾರದ ರಾಜಸಭೆಯಲ್ಲಿ ಕುಂದಾಪ್ರ ಕನ್ನಡ ಪ್ರತಿಷ್ಠಾನದ ವತಿಯಿಂದ ಅತ್ಯಂತ ಮಹತ್ವದ ಹಾಗೂ ಬೃಹತ್ ಘೋಷಣೆಯೊಂದನ್ನು ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. 'ಶನಿವಾರದ ಕಾರ್ಯಕ್ರಮ ಕೇವಲ ಟ್ರೇಲರ್ ಇದ್ದಂತೆ, ಮುಂದೆ ನಡೆಯಲಿರುವ ಅದ್ಧೂರಿ ಕುಂದಾಪ್ರ ಹಬ್ಬದ ಸಂಪೂರ್ಣ 'ಪಿಚ್ಚರ್' ಶನಿವಾರದ ವೇದಿಕೆಯಲ್ಲಿ ಅನಾವರಣಗೊಳ್ಳಲಿದೆ' ಎಂದು ತಿಳಿಸಿರುವ ಪ್ರತಿಷ್ಠಾನವು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮನವಿ ಮಾಡಿದೆ.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳು ಹಾಗೂ ರಂಜನೆ

ಪ್ರಮುಖ ಅತಿಥಿಗಳು: ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಖ್ಯಾತ ಚಲನಚಿತ್ರ ನಟ ಪ್ರಮೋದ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಬಯಲಾಟ & ಗ್ರಾಮೀಣ ಆಟಗಳು: ಬಂಟರ ಸಂಘದ ಆವರಣದಲ್ಲಿ ಹಗ್ಗಜಗ್ಗಾಟ ಸೇರಿದಂತೆ ಕರಾವಳಿಯ ತನುವನ್ನು ನೆನಪಿಸುವ ಗ್ರಾಮೀಣ ಕ್ರೀಡಾಕೂಟ.

ಸಂಗೀತ ಹಾಗೂ ಯಕ್ಷಗಾನ ಸಂಭ್ರಮ: 'ಮಂದ್ರ ಕಡಲು' ಕಾರ್ಯಕ್ರಮದಡಿ ರಾಘವೇಂದ್ರ ಬೀಜಾಡಿ, ಸಾನ್ವಿ ಶೆಟ್ಟಿ ಅವರಿಂದ ಭಾವಗೀತೆ ಗಾಯನ. ಜೊತೆಗೆ 'ಯುಗಳ ರಸಗವಳ' ಹೆಸರಿನಲ್ಲಿ ಜೋಡು ಮುಮ್ಮೇಳ ಹಾಗೂ ಕೂಡು ಹಿಮ್ಮೇಳಗಳ ಅಪರೂಪದ ಯಕ್ಷಗಾನ ಪ್ರಯೋಗ.

ನೃತ್ಯ ರೂಪಕ 'ಮಾರ್ಣ್‌ಕಟ್ಟೆ ಬ್ರಹ್ಮ, ಮಂದಾರ್ತಿ ಅಮ್ಮ': ಅರೆಹೊಳೆ ಪ್ರತಿಷ್ಠಾನದ 'ನಂದಗೋಕುಲ' ಕಲಾವಿದರಿಂದ ವಿಶಿಷ್ಟ ನೃತ್ಯ ರೂಪಕ ಪ್ರದರ್ಶನ.

ಇಲ್ಕಾಣಿ ಕುಂದಾಪ್ರ: ಇದುವರೆಗೆ ನೀವು ಕಂಡೂ ಕಾಣದ ಕುಂದಾಪುರದ ಗತವೈಭವವನ್ನು ಪರಿಚಯಿಸುವ ವಿಶೇಷ ದೃಶ್ಯ ವೈಭವ.

ಯಬ್ಯಾ ಸೌಂಡೇ! (DJ Night): ಕುಂದಾಪ್ರ ಕನ್ನಡದ ಖ್ಯಾತ ಡಿಜೆ ರಂಜು ಕುಂದಾಪುರ ಅವರಿಂದ ಧಮಾಕ ಡಿಜೆ ಸಂಗೀತ ಕಾರ್ಯಕ್ರಮ.

ಖಾದ್ಯ ಹಾಗೂ ವ್ಯಾಪಾರ ಮೇಳ: ಕುಂದಾಪುರ ಶೈಲಿಯ ಸಾಂಪ್ರದಾಯಿಕ ಅಡುಗೆಗಳು, ತಿನಿಸುಗಳು ಹಾಗೂ ಊಟದ ವ್ಯವಸ್ಥೆ. ಜೊತೆಗೆ ಕುಂದಾಪ್ರ ಭಾಗದ ವಿಶಿಷ್ಟ ವಸ್ತುಗಳ ಮಾರಾಟ ಮಳಿಗೆಗಳು ಇರಲಿವೆ.

PREV
Read more Articles on
click me!

Recommended Stories

ಪ್ರಜ್ವಲ್‌ಗೆ 'ಅಪ್ಪ ರೇವಣ್ಣ-ಶಿವ, ಅಮ್ಮ ಭವಾನಿ-ಪಾರ್ವತಿ'! ಜೈಲಲ್ಲೂ ಮೊಬೈಲ್ ಬಳಿಸಿದ 40 ನಂಬರ್ಸ್‌ಗೆ ಸೀಕ್ರೆಟ್ ಕೋಡ್
ಸೂರ್ಯ ಏಕೆ ಕೊತ ಕೊತ ಬಿಸಿ, ಹೊರ ಪದರದ ರಹಸ್ಯ ಭೇದಿಸಿದ ಭಾರತದ ಆದಿತ್ಯ-L1, ವಿಜ್ಞಾನಿಗಳಿಂದ ಬೆಂಗಳೂರಿನಲ್ಲಿ ಸಂಶೋಧನೆ!