* ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಇರಕಲ್‌ಗಡಾದ ರಾಮಣ್ಣ ಕಾಟ್ರಳ್ಳಿ ಕುಟುಂಬ
* ಮದುವೆಯ ವಿಶೇಷ ಆಹ್ವಾನ ಪತ್ರಿಕೆ
* ಯಜಮಾನ ಸಿನಿಮಾ ನೋಡಿ ಅಭಿಮಾನ ಉಕ್ಕಿಸಿಕೊಂಡ ಕಾಟ್ರಳ್ಳಿ ಕುಟುಂಬ
ರಾಮಮೂರ್ತಿ ನವಲಿ
ಗಂಗಾವತಿ(ಜು.04): ಸಾಮಾನ್ಯವಾಗಿ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮನೆ ದೇವರು, ಮಠಾಧೀಶರು ವಧು-ವರರ ಹಾಗೂ ಕೆಲವೊಮ್ಮೆ ಕುಟುಂಬದವರ ಭಾವಚಿತ್ರ ಮುದ್ರಿಸುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಕುಟುಂಬ, ಕನ್ನಡ ಚಿತ್ರರಂಗದ ಮೇರುನಟ ಸಾಹಸಸಿಂಹ ದಿ. ಡಾ.ವಿಷ್ಣುವರ್ಧನ ಅವರ ಭಾವಚಿತ್ರ ಮುದ್ರಿಸಿ, ಅವರು ಅಭಿನಯಿಸಿದ ಚಿತ್ರಗಳ ಹೆಸರುಗಳ ಮೂಲಕವೇ ಮದುವೆಗೆ ಬನ್ನಿ ಎಂದು ಆಹ್ವಾನ ನೀಡಿರುವದು ವಿಶೇಷವಾಗಿದೆ.
ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಇರಕಲ್ಲಗಡ ರಾಮಣ್ಣ ಕಾಟ್ರಳ್ಳಿ ಕುಟುಂಬ ಡಾ.ವಿಷ್ಣುವರ್ಧನ್ ಅವರ ಮೇಲೆ ಅಪಾರ ಅಭಿಮಾನ ಹೊಂದಿದ ಕುಟುಂಬವಾಗಿದೆ. ರಾಮಣ್ಣ ಕಾಟ್ರಳ್ಳಿಯವರ ಶ್ರೀಮತಿ ಹುಲಿಗೆಮ್ಮ ಅವರು ವಿಷ್ಣುದಾದಾಗೆ ದೊಡ್ಡ ಫ್ಯಾನ್. ಮದುವೆ ಗಂಡು ಶರಣಪ್ಪ ಚಿಕ್ಕಂದಿನ ದಿನಗಳಲ್ಲಿ ವಿಷ್ಣು ಅಭಿನಯದ ಯಜಮಾನ ನೋಡಿ ಆವತ್ತಿನಿಂದ ಇವತ್ತಿನವರೆಗೂ ವಿಷ್ಣು ಅವರ ಮೇಲೆ ಅಪಾರ ಅಭಿಮಾನ ಹೊಂದಿದ್ದಾರೆ.
ಇಂದು ಇರಕಲ್‌ಗಡಾದಲ್ಲಿ ಮನೆ ಮುಂದೆಯೇ ರಾಮಣ್ಣ ಕಾಟ್ರಳ್ಳಿಯವರು ತಮ್ಮ ಪುತ್ರರಾದ ಶರಣಪ್ಪ ಮತ್ತು ಮಂಜುನಾಥ ಅವರ ಮದುವೆ ಹಮ್ಮಿಕೊಂಡಿದ್ದಾರೆ. ಯಲ್ಲಿ ಶ್ರೀಗಳ, ದೇವರ ಮೂರ್ತಿಗಳ ಚಿತ್ರದ ಜೊತೆ ಡಾ.ವಿಷ್ಣುವರ್ಧನ್ ಫೋಟೋ ಮುದ್ರಿಸಿ, ಅವರ ಸಿನಿಮಾ ಹೆಸರುಗಳ ಮೂಲಕವೇ ಮದುವೆಗೆ ಆಹ್ವಾನ ನೀಡಿದ್ದು ವಿಭಿನ್ನವಾಗಿದೆ. ಈ ಮೂಲಕ ವಿಷ್ಣುದಾದಾ ದೈಹಿಕವಾಗಿ ಜೊತೆಗೆ ಇಲ್ಲದಿದಿದ್ದರೂ ಅಭಿಮಾನದ ರೂಪದಲ್ಲಿ ಇನ್ನೂ ಜೀವಂತವಾಗಿದ್ದಾರೆ ಎಂಬುದಕ್ಕೆ ಈ ಆಹ್ವಾನ ಪತ್ರಿಕೆ ಸಾಕ್ಷಿಯಾಗಿದೆ.
ವಿಷ್ಣು ಓದಿದ ಶಾಲೆ ಉಳಿಸಲು ಮುಂದಾದ ನಟಿ ಪ್ರಣೀತಾ
ವಿಷ್ಣು ಚಿತ್ರಗಳ ಹೆಸರಿನಲ್ಲಿ ಆಹ್ವಾನ
ವಂಶ ಜ್ಯೋತಿಯಾಗಿ ನಮ್ಮ ಮನೆ ಬೆಳಗುವ ಸೊಸೆ ನೀನು, ದೇವರ ಗುಡಿಯಂತೆ ಕೂಡಿ ಬಾಳೋಣ, ಭಾಗ್ಯ ಜ್ಯೋತಿ ನೀನು, ದೇವರು ಕೊಟ್ಟ ವರ ಜೀವನ ಚಕ್ರದಲ್ಲಿ ಬಂಗಾರದ ಜಿಂಕೆ ನಮ್ಮಿಬ್ಬ ಈ ಬಂಧನ. ಈ ಜೀವ ನಿನಗಾಗಿ ನಿತ್ಯ ಸುಪ್ರಭಾತ, ಜನನಿ ಜನ್ಮ ಭೂಮಿಯಲ್ಲಿ ನೀನು ಸಕ್ಕರೆ ಹಾಲು ಸಕ್ಕರೆ, ತುಂಬಿದ ಮನೆಯಲ್ಲಿ ಒಂದಾಗಿ ಬಾಳೋಣ, ಮಾತಾಡು ಮಾತಾಡು ಮಲ್ಲಿಗೆ, ಏಕದಂತನ ಆಶಿವಾ೯ದದೊಂದಿಗೆ ನೀನನೆಲ್ಲೋ ನಾನಲ್ಲೆ ಎಂದು ಕೈ ಹಿಡಿದಿರುವೆ ಗಂಧರ್ವಗಿರಿಯಂತಿರುವ ನಮ್ಮಿಬ್ಬರ ಸುವರ್ಣ ಸೇತುವೆಗೆ ನನ್ನ ಆಪ್ತ ಮಿತ್ರರು ಎಂಬ ಚಿತ್ರಗಳ ಸರಮಾಲೆಯನ್ನು ಬಳಸಿಕೊಂಡು ಆಹ್ವಾನ ನೀಡಿದ್ದಾರೆ.
ಸಂತಸ
ಖ್ಯಾತ ಚಿತ್ರ ನಟ ದಿ.ವಿಷ್ಣುವರ್ಧನ ಅವರು ಇಲ್ಲದಿದ್ದರೂ ಸಹ ಅವರ ಅಭಿಮಾನ ಇಟ್ಟು ಕೊಂಡಿರುವ ಕಾಟ್ರಳ್ಳಿ ಕುಟಂಬದವರು ಮದುವೆ ವಿವಾಹ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ವಿಷ್ಣು ಅವರ ಚಿತ್ರಗಳನ್ನು ಹಾಕಿಕೊಂಡು ಅಭಿಮಾನ ವ್ಯಕ್ತಪಡಿಸಿದ್ದಕ್ಕಾಗಿ ಡಾ.ವಿ.ಎಸ್.ಎಸ್.ವಿಷ್ಣು ಸೇನಾ ಸಂಘಟನೆ ರಾಜುಗೌಡ ಜಿಲ್ಲಾಧ್ಯಕ್ಷರಾದ ಪ್ರಕಾಶ ಚಿನ್ನೂರು, ತಾಲೂಕು ಅಧ್ಯಕ್ಷರಾದ ಕೆ.ಎಮ್.ಶರಣಯ್ಯಸ್ವಾಮಿ, ಜಿಲ್ಲಾ ಕಾರ್ಯದರ್ಶಿಯಾದ ಶ್ರೀನಿವಾಸ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ.