* ಜೂನ್ ತಿಂಗಳಲ್ಲೂ ಸಾವಿನ ದ್ವಿಶತಕ ಬಾರಿಸಿದ ಕೋವಿಡ್
* ಧಾರವಾಡ ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ 266, ಜೂನ್‌ನಲ್ಲಿ 237 ಸೋಂಕಿತರ ಸಾವು
* ಮೇ ತಿಂಗಳಲ್ಲಿ 25281 ಪಾಸಿಟಿವ್ ಪ್ರಕರಣ, ಜೂನ್‌ನಲ್ಲಿ ಬರೀ 4239 ಪ್ರಕರಣ
ಬಸವರಾಜ ಹಿರೇಮಠ
ಧಾರವಾಡ(ಜು.04): ಜಿಲ್ಲೆಯಲ್ಲಿ ನಿತ್ಯ 30-50ರ ಆಸುಪಾಸಿನಲ್ಲಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಪಾಸಿಟಿವಿಟಿ ದರ ಕುಸಿದ ಸಮಾಧಾನ ಒಂದೆಡೆಯಾದರೆ, ಇನ್ನೊಂದೆಡೆ ಕೋವಿಡ್ ಸೋಂಕಿತರ ಮಾತ್ರ ಇಳಿಕೆಯಾಗದೇ ಇರುವುದು ಬೇಸರದ ಸಂಗತಿ.
undefined
ಪ್ರಸ್ತುತ ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯ ಅಟ್ಟಹಾಸ ಕಡಿಮೆಯಾಗಿದೆ. ಇದೀಗ ರಾಜ್ಯದಲ್ಲಿ ಪ್ರಕ್ರಿಯೆಯೂ ಹಂತ ಹಂತವಾಗಿ ನಡೆಯುತ್ತಿದೆ. ವಾರದಿಂದ ವಾರಕ್ಕೆ ಹೆಚ್ಚು ಹೆಚ್ಚು ಅನ್‌ಲಾಕ್ ಪ್ರಕ್ರಿಯೆ ನಡೆಯುತ್ತಲೇ ಇದೆ. ಇದಕ್ಕೆ ಧಾರವಾಡ ಜಿಲ್ಲೆ ಸಹ ಹೊರತಾಗಿಲ್ಲ. ಕಳೆದ ಮೇ ತಿಂಗಳಲ್ಲಿ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗಿದ್ದರು. ಆದರೆ, ಜೂನ್ ತಿಂಗಳಿನಲ್ಲಿ ಆ ಸಂಖ್ಯೆ ಕಡಿಮೆಯಾಯಿತು. ಸದ್ಯಕ್ಕೆ ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣ ಶೇ. 3ಕ್ಕಿಂತ ಕಡಿಮೆ ಇದೆ. ಆದರೆ, ನಿತ್ಯವೂ ದಾಖಲಾಗುತ್ತಿರುವ ಸಾವಿನ ಸಂಖ್ಯೆ ಮಾತ್ರ ಆತಂಕ ಸೃಷ್ಟಿಸಿದೆ.
ಒಂದೇ ತಿಂಗಳಲ್ಲಿ 237 ಸೋಂಕಿತರ ಸಾವು:
ಕಳೆದ ಮೇ ತಿಂಗಳಲ್ಲಿ 25281 ಪ್ರಕರಣಗಳು ದಾಖಲಾದರೆ 266 ಜನ ಸೋಂಕಿತರು ಮೃತಪಟ್ಟಿದ್ದರು. ಆದರೆ, ಜೂನ್ ತಿಂಗಳ 30 ದಿನಗಳಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ತೀರಾ ಕುಸಿದು ಬರೀ 4239 ಪ್ರಕರಣಗಳಾದವು. ಆದರೆ, ಸಾವಿನ ಸಂಖ್ಯೆ ಮಾತ್ರ 237. ಆದ್ದರಿಂದ ಪಾಸಿಟಿವಿ ದರ ಕಡಿಮೆಯಾದರೂ ಸಾವಿನ ಸಂಖ್ಯೆ ಕಡಿಮೆ ಆಗದೇ ಇರುವುದು ಇದೀಗ ಜಿಲ್ಲಾಡಳಿತದ ಎದುರಿನ ಸವಾಲು. ಮೊದಲ ಅಲೆಗೆ ಹೋಲಿಸಿದಲ್ಲಿ ಎರಡನೇ ಅಲೆ ಜಿಲ್ಲೆಯನ್ನು ಬೇಗನೇ ವ್ಯಾಪಿಸಿಕೊಂಡಿತ್ತು. ಎರಡನೇ ಅಲೆಯ ತೀವ್ರತೆ ಮೇ ತಿಂಗಳಲ್ಲಿ ಅತೀ ಜೋರಾಗಿತ್ತು. ಅದೇ ರೀತಿ ಸಾವಿನ ಪ್ರಮಾಣವೂ ಅಷ್ಟೇ ಪ್ರಮಾಣದಲ್ಲಿತ್ತು. ಜಿಲ್ಲೆಯಲ್ಲಿ ನಿತ್ಯವೂ ಸಾವಿರದ ಗಡಿ ದಾಟುತ್ತಿದ್ದ ಸೋಂಕಿತರ ಸಂಖ್ಯೆ ಜೂನ್ ತಿಂಗಳ ಅಂತ್ಯಕ್ಕೆ ಎರಡಂಕಿಗೆ ಬಂದು ನಿಂತಿತ್ತು. ಆದರೆ, ಸಾವಿನ ಸಂಖ್ಯೆ ಮಾತ್ರ ಬದಲಾಗಲಿಲ್ಲ. ಇದು ವೈದ್ಯರು ಸೇರಿದಂತೆ ಜಿಲ್ಲಾಡಳಿತಕ್ಕೆ ಅಚ್ಚರಿ ಮೂಡಿಸಿದೆ.
ಹುಬ್ಬಳ್ಳಿ: ಲಸಿಕೆ ಪಡೆಯಲು ಕಿಮ್ಸ್ ಎದುರು ಜನವೋ ಜನ..!
ರಾಜ್ಯದಲ್ಲಿ 4ನೇ ಸ್ಥಾನ:
ಇಡೀ ರಾಜ್ಯದಲ್ಲಿ ಧಾರವಾಡ ಜಿಲ್ಲೆಯು ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ 4ನೇ ಸ್ಥಾನದಲ್ಲಿದೆ. ಮೊದಲ ಅಲೆಯಿಂದಲೂ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದ ಮರಣ ಸಂಖ್ಯೆ ಇದ್ದು ಈಗಲೂ ಮುಂದುವರೆದಿದೆ. ಮೊದಲ ಸ್ಥಾನ ಬೆಂಗಳೂರು ನಗರ (15626) ನಂತರದಲ್ಲಿ ಮೈಸೂರು (2177), ಬಳ್ಳಾರಿ (1613) ಹಾಗೂ ಧಾರವಾಡ (1206) ಸೋಂಕಿತರು ಮೃತಪಟ್ಟಿದ್ದಾರೆ.
ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಇಳಿಮುಖವಾಗಿರುವುದು ಸಮಾಧಾನದ ವಿಷಯ. ಆದರೆ, ಸಾವಿನ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿಲ್ಲ. ಉಳಿದ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಜಿಲ್ಲೆಯಲ್ಲಿ ಹೆಚ್ಚು ಐಸಿಯು ಕೇಸುಗಳಿವೆ. ಎಲ್ಲ ಜಿಲ್ಲೆಯಲ್ಲಿ ಈ ಪ್ರಕರಣಗಳು ಎರಡು ಅಂಕಿಯಲ್ಲಿದ್ದರೆ ನಮ್ಮ ಜಿಲ್ಲೆಯಲ್ಲಿ ಅದು ಮೂರು ಅಂಕಿಗಳಲ್ಲಿದೆ. ಐಸಿಯುನಲ್ಲಿ ದಾಖಲಾದವರು ಚಿಕಿತ್ಸೆ ಫಲಿಸದೇ ಇದೀಗ ಮೃತಪಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಸಾವಿನ ಸಂಖ್ಯೆಯೂ ಕಡಿಮೆಯಾಗಲಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.