ಮುಂಬರುವ ಚುನಾವಣೆಯಲ್ಲಿ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ವೀರಶೈವ ಸಮುದಾಯದ ತನ್ನದೇ ಆದ ಪಾತ್ರವನ್ನು ವಹಿಸಲಿದೆ ಎಂದು ಕಾಂಗ್ರೆಸ್ ಮುಖಂಡ ಪಿ.ಕಲ್ಲಳ್ಳಿಯ ಮಹಲಿಂಗಯ್ಯ ಹೇಳಿದರು.
ತುರುವೇಕೆರೆ : ಮುಂಬರುವ ಚುನಾವಣೆಯಲ್ಲಿ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ವೀರಶೈವ ಸಮುದಾಯದ ತನ್ನದೇ ಆದ ಪಾತ್ರವನ್ನು ವಹಿಸಲಿದೆ ಎಂದು ಕಾಂಗ್ರೆಸ್ ಮುಖಂಡ ಪಿ.ಕಲ್ಲಳ್ಳಿಯ ಮಹಲಿಂಗಯ್ಯ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ವೀರಶೈವ ಮುಖಂಡರ ಪೂರ್ವಭಾವಿ ಸಭೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ವೀರಶೈವ ಸಮುದಾಯ ಸಂಪೂರ್ಣವಾಗಿ ಯ ಪರವಾಗಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಕ್ಷೇತ್ರದಲ್ಲಿ ಹಿಂದಿನಿಂದಲೂ ಸಮುದಾಯ ಕಾಂಗ್ರೆಸ್ ಪರವಾಗಿತ್ತು. ಆದರೆ ನಾಯಕತ್ವ ವಹಿಸಿಕೊಂಡವರು ಅವರನ್ನು ಸಮರ್ಥವಾಗಿ ಬಳಸಿಕೊಳ್ಳದ ಕಾರಣಕ್ಕೆ ವೀರಶೈವ ಸಮುದಾಯ ಅನ್ಯ ಪಕ್ಷಗಳ ಬೆಂಬಲಕ್ಕೆ ನಿಂತಿತು ಎಂದು ಹೇಳಿದರು.
ಈ ಬಾರಿ ಬೆಮಲ್ ಕಾಂತರಾಜ್‌ರವರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನೆಡೆಸಲು ಶ್ರಮ ಹಾಕುತ್ತಿದ್ದಾರೆ. ಎಲ್ಲ ಸಮುದಾಯದವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಎಲ್ಲರಲ್ಲೂ ಗೌರವಭಾವನೆಯನ್ನು ಹೊಂದಿದ್ದಾರೆ. ಹಾಗಾಗಿ ಅನ್ಯ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದ ಬಹುತೇಕ ವೀರಶೈವ ಸಮುದಾಯದ ಮುಖಂಡರು ಮತ್ತು ಕಾರ್ಯಕರ್ತರು ಪುನಃ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಹಾಗಾಗಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಯ ಗೆಲುವು ಖಚಿತ ಎಂದು ಹೇಳಿದರು.
ಕಾಂಗ್ರೆಸ್ ಬೆಂಬಲಿಸಲು ವೀರಶೈವ ಸಮುದಾಯದ ಬಹುಪಾಲು ಮಂದಿ ನಿರ್ಧರಿಸಿದ್ದಾರೆ. ಹಾಗಾಗಿ ಚುನಾವಣೆ ಘೋಷಣೆಯಾಗುವ ಮುನ್ನ ಶೀಘ್ರದಲ್ಲೇ ಕಾಂಗ್ರೆಸ್ ಬೆಂಬಲಿತ ವೀರಶೈವ ಸಮಾವೇಶವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾದಿಹಳ್ಳಿಯ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಅರಳಿಕೆರೆ ಉದಯಕುಮಾರ್ ಹೇಳಿದರು.
ಅನ್ಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳಲು ಇಚ್ಚೆ ಪಡದ ಹಲವಾರು ವೀರಶೈವ ಮುಖಂಡರು ತಟಸ್ಥವಾಗಿದ್ದರು. ಆದರೆ ಬೆಮಲ್ ಕಾಂತರಾಜ್‌ರವರು ತಮ್ಮ ಸಮುದಾಯಕ್ಕೆ ಸೂಕ್ತ ಪ್ರಾಧಾನ್ಯತೆ ನೀಡಿರುವುದರಿಂದ ಅವರ ಪರವಾಗಿ ನಿಲ್ಲಲು ನಿರ್ಧರಿಸಲಾಗಿದೆ. ಶೀಘ್ರದಲ್ಲೇ ಸಹಸ್ರಾರು ಮಂದಿ ವೀರಶೈವ ಸಮುದಾಯದವರನ್ನು ಒಂದೆಡೆ ಸೇರಿಸಿ ಕಾಂಗ್ರೆಸ್‌ಗೆ ಶಕ್ತಿ ತುಂಬುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಇಡೀ ರಾಜ್ಯಾದ್ಯಂತ ಕಾಂಗ್ರೆಸ್ ಪರವಾದ ಅಲೆ ಎದ್ದಿದೆ. ಜೆಡಿಎಸ್ ಮತ್ತು ಬಿಜೆಪಿ ತ್ಯಜಿಸಿ ಹಲವಾರು ಮುಖಂಡರು ಕಾಂಗ್ರೆಸ್ ಸೇರುತ್ತಿದ್ದಾರೆ. ಜಿಲ್ಲೆಯ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಧಾನ ಪರಿಷತ್ ನ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಬೆಮಲ್ ಕಾಂತರಾಜ್ ನುಡಿದರು.
ತಾವು ವೀರಶೈವ ಸಮುದಾಯದ ಎಲ್ಲಾ ಕಾರ್ಯಕ್ರಮಗಳಿಗೆ ಹಾಗೂ ಅವರ ಗ್ರಾಮಗಳ ಅಭಿವೃದ್ಧಿಗೆ ತಾವು ಶಾಸಕರಾಗಿದ್ದ ವೇಳೆ ಸಾಕಷ್ಟುಅನುದಾನ ನೀಡಿದ್ದೇನೆ. ತಮ್ಮ ಪಕ್ಷದ ಬೆಂಬಲಕ್ಕೆ ನಿಂತಿರುವ ವೀರಶೈವ ಸಮುದಾಯದ ಎಲ್ಲಾ ಮುಖಂಡರಿಗೂ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವುದಾಗಿ ಹೇಳಿದರು.
ಮುಖಂಡರುಗಳಾದ ಬೇವನಹಳ್ಳಿ ಬಸವರಾಜು, ಯಲ್ಲದಬಾಗಿ ಮಂಜಣ್ಣ, ಮಾಸ್ತಿಗೊಂಡನಹಳ್ಳಿ ದೇವರಾಜ್, ರಾಮಡಿಹಳ್ಳಿ ತ್ರೈಲೋಕ್, ಮಾಚೇನಹಳ್ಳಿ ರೇಣುಕಾ ಪ್ರಸಾದ್, ಕಾಚಿಹಳ್ಳಿ ಕುಮಾರಣ್ಣ, ಅರಳೀಕೆರೆ ಮೋಹನ್, ರುದ್ರೇಶ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.