
ಉಡುಪಿಯಲ್ಲಿ ಶ್ರೀಕೃಷ್ಣಾಷ್ಟಮಿ ಸಂಭ್ರಮದಲ್ಲಿ ಮಿಂಚಿದ ಕೊಹ್ಲಿ, ಕ್ರಿಸ್‌ಗೇಲ್..!
ಉಡುಪಿಯಲ್ಲಿ ಶ್ರೀಕೃಷ್ಣಾಷ್ಟಮಿ ಸಂಭ್ರಮದಲ್ಲಿ ಕ್ರಿಕೆಟರ್ ವಿರಾಟ್ ಕೊಹ್ಲಿ, ಕ್ರಿಸ್ ಗೇಲ್ ಐಪಿಎಲ್ ಕಪ್ ಹಿಡಿದುಕೊಂಡು ಕಾಣಿಸಿಕೊಂಡು ನೆರೆದಿದ್ದವರನ್ನು ಅಚ್ಚರಿ ಮೂಡಿಸಿದರು. ಅನೇಕರು ಇವರನ್ನು ನೋಡಿ ಸಂಭ್ರಮಪಟ್ಟರು ಸೆಲ್ಫಿ ತಗೊಂಡರು. ಆದರೆ ಅಷ್ಟೊಂದು ಜನಸಂದಣಿಯ ನಡುವೆಯೂ ಇಲ್ಲಿ ಯಾವುದೇ ನೂಕುನುಗ್ಗಲು ಮಾತ್ರ ಉಂಟಾಗಿರಲಿಲ್ಲ ಎಲ್ಲವೂ ಸಂಭ್ರಮದಿಂದಲೇ ಕೊನೆಗೊಂಡವು. ಏನ್ ಕ್ರಿಕೆಟರ್ ಕೊಹ್ಲಿ, ಕ್ರಿಸ್ ಗೇಲ್ ಉಡುಪಿಗ್ ಬಂದ್ರ ಅಂತ ನೀವು ಅಚ್ಚರಿ ಪಡೋದು ಗ್ಯಾರಂಟಿ. ಆದರೆ ಇಲ್ಲಿ ಇದ್ದಿದ್ದು, ನಕಲಿ ವಿರಾಟ್ ಕೊಹ್ಲಿ ಹಾಗೂ ಕ್ರಿಸ್‌ಗೇಲ್. ಕೆಲ ಯುವಕರು ಇಲ್ಲಿ ಕ್ರಿಕೆಟರ್‌ಗಳ ವೇಷ ತೊಟ್ಟು ನೆರದಿದ್ದವರನ್ನು ರಂಜಿಸಿದ್ರು. ಆದರೆ ಈ ವೇಷಧಾರಿಗಳು ಸೇಮ್ ಟು ಸೇಮ್ ರಿಯಲ್ ಕ್ರಿಕೆಟಿಗರಂತೆ ಕಾಣುತ್ತಿದ್ದಿದ್ದರಿಂದ ಜನ ಅವರನ್ನು ನೋಡಿ ಖುಷಿಪಟ್ಟು ಸೆಲ್ಫಿ ತೆಗೆದುಕೊಂಡರು.
ಹೌದು ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲ ಪಿಂಡಿ ಉತ್ಸವ ಬಹಳ ಅದ್ದೂರಿಯಾಗಿ ನಡೆಯಿತು. ಎಲ್ಲೆಡೆ ಕೃಷ್ಣಾಷ್ಟಮಿ ಒಂದು ದಿನ ನಡೆದರೆ ಉಡುಪಿಯಲ್ಲಿ ಅಷ್ಟಮಿ ಹಾಗೂ ರೋಹಿಣಿ ನಕ್ಷತ್ರ ಜೊತೆಯಾಗಿರುವ ದಿನವೇ ಬರುತ್ತದೆ. ಅದೇ ರೀತಿ ಈ ಬಾರಿ ಸೆಪ್ಟೆಂಬರ್ 14ರ ಮಧ್ಯರಾತ್ರಿ ರೋಹಿಣಿ ನಕ್ಷತ್ರ ಅಷ್ಟಮಿ ಜೊತೆಯಾಗಿ ಬಂದಿದ್ದು, ಉಡುಪಿಯ ಕೃಷ್ಣ ಮಠದಲ್ಲಿ ಅದ್ದೂರಿಯಾಗಿ ಕೃಷ್ಣಾಷ್ಟಮಿ ನಡೆಯಿತು. ಪರ್ಯಾಯ ಶ್ರೀಗಳು ಮಧ್ಯರಾತ್ರಿ 12.11ರ ರೋಹಿಣಿ ನಕ್ಷತ್ರದ ಶುಭಮುಹೂರ್ತದಲ್ಲಿ ಕೃಷ್ಣನಿಗೆ ಪ್ರಧಾನ ಅರ್ಘ್ಯ ಪ್ರದಾನ ಮಾಡಿದರು. ಕೃಷ್ಣಾಷ್ಟಮಿಯ ಅಂಗವಾಗಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಆಟೋಟ ಸ್ಪರ್ಧೆಗಳು ನಡೆದವು.
ಆರ್‌ಸಿಬಿ ಜೆರ್ಸಿ ಧರಿಸಿ ಕೈಯಲ್ಲಿ ಕಪ್ ಹಿಡಿದು ಬಂದ ಕೊಹ್ಲಿ, ಗೇಲ್…!
ಉಡುಪಿಯಲ್ಲಿ ಕೃಷ್ಣಾಷ್ಟಮಿ ದಿನದಂದು ಹಲವು ಪುಟ್ಟ ಮಕ್ಕಳ ಕೃಷ್ಣ ವೇಷದ ಜೊತೆ ಹಲವು ವೇಷಗಳು ಗಮನ ಸೆಳೆಯುತ್ತವೆ. ಅದರಲ್ಲಿ ಈ ಭಾರಿ ಹೆಚ್ಚಾಗಿ ಗಮನ ಸೆಳೆದಿದ್ದು ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ರೋಮಾರಿಯೋ ಶೆಫರ್ಡ್ ಜೋಡಿಯ ವೇಷಧಾರಿಗಳು ಆರ್‌ಸಿಬಿ ಜೆರ್ಸಿ ಧರಿಸಿದ್ದ ಈ ವೇಷಧಾರಿಗಳು ಕೈನಲ್ಲಿ ಐಪಿಎಲ್ ಕಪ್ ಹಿಡಿದು ಸೇಮ್ ಟು ಸೇಮ್ ಕ್ರಿಕೆಟರ್‌ಗಳಂತೆ ಕಾಣುತ್ತಿದ್ದು, ಜನರು ಇವರನ್ನು ಖುಷಿಪಟ್ಟಿದ್ದಾರೆ.
ಕೃಷ್ಣನೂರಿನಲ್ಲಿ ಮಿಂಚಿದ ಈ ನಕಲಿ ಕ್ರಿಕೆಟರ್‌ಗಳ ವೀಡಿಯೋಗಳು ಈಗ ಕರಾವಳಿಯ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಸಖತ್ ವೈರಲ್ ಆಗ್ತಿದೆ. ವೀಡಿಯೋ ನೋಡಿದವರು ಕೆಲ ಕ್ಷಣ ಹೌದಾ ಅಂತಾ ಅಚ್ಚರಿಪಟ್ಟಿದ್ದಾರೆ. ಕೊಹ್ಲಿ ವೇಷಧಾರಿಯಂತು ಸೇಮ್ ಟು ಸೇಮ್ ಕೊಹ್ಲಿಯಂತೆ ಕಾಣ್ತಿದ್ದು, ನೋಡುಗರು ಒಂದು ಕ್ಷಣ ಶಾಕ್ ಆಗಿದ್ದಾರೆ.
ನೆಟ್ಟಿಗರಿಂದ ಹಲವು ಕಾಮೆಂಟ್:
ವೀಡಿಯೋ ನೋಡಿದ ನೆಟ್ಟಿಗರು ಹಲವು ಕಾಮೆಂಟ್ ಮಾಡಿದ್ದಾರೆ. ಆರ್‌ಸಿಬಿ ತನ್ನ ಗೆಲುವಿನ ವಿಜಯೋತ್ಸವವನ್ನು ಉಡುಪಿಯಲ್ಲಿ ಯಾವುದೇ ನೂಕುನುಗ್ಗಲುಗಳಿಲ್ಲದೇ ಯಶಸ್ವಿಯಾಗಿ ನಡೆಸಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಕೆಲವರು ಇವರನ್ನು ಮಿಶೋದಲ್ಲಿ ಸಿಕ್ಕ ಆಟಗಾರರು ಎಂದು ಹಾಸ್ಯ ಮಾಡಿದ್ದಾರೆ. ಆರ್‌ಸಿಬಿ ವಿಜಯೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಿದ ಆಯೋಜಕರಿಗೆ ಅಭಿನಂದನೆಗಳು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ವೈರಲ್ ಆದ ವಿಡಿಯೋದಲ್ಲಿ ಈ ವೇಷಧಾರಿಗಳು ಸೇಮ್ ಟು ಸೇಮ್ ಕ್ರಿಕೆಟಿಗರಂತೆ ಕಾಣುತ್ತಿರುವುದರ ಜೊತೆಗೆ ಅವರಂತೆ ವರ್ತಿಸುವುದನ್ನು ಕಾಣಬಹುದು, ವಿರಾಟ್ ಕೊಹ್ಲಿ ಆರ್‌ಸಿಬಿ ಕಪ್ ಎತ್ತಿ ಹಿಡಿದು ಅಭಿಮಾನಿಗಳಿಗೆ ತೋರಿಸಿದಂತೆ ಇಲ್ಲೂ ಈ ವೇಷಧಾರಿ ಕೊಹ್ಲಿ ಹಾಗೆ ಮಾಡಿದ್ದಾರೆ. ಒಟ್ಟಿನಲ್ಲಿ ಇವರು ಕ್ರಿಕೆಟ್ ಅಭಿಮಾನಿಗಳನ್ನು ಸಾಕಷ್ಟು ರಂಜಿಸಿದ್ದಾರೆ.
ಇದನ್ನೂ ಓದಿ: ಇಸ್ರೇಲ್ ಹಮಾಸ್ ಯುದ್ಧಕ್ಕೆ ತುಪ್ಪ ಸುರಿದ ಅಮೆರಿಕಾ: ರುಬಿಯೋ ಹೇಳಿಕೆ ಬೆನ್ನಲೇ ದಾಳಿ ತೀವ್ರಗೊಳಿಸಿದ ಇಸ್ರೇಲ್
ಇದನ್ನೂ ಓದಿ: ದಾಖಲೆಯ ಏರಿಕೆ ಕಂಡ ಚಿನ್ನದ ದರ: ಬೆಳ್ಳಿ ಬೆಲೆಯಲ್ಲೂ ಭಾರಿ ಏರಿಕೆ: ಹೇಗಿದೆ ಇಂದು ಬೆಳ್ಳಿ ಬಂಗಾರ ದರ