
ಬೆಂಗಳೂರು (ನ.8): ದೀಪಾವಳಿ ಮುಗಿಸಿ ಬೆಂಗಳೂರಿಗೆ ಬರುವಾಗ ಕರ್ನೂಲ್‌ನಲ್ಲಿ ನಡೆದ ಬಸ್ ಅಪಘಾತದಲ್ಲಿ 20 ಮಂದಿ ಸಜೀವ ದಹನವಾಗಿರುವ ಸುದ್ದಿ ಇನ್ನು ನೆನಪಿನಲ್ಲಿಯೇ ಇದೆ. ಇದರ ನಡುವೆ ಸಾರಿಗೆ ಇಲಾಖೆ ಖಾಸಗಿ ಬಸ್‌ಗಳ ಪರಿಶೀಲನೆ ನಡೆಸುತ್ತಿದ್ದು, ಅನಧಿಕೃತ ಎನಿಸುವ ಬಸ್‌ಗಳನ್ನು ಸೀಜ್ ಮಾಡುತ್ತಿದೆ. ಇದರ ನಡುವೆ ಬಸ್ ಡ್ರೈವರ್‌ಗಳ ಉದಾಸೀನತೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಖಾಸಗಿ ವಲಯದ ಪ್ರಮುಖ ಟ್ರಾವೆಲ್ ಕಂಪನಿ ಆಗಿರುವ ವಿಆರ್‌ಎಲ್‌ನ ಡ್ರೈವರ್ ಬಿಗ್‌ಬಾಸ್ ನೋಡುತ್ತಾ ಬಸ್ ರೈಡ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಬಸ್ ಗಂಟೆಗೆ 80 ಕಿಲೋಮೀಟರ್ ವೇಗದಲ್ಲಿ ಹೋಗುತ್ತಿರುವ ವೇಳೆ, ಡ್ರೈವರ್ ಬಿಗ್‌ಬಾಸ್ ನೋಡುತ್ತಾ ಬಸ್ ರೈಡ್ ಮಾಡುತ್ತಿರುವುದನ್ನು ಪ್ರಯಾಣಿಕನೊಬ್ಬ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
'ಆಕ್ಸಿಡೆಂಟ್‌ಗಳಿಗೆ ಇದೂ ಒಂದು ಕಾರಣ' ಎಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಡ್ರೈವರ್ ಬಸ್‌ನ ಸ್ಟೇರಿಂಗ್ ವೀಲ್‌ನ ಕೆಳಗೆ ಮೊಬೈಲ್ ಇಟ್ಟು ಬಿಗ್‌ಬಾಸ್ ನೋಡುತ್ತಿರುವುದು ಕಂಡಿದೆ. ಮಧ್ಯರಾತ್ರಿ 2.50ರ ಸುಮಾರಿಗೆ ಈ ವಿಡಿಯೋ ಮಾಡಿದ್ದಾಗಿ ತೋರಿಸಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಪೋಸ್ಟ್ ಆಗುತ್ತಿದ್ದಂತೆ ವಿಆರ್‌ಎಲ್ ಬಸ್ ಡ್ರೈವರ್ ವಿರುದ್ಧ ಕ್ರಮ ತೆಗೆದುಕೊಂಡಿದ್ದನ್ನೂ ತಿಳಿಸಿದೆ. 'ನಿಮ್ಮ ದೂರಿನ ನಂತರ, ಆಂತರಿಕ ವಿಚಾರಣೆ ನಡೆಸಲಾಯಿತು ಮತ್ತು ಸಂಬಂಧಪಟ್ಟ ಚಾಲಕನ ನಿರ್ಲಕ್ಷ್ಯ ವರ್ತನೆಯಿಂದಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಕರ್ತವ್ಯದಿಂದ ಅವರನ್ನು ಬಿಡುಗಡೆ ಮಾಡಲಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ತರುವ ಯಾವುದೇ ಕ್ರಮವನ್ನು ವಿಜಯಾನಂದ್ ಟ್ರಾವೆಲ್ಸ್ ಸಹಿಸುವುದಿಲ್ಲ. ಈ ವಿಚಾರದಲ್ಲಿ ಶೂನ್ಯ ಸಹಿಷ್ಣುತೆಯನ್ನು ಕಾಯ್ದುಕೊಳ್ಳುತ್ತದೆ.
ನಮ್ಮ ಟ್ರಾವೆಲ್ ವಿಭಾಗದಲ್ಲಿ 1,300 ಕ್ಕೂ ಹೆಚ್ಚು ಚಾಲಕರು ಮತ್ತು ಲಾಜಿಸ್ಟಿಕ್ಸ್‌ನಲ್ಲಿ 10,000+ ಚಾಲಕರೊಂದಿಗೆ, ನಾವು ನಿರಂತರವಾಗಿ ನಿಯಮಿತ ಸುರಕ್ಷತಾ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತೇವೆ. ಈ ರೀತಿಯ ಘಟನೆಗಳು ಅತ್ಯಂತ ಅಪರೂಪ, ಮತ್ತು ಇದನ್ನು ನಮ್ಮ ಗಮನಕ್ಕೆ ತಂದಿದ್ದಕ್ಕಾಗಿ ನಾವು ನಿಮಗೆ ಪ್ರಾಮಾಣಿಕವಾಗಿ ಧನ್ಯವಾದ ಹೇಳುತ್ತೇವೆ.
ದಯವಿಟ್ಟು ಖಚಿತವಾಗಿರಿ, ಎಲ್ಲಾ ಚಾಲಕರು ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಸದಂತೆ ನಾವು ಕಟ್ಟುನಿಟ್ಟಿನ ಸೂಚನೆಗಳನ್ನು ಬಲಪಡಿಸಿದ್ದೇವೆ. ಮತ್ತೊಮ್ಮೆ, ಅಹಿತಕರ ಅನುಭವಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ ಮತ್ತು ನಮ್ಮ ಸುರಕ್ಷತಾ ಮಾನದಂಡಗಳನ್ನು ಕಾಪಾಡಿಕೊಳ್ಳಲು ನಮಗೆ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದ ಹೇಳುತ್ತೇವೆ ಎಂದು ಬರೆದುಕೊಂಡಿದೆ.
ತ್ವರಿತ ಕ್ರಮಕ್ಕಾಗಿ ಕೆಲವರು ವಿಆರ್‌ಎಲ್ ಟ್ರಾವೆಲ್ಸ್‌ಅನ್ನು ಶ್ಲಾಘಿಸಿದ್ದರೆ ಇನ್ನೂ ಕೆಲವರು ಚಾಲಕರನ್ನು ನೇಮಕ ಮಾಡುವ ವೇಳೆ ಕೆಲವೊಂದು ನಿಯಮಗಳನ್ನು ಪಾಲಿಸಿ ಎಂದು ಸಲಹೆ ನೀಡಿದ್ದಾರೆ.
'ಪ್ರಯಾಣಿಕರ ಸುರಕ್ಷತೆಗೆ ಚಾಲಕರ ಬದ್ಧತೆಯನ್ನು ನಿರ್ದಿಷ್ಟವಾಗಿ ನಿರ್ಣಯಿಸುವ ಸಂದರ್ಶನಗಳನ್ನು ಸೇರಿಸಲು ನಿಮ್ಮ ನೇಮಕಾತಿ ಪ್ರಕ್ರಿಯೆಯನ್ನು ಹೆಚ್ಚಿಸುವಂತೆ ಸೂಚಿಸಲು ಬಯಸುತ್ತೇನೆ. ಇದಲ್ಲದೆ, ಬೇಸಿಕ್ಸ್ ಎಥಿಕ್ಸ್, ಪ್ರಯಾಣಿಕರೊಂದಿಗೆ ಸಂವಹನ ನಡೆಸುವಾಗ ವೃತ್ತಿಪರ ಸಭ್ಯತೆ ಮತ್ತು ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ ಕಡ್ಡಾಯ ತರಬೇತಿಯನ್ನು ನೀಡುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ನಿಮ್ಮ ಚಾಲಕರು ಮತ್ತು ಸಿಬ್ಬಂದಿಯಲ್ಲಿ ಪ್ರಯಾಣಿಕರು ಇರಿಸುವ ನಂಬಿಕೆಯ ಮಟ್ಟ ಮತ್ತು ಅನೇಕ ಜೀವಗಳಿಗೆ ಅವರ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು, ಸುರಕ್ಷತೆ ಮತ್ತು ನಡವಳಿಕೆಯ ಮೇಲೆ ಈ ಗಮನವು ನಿರ್ಣಾಯಕವಾಗಿದೆ'ಎಂದು ಬರೆದಿದ್ದಾರೆ.