
ನವದೆಹಲಿ (ನ.8): ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದ ಎ1 ಆರೋಪಿ ಪವಿತ್ರಾ ಗೌಡಗೆ ನಿರಾಸೆಯಾಗಿದೆ.ಆಕೆಯ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸಂಪೂರ್ಣ ಅರ್ಜಿಯನ್ನು ಸಾರಾಸಗಟಾಗಿ ವಜಾ ಮಾಡಿದೆ. ಈ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು. ಸುಪ್ರೀಂ ನೀಡಿದ ಈ ತೀರ್ಪಿನ ಕುರಿತು ಪವಿತ್ರಾ ಗೌಡ ಮರುಪರಿಶೀಲನಾ ಅರ್ಜಿ ಸಲ್ಲಿಕೆ ಮಾಡಿದ್ದರು. ಆಗಸ್ಟ್ 14ರಂದು, ನಟ ದರ್ಶನ್ ಮತ್ತು ಇತರ ಆರೋಪಿಗಳಿಗೆ ಜಾಮೀನು ನೀಡಿದ ಕರ್ನಾಟಕ ಹೈಕೋರ್ಟ್‌ನ 2024ರ ಡಿಸೆಂಬರ್ 13ರ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು.
ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್ ಮಹಾದೇವನ್ ಅವರ ಪೀಠವು ನವೆಂಬರ್ 6 ರಂದು ನೀಡಿದ ಆದೇಶದಲ್ಲಿ, ತೀರ್ಪನ್ನು ಪರಿಶೀಲಿಸಲು ಯಾವುದೇ ಆಧಾರವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
"ನಾವು ಸದರಿ ಆದೇಶ ಮತ್ತು ದಾಖಲೆಯನ್ನು ಎಚ್ಚರಿಕೆಯಿಂದ ಪರಿಶೀಲಿಸಿದ್ದೇವೆ. ನಮ್ಮ ಅಭಿಪ್ರಾಯದಲ್ಲಿ, ಪುನರ್ ಪರಿಶೀಲನೆಗೆ ಯಾವುದೇ ಪ್ರಕರಣವನ್ನು ಸಲ್ಲಿಸಲಾಗಿಲ್ಲ. ಪರಿಣಾಮವಾಗಿ, ಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ" ಎಂದು ಪೀಠ ಹೇಳಿದೆ. ಪುನರ್ ಪರಿಶೀಲನಾ ಅರ್ಜಿಯನ್ನು ನ್ಯಾಯಾಧೀಶರು ವಕೀಲರ ಸಹಾಯವಿಲ್ಲದೆ, ಸರ್ಕುಲೇಷನ್ ಆಫ್ ಪೇಪರ್ಸ್ ಮೂಲಕ ವಿಚಾರಣೆ ನಡೆಸುತ್ತಾರೆ.
ಜಾಮೀನು ರದ್ದಾದ ಇತರ ಆರೋಪಿಗಳೆಂದರೆ ನಾಗರಾಜು ಆರ್, ಅನು ಕುಮಾರ್ ಅಲಿಯಾಸ್ ಅನು, ಲಕ್ಷ್ಮಣ್ ಎಂ, ಪವಿತ್ರ ಗೌಡ, ಜಗದೀಶ್ ಅಲಿಯಾಸ್ ಜಗ್ಗ, ಪ್ರದೂಷ್ ಎಸ್ ರಾವ್ ಅಲಿಯಾಸ್ ಪ್ರದೂಷ್.
ಚಿತ್ರದುರ್ಗ ಮೂಲದ 33 ವರ್ಷದ ರೇಣುಕಾಸ್ವಾಮಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 47 ವರ್ಷದ ಕನ್ನಡ ನಟ ದರ್ಶನ್ ಅವರನ್ನು ಜೂನ್ 11, 2024 ರಂದು ಬಂಧಿಸಲಾಯಿತು. 2024ರ ಜೂನ್ 9 ರಂದು ಬೆಂಗಳೂರಿನ ಮಳೆನೀರಿನ ಚರಂಡಿ ಬಳಿ ರೇಣುಕಾಸ್ವಾಮಿ ಶವ ಪತ್ತೆಯಾಗಿತ್ತು.ಪೊಲೀಸರ ಪ್ರಕಾರ, ರೇಣುಕಸ್ವಾಮಿ ದರ್ಶನ್ ಅವರ ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ, ಇದು ನಟನನ್ನು ಕೆರಳಿಸಿತ್ತು. ಪೊಲೀಸ್ ತನಿಖೆಯ ಪರಿಣಾಮವಾಗಿ ನಟ ದರ್ಶನ್, ಅವರ ಆಪ್ತ ಸ್ನೇಹಿತೆ ಪವಿತ್ರಾ ಗೌಡ ಮತ್ತು ಇತರ 15 ಸಹಚರರನ್ನು ಬಂಧಿಸಲಾಯಿತು.
ಬೆಂಗಳೂರು ಪೊಲೀಸರು 2024 ಸೆಪ್ಟೆಂಬರ್ 3ರಂದು ಪವಿತ್ರಾ ಅವರನ್ನು 1 ನೇ ಆರೋಪಿಯನ್ನಾಗಿ ಮತ್ತು ದರ್ಶನ್ ಅವರನ್ನು 2 ನೇ ಆರೋಪಿಯನ್ನಾಗಿ ಹೆಸರಿಸಿ ಚಾರ್ಜ್‌ಶೀಟ್ ಸಲ್ಲಿಸಿದರು. ಪವಿತ್ರಾ ಅವರಿಗೆ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿದ್ದ ರೇಣುಕಸ್ವಾಮಿಯ ಕೃತ್ಯವೇ ಅಪರಾಧದ ಉದ್ದೇಶ ಎಂದು ಪೊಲೀಸರು ಹೇಳಿದ್ದಾರೆ.