* ಆರ್‌ಎಸ್‌ಎಸ್ ಬೈಠಕ್‌ನಲ್ಲಿ ಬಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆದ ಹಿಂಸಾಚಾರಕ್ಕೆ ಕಿಡಿ
* ಬಾಂಗ್ಲಾ ದೇಶಕ್ಕೆ ಖಡಕ್ ಎಚ್ಚರಿಕೆ ನೀಡುವಂತೆ ಸಂಘ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಆಗ್ರಹ
* ಸಂತ್ರಸ್ತರ ಪರ ಆರ್‌ಎಸ್‌ಎಸ್
ಧಾರವಾಡ(ಅ.30): ಬಾಂಗ್ಲಾದೇಶದಲ್ಲಿ(Bangladesh) ಹಿಂದೂ ಅಲ್ಪಸಂಖ್ಯಾತರ ಮೇಲೆ ಇತ್ತೀಚೆಗೆ ನಡೆದ ಆಕ್ರಮಣ ಮತ್ತು ಹಿಂಸಾಚಾರವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಗಂಭೀರವಾಗಿ ಪರಿಗಣಿಸಿದೆ. ಇಲ್ಲಿಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ಆರ್‌ಎಸ್‌ಎಸ್(RSS) ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ಗೊತ್ತುವಳಿ ಸಹ ಸ್ವೀಕರಿಸಿದೆ.
ಭಾರತ ಸರ್ಕಾರ(Government of India) ರಾಜತಾಂತ್ರಿಕ ಮಾರ್ಗಗಳ ಮೂಲಕ ಬಾಂಗ್ಲಾ ಸರ್ಕಾರ(Government of Bangladesh) ಹಿಂದೂ(Hindu) ಮತ್ತು ಇತರ ಅಲ್ಪಸಂಖ್ಯಾತರ(Minorities) ಹಿತರಕ್ಷಣೆಗೆ ಕಠಿಣ ಕ್ರಮ ಕೈಗೊಳ್ಳುವಂತೆ ಈ ಗೊತ್ತುವಳಿಯಲ್ಲಿ ಒತ್ತಾಯಿಸಿದ್ದು, ಅಲ್ಲಿ ನಡೆದಿರುವ ಹಿಂಸಾಚಾರ(Violence) ಆಕಸ್ಮಿಕವಲ್ಲ, ಅದು ಇಸ್ಲಾಂ ಸಂಘಟನೆಗಳಾದ(Islamic Organizations) ಜಮಾತೆ ಇಸ್ಲಾಂ ಮತ್ತಿತರ ಸಂಘಟನೆಗಳಿಂದ ನಡೆದ ಪೂರ್ವ ಯೋಜಿತ ದೌರ್ಜನ್ಯ. ಇದು ಬಾಂಗ್ಲಾ ದೇಶದಿಂದ ಹಿಂದೂಗಳನ್ನು ಉಚ್ಛಾಟನೆ ಮಾಡಿ ದೇಶವನ್ನು ಸಂಪೂರ್ಣ ಇಸ್ಲಾಮೀಕರಣ ಮಾಡುವ ಜಿಹಾದಿ ಗುಂಪುಗಳ ಹುನ್ನಾರವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಧಾರವಾಡ: ಆರ್‌ಎಸ್‌ಎಸ್ ಬೈಠಕ್ ಆರಂಭ
ಬಾಂಗ್ಲಾದಲ್ಲಿ ಹಿಂದೂ ಅಲ್ಪಸಂಖ್ಯಾತರು ಮತ್ತು ಹಿಂದೂ ದೇವಾಲಯಗಳ(Hindu Temles) ಮೇಲೆ ಆಕ್ರಮಣ ಅವ್ಯಾಹತವಾಗಿ ನಡೆದಿದೆ. ಇತ್ತೀಚೆಗೆ ದುರ್ಗಾ ಪೂಜೆ ವೇಳೆ ನಡೆದ ಆಕ್ರಮಣದಲ್ಲಿ ಅನೇಕ ಮುಗ್ದ ಹಿಂದೂಗಳನ್ನು ಕೊಲ್ಲಲಾಗಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ ಮತ್ತು ಸಾವಿರಾರು ಕುಟುಂಬಗಳು ನಿರಾಶ್ರಿತವಾಗಿವೆ. ಈ ಆಕ್ರಮಣಕ್ಕೆ ಸಂಬಂಧಿಸಿದಂತೆ ಕೆಲ ಆರೋಪಿಗಳ ಬಂಧನವಾಗಿದ್ದು ಅವರು ಮತೀಯ ಭಾವನೆ ಕೆರಳಿಸುವ ರೀತಿಯಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದಾರೆ. ಇದು ಉಗ್ರಗಾಮಿ(Terrorist) ಇಸ್ಲಾಮಿಯರ ಪೂರ್ವ ನಿಯೋಜಿತ ಕೃತ್ಯ ಎಂದು ಬಯಲಾಗಿದೆ. ಮೇಲಿಂದ ಮೇಲೆ ನಿರ್ದಿಷ್ಟ ಗುಂಪುಗಳನ್ನು ಗುರಿಯಾಗಿಸಿಟ್ಟುಕೊಂಡು ನಡೆಸಿರುವ ಹಲ್ಲೆ, ಬಾಂಗ್ಲಾದೇಶದಲ್ಲಿ ಈಗಾಗಲೇ ಸಾಕಷ್ಟು ಕ್ಷೀಣವಾಗಿರುವ ಹಿಂದೂಗಳ ಜನಸಂಖ್ಯೆಯನ್ನು ಸಂಪೂರ್ಣ ನಿರ್ನಾಮಗೊಳಿಸುವ ಸಂಚು ಎಂಬುದು ಬಯಲಾಗಿದೆ ಎಂದು ಸಂಘ ಸೂಚ್ಯವಾಗಿ ಹೇಳಿದೆ.
1947ರಲ್ಲಿ ಭಾರತ(India) ಇಬ್ಭಾಗವಾದಾಗ ಪೂರ್ವ ಬಂಗಾಲದಲ್ಲಿ ಹಿಂದೂಗಳ ಸಂಖ್ಯೆ ಶೇ. 28 ಇದ್ದದ್ದು ಈಗ ಶೇ. 8ಕ್ಕೆ ಇಳಿದಿದೆ. ಜಮಾತೆ ಇಸ್ಲಾಂನಂತಹ ಸಂಘಟನೆಗಳ ದೌರ್ಜನ್ಯದಿಂದಾಗಿ ಸಾವಿರಾರು ಸಂಖ್ಯೆಯಲ್ಲಿ ಹಿಂದೂಗಳು ಬಾಂಗ್ಲಾದಿಂದ ಭಾರತಕ್ಕೆ ವಲಸೆ ಬಂದಿದ್ದಾರೆ. ವಿಶೇಷವಾಗಿ 1971ರ ಯುದ್ಧದ ನಂತರ ಈ ಸಂಖ್ಯೆ ಹೆಚ್ಚಾಗಿದೆ. ಈಗಲೂ ಉಗ್ರಗಾಮಿ ಇಸ್ಲಾಂ(Islam) ಸಂಘಟನೆಗಳು ಬಾಂಗ್ಲಾದಲ್ಲಿ ಮತೀಯ ಸೌಹಾರ್ದ ಕೆಡಿಸಿ ಹಿಂದೂಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಬಾಂಗ್ಲಾ ದೇಶದಲ್ಲಿರುವ ಬೌದ್ಧರು(Buddhists) ಹಾಗೂ ಹಿಂದೂಗಳಲ್ಲಿ ತಾವು ಆ ದೇಶದಲ್ಲಿ ಸುರಕ್ಷಿತವಾಗಿದ್ದೇವೆ ಎಂಬ ಭಾವನೆ ಮೂಡುವಂತಾಗಬೇಕಾದರೆ ಅಲ್ಲಿನ ಸರ್ಕಾರ ಆಕ್ರಮಣಕಾರರಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಿ ದೌರ್ಜನ್ಯ ತಡೆಯಲು ಕ್ರಮ ಕೈಗೊಳ್ಳಬೇಕು. ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ಮತ್ತು ಇತರ ಅಂತಾರಾಷ್ಟ್ರೀಯ ಸಂಸ್ಥೆಗಳು ಈ ಬಗ್ಗೆ ಧ್ವನಿ ಎತ್ತಿ ಸರ್ಕಾರಕ್ಕೆ ಸೂಕ್ತ ಎಚ್ಚರಿಕೆ ನೀಡಬೇಕು ಎಂದು ಸಂಘ ಆಗ್ರಹಿಸಿದೆ.
ಉಗ್ರಗಾಮಿ ಇಸ್ಲಾಂ ಶಕ್ತಿಗಳು ಜಗತ್ತಿನ ಯಾವುದೇ ಭಾಗದಲ್ಲಿ ತಲೆ ಎತ್ತಿದರೂ ಅದು ಪ್ರಜಾಪ್ರಭುತ್ವ(Democracy) ಮತ್ತು ಶಾಂತಿಬಯಸುವ ಜಗತ್ತಿನ ರಾಷ್ಟ್ರಗಳ ಜನರ ಮಾನವ ಹಕ್ಕಿನ ಉಲ್ಲಂಘನೆ ಎಂದು ಸಂಘ ಅಭಿಪ್ರಾಯ ಪಟ್ಟಿದ್ದು, ಇಸ್ಕಾನ್, ರಾಮಕೃಷ್ಣ ಮಿಶನ್, ಭಾರತ ಸೇವಾಶ್ರಮ ಸಂಘ ಮತ್ತು ವಿಶ್ವಹಿಂದೂ ಪರಿಷತ್ ಮುಂತಾದ ಸಂಘಟನೆಗಳು ಇಸ್ಲಾಂ ಹಿಂಸೆಯ ಸಂತ್ರಸ್ತರ ಪರವಾಗಿ ನಿಂತಿದ್ದು ಸ್ವಾಗತಾರ್ಹ. ಆರ್‌ಎಸ್‌ಎಸ್ ಕೂಡಾ ಈ ಸಂತ್ರಸ್ತರ ಪರವಾಗಿದೆ ಎಂದು ಗೊತ್ತುವಳಿಯಲ್ಲಿ ಹೇಳಾಗಿದೆ.