Breaking: ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ಶಾಸಕ ಸ್ಥಾನದಿಂದ ಅನರ್ಹತೆ ಸಾಧ್ಯತೆ, ನಾಳೆ ಅಧಿಸೂಚನೆ ಪ್ರಕಟ?

Published : Apr 17, 2026, 04:28 PM ISTUpdated : Apr 17, 2026, 04:35 PM IST
vinay kulkarni

ಸಾರಾಂಶ

ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಧಾರವಾಡ ಶಾಸಕ ವಿನಯ್ ಕುಲಕರ್ಣಿ, ತಮ್ಮ ಶಾಸಕ ಸ್ಥಾನದಿಂದ ಅನರ್ಹಗೊಳ್ಳುವ ಭೀತಿಯಲ್ಲಿದ್ದಾರೆ. ನ್ಯಾಯಾಲಯದ ತೀರ್ಪಿನ ಪ್ರತಿ ಕೈಸೇರಿದ ತಕ್ಷಣ ಸ್ಪೀಕರ್ ಕಚೇರಿಯು ಅನರ್ಹತೆಯ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆಸಿದೆ.

ಬೆಂಗಳೂರು (ಏ.17): ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಧಾರವಾಡ ಶಾಸಕ ವಿನಯ್ ಕುಲಕರ್ಣಿಗೆ ಜನಪ್ರತಿನಿಧಿ ನ್ಯಾಯಾಲ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿರುವುದು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ನ್ಯಾಯಾಲಯದ ಈ ಆದೇಶದ ಬೆನ್ನಲ್ಲೇ ಅವರ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ಕುತ್ತು ಬಂದಿದ್ದು, ಸದ್ಯದಲ್ಲೇ ಅನರ್ಹತೆಯ ಭೀತಿ ಎದುರಾಗಿದೆ.

ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನವನ್ನು ರದ್ದುಗೊಳಿಸುವ ಪ್ರಕ್ರಿಯೆಗೆ ವಿಧಾನಸಭೆ ಸ್ಪೀಕರ್ ಕಚೇರಿ ಸಿದ್ಧತೆ ನಡೆಸುತ್ತಿದೆ. ನ್ಯಾಯಾಲಯದ ಅಧಿಕೃತ ತೀರ್ಪಿನ ಪ್ರತಿ (Order Copy) ಕೈ ಸೇರಿದ ಕೂಡಲೇ ಅನರ್ಹತೆಯ ಆದೇಶವನ್ನು ಪ್ರಕಟಿಸಲು ಸ್ಪೀಕರ್ ಕಚೇರಿ ನಿರ್ಧರಿಸಿದೆ. ಕಾನೂನು ತಜ್ಞರ ಸಲಹೆಯ ಮೇರೆಗೆ ಈ ಅಧಿಸೂಚನೆ ಹೊರಬೀಳಲಿದೆ.

ನಾಳೆ ಅಧಿಕೃತ ಅಧಿಸೂಚನೆ ಸಾಧ್ಯತೆ

ವಿಧಾನಸಭಾ ಸ್ಪೀಕರ್ ಕಚೇರಿಯ ಮೂಲಗಳ ಪ್ರಕಾರ, ನಾಳೆಯೊಳಗೆ (ಶನಿವಾರ) ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಅಧಿಸೂಚನೆ ಹೊರಡಿಸುವ ಸಾಧ್ಯತೆಯಿದೆ. ಜನಪ್ರತಿನಿಧಿಗಳ ಕಾಯ್ದೆಯ ಪ್ರಕಾರ, ಯಾವುದೇ ಚುನಾಯಿತ ಪ್ರತಿನಿಧಿಗೆ ಎರಡು ವರ್ಷಕ್ಕಿಂತ ಹೆಚ್ಚು ಕಾಲ ಶಿಕ್ಷೆಯಾದರೆ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ಅನರ್ಹರಾಗುತ್ತಾರೆ. ವಿನಯ್ ಕುಲಕರ್ಣಿ ಅವರಿಗೆ ಜೀವಾವಧಿ ಶಿಕ್ಷೆಯಾಗಿರುವುದರಿಂದ ಅವರು ಶಾಸಕ ಸ್ಥಾನವನ್ನು ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ. ಈ ಬೆಳವಣಿಗೆಯಿಂದ ಧಾರವಾಡ ರಾಜಕಾರಣದಲ್ಲಿ ಭಾರಿ ಬದಲಾವಣೆಗಳಾಗುವ ಮುನ್ಸೂಚನೆ ಸಿಕ್ಕಿದ್ದು, ಒಂದು ವೇಳೆ ಅನರ್ಹತೆ ಪ್ರಕಟವಾದರೆ ಆ ಕ್ಷೇತ್ರದಲ್ಲಿ ಉಪಚುನಾವಣೆಯ ಅನಿವಾರ್ಯತೆ ಎದುರಾಗಲಿದೆ.

89,333 ಮತ ಗಳಿಸಿದ್ದ ವಿನಯ್‌ ಕುಲಕರ್ಣಿ

2023ರ ವಿಧಾನಸಭೆ ಚುನಾವಣೆ ವೇಳೆ ವಿನಯ್‌ ಕುಲಕರ್ಣಿಗೆ ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಹೋಗಲು ಕೂಡ ಕೋರ್ಟ್‌ ಅವಕಾಶ ನೀಡಿರಲಿಲ್ಲ. ಈ ವೇಳೆ ವಿನಯ್‌ ಕುಲಕರ್ಣಿಯ ಹೆಂಡ್ತಿ ಹಾಗೂ ಮಕ್ಕಳು ಪ್ರಚಾರ ನಡೆಸಿ ಗೆಲುವು ತಂದುಕೊಟ್ಟಿದ್ದರು. ವಿನಯ್‌ ಕುಲಕರ್ಣಿ 89,333 ಮತಗಳಿಸಿದ್ದರೆ, 2ನೇ ಸ್ಥಾನ ಪಡೆದಿದ್ದ ಬಿಜೆಪಿಯ ಅಮೃತ್‌ ಅಯ್ಯಪ್ಪ ದೇಸಾಯಿ 71, 296 ಮತ ಸಂಪಾದನೆ ಮಾಡಿದ್ದರು. ಬರೋಬ್ಬರಿ 18,037 ಮತಗಳ ಅಂತರದಿಂದ ವಿನಯ್‌ ಕುಲಕರ್ಣಿ ಗೆದ್ದಿದ್ದರು. ಅದಕ್ಕೂ ಮುನ್ನ 2013ರ ಚುನಾವಣೆಯಲ್ಲೂ ಈತ ಶಾಸಕನಾಗಿದ್ದ. ಆಗ 18,320 ಮತಗಳಿಂದ 2ನೇ ಸ್ಥಾನ ಪಡೆದಿದ್ದ ಆಗ ಜೆಡಿಎಸ್‌ನಲ್ಲಿದ್ದ ಅಮೃತ್‌ ಅಯ್ಯಪ್ಪ ದೇಸಾಯಿಯನ್ನು ಸೋಲಿಸಿದ್ದರು.

PREV
Read more Articles on
click me!

Recommended Stories

Breaking: ಯೋಗೇಶ್ ಗೌಡ ಹತ್ಯೆ ಪ್ರಕರಣ: ಕೊಲೆಗಾರ ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟ
ಮಂಡ್ಯ: ಸ್ಟ್ಯಾಲಿನ್ ಗೆ ಬುದ್ದಿ ಇಲ್ಲ ಬುದ್ದಿ ಕಡಿಮೆ, ಆರ್. ಅಶೋಕ್ ಮಾತಿನ ಸಮರ