ವ್ಹೀಲ್ ಚೇರ್ ನೀಡದ ವಿಮ್ಸ್ ಸಿಬ್ಬಂದಿ: ಹೃದ್ರೋಗಿ ಮಗಳ ಹೆಗಲ ಮೇಲೆ ಹೊತ್ತು ಓಡಿದ ತಂದೆ| ವಿಮ್ಸ್ ಸಿಬ್ಬಂದಿ ಅಮಾನವೀಯ ವರ್ತನೆಗೆ ಸಾರ್ವಜನಿಕರ ಹಿಡಿಶಾಪ| ಮಗಳ ಜೀವ ಉಳಿಸಿಕೊಳ್ಳಲು ಹೆಗಲ ಮೇಲೆ ಹೊತ್ತು ಸಾಗುವ ವೀಡಿಯೋ ವೈರಲ್
ಬಳ್ಳಾರಿ[ಜ.24]: ಮಾನವೀಯತೆ ಮರೆತ ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಸಿಬ್ಬಂದಿ ಹೃದ್ರೋಗಪೀಡಿತ ಶಾಲೆಯ ವಿದ್ಯಾರ್ಥಿನಿಯನ್ನು ಮತ್ತೊಂದು ವಾರ್ಡ್‌ಗೆ ಸಾಗಿಸಲು ವ್ಹೀಲ್ ಚೇರ್ ನೀಡದಿರುವ ಹಿನ್ನೆಲೆಯಲ್ಲಿ ತಂದೆಯೇ ಮಗಳನ್ನು ಹೆಗಲ ಮೇಲೆ ಹೊತ್ತು ಬೇರೆ ವಾರ್ಡ್‌ಗೆ ದಾಖಲು ಮಾಡಿದ ಅಮಾನವೀಯ, ಅನಾಗರಿಕ ಘಟನೆ ಬುಧವಾರ ನಡೆದಿದೆ.
ಸ್ವತಃ ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲೇ ಇಂತಹ ಘಟನೆ ನಡೆದಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವಿಮ್ಸ್‌ನ ಸಿಬ್ಬಂದಿಯ ನಡೆಗೆ ಸಾರ್ವಜನಿಕರು ತೀವ್ರವಾಗಿ ಖಂಡಿಸಿದ್ದಲ್ಲದೇ ಛೀಮಾರಿ ಹಾಕಿದ್ದಾರೆ.
undefined
ನನ್ನ ಮಗಳು ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದು ಬೇರೆ ಘಟಕಕ್ಕೆ ಕರೆದೊಯ್ಯಲು ವ್ಹೀಲ್‌ಚೇರ್ ನೀಡಿ ಎಂದು ತಂದೆ ಬೇಡಿದರೂ ಸ್ಪಂದಿಸದ ವಿಮ್ಸ್‌ನ ಸಿಬ್ಬಂದಿಯೊಬ್ಬರ ನಿಷ್ಕಾಳಜಿಯಿಂದ ಆತಂಕಗೊಂಡ ಆ ತಂದೆ ಮಗಳನ್ನು ಹೆಗಲ ಮೇಲೆ ಹೊತ್ತು ಬೇರೆ ವಾರ್ಡ್‌ಗೆ ಓಡೋಡಿಕೊಂಡು ದಾಖಲು ಮಾಡಿದ್ದಾರೆ.
ಆಸ್ಪತ್ರೆ ನಿರ್ಲಕ್ಷ್ಯ: ಅಪ್ರಾಪ್ತ ರೇಪ್ ಸಂತ್ರಸ್ತೆಯನ್ನು ಹೊತ್ತು ಬಂದ ತಂದೆ!
ಆಗಿದ್ದೇನು?
ಸಿರುಗುಪ್ಪ ತಾಲೂಕಿನ ಶಾನವಾಸಪುರ ಗ್ರಾಮದ ನಿವಾಸಿ ಮಾಬಾಷಾ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ತನ್ನ ಮಗಳಿಗೆ ಈ ಹಿಂದೆ ಚಿಕಿತ್ಸೆ ನೀಡಿಸಿದ್ದರು. ಬಳಿಕ 15 ದಿನಗಳ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಎಂಟನೇ ತರಗತಿಯಲ್ಲಿ ಓದುತ್ತಿರುವ ಈ ಬಾಲಕಿ ಗುರುವಾರ ಶಾಲೆಯಲ್ಲಿರುವಾಗ ಮೂರ್ಛೆ ಬಂದು ಬಿದ್ದಿದ್ದಾಳೆ.
ಕೂಡಲೇ ಶಾಲೆಯ ಶಿಕ್ಷಕರು ಪೋಷಕರು ಮಾಹಿತಿ ನೀಡಿದ್ದು, ಅಂಬ್ಯುಲೆನ್ಸ್ ಮೂಲಕ ಬಳ್ಳಾರಿ ವಿಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದ ಬಳಿ ಕರೆತರಲಾಗಿದೆ. ಹೃದಯಸಂಬಂಧಿ ಸಮಸ್ಯೆಗೆ ಚಿಕಿತ್ಸೆ ನೀಡುವ ವಾರ್ಡ್ ಇದಲ್ಲ. ಬೇರೆ ವಾರ್ಡ್‌ಗೆ ಹೋಗಿ ಎಂದು ಅಲ್ಲಿದ್ದ ಸಿಬ್ಬಂದಿ ತಿಳಿಸಿದ್ದಾರೆ. ಮಗಳು ತೀವ್ರ ಅಸ್ವಸ್ಥಳಾಗಿದ್ದಾಳೆ. ತುರ್ತಾಗಿ ಚಿಕಿತ್ಸೆ ಕೊಡಿಸಬೇಕಾಗಿದೆ ಎಂದು ಬಾಲಕಿಯ ತಂದೆ ಮಾಬಾಷಾ ಅವಲತ್ತುಕೊಂಡರೂ ಸಿಬ್ಬಂದಿ ಸ್ಪಂದಿಸಿಲ್ಲ. ಇದರಿಂದ ಕಂಗಾಲಾದ ಮಾಬಾಷಾ ಮಗಳನ್ನು ಹೆಗಲಮೇಲೆ ಹೊತ್ತು ಓಡುತ್ತಲೇ ಬೇರೆ ವಾರ್ಡ್‌ಗೆ ದಾಖಲು ಮಾಡಿದ್ದಾರೆ. ವಿಮ್ಸ್‌ನ ಸಿಬ್ಬಂದಿಯ ವರ್ತನೆಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.