Belagavi News: ಅಕ್ರಮ ಅಕ್ಕಿ ಸಂಗ್ರಹಕ್ಕೆ ಹಳ್ಳಿಗಳೇ ಹಾಟ್‌ಸ್ಪಾಟ್‌!

By Kannadaprabha News  |  First Published Jan 20, 2023, 2:31 PM IST

ಅನ್ನಭಾಗ್ಯದ ಅಕ್ಕಿಯನ್ನೇ ಬಂಡವಾಳವನ್ನಾಗಿಸಿಕೊಂಡ ಅಕ್ರಮ ಸಾಗಾಣಿಕೆಯ ಜಾಲವು ಕೇವಲ ನಗರ, ಪಟ್ಟಣಗಳಲ್ಲದೇ ಹಳ್ಳಿಗಳಿಂದಲೇ ಅತೀ ಹೆಚ್ಚು ಅಕ್ಕಿಯನ್ನು ಸಂಗ್ರಹಿಸುತ್ತಿರುವುದು, ಅಲ್ಲದೆ ನೆರೆಯ ಸುತ್ತಮುತ್ತಲಿನ ಸಣ್ಣ ಹಳ್ಳಿಗಳಲ್ಲಿ ಏಜೆಂಟರ ಮೂಲಕ ಅಕ್ಕಿ ಸಂಗ್ರಹಿಸುವ ವ್ಯವಸ್ಥಿತ ಕಾರ್ಯ ಪ್ರತಿ ತಿಂಗಳೂ ನಡೆಯುತ್ತಿದೆ. ಗುಟ್ಟಾಗಿ ಉಳಿದಿಲ್ಲ!


ಭೀಮಶಿ ಭರಮಣ್ಣವರ

 ಗೋಕಾಕ (ಜ.20) : ಅನ್ನಭಾಗ್ಯದ ಅಕ್ಕಿಯನ್ನೇ ಬಂಡವಾಳವನ್ನಾಗಿಸಿಕೊಂಡ ಅಕ್ರಮ ಸಾಗಾಣಿಕೆಯ ಜಾಲವು ಕೇವಲ ನಗರ, ಪಟ್ಟಣಗಳಲ್ಲದೇ ಹಳ್ಳಿಗಳಿಂದಲೇ ಅತೀ ಹೆಚ್ಚು ಅಕ್ಕಿಯನ್ನು ಸಂಗ್ರಹಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ!

Tap to resize

Latest Videos

ತಾಲೂಕಿನಲ್ಲಿ ಸಂಗ್ರಹವಾಗುತ್ತಿರುವ ಅನ್ನಭಾಗ್ಯದ ಅಕ್ಕಿ ಸಂಗ್ರಹವು ದೊಡ್ಡಹಳ್ಳಿಯನ್ನೇ ಕೇಂದ್ರವನ್ನಾಗಿಸಿಕೊಂಡು ನೆರೆಯ ಸುತ್ತಮುತ್ತಲಿನ ಸಣ್ಣ ಹಳ್ಳಿಗಳಲ್ಲಿ ಏಜೆಂಟರ ಮೂಲಕ ಅಕ್ಕಿ ಸಂಗ್ರಹಿಸುವ ವ್ಯವಸ್ಥಿತ ಕಾರ್ಯ ಪ್ರತಿ ತಿಂಗಳೂ ನಡೆಯುತ್ತಿದೆ.

ಓಣಿ ಓಣಿ ಸೇರಿದಂತೆ ಹಳ್ಳಿಯಲ್ಲಿ ರೇಷನ್‌ ಅಕ್ಕಿಯನ್ನು ಉಪಯೋಗಿಸದಿರುವ ಪಡಿತರ ಚೀಟಿದಾರರನ್ನು ಸಂಪರ್ಕಿಸಿ ರೇಷನ್‌ ಕಾರ್ಡ್‌ಗೆ ಸಂಬಂಧಿಸಿದ ಅಕ್ಕಿಯನ್ನು ಕೊಟ್ಟರೇ ಅದಕ್ಕೆ ಹೆಚ್ಚಿನ ಹಣ ನೀಡಿ ಪಡೆದುಕೊಳ್ಳುವ ಮೌಖಿಕ ಒಪ್ಪಂದಗಳು ನಡೆಯುತ್ತಿವೆ. ಹಳ್ಳಿಯಲ್ಲಿ ಏಜೆಂಟರಂತೆ ಓಣಿ ಸೇರಿದಂತೆ ಹಳ್ಳಿಯಲ್ಲಿನ ಅಕ್ಕಿಯನ್ನು ಸಂಗ್ರಹಕ್ಕೆ ಮಾಸ್ಟರ್‌ ಪ್ಲಾನ್‌ ಮಾಡಿಕೊಂಡು ಸಂಗ್ರಹಿಸಿದ ಅಕ್ಕಿಯನ್ನು ಗ್ರಾಮದಲ್ಲಿನ ಲಘು ವಾಹನ ಮೂಲಕ ಮೂಲ ಬೇರೆ ಕಡೆ ಸಾಗಿಸುತ್ತಾನೆ.

ಮಕ್ಕಳ ಅನ್ನಕ್ಕೂ ಕುತ್ತು: ಅಕ್ರಮ ಅಕ್ಕಿಯೇ ಮಕ್ಕಳಿಗೆ ಬಿಸಿಯೂಟ ಆಹಾರ!

ಗೋಕಾಕ ಹಾಗೂ ಮೂಡಲಗಿ ತಾಲೂಕಿನಲ್ಲಿ ಸುಮಾರು 30ಕ್ಕೂ ಅಧಿಕ ಅಕ್ರಮ ಅನ್ನಭಾಗ್ಯ ಅಕ್ಕಿ ಸಂಗ್ರಹಕಾರರಿದ್ದಾರೆ. ಅವರು ತಮ್ಮ ಗ್ರಾಮದಿಂದ ಸುತ್ತಲಿನ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಮತ್ತು ನ್ಯಾಯ ಬೆಲೆ ಅಂಗಡಿಕಾರರಿಂದ ಪ್ರತಿ ಕೆಜಿ ಅಕ್ಕಿಗೆ .10 ರಿಂದ .12 ಖರೀದಿಸುತ್ತಾರೆ. ನಂತರ ಅಕ್ಕಿ ಗೋದಾಮಿನಲ್ಲಿ ಸಂಗ್ರಹಿಸಿ, ಹುಕ್ಕೇರಿ, ಕಾಗವಾಡದಲ್ಲಿ ಮಾರುತ್ತಾರೆ.

ಗೋಕಾಕ ನಗರದಲ್ಲಿ ಕೇವಲ ನಾಲ್ಕಾರು ಜನರು ಕ್ವಿಂಟಲ್‌ಗಟ್ಟಲೇ ಅಕ್ರಮವಾಗಿ ಅಕ್ಕಿ ಸಂಗ್ರಹಿಸುತ್ತಿದ್ದಾರೆ. ಪ್ರತಿ ದಿನ 7 ರಿಂದ 8 ಲೋಡ್‌ ಅಕ್ಕಿ ಸಾಗಾಟ ನಡೆಯುತ್ತಿದೆ. ಕೊಣ್ಣೂರು ಪಪಂ ವ್ಯಾಪ್ತಿಯಲ್ಲಿ ಎರಡ್ಮೂರು ಜನರು ಪಟ್ಟಣದ ಸುತ್ತಮುತ್ತ ಹಾಗೂ ಮಾಣಿಕವಾಡಿ ಮರಡಿಮಠ ಸುತ್ತ ಅಕ್ರಮ ಅಕ್ಕಿ ಸಂಗ್ರಹ ಮಾಡಿ ದಿನಕ್ಕೆ 2 ರಿಂದ 3 ಲೋಡ್‌, ಘಟಪ್ರಭಾ ಪಟ್ಟಣ ಸೇರಿದಂತೆ ಇತರೆ ಹಳ್ಳಿಗಳಿಂದ ಅಕ್ಕಿ ಸಂಗ್ರಹ ಮಾಡಿ ದಿನಕ್ಕೆ 1 ಲೋಡ್‌ ರವಾನಿಸುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಕೊಳವಿ, ಅಂಕಲಗಿ, ಬೆಣಚಿನಮರ್ಡಿ, ತವಗ ಸೇರಿದಂತೆ ಇನ್ನಿತರ ಗ್ರಾಮಗಳಿಂದ ಅಕ್ರಮ ಅಕ್ಕಿ ಸಂಗ್ರಹ ಮಾಡಿ ದಿನಕ್ಕೆ 6 ಲೋಡ್‌ ಅಕ್ಕಿ ಸಾಗಾಟ ಮಾಡುತ್ತಾರೆ. ಮದವಾಲ ಗ್ರಾಮದ ಒಬ್ಬ ಅಂಕಲಗಿ, ಅಕ್ಕತಂಗೇರಹಾಳ, ಪಾಶ್ಚಾಪುರ ಸಂತೆಯಲ್ಲಿ ಅಕ್ರಮ ಅಕ್ಕಿ ಸಂಗ್ರಹ ಮಾಡಿ ದಿನಕ್ಕೆ 2 ಲೋಡ್‌ ಅಕ್ಕಿ ಸಾಗಾಟ, ಸಂಗನಕೇರಿ, ಅರಭಾವಿ, ಅರಭಾವಿಮಠ, ದುರದುಂಡಿ, ದಂಡಾಪುರ, ಹುಣಚ್ಯಾಳ ಪಿಜಿ, ಲೋಳಸೂರ, ನಲ್ಲಾನಟ್ಟಿ, ಬಳೋಬಾಳ, ಲಕ್ಷ್ಮೇ ನಗರ ಸೇರಿದಂತೆ ಇನ್ನಿತರ ಗ್ರಾಮಗಳಿಂದ ಅಕ್ರಮ ಅಕ್ಕಿಯನ್ನು ತಂದು ಸಂಗನಕೇರಿ ಗ್ರಾಮದ ಗೋದಾಮಿನಲ್ಲಿ ಸಂಗ್ರಹ ಮಾಡಿ ದಿನಕ್ಕೆ 4 ರಿಂದ 6 ಲೋಡ್‌ ಅಕ್ಕಿ ಸಾಗಿಸುತ್ತಿರುವ ಆರೋಪ ಕೇಳಿಬಂದಿದೆ.

ತಳಕಟ್ನಾಳ, ಮುಸಗುಪ್ಪಿ, ಪಟಗುಂದಿ, ಕಪರಟ್ಟಿಉದಗಟ್ಟಿ, ಕೆಮ್ಮನಕೂಲ ಸೇರಿ ಇನ್ನಿತರ ಗ್ರಾಮಗಳಿಂದ ಅಕ್ರಮ ಅಕ್ಕಿ ಸಂಗ್ರಹಿಸಿ ದಿನಕ್ಕೆ 4 ಲೋಡ್‌ ಅಕ್ಕಿ ಸಾಗಾಟ ಮಾಡುತ್ತಿದ್ದಾರೆ. ಮೂಡಲಗಿ ತಾಲೂಕಿನ ಹಲವಾರು ಹಳ್ಳಿಗಳಲ್ಲಿ ಅಕ್ಕಿ ಸಂಗ್ರಹಿಸಿ ತಲಾ ಒಂದೊಂದು ಲೋಡ್‌ ಸಾಗಾಟವಾಗುತ್ತದೆ. ಹಳ್ಳೂರನಲ್ಲಿ ಸ್ವಂತ ಜಮೀನಿನಲ್ಲಿ ಗೋದಾಮು ಹೊಂದಿದ್ದು ಸುತ್ತಲಿನ ಹಳ್ಳಿಗಳಲ್ಲಿ ಸಂಗ್ರಹ ಮಾಡುತ್ತಾನೆ.

ಅಕ್ರಮ ಸಾಗಾಟಕ್ಕೆ ಲಘ, ಬೃಹತ್‌ ವಾಹನಗಳ ಬಳಕೆ

ಹಳ್ಳಿಗಳಲ್ಲಿ ಸಂಗ್ರಹವಾದ ಅಕ್ಕಿಗಳನ್ನು ಕೇಂದ್ರ ಸ್ಥಾನಕ್ಕೆ ರವಾನಿಸಲು ಆಯಾ ತಿಂಗಳಲ್ಲಿ ಸಂಗ್ರಹವಾದ ಅಕ್ಕಿ ತೂಕಕ್ಕೆ ಅನುಗುಣವಾಗಿ ಆಯಾ ಸಾಮರ್ಥ್ಯದ ಲಘು ವಾಹನದಿಂದ ಹಿಡಿದು ಬೃಹತ್‌ ವಾಹನಗಳಲ್ಲಿ ಸಾಗಿಸುತ್ತಿದ್ದಾರೆ. ಟಾಟಾ ಏಸ್‌- 3 ಟನ್‌, ಮಹಿಂದ್ರಾ ಪೀಕ್‌ ಅಪ್‌ 7 ಟನ್‌, 407ದಲ್ಲಿ 10ಕ್ಕಿಂತ ಹೆಚ್ಚು ಟನ್‌, ದೊಡ್ಡ ಲಾರಿಗಳಲ್ಲಿ 20ಕ್ಕೂ ಹೆಚ್ಚು ಟನ್‌ ಸಾಗಿಸುತ್ತಿದ್ದಾರೆ. ಅಕ್ಕಿ ಸಂಗ್ರಹಕ್ಕೆ ತಕ್ಕಂತೆ ವಾಹನಗಳ ಲೋಡ್‌ ಮಾಡಿ ಸಾಗಾಟ ಮಾಡಲಾಗುತ್ತಿದೆ.

ಗರ್ಭಿಣಿ, ಬಾಣಂತಿಯರ ಅಕ್ಕಿಯನ್ನೂ ಬಿಡದ ಖದೀಮರು!

ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕ ಆಹಾರ ಸಿಗಬೇಕೆನ್ನುವ ಉದ್ದೇಶದಿಂದ ಅಂಗನವಾಡಿ ಕೇಂದ್ರದ ಮೂಲಕ ವಿತರಣೆ ಮಾಡಲಾಗುತ್ತಿದೆ. ಆದರೆ, ಅಕ್ಕಿಯನ್ನು ಬಳಸದೇ ಇರುವ ಫಲಾನುಭವಿಗಳಿಗೆ ಹಣದ ಆಸೆ ನೀಡಿ ಕೇಂದ್ರಕ್ಕೆ ಬರುವ ಅಕ್ಕಿಯನ್ನು ಗೋದಾಮಿಗೆ ರವಾನಿಸುತ್ತಿದ್ದಾರೆ. ಕೆಜಿಗೆ ನಿಗದಿ ಮಾಡಿದ ಹಣವನ್ನು ಸಂದಾಯ ಮಾಡಿ ಅದನ್ನು ಸಂಗ್ರಹಿಸುತ್ತಿರುವ ಏಜೆಂಟ್‌ಗೆ ಕಮಿಷನ್‌ ನೀಡಿ ಅಕ್ಕಿ ಸಂಗ್ರಹಿಸಿ ದುಪ್ಪಟ್ಟು ಲಾಭ ಪಡೆಯುತ್ತಿದ್ದಾರೆ.

ಗೋದಾಮುಗಳಲ್ಲಿ ಸಂಗ್ರಹ, ಬೇರೆಡೆಗೆ ಸಾಗಾಟ:

ನಗರ ಸೇರಿದಂತೆ ಗ್ರಾಮಗಳಲ್ಲಿನ ಪಡಿತರ ಚೀಟಿ ಅಕ್ಕಿಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟು ನೆರೆಯ ಹುಕ್ಕೇರಿಗೆ ಸಾಗಿಸಿದರೆ, ಸಂಗನಕೇರಿ ಗ್ರಾಮ ಕೇಂದ್ರವನ್ನಾಗಿಸಿಕೊಂಡು ಸುತ್ತಲಿನ ಹತ್ತೂರು ಹಳ್ಳಿಗಳಲ್ಲಿ ಅಕ್ಕಿ ಸಂಗ್ರಹ ಮಾಡಿರುವ ಅಕ್ಕಿಯೂ ಹುಕ್ಕೇರಿಗೆ ಬರುತ್ತದೆ. ತಳಕಟ್ನಾಳ, ಸಂಗನಕೇರಿ, ಕೈತನಾಳ, ಮೂಡಲಗಿ ಪಟ್ಟಣ, ಮಲ್ಲಾಪುರ ಪಿಜಿ ಗ್ರಾಮದ ಗೋದಾಮಿನಲ್ಲಿ ಸಂಗ್ರಹಿಸಿ ಅಕ್ಕಿಯನ್ನು ಹುಕ್ಕೇರಿಗೆ ಸಾಗಾಟ ಮಾಡುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ.

2021ರಲ್ಲಿ ಕೊರೋನಾ ಇದ್ದುದ್ದರಿಂದ ಅಕ್ರಮ ಅಕ್ಕಿ ರಫ್ತಿಗೆ ಕಡಿವಾಣ ಹಾಕಲಾಗಿತ್ತು. ಈ ವೇಳೆ ಲಾಕ್‌ಡೌನ್‌ ಕೂಡ ಇದ್ದುದ್ದರಿಂದ ಅಕ್ರಮ ಅಕ್ಕಿ ರಫ್ತಿಗೆ ಅವಕಾಶವೇ ಇಲ್ಲದಂತಾಗಿತ್ತು. ಆದರೆ, ಕೊರೋನಾ ನಂತರ ಅಕ್ರಮ ಅಕ್ಕಿ ಸಾಗಣೆ ಮತ್ತೆ ಆರಂಭಗೊಂಡಿತು. 2022ರ ಡಿಸೆಂಬರ್‌ನಲ್ಲಿ ಮತ್ತು 2023ರ ಜನವರಿಯಲ್ಲಿ ಗೋಕಾಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನ್ನಭಾಗ್ಯಕ್ಕೆ ಖದೀಮರ ಕನ್ನ..!

ಈ ವರೆಗೆ ನನ್ನ ಗಮನಕ್ಕೆ ಅಕ್ರಮ ಅಕ್ಕಿ ಸಂಗ್ರಹ ಮಾಡುವ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಅಂತಹ ದೂರುಗಳಲ್ಲಿ ಬಂದಲ್ಲಿ ತಕ್ಷಣವೇ ಕಠೀಣ ಕ್ರಮಕೈಗೊಳ್ಳಲಾಗುವುದು.

-ಪ್ರಕಾಶ ಹೊಳೆಪ್ಪಗೋಳ, ತಹಸೀಲ್ದಾರ್‌, ಗೋಕಾಕ.

click me!