ಲಂಚ ಪಡೆದು ಸಿಕ್ಕಿಬಿದ್ದ ಭ್ರಷ್ಟ ಅಧಿಕಾರಿಗೆ ಅದ್ದೂರಿ ಸ್ವಾಗತ ಕೋರಿರುವ ಘಟನೆಯೊಂದು ನಡೆದಿದೆ. ಗ್ರಾಮಸ್ಥರು ಜಾಮೀನು ಪಡೆದು ಬಂದ ಅಧಿಕಾರಿಗೆ ಅದ್ದೂರಿ ಸ್ವಾಗತ ಮಾಡಿದ್ದಾರೆ.
ಕನಕಪುರ (ಜ.21): ಲಂಚ ಸ್ವೀಕಾರ ಪ್ರಕರಣದಲ್ಲಿ ಎಸಿಬಿ ಬಲೆಗೆ ಸಿಕ್ಕಿಬಿದ್ದು ಜಾಮೀನು ಪಡೆದು ಹೊರ ಬಂದ ತೋಕಸಂದ್ರ ಗ್ರಾಮ ಪಂಚಾಯಿತಿಯ ಪಿಡಿಒಗೆ ಗ್ರಾಮಸ್ಥರ ಗುಂಪೊಂದು ಅದ್ಧೂರಿಯಾಗಿ ಸ್ವಾಗತ ಕೋರಿ ಸಂಭ್ರಮಿಸಿದೆ.
ಮರಳವಾಡಿ ಹೋಬಳಿಯ ತೋಕಸಂದ್ರ ಗ್ರಾಪಂ ಅಭಿವೃದ್ಧಿ ಅಧಿಕಾರಿ ರಮ್ಯಾ ಕಳೆದ ವಾರ ಪಂಚಾಯಿತಿ ಕಚೇರಿಯಲ್ಲಿ ನರೇಗಾ ಕಾಮಗಾರಿಯಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಲು ಕಟ್ಟಡ ಸಾಮಗ್ರಿ ಸರಬರಾಜು ಮಾಡಿದ್ದವರಿಂದ ಲಂಚದ ಹಣ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದರು. ದೂರು ದಾಖಲಿಸಿಕೊಂಡಿದ್ದ ಎಸಿಬಿ ಅಧಿಕಾರಿಗಳು ಪಿಡಿಒ ರಮ್ಯಾ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಶನಿವಾರವೇ ನ್ಯಾಯಾಲಯದಲ್ಲಿ ಜಾಮೀನು ಪಡೆದುಕೊಂಡು ರಮ್ಯಾ ಸೋಮವಾರ ಗ್ರಾಮಕ್ಕೆ ಆಗಮಿಸಿದ್ದಾರೆ.
ಈ ವಿಚಾರ ತಿಳಿದಿದ್ದ ಗ್ರಾಮಸ್ಥರ ಗುಂಪೊಂದು ಗ್ರಾಮದ ದ್ವಾರದಲ್ಲಿಯೇ ಪಿಡಿಒ ಅವರಿಗೆ ಹೂಗುಚ್ಛ ನೀಡಿ, ಹೂವಿನ ಹಾರ ಹಾಕಿದರಲ್ಲದೆ ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತ ಕೋರಿ ಸಂಭ್ರಮಿಸಿದರು. ಅಲ್ಲದೆ, ಕಚೇರಿಗೂ ಬಾಳೆ ಕಂದು, ಹೂವಿನಿಂದ ಅಂಲಕಾರ ಮಾಡಲಾಗಿತ್ತು.
2 ಲಕ್ಷ ಲಂಚ ಬೇಡಿಕೆ ಇಟ್ಟ ಲೇಡಿ ಎಸ್‌ಐ, ಮುಖ್ಯಪೇದೆ ಅರೆಸ್ಟ್ ...
ಭ್ರಷ್ಟಅಧಿಕಾರಿಗಳನ್ನು ಬೆಂಬಲಿಸಿ ಗ್ರಾಮದ ಕೆಲ ಮುಖಂಡರು ಪಂಚಾಯಿತಿ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡು ಈ ರೀತಿ ಸಂಭ್ರಮಿಸುತ್ತಿರುವುದು ನೋವಿನ ಸಂಗತಿ. ಈ ಮೂಲಕ ಮುಂದಿನ ಪೀಳಿಗೆಗೆ ಯಾವ ಸಂದೇಶವನ್ನು ನಾವು ನೀಡುತ್ತಿದ್ದೇವೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಇದು ಗ್ರಾಮದ ಪ್ರಜ್ಞಾವಂತ ನಾಗರಿಕರು ತಲೆತಗ್ಗಿಸುವ ವಿಚಾರ ಎಂದು ಕೆಲ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮ್ಯಾ ಗ್ರಾಮಸ್ಥರೊಂದಿಗೆ ಅನ್ಯೋನ್ಯವಾಗಿದ್ದು, ಬಡವರ ಕೆಲಸ ಕಾರ್ಯಗಳಿಗೆ ಸ್ಪಂದಿಸುತ್ತಿದ್ದಾರೆ. ಗ್ರಾಮದ ಕೆಲವರು ರಾಜಕೀಯ ದುರುದ್ದೇಶದಿಂದ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಸಿದ್ದಾರೆ.
ಶಿವರುದ್ರ, ಗ್ರಾಪಂ ಸದಸ್ಯರು, ತೋಕಸಂದ್ರ