ಸಾಧನೆಯ ಆಧಾರದ ಮೇಲೆ ಬಿಜೆಪಿ ಮತಯಾಚನೆ: ಡಿವಿಎಸ್‌

By Kannadaprabha News  |  First Published Jan 30, 2023, 7:26 AM IST

ಬಿಜೆಪಿ ಪಕ್ಷವು ಸಾಧನೆಯ ಆಧಾರದ ಮೇಲೆ ಮತ ಕೇಳುತ್ತಿದೆ. ಆದರೆ ಕಾಂಗ್ರೆಸ್‌ ಪಕ್ಷ ಕೇವಲ ಘೋಷಣೆಯ ಮೇಲೆ ಮತ ಕೇಳುತ್ತಿವೆ. ಜನರು ಯೋಚಿಸಿ ಮತ ನೀಡಿ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.


  ಶಿರಾ : ಬಿಜೆಪಿ ಪಕ್ಷವು ಸಾಧನೆಯ ಆಧಾರದ ಮೇಲೆ ಮತ ಕೇಳುತ್ತಿದೆ. ಆದರೆ ಕಾಂಗ್ರೆಸ್‌ ಪಕ್ಷ ಕೇವಲ ಘೋಷಣೆಯ ಮೇಲೆ ಮತ ಕೇಳುತ್ತಿವೆ. ಜನರು ಯೋಚಿಸಿ ಮತ ನೀಡಿ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.

ತಾಲೂಕಿನ ಭೂವನಹಳ್ಳಿ ಗ್ರಾಮದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಭಾರತವು ವಿಶ್ವಗುರುವಾಗಿ ಹೊರಹೊಮ್ಮಿದೆ. ಕೋವಿಡ್‌ ಸಂಕಷ್ಟದ ಸಮಯದಲ್ಲಿ ಭಾರತ ದೇಶದಿಂದ ಪ್ರಪಂಚದ 120 ದೇಶಗಳಿಗೆ ಕೋವಿಡ್‌ ಲಸಿಕೆಯನ್ನು ನೀಡಲಾಗಿದೆ. ನರೇಂದ್ರಮೋದಿಯವರು ಪ್ರಧಾನಮಂತ್ರಿಯಾದ 8 ವರ್ಷಗಳಲ್ಲಿ ದೇಶದಲ್ಲಿ ಒಬ್ಬನೇ ಒಬ್ಬ ಸಂಸದನಾಗಲಿ, ಶಾಸಕರಾಗಲಿ ಯಾವುದೇ ಭ್ರಷ್ಟಾಚಾರದಲ್ಲಿ ಸಿಲುಕಿಲ್ಲ. ಕಾಂಗ್ರೆಸ್‌ ಅಧಿಕಾರದಲ್ಲಿ 2ಜಿ ಹಗರಣ ಸೇರಿದಂತೆ ಲಕ್ಷಾಂತರ ಕೋಟಿ ಹಗರಣ ನಡೆದಿದೆ ಎಂದರು.

Tap to resize

Latest Videos

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವ ವಿಧಾನಸಭಾ ಕ್ಷೇತ್ರಕ್ಕೆ ಟವೆಲ್‌ ಹಾಕಬೇಕು ಎಂದು ಯೋಚಿಸುತ್ತಿದ್ದಾರೆ. ಮೈಸೂರು, ಚಿತ್ರದುರ್ಗ, ಕೋಲಾರಕ್ಕೆ ಹೋದರು ಈಗ ಕೋಲಾರದಲ್ಲಿ ವಿರೋಧ ಉಂಟಾಗುವ ಲಕ್ಷಣ ಕಾಣುತ್ತಿರುವುದರಿಂದ ಮತ್ತೆ ವರುಣ ಕ್ಷೇತ್ರಕ್ಕೆ ಹೋಗಲು ತಯಾರಿ ನಡೆಸುತ್ತಿದ್ದಾರೆ. ಯಾರಾದ್ರೂ ಖುರ್ಚಿಗೆ ಟವೆಲ್‌ ಹಾಕುವ ಮುಖ್ಯಮಂತ್ರಿ ಜನರ ಕೆಲಸ ಮಾಡುತ್ತಾರ? ಎಂದು ವ್ಯಂಗ್ಯವಾಡಿದರು. ಡಿಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರಲ್ಲೇ ಸ್ಪರ್ಧೆ ಉಂಟಾಗಿದೆ. ಅವರು ಗೆದ್ದರೆ ತಾನೇ ಮುಖ್ಯಮಂತ್ರಿಯಾಗೋದು. ಕಾಂಗ್ರೆಸ್‌ನವರು ತಿರುಕನ ಕನಸು ಕಾಣುತ್ತಿದ್ದಾರೆ. ಅಧಿಕಾರದ ಆಸೆಗಾಗಿ ಆಡಳಿತಕ್ಕೆ ಬರುವ ವ್ಯಕ್ತಿಗಳು ಜನರ ಕೆಲಸ ಮಾಡುತ್ತಾರಾ? ಎಂದು ಪ್ರಶ್ನಿಸಿದರು.

ಶಾಸಕ ಡಾ.ಸಿ.ಎಂ.ರಾಜೇಶ್‌ ಗೌಡ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಜನತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಜನರಿಗೆ ತಲುಪಿಸಲು ವಿಜಯ ಸಂಕಲ್ಪ ಅಭಿಯಾನ ಮಾಡಲಾಗುತ್ತಿದೆ. ಬಿಜೆಪಿಯ ಎಲ್ಲಾ ಕಾರ್ಯಕರ್ತರು ಒಗ್ಗೂಡಿ ಎಲ್ಲಾ ಬೂತ್‌ಗಳಲ್ಲಿ ಜನರಿಗೆ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ತಲುಪಿಸಬೇಕು ಎಂದರು.

ತೆಂಗು ನಿಗಮದ ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್‌ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಕಾರ್ಯಕ್ರಮದಲ್ಲಿ ಮುದಿಗೆರೆ ಗ್ರಾಪಂ ಸದಸ್ಯ ಕಾಂತರಾಜು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ, ವಿಧಾನ ಪರಿಷತ್‌ ಸದಸ್ಯ ಚಿದಾನಂದ್‌ ಎಂ.ಗೌಡ, ರೇಷ್ಮೆ ನಿಗಮದ ಅಧ್ಯಕ್ಷ ಚಂಗಾವರ ಮಾರಣ್ಣ, ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್‌.ಮಾರುತೀಶ್‌, ಬಿಜೆಪಿ ಓಬಿಸಿ ಘಟಕದ ಅಧ್ಯಕ್ಷ ಆರ್‌.ಕೆ.ಶ್ರೀನಿವಾಸ್‌, ಉಪಾಧ್ಯಕ್ಷ ಹನುಮಂತನಾಯ್ಕ, ಗ್ರಾಪಂ ಸದಸ್ಯ ಬೊಪ್ಪರಾಯಪ್ಪ, ಮುದಿಮಡು ಮಂಜುನಾಥ್‌, ಬಿಜೆಪಿ ಯುವ ಘಟಕದ ಅಧ್ಯಕ್ಷ ಮಧು ಯಾದವ್‌, ಲಿಂಗರಾಜ್‌ ಸೇರಿದಂತೆ ಹಲವರು ಹಾಜರಿದ್ದರು.

ಕೋಟ್‌....

ರಾಜ್ಯದಲ್ಲಿ ಜೆಡಿಎಸ್‌ ಪಕ್ಷದ ಕತೆ ಮುಗಿದೆ ಹೋಗಿದೆ. ಅವರ ಮನೆಯಲ್ಲಿಯೇ ರಣಾಂಗಣ ಆಗಿದೆ. ಎರಡು ಸೊಸೆಯರಿಗೆ, ಬಾವ ಮೈಸೂರಿಗೆ, ಅಕ್ಕನ ಮಕ್ಕಳಿಗೆ ಒಂದು, ಅಣ್ಣನ ಮಕ್ಕಳಿಗೆ ಒಂದು ಹೀಗೆ ಟಿಕೆಟ್‌ಗಾಗಿ ಗುದ್ದಾಟ ಶುರುವಾಗಿದೆ. ಅವರಿಗೆ ತಲೆಬಿಸಿ ಇದ್ದಾಗ ಇನ್ನು ಜನರ ತಲೆಬಿಸಿ ನೋಡುತ್ತಾರಾ? ಅವರಿಗೆ ಒಂದು ಆಸೆ ಏನೋ ಕೆಲವೊಂದಿಷ್ಟುಸ್ಥಾನಗಳು ಬಂದರೆ ಕಿಂಗ್‌ ಮೇಕರ್‌ ಆಗಬಹುದು ಎಂದು. ಈ ಬಾರಿ ಕಿಂಗ್‌ ಮೇಕರ್‌ ಆಗುವುದಿರಲಿ ಅವರ ಮನೆಯ ಮೇಕರ್‌ ಆದರೆ ಸಾಕಾಗಿದೆ.

ಡಿ.ವಿ.ಸದಾನಂದ ಗೌಡ ಮಾಜಿ ಮುಖ್ಯಮಂತ್ರಿ

29ಶಿರಾ1: ಶಿರಾ ತಾಲೂಕು ಭೂವನಹಳ್ಳಿಯಲ್ಲಿ ಏರ್ಪಡಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಅಭಿಯಾನವನ್ನು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಉದ್ಘಾಟಿಸಿದರು. ಶಾಸಕ ಡಾ.ಸಿ.ಎಂ.ರಾಜೇಶ್‌ ಗೌಡ, ಬಿ.ಕೆ.ಮಂಜುನಾಥ್‌, ಸರ್ಕಾರದ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ, ವಿಧಾನ ಪರಿಷತ್‌ ಸದಸ್ಯ ಚಿದಾನಂದ್‌ ಎಂ.ಗೌಡ ಸೇರಿದಂತೆ ಹಲವರು ಹಾಜರಿದ್ದರು.

click me!