ಪಿಎಸ್‌ಐ, ಡಿಸಿಸಿಬಿ ಹಗರಣಗಳಲ್ಲಿ ವಿಜಯೇಂದ್ರ, ರಾಘವೇಂದ್ರ ಕೈವಾಡ: ಬೇಳೂರು ಗೋಪಾಲಕೃಷ್ಣ

By Kannadaprabha News  |  First Published Nov 9, 2023, 6:31 AM IST

ಪಿಎಸ್‌ಐ ಹಗರಣದ ಕಿಂಗ್ ಪಿನ್ ವಿಜಯೇಂದ್ರ. ಆ ಸಮಯದಲ್ಲಿ ಅವರ ವಿರುದ್ಧ ಏನು ಕ್ರಮ ಕೈಗೊಳ್ಳಲಿಲ್ಲ. ಇನ್ನು ಶಿವಮೊಗ್ಗ ಡಿಸಿಸಿ ಬ್ಯಾಂಕಿನಲ್ಲಿಯೂ ಹಗರಣ ನಡೆದಿದೆ. ಒಂದೊಂದು ಹುದ್ದೆ ಕೊಡಲು ₹40 ಲಕ್ಷ ಲಂಚ ಪಡೆದಿದ್ದಾರೆ. ಲಂಚದ ಹಣ ಪಡೆಯಲು ಉದ್ಯೋಗಿಗಳಿಗೆ ಬ್ಯಾಂಕ್‌ನಲ್ಲೇ ಸಾಲ ಕೊಡಿಸಿದ್ದಾರೆ. ಈ ಹಗರಣದಲ್ಲಿ ಸಂಸದ ರಾಘವೇಂದ್ರರ ಪಾತ್ರವೂ ಇದೆ. ಈಗ ನಮ್ಮದೇ ಸರ್ಕಾರ ಇದೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ 


ಶಿವಮೊಗ್ಗ(ನ.09): ಪಿಎಸ್‍ಐ ಹಗರಣದಲ್ಲಿ ಶಾಸಕ ಬಿ.ವೈ.ವಿಜಯೇಂದ್ರ ಅವರ ಕೈವಾಡವಿದೆ ಎಂಬ ಶಂಕೆ ಇದೆ. ಅದೇ ರೀತಿ ಡಿಸಿಸಿ ಬ್ಯಾಂಕ್ ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ಇದರಲ್ಲಿ ಸಂಸದರ ಪಾಲಿದೆ ಎನ್ನಲಾಗುತ್ತಿದೆ. ಈ ಎರಡೂ ಪ್ರಕರಣವನ್ನು ಸರ್ಕಾರ ತನಿಖೆ ಮಾಡಬೇಕು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಒತ್ತಾಯಿಸಿದರು.

ಶಿವಮೊಗ್ಗದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಸ್‌ಐ ಹಗರಣದ ಕಿಂಗ್ ಪಿನ್ ವಿಜಯೇಂದ್ರ. ಆ ಸಮಯದಲ್ಲಿ ಅವರ ವಿರುದ್ಧ ಏನು ಕ್ರಮ ಕೈಗೊಳ್ಳಲಿಲ್ಲ. ಇನ್ನು ಶಿವಮೊಗ್ಗ ಡಿಸಿಸಿ ಬ್ಯಾಂಕಿನಲ್ಲಿಯೂ ಹಗರಣ ನಡೆದಿದೆ. ಒಂದೊಂದು ಹುದ್ದೆ ಕೊಡಲು ₹40 ಲಕ್ಷ ಲಂಚ ಪಡೆದಿದ್ದಾರೆ. ಲಂಚದ ಹಣ ಪಡೆಯಲು ಉದ್ಯೋಗಿಗಳಿಗೆ ಬ್ಯಾಂಕ್‌ನಲ್ಲೇ ಸಾಲ ಕೊಡಿಸಿದ್ದಾರೆ. ಈ ಹಗರಣದಲ್ಲಿ ಸಂಸದ ರಾಘವೇಂದ್ರರ ಪಾತ್ರವೂ ಇದೆ. ಈಗ ನಮ್ಮದೇ ಸರ್ಕಾರ ಇದೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

Tap to resize

Latest Videos

ಶಿವಮೊಗ್ಗ ಬಾಂಗ್ಲಾ ಬಾಕ್ಸ್‌ನಲ್ಲಿತ್ತು ಬಿಳಿ ಪುಡಿ, ತ್ಯಾಜ್ಯ ವಸ್ತು..!

ಬಸ್‌ ಸ್ಟ್ಯಾಂಡ್‌ ರಾಘು ಅಂತಿದ್ದೆ:

ಸಂಸದ ಬಿ.ವೈ.ರಾಘವೇಂದ್ರ ಚುನಾವಣೆ ಸಮಯದಲ್ಲಿ ಮಾತ್ರ ಓಡಾಡ್ತಾರೆ. ನಾನು ಏರ್‌ಪೋರ್ಟ್ ತಂದೆ, ಅದು ತಂದೆ, ಇದು ತಂದೆ ಅಂತಾರೆ. ಏರ್ ಪೋರ್ಟ್ ತಂದಿದ್ದು ಯಡಿಯೂರಪ್ಪ ಅವರು. ಚುನಾವಣೆ ಬಂದಾಗ ಹಳ್ಳಿಗಳು ಕಾಣುತ್ತವೆ. ನಾನು ಬಸ್ ಸ್ಟ್ಯಾಂಡ್ ರಾಘು ಅಂತಿದ್ದೆ. ಈಗ ಅವನೇ ಏರ್ ಪೋರ್ಟ್ ರಾಘು ಅಂತಾ ಕರೀರಿ ಅಂತಾನಂತೆ ಎಂದು ವ್ಯಂಗ್ಯವಾಡಿದರು.

ಖರ್ಗೆ ವಿರುದ್ಧವೂ ತನಿಖೆ ಮಾಡಲಿ:

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ವರ್ಗಾವಣೆ ಏನು ದೊಡ್ಡ ವಿಚಾರವಲ್ಲ. ಆತ ಸಾಕಷ್ಟು ಅಕ್ರಮ ಆಸ್ತಿ ಸಂಪಾದಿಸಿದ್ದಾನೆ. ಆತನ ವಿರುದ್ಧವೂ ತನಿಖೆಯಾಗಬೇಕು. ಯಾರ್‌ ಯಾರದ್ದೋ ತನಿಖೆ ಮಾಡುತ್ತಾರೆ, ಈತನ ವಿರುದ್ಧವೂ ತನಿಖೆ ನಡೆಸಲಿ. ಹಾಗೆ ಕಿಯೋನಿಕ್ಸ್ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ತಪ್ಪು ಮಾಡಿದ್ರೆ ತನಿಖೆ ಮಾಡಲಿ ಎಂದರು.

ಬಿಜೆಪಿ ನಾಯಕರಿಗೆ ತರಾಟೆ:

ಬಿಜೆಪಿಯ ನಾಯಕರು ಬರ ಅಧ್ಯಯನ ಮಾಡುತ್ತಿದ್ದಾರೆ. ರಾಜ್ಯದ ವಿಪಕ್ಷ ಮುಖಂಡರು ಬರ ವೀಕ್ಷಣೆಗೆ ಹೊರಟ್ಟಿದ್ದಾರೆ. ಆದರೆ, ರಾಜಕೀಯ ಮಾಡುವುದು ಖಂಡನೆ. ಬರಕ್ಕೆ ಮುಖ್ಯಮಂತ್ರಿಗಳು ಪರಿಹಾರಧನ ಬಿಡುಗಡೆ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ ವಿಪಕ್ಷ ನಾಯಕನೇ ಇಲ್ಲ. ನಿಮ್ಮ ಕಾಲದಲ್ಲಿ ನೆರೆ ಬಂತು ಏನಾದರೂ ಪರಿಹಾರ ಕೊಟ್ರಾ? ಕೇವಲ ಸಮೀಕ್ಷೆ ಮಾಡಿಕೊಂಡು ಹೋದ್ರಿ. ನಿಮ್ಮ ಪ್ರಧಾನಿ, ನಿಮ್ಮ ಸರಕಾರ ಏನಾದರೂ ಪರಿಹಾರ ಕೊಟ್ರಾ, ವಿರೋಧ ಪಕ್ಷದ ನಾಯಕನನ್ನೇ ಆಯ್ಕೆ ಮಾಡಲು ಆಗಿಲ್ಲ. ಬರ ಅಧ್ಯಯನ ಮಾಡ್ತೀವಿ ಅಂತೀರಲ್ಲ, ನಿಮಗೆ ಮಾನ, ಮರ್ಯಾದೆ ಇದೆಯಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಚ್‌ಡಿಕೆ-ಈಶ್ವರಪ್ಪ ವಿರುದ್ಧವೂ ಟೀಕೆ:

ಕುಮಾರಸ್ವಾಮಿ ಇವತ್ತು ರೆಸಾರ್ಟ್‌ನಲ್ಲಿ ಶಾಸಕರನ್ನು ಕೂಡಿ ಹಾಕಿಕೊಂಡಿದ್ದಾರೆ. ನೀವು ಕೂಡಿ ಹಾಕಿಕೊಂಡರೂ ಅವರು ಯಾರು ಇರಲ್ಲ. ಬಿಜೆಪಿ -ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ ಬರುತ್ತಾರೆ. ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ -ಜೆಡಿಎಸ್ ಜಂಟಿಯಾಗಿ ಕಾರ್ಯಾಚರಣೆ ಮಾಡುತ್ತಿದ್ದಾರೆ. ಇನ್ನು ಈಶ್ವರಪ್ಪ ಅವರಿಗೆ ನೆಲೆ ಇಲ್ಲ. ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಯಾವ ಯೋಗ್ಯತೆ ಇದೆ. ಈಶ್ವರಪ್ಪ, ನಳೀನ್‌ಕುಮಾರ್ ಕಟೀಲ್ ಕಟ್ಟಿಕೊಂಡು ಹೋದ್ರೆ ರಾಜ್ಯದಲ್ಲಿ ಬಿಜೆಪಿ 65 ಸೀಟ್ ಬಂದಿದೆ. ಮುಂದೆ 42 ಬರುತ್ತದೆ. ಯಡಿಯೂರಪ್ಪ ಅವರಿಗೆ ಬದ್ಧತೆ ಇದ್ದರೆ, ಕೇಂದ್ರ ಸರ್ಕಾರದ ಜೊತೆ ಮಾತನಾಡಿ ಪರಿಹಾರ ಕೊಡಿಸಲಿ ಎಂದರು.

ಲೋಕಸಭೆಗೆ ನಾನೇ ಪ್ರಭಲ ಅಭ್ಯರ್ಥಿ

ಲೋಕಸಭಾ ಚುನಾವಣೆಗೆ ನಾನು ಪ್ರಬಲ ಆಕಾಂಕ್ಷಿ. ಈ ಬಾರಿ ಲೋಕಸಭೆಗೆ ನಾನು ಸ್ಪರ್ಧಿಸುವ ಆಸೆ ಹೊಂದಿದ್ದೇನೆ. ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಬಳಿ ಹೇಳಿದ್ದೇನೆ. ಎಚ್‌.ಎಸ್‌. ಸುಂದರೇಶ್ ಹಾಗೂ ಗೀತಾ ಶಿವರಾಜ್‌ಕುಮಾರ್‌ ಅವರು ಆಕಾಂಕ್ಷಿ ಪಟ್ಟಿಯಲ್ಲಿ ಇರಬಹುದು. ಆದರೆ, ಶಿವಮೊಗ್ಗದಲ್ಲಿ ರಾಘವೇಂದ್ರ ಅವರನ್ನು ಸೋಲಿಸುವುದಕ್ಕೆ ನಾನೇ ಪ್ರಬಲ ಸ್ಪರ್ಧಿ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಸಿಎಂ, ಸಚಿವರ್ಯಾರೆಂದು ಹೈಕಮಾಂಡ್ ನಿರ್ಧರಿಸುತ್ತದೆ: ಸಚಿವ ಮಧು ಬಂಗಾರಪ್ಪ

ಡಿಸಿಎಂ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿ ಆಗುವ ಬಗ್ಗೆ ನನಗೆ ಗೊತ್ತಿಲ್ಲ. ನಾನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಬಗ್ಗೆ ಮಾತನಾಡಲ್ಲ. ನಾನು ಹೇಳೋದು ಎಲ್ಲ ಶಾಸಕರಿಗೂ 20:20 ತಿಂಗಳು ಸಚಿವರನ್ನು ಮಾಡಿ, ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಡ, ಎಲ್ಲರನ್ನು ಸಚಿವರನ್ನಾಗಿ ಮಾಡಿ ಎಂಬುದಷ್ಟೇ ನನ್ನ ಒತ್ತಾಯ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಯಾರೆಂದೇ ಗೊತ್ತಿಲ್ಲ!

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಯಾರು ಅನ್ನೋದೆ ನನಗೆ ಗೊತ್ತಿಲ್ಲ. ನಾನು ಕೇವಲ ಶಾಸಕ ಅಷ್ಟೇ ಎಂದು ಬೇಳೂರು ಹೇಳಿದರು. ಮೊದಲು ಮಧು ಬಂಗಾರಪ್ಪ ಉಸ್ತುವಾರಿ ಸಚಿವರಾಗಿದ್ದರಂತೆ. ಈಗ ಉಸ್ತುವಾರಿ ಸಚಿವರು ಯಾರು ಅಂತಾ ನನಗೆ ಗೊತ್ತಿಲ್ಲ. ಇವತ್ತು ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕೆಡಿಪಿ ಸಭೆ ಇದೆಯಂತೆ, ಕೆಡಿಪಿ ಸಭೆಗೆ ನನಗೆ ಆಹ್ವಾನವಿಲ್ಲ. ಯಾರ ಬಗ್ಗೆ ಮಾತನಾಡಲು ತಮಗೆ ಭಯವಿಲ್ಲ. ಹೆದರಿ ಹೋಗಲು ನಾನು ಕುಮಾರ್ ಬಂಗಾರಪ್ಪ ಅಲ್ಲ ಎಂದು ಖಾರವಾಗಿ ಹೇಳಿದರು.

click me!